ಈ ಬಾರಿಯ ಜಿ20 ಶೃಂಗಸಭೆ ನಿಜಕ್ಕೂ 'ಭಾರತ'ದ ಗೆಲುವು. 'ವಸುದೈವ ಕುಟುಂಬ' ಎಂಬ ಋಷಿ ವಾಕ್ಯದ ತಳಹದಿಯಲ್ಲಿ ನಡೆದ ಶೃಂಗಸಭೆಯ ಮೂಲಕ ಇಡಿಯ ಜಗತ್ತಿಗೆ ಮತ್ತೊಮ್ಮೆ ಭಾರತೀಯತೆಯ ಪರಿಚಯವಾಯಿತು. ಸಭೆಯನ್ನು ಆಯೋಜಿಸಿದ ರೀತಿ, 115 ವಿಷಯಗಳೊಳಗೊಂಡ ವಿಸ್ತೃತ ಘೋಷಣೆಯನ್ನು ಸದಸ್ಯರಾಷ್ಟ್ರಗಳ ಸರ್ವಸಮ್ಮತಿಯೊಂದಿಗೆ ಮಂಡಿಸಿದ ಭಾರತದ ರಾಜತಂತ್ರಿಕತೆ ನಿಜಕ್ಕೂ ಹೆಮ್ಮೆಪಡುವಂತಹ ವಿಚಾರವೇ. ಇಷ್ಟಾದರೂ ಈ ಸಭೆಯಲ್ಲಿ ಮಂಡಿಸಿದ ಕೆಲವು ವಿಚಾರಗಳು ಚೀನಾವನ್ನು ನಖಶಿಖಾಂತ ಉರಿಸಿರಲಿಕ್ಕೂ ಸಾಕು. ಚೀನಾದ ಹೊಟ್ಟೆಗೆ ಬಿದ್ದಿರುವ ಬೆಂಕಿಯ ಕಾವು ಯೂರೋಪ್ ನಲ್ಲಿ ರಾಹುಲ್ ಗಾಂಧಿಯ ಮಾತಿನಲ್ಲಿ ಪ್ರತಿಫಲನಗೊಂಡಿತು ಅಷ್ಟೇ!
![]()  | 
| Narendra Modi showing the mural of Konark Sun Temple Wheel from Odisha to US President Joe Biden  | 
ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡು; ಸಮಾರೋಪದವರೆಗೆ ತನ್ನ 60 ನಗರಗಳಲ್ಲಿ 200ಕ್ಕೂ ಹೆಚ್ಚು ಕಾರ್ಯಕ್ರಮ ಹಾಗೂ ಚರ್ಚಾಕೂಟಗಳನ್ನು ಏರ್ಪಡಿಸಿತು. ಸದಸ್ಯ ರಾಷ್ಟ್ರಗಳಲ್ಲದೇ ಈಜಿಪ್ಟ್, ಮಾರಿಷಸ್, ನೆದರ್ಲಾಂಡ್ಸ್, ನೈಜೀರಿಯಾ, ಒಮನ್, ಸಿಂಗಾಪುರ, ಸ್ಪೇನ್, ಅರಬ್ ರಾಷ್ಟ್ರಗಳ ಒಕ್ಕೂಟ ಹಾಗೂ ಬಾಂಗ್ಲಾದೇಶಗಳನ್ನು ಭಾರತ ಈ ಸಭೆಗೆ ಅಥಿತಿಗಳಾಗಿ ಆಹ್ವಾನಿಸಿತು. ನಮ್ಮ ಜೊತೆ ಸೌಹಾರ್ದಯುತವಾದ ಬಾಂಧವ್ಯ ಇದ್ದಿದ್ದರೆ ಪಾಕೀಸ್ತಾನವನ್ನು ಸಹ ಭಾರತ ಆಹ್ವಾನಿಸುತ್ತಿತ್ತೇನೊ! ಇಷ್ಟೇ ಅಲ್ಲದೇ ಆಫ್ರಿಕನ್ ಯೂನಿಯನ್, ಆಫ್ರಿಕನ್ ಯೂನಿಯನ್ ಡೆವೆಲಪ್ಮಂಟ್ ಏಜನ್ಸಿ, ಅಸೀಯಾನ್, ಅಂತರರಾಷ್ಟ್ರೀಯ ಸೌರ ಒಕ್ಕೂಟ, ಏಷಿಯನ್ ಡೆವೆಲಪ್ಮಂಟ್ ಬ್ಯಾಂಕ್ ಅಂತಹ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಸಹ ಭಾರತ ಆಹ್ವಾನಿಸಿತ್ತು. ಇಲ್ಲಿಯವರೆಗೆ ಆಫ್ರಿಕಾ ಖಂಡದಿಂದ ದಕ್ಷಿಣ ಆಫ್ರಿಕಾ ಮಾತ್ರವೇ ಜಿ20 ಯ ಸದಸ್ಯ ರಾಷ್ಟ್ರವಾಗಿತ್ತು. ಆದರೆ, ಈ ಬಾರಿ ಐರೋಪ್ಯ ಒಕ್ಕೂಟದ ರೀತಿಯಲ್ಲಿ ಆಫ್ರಿಕಾದ ಒಕ್ಕೂಟವನ್ನು ಜಿ20 ಒಳಗೆ ಕರೆದು ತಂದದ್ದು ಭಾರತ. ಈ ಕ್ರಮಕ್ಕೆ ಯಾವ ಸದಸ್ಯ ರಾಷ್ಟ್ರಗಳೂ ವಿರೋಧ ವ್ಯಕ್ತಪಡಿಸಲಿಲ್ಲ ಎಂಬುದು ಭಾರತದ ರಾಜತಾಂತ್ರಿಕತೆಯ ಗೆಲುವು. ಗಮನಿಸಿ, ಈಕ್ವಟಾರ್ ಗೆರೆಯ ಕೆಳಗೆ ಬರುವ ರಾಷ್ಟ್ರಗಳು ಸಾಮಾನ್ಯವಾಗಿ ಜಾಗತಿಕ ಮಟ್ಟದಲ್ಲಿ ಗಣನೆಗೆ ಬರುತ್ತಿರಲಿಲ್ಲ ಹಾಗೂ ಬಹುತೇಕ ಬಡರಾಷ್ಟ್ರಗಳೇ ಆಗಿವೆ. ಅಂತಹ ರಾಷ್ಟ್ರಗಳ ಪ್ರತಿನಿಧಿಯಾಗಿ ಭಾರತ ನಿಂತಿದೆ ಎಂಬ ಸ್ಪಷ್ಟ ಸಂದೇಶ ಈ ಸಭೆಯ ಮೂಲಕ ಕೊಟ್ಟಿದೆ.
![]()  | 
| Prime Minister Narendra Modi greets Chairperson of the African Union (AU) at G20  | 
2023 ಸಾಲಿನ ಜಿ20 ಸಭೆಯಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚೀನಾಕ್ಕೆ ಟಕ್ಕರ್ ಕೊಡುವಂತಹುದೇ. ಆಫ್ರಿಕಾ ಖಂಡ ನೈಸರ್ಗಿಕ ಸಂಪನ್ಮೂಲಗಳ ಆಗರ. ಅಲ್ಲಿನ ಅನೇಕ ರಾಷ್ಟ್ರಗಳನ್ನು ತನ್ನ ಸಾಲದ ಸಂಕೋಲೆಯಲ್ಲಿ ಹಿಡಿದುಕೊಂಡಿದ್ದು; ತನ್ಮೂಲಕ ಅಲ್ಲಿನ ಸಂಪತ್ತನ್ನು ಲೂಟಿ ಹೊಡೆಯುವುದು ಚೀನಾದ ಷಡ್ಯಂತ್ರವಾಗಿದೆ. ಅದಾಗಲೇ ರಷ್ಯಾ ಹಾಗೂ ಅಮೇರಿಕಾ ಆಫ್ರಿಕಾಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿವೆ. ಈಗ ಭಾರತ ಆಫ್ರಿಕಾವನ್ನು ತನ್ನ ಜೊತೆ ತೆಗೆದುಕೊಂಡು ಮುಂದುವರೆಯುತ್ತಿರುವುದು ಒಳಿತೇ. ಇದು ಚೀನಾಕ್ಕೆ ಅಸಹನೀಯ! ಚೀನಾದ ಮೋಸದ ಸುಳಿಯಲ್ಲಿ ಸಿಲುಕಿರುವ ದೇಶಗಳ ಮನಸ್ಥಿತಿಯನ್ನು ಬದಲಿಸಿ ತನ್ನತ್ತ ಸೆಳೆದುಕೊಳ್ಳುವುದು ಮೋದಿ ನೇತೃತ್ವದ ಭಾರತ ಸರ್ಕಾರಕ್ಕಿರುವ ಸವಾಲು. ಆಫ್ರಿಕಾ ಒಕ್ಕೂಟವನ್ನು ಜಿ2೦ ಯ ಸದಸ್ಯರನ್ನಾಗಿ ಮಾಡಿಕೊಂಡಿದ್ದು ಬಹುಶಃ ಆಫ್ರಿಕಾದ ಅನುಮಾನಗಳಿಗೆ ಉತ್ತರವಾಗಬಹುದು.
ಇದೆಲ್ಲದರ ಜೊತೆಗೆ ಬಹುಮುಖ್ಯವಾದ ಅಂಶವೊಂದಕ್ಕೆ ಈ ಸಮಾವೇಶದಲ್ಲಿ ಭಾರತ ನಾಂದಿ ಹಾಡಿತು. ಚೀನಾದ ಕುಖ್ಯಾತ ಬಿಆರ್ಐ ಯೋಜನೆಗೆ ವಿರುದ್ಧವಾಗಿ ಭಾರತ-ಮಧ್ಯಪ್ರಾಚ್ಯ-ಯೂರೋಪಿಯನ್ ಕಾರಿಡಾರ್ ಸ್ಥಾಪಿಸಲು ಅದಕ್ಕೆ ಸಂಬಂಧಿಸಿದ ರಾಷ್ಟ್ರಗಳು ನಿರ್ಧರಿಸಿವೆ. ಈ ಯೋಜನೆಗೆ ಅಮೇರಿಕಾ ಸಹ ಸಹಕಾರ ನೀಡುವುದಾಗಿ ಹೇಳಿದೆ. ಚೀನಾ ಜೊತೆಗಿದ್ದ ಜಿ7 ನ ಏಕೈಕ ದೇಶ ಇಟಲಿಯ ಪ್ರಧಾನಿ 'ಬಿಆರ್ಐ ನ ಸದಸ್ಯತ್ವದಿಂದ ನಮ್ಮ ದೇಶದ ಆರ್ಥಿಕತೆಗೆ ಅಷ್ಟೇನು ಪ್ರಯೋಜನವಿಲ್ಲ. ಹಾಗಾಗಿ, ಅದರಿಂದ ಹೊರಬರುವ ಯೋಚನೆಯಲ್ಲಿದ್ದೇವೆ' ಎಂದಿದ್ದಾರೆ. ಈ ನಡೆ ಚೀನಾಕ್ಕೆ ಸಹಿಸಲಸಾಧ್ಯ ಅನ್ನುವುದಂತೂ ಸತ್ಯ! ಭಾರತದ ಚೀನಾ ವಿರುದ್ಧದ ನಡೆಗೆ ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಬಾರದೆ ಉಳಿದ ಅಧ್ಯಕ್ಷ ಜಿಂಪಿಂಗ್ ನ ಗೈರುಹಾಜರಿ ಬಗ್ಗೆ ಯಾರೂ ತಲೆ ಕೆಡೆಸಿಕೊಳ್ಳಲಿಲ್ಲ. 'ಚೀನಾದ ಅಧ್ಯಕ್ಷನ ಅನುಪಸ್ಥಿತಿ ಶೃಂಗಸಭೆಯ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ' ಎಂದು ಹೇಳುವ ಮೂಲಕ ವಿದೇಶಾಂಗ ವ್ಯವಹಾರ ಸಚಿವ ಶ್ರೀ ಜಯಶಂಕರ್ ಜಿಂಪಿಂಗ್ ನ ಯೋಗ್ಯತೆಯನ್ನು ತೋರಿಸಿಕೊಟ್ಟಿದ್ದಾರೆ.
![]()  | 
| Proposed Indo - Middle East - European Corridor | 
ಜಿ20 ಯ ಯಶಸ್ಸು ಚೀನಾದ ಹೊಟ್ಟೆಯಲ್ಲಿ ಎಷ್ಟು ಕಿಚ್ಚು ಹೊತ್ತಿಸಿದೆಯೋ ಇಲ್ಲವೋ ತಿಳಿಯದು ಆದರೆ, ಆ ದೇಶದ ಪರವಾಗಿ ಬಿಂಬಿತವಾಗುವ ರಾಹುಲನ ಉದರಕ್ಕೆ ಬೆಂಕಿ ಬಿದ್ದಿರುವುದಂತೂ ಸ್ಪಷ್ಟ! ಆತನ ಹೊಟ್ಟೆಗೆ ಬೆಂಕಿ ಬಿದ್ದರೆ ಬಿತ್ತು ನಮಗಾಗುವ ನಷ್ಟವೇನಿಲ್ಲ. ಆದರೇ, ಯೂರೋಪಿನ ಪ್ರವಾಸದಲ್ಲಿ ವಿದೇಶಿಯರ ಮುಂದೆ ಭಾರತದ ಆಂತರಿಕ ವಿಚಾರಗಳನ್ನು ಮಾತಾಡುತ್ತಾ, ಚೀನಾದ ಬಿಆರ್ಐ ಅನ್ನು ನಾಚಿಕೆಯಿಲ್ಲದೆ ಹೊಗಳುತ್ತಾನೆ! ಆ ದೇಶದ ಬೆಳವಣಿಗೆಗೆ ಅಲ್ಲಿರುವ ರಾಜಕೀಯ ಸ್ವಾತಂತ್ರ್ಯ ಕಾರಣ ಎಂದು ಚೀನಾಕ್ಕಿಂತಲೂ ಹೆಚ್ಚು ಚೀನಾ ಪರವಾಗಿ ಮಾತಾಡಿದ್ದಾನೆ! ಪ್ರತಿಯೊಂದು ದೇಶಕ್ಕೂ ಜಾಗತಿಕ ವಿದ್ಯಮಾನಗಳ ಕುರಿತು ತನ್ನದ್ದೇ ಆದ ನಿಲುವು ಹೊಂದಿರುತ್ತದೆ. ಅದಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಾದುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆದರೆ, ರಾಹುಲ್ ಮಾಡುತ್ತಿರುವ ಕೆಲಸ ನಿಜಕ್ಕೂ ಅಕ್ಷಮ್ಯ! ಭಾರತ ಚೀನಾಕ್ಕೆ ಎದುರಾಗಿ ಸ್ಪಷ್ಟವಾದ ಹೆಜ್ಜೆ ಇಡಬೇಕಾದರೇ ಚೀನಾದ ಗುಲಾಮರಿಗೆ ಸಂಕಟವಾಗಲೇ ಬೇಕಲ್ಲವೇ? ಅದಕ್ಕೆ ಸ್ಪಷ್ಟ ನಿದರ್ಶನ ರಾಹುಲ್! ಅಷ್ಟೇ ಅಲ್ಲದೇ ಇಲ್ಲಿನ ಕಾಂಗ್ರೇಸ್ ನಾಯಕರು ರಾಹುಲನ ಈ ನಡೆಯನ್ನು ಸಮರ್ಥಿಸಿಕೊಳ್ಳುವುದು ತೀರ ಅಸಹ್ಯಕರ! ಜಿ20 ಯ ನಾಯಕತ್ವದ ಬಗ್ಗೆ ಇತ್ತ ಜಗತ್ತಿನ ನಾಯಕರು ಭಾರತವನ್ನು ಹೊಗಳುತ್ತಿದ್ದಾರೆ, ಇಟಲಿ ಭಾರತದ ಪರ ಮಾತಾಡುತ್ತಿದೆ ಆದರೆ, ಅತ್ತ ಅದೇ ಇಟಲಿಯಮ್ಮನ ಮಗ ರಾಹುಲ್ ವಿದೇಶದಲ್ಲಿ ಭಾರತವನ್ನೇ ತೆಗಳುತ್ತಿದ್ದಾನೆ. ಥತ್!!
ಸನಾತನ ಧರ್ಮದ ಅಡಿಪಾಯವಾಗಿರುವ ಋಷಿವಾಕ್ಯದ ಆಧಾರದ ಮೇಲೆ ಜಗತ್ತಿನೆದುರು ಭಾರತ ವಿಜೃಂಭಿಸಿದೆ. ಜಗತ್ತಿನ ಒಳಿತಿಗೆ ಭಾರತ ಉಳಿಯುವುದು ಅವಶ್ಯಕವೆಂಬ ವಿಚಾರ ಭಾರತೀಯರೆಲ್ಲರಿಗೂ ಮನದಟ್ಟಾಗಲಿ, ದೇಶವನ್ನು ಕೊರೆಯುವ ಹುಳ(ಲ)ಗಳು ಅಳಿದು ಭಾರತ ಮತ್ತಷ್ಟು ಬಲಿಷ್ಠವಾಗಲಿ ಹಾಗೂ ಜಗತ್ತಿಗೆ ಗುರುವಾಗಲಿ ಎಂಬುದಷ್ಟೇ ನಮ್ಮ ಪ್ರಾರ್ಥನೆ.
***********************************************************
References



No comments:
Post a Comment