January 23, 2024

ನರಾಭೋಗ ಶಿಲಾಭೋಗ ಅನ್ನುವುದನ್ನು ಕೇಳಿದ್ದೀರಾ?

ಭಾರತದಾತ್ಯಂತ ಈಗ ರಾಮನದೇ ಚಿಂತೆ, ಎಲ್ಲರ ಚಿತ್ತ ಅಯೋಧ್ಯೆಯತ್ತ. ನಮ್ಮ ಹೆಮ್ಮೆಯ ಪ್ರಧಾನಿ ಅಂತೂ ಪ್ರಾಣ ಪ್ರತಿಷ್ಠಾಪನೆಗೆ 12 ದಿನಗಳ ಮುನ್ನ ಅನುಷ್ಠಾನ, ಉಪವಾಸ ಮಾಡುತ್ತಾ ತಮ್ಮ 73 ವಯಸ್ಸಿನಲ್ಲೂ ಧರ್ಮದ ಕೈಂಕರ್ಯವನ್ನು ಮಾಡುತ್ತಿದ್ದಾರೆ. ದಿನವೂ ರಾಮಾಯಾಣಕ್ಕೆ ಸಂಬಂಧಿಸಿದ ದೇವಾಲಯಗಳಿಗೆ ಭೇಟಿ ನೀಡುತ್ತಾ ವ್ರತದಲ್ಲಿ ನಿರತರಾಗಿದ್ದಾರೆ. ಸಾಮಾನ್ಯ ಜನರ ವಿಚಾರಕ್ಕೆ ಬರುವುದಾದರೆ ಗುಜರಾತಿನಿಂದ 108 ಅಡಿ ಊದಿನಕಡ್ಡಿ, ಅಲಿಘಡದಿಂದ 400 ಕೆ.ಜಿ ಬೀಗ, ಹೈದರಾಬಾದಿನಿಂದ 1265 ಕೆ.ಜಿ ಲಾಡು ಪ್ರಸಾದ, ಪ್ರತಿ ಊರಿನಲ್ಲೂ ರಾಮ-ಹನುಮನ ದೇವಾಲಯಗಳ ಸ್ವಚ್ಛತೆ, ಪ್ರತಿ ದಿನ ಹನುಮಾನ್ ಚಾಲಿಸಾ, ರಾಮಭಜನೆ, ಪಾರಾಯಣ. ಹೀಗೆ ಹಲವು ರೂಪದಲ್ಲಿ ಜನರ ರಾಮನ ಮೇಲಿನ ಭಕ್ತಿ ಅಯೋಧ್ಯೆಯನ್ನು ತಲುಪಿದೆ. ಒಟ್ಟಿನಲ್ಲಿ ಇಡೀ ದೇಶದಲ್ಲಿ ಹಬ್ಬದ ವಾತಾವರಣವಿದೆ. ಇದೆ ಸಂದರ್ಭದಲ್ಲಿ ರಾಮಾಯಣದ ಬಾಲಕಾಂಡದ ಅಹಲ್ಯೆಯ ಕತೆ ನೆನಪಾಗುತ್ತಿದೆ. ಅಹಲ್ಯೆ ತನ್ನ ಗಂಡ ಅಗಸ್ತ್ಯರಿಂದ ಶಾಪಗ್ರಸ್ತಳಾಗಿ ಕಲ್ಲಾಗಿದ್ದು ರಾಮನ ಪಾದ ಸ್ಪರ್ಶದಿಂದ ಆಕೆಯ ಶಾಪ ವಿಮೋಚನೆಯಾಗಿ ಮೋಕ್ಷ ಸಿಗುತ್ತದೆ. ಅದು ಮತ್ತೆ ಪುನರಾವರ್ತನೆ ಆಗುತ್ತಿದೆ ಎಂಬುದು ನನ್ನ ಭಾವನೆ. ಹೇಗೆ? ಅಂತೀರಾ; ಹೇಳುತ್ತೇನೆ...

ಭಾರತದ ಅಸ್ಮಿತೆ!

ನಾನು ಹೇಳುತ್ತಿರುವುದು ಅಯೋಧ್ಯಲ್ಲಿನ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿ ಇನ್ನು ಮುಂದೆ ಪೂಜೆ ಮಾಡಿಸಿಕೊಳ್ಳುವಂತಹ, ಎಲ್ಲರಿಂದಲೂ ಆರಾಧಿಸಲ್ಪಡುವಂತಹ ಬಾಲರಾಮನ ಮೂರ್ತಿಯ ಬಗ್ಗೆ. ಜನರ ಸಂಭ್ರಮ ಎಷ್ಟಿತ್ತೆಂದರೆ ಮೂರು ದಿನಗಳ ಹಿಂದೆ ಬಾಲರಾಮನ ಮೂರ್ತಿಯ ಚಿತ್ರ ಸಾಮಾಜಿಕ ಜಾಲತಾಣದಲ್ಲಿ, ಟಿ.ವಿ ಮಾಧ್ಯಮದಲ್ಲಿ ಹರಡಿತು. 500 ವರ್ಷ ಕಾದ ನಾವು ಇನ್ನು ಮೂರು ದಿವಸ ಕಾಯಬಹುದಿತ್ತು ಅನ್ನಿಸಿತು. ಆ ಮೂರ್ತಿಯನ್ನು ಕೆತ್ತಿದವರು ಕರ್ನಾಟಕದ ಮೈಸೂರಿನ  ಅರುಣ್ ಯೋಗಿರಾಜ್ ಎಂಬುದು ನಮ್ಮೆಲ್ಲರ ಹೆಮ್ಮೆ, ಬಳಸಿರುವ ಕಲ್ಲು ಹೆಗ್ಗಡದೇವನಕೋಟೆಯ ಹಾರೋಹಳ್ಳಿಯಲ್ಲಿನ ಒಂದು ಜಮೀನಿನಲ್ಲಿ ಸಿಕ್ಕಿದ್ದು. ಬಾಲರಾಮನ ವಿಗ್ರಹವನ್ನು ನಿರ್ಮಿಸಲು ಇದೇ ಸೂಕ್ತವಾದ ಕಲ್ಲು ಎಂಬುದನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಖಚಿತ ಪಡಿಸಿತು. ಅವರ ಸಂಶೋಧನೆ ಪ್ರಕಾರ ಕಲ್ಲಿನ ಆಯಸ್ಸು ಸುಮಾರು 300 ಕೋಟಿ ವರ್ಷಗಳು! ವಾಲ್ಮೀಕಿ ಮಹರ್ಷಿಗಳು ದಾಖಲಿಸಿರುವ ಜಾತಕದ ಪ್ರಕಾರ ರಾಮನ ಕಾಲ ಇಂದಿಗೆ 7000 ವರ್ಷಗಳಷ್ಟು ಹಿಂದೆ ಎಂದು ಲೆಕ್ಕ ಹಾಕುತ್ತಾರೆ. ಅಂದರೆ ರಾಮ ಬಾಲ್ಯದಲ್ಲಿ ಈ ನೆಲದ ಮೇಲೆ ಓಡಾಡಿದಾಗ, ವನವಾಸದಲ್ಲಿದ್ದಾಗ, ಸೀತೆಯನ್ನು ಅರಸುತ್ತಾ ದಕ್ಷಿಣಕ್ಕೆ ಬಂದಾಗ, ಹನುಮಂತನನ್ನು ಭೇಟಿಯಾದಾಗ, ರಾವಣನ ವಿರುದ್ಧ ಯುದ್ಧ ಮಾಡಿ ಅಯೋಧ್ಯೆಗೆ ಮರಳುವಾಗ, ರಾಮನ ಪಟ್ಟಾಭಿಷೇಕವಾದಾಗ, ಮೊದಲ ಬಾರಿ ರಾಮಮಂದಿರ ನಿರ್ಮಾಣವಾದಾಗ, 500 ವರ್ಷಗಳ ಹಿಂದೆ ಮೀರ್ ಬಾಕಿ ಮಂದಿರವನ್ನು ಒಡೆದು ಅಲ್ಲೊಂದು ಕಟ್ಟಡ ನಿರ್ಮಿಸಿದಾಗ, 1949 ರಲ್ಲಿ ರಾಮಲಲ್ಲಾನ ಮೂರ್ತಿ ಪ್ರತ್ಯಕ್ಷವಾದಾಗ, ರಾಮಮಂದಿರಕ್ಕಾಗಿ ರಥಯಾತ್ರೆ ಪ್ರಾರಂಭವಾದಾಗ, ತೊಂಬತ್ತರ ದಶಕದಲ್ಲಿ ಗೋಲಿಬಾರ್ ಆದಾಗ, 92ರಲ್ಲಿ ವಿವಾದಿತ ಕಟ್ಟಡವನ್ನು ಉರುಳಿಸಿದಾಗ, ಗೋಧ್ರಾ ರೈಲಿನಲ್ಲಿ ಕರಸೇವಕರನ್ನು ಜೀವಂತ ಸುಟ್ಟಾಗ, ಅಲ್ಲಹಾಬಾದ್ ಹೈಕೋರ್ಟು ತೀರ್ಪಿತ್ತಾಗ, ಸುಪ್ರೀಂ ಕೋರ್ಟು ಆಯೋಧ್ಯೆಯ ಭೂಮಿ ರಾಮಲಲ್ಲಾನಿಗೆ ಸೇರಬೇಕೆಂದು ಹೇಳಿ ಮಂದಿರದ ಶಿಲಾನ್ಯಾಸದವರೆಗೂ  ರಾಮನ ಹಾಗೂ ಮಂದಿರದ ಕುರಿತ ಪ್ರತಿಯೊಂದು ಘಟನೆಗೂ ಈ ಕಲ್ಲು ಸಾಕ್ಷಿಯಾಗಿದೆ. ರಾಮ, ದಶರಥ, ದಿಲೀಪ, ಸಗರ ಅಲ್ಲ ಸೂರ್ಯವಂಶದ ಪ್ರಾರಂಭಕ್ಕೂ ಮುನ್ನ ಈ ಕಲ್ಲಿತ್ತು. ಈ ಕಲ್ಲು ಇಷ್ಟು ವರ್ಷಗಳ ಕಾಲ ಯಾರಿಗೆ ಬೇಕಾಗಿತ್ತೋ ಇಲ್ಲವೋ ಆದರೆ ಇನ್ನು ಮುಂದೆ ಅದಕ್ಕೆ ಪೂಜಾ ಯೋಗ ಪ್ರಾರಂಭವಾಗುತ್ತದೆ. ಆ ಮೂರ್ತಿಗೆ ಪ್ರತಿದಿನ ಅಭಿಷೇಕ, ಪೂಜೆ ನಡೆಯುತ್ತದೆ. ಬಂದ ಭಕ್ತರು ಮೂರ್ತಿಗೆ ಕೈಮುಗಿದು ತಮ್ಮ ಭಕ್ತಿ, ಗೌರವಗಳನ್ನು ಸಮರ್ಪಿಸುತ್ತಾರೆ. ಕಲ್ಲಾಗಿದ್ದ ಅಹಲ್ಯೆ ರಾಮನ ಸ್ಪರ್ಶದಿಂದ ಮೋಕ್ಷ ಪಡೆದಳು. ಅದರಂತೆ ಯಾರಿಗೂ ಬೇಡವಾದ ಕಲ್ಲು ರಾಮನದೇ ಕಾರಣದಿಂದ ಔನ್ನತ್ಯ ಪಡೆಯುತ್ತಿದೆ. ಕಲ್ಲಿನ ರೂಪದಲ್ಲಿದ್ದ ಅಹಲ್ಯೆಗೆ ಮತ್ತೊಮ್ಮೆ ರಾಮ ಬಿಡುಗಡೆ ಕೊಡಿಸಿದ ಎಂದನ್ನಿಸುತ್ತಿದೆ. ರಾಮಾಯಣ ಇಂದಿಗೂ ಪ್ರಸ್ತುತ ಎಂಬುದಕ್ಕೆ ಇದೂ ಒಂದು ನಿದರ್ಶನ!

ಇದೇ ರೀತಿಯ ಮತ್ತೊಂದು ನಿದರ್ಶನ ನಟರತ್ನಾಕರ ಮಾ.ಹಿರಣ್ಣಯ್ಯನವರ ಜೀವನದಲ್ಲಿ ಬರುತ್ತದೆ. ಅದು ಲಂಚಾವತಾರ ನಾಟಕದ ಉಛ್ರಾಯ ಸ್ಥಿತಿಯಲ್ಲಿದ್ದ ಕಾಲ. ಹಿರಣ್ಣಯ್ಯನವರ ನಾಟಕ ಸಂಸ್ಥೆ ಹಾಸನದಲ್ಲಿ ಕ್ಯಾಂಪ್ ಮುಗಿಸಿಕೊಂಡು ಚನ್ನರಾಯಪಟ್ಟಣಕ್ಕೆ ಬಂದು ಕ್ಯಾಂಪ್ ಮಾಡಿತು. ಆದರೆ ಹದಿನೈದು ದಿನಗಳಾದರೂ ಪ್ರದರ್ಶನ ನಡೆಸಲು ಪ್ರಕೃತಿ ಅನುಮತಿ ನೀಡಲಿಲ್ಲ. ಪ್ರತಿದಿನ ಸಂಜೆ ನಾಟಕದ ಟಿಕೆಟ್ ಮಾರಾಟವಾಗುವ ಸಮಯಕ್ಕೆ ಸರಿಯಾಗಿ ಮಳೆ. ಒಂದು ದಿವಸ ಮಳೆ ನಿಂತು ನಾಟಕಕ್ಕೆ ಎಲ್ಲರೂ ಅಣಿಯಾದಾಗ ಬಿರುಗಾಳಿ ಎದ್ದು ಸಂಸ್ಥೆ ನಾಟಕಕ್ಕೆಂದು ಹಾಕಿದ್ದ ಥಿಯೇಟರ್ ಮುರಿದುಬಿದ್ದು ಚೆಲ್ಲಪಿಲ್ಲಿಯಾಗುತ್ತದೆ. ಆಗ ಚನ್ನಪ್ರಾಯಪಟ್ಟಣದ ಕ್ಯಾಂಪ್ ಮುಚ್ಚಿ ಕೆಲವು ದಿನಗಳ ಕಾಲ ಸಂಸ್ಥೆಗೆ ರಜೆ ಕೊಟ್ಟು, ಹಿರಣ್ಣಯ್ಯ ಮತ್ತು ಜೊತೆಗಿದ್ದ ಕೆಲವು ಕಲಾವಿದರು ಬೆಂಗಳೂರಿಗೆ ಹಿಂತಿರುಗುತ್ತಾರೆ. ಹೊಟ್ಟೆ ಪಾಡಿಗಾಗಿ ನಾಟಕಗಳು ನಡೆಯಲೇಬೇಕಿತ್ತು. ಆಗ ಅವರು ಆಯ್ಕೆ ಮಾಡಿಕೊಂಡದ್ದು ಕೇವಲ ಬೆರಳೆಣಿಕೆಯಷ್ಟು ಕಲಾವಿದರು ಹಾಗೂ ತಂತ್ರಜ್ಞರೊಂದಿಗೆ ಆಡಬಹುದಾತಂತಹ ನಾಟಕ; ಬಿಕನಾಸಿ. ಸಾಮಾನ್ಯವಾಗಿ ಒಂದೂರಿನಲ್ಲಿ ಕ್ಯಾಂಪ್ ಮುಗಿಸಿ ಮತ್ತೊಂದು ಊರಿಗೆ ಕ್ಯಾಂಪನ್ನು ವರ್ಗಾಯಿಸುವ ನಡುವೆ ಆಡುತ್ತಿದ್ದ ನಾಟಕವದು. ವೃತ್ತಿನಾಟಕದ ಪರಿಭಾಷೆಯಲ್ಲಿ ಬಿಕನಾಸಿ ನಾಟಕವನ್ನು ಕ್ಯಾಂಪ್ ಕ್ಲೋಸ್ ನಾಟಕ ಅನ್ನುತ್ತಿದ್ದರು. ಈಗ ಸಂಸ್ಥೆ ಮುಂದಿನ ಊರಲ್ಲಿ ಕ್ಯಾಂಪ್ ತಯಾರು ಮಾಡಿ ಕಲಾವಿದರು ಬರುವವರೆಗೂ ಅದನ್ನೇ ಆಡುವ ತೀರ್ಮಾನ ಮಾಡಿದರು. ಆಗ ಈ ಬಿಕನಾಸಿ ನಾಟಕವೇ ಪರಿಷ್ಕೃತಗೊಂಡು 'ನಡುಬೀದಿ ನಾರಾಯಣ' ಎಂದಾಯಿತು. ಆ ನಾಟಕ ಬೆಂಗಳೂರಿನಲ್ಲೇ ಒಂದು ವರ್ಷದ ಕಾಲ ಸತತ ಪ್ರದರ್ಶನ ಕಂಡಿತು. ತದನಂತರ ಅದೇ ನಾಟಕ ಲಂಚಾವತಾರದ ನಂತರದ ಸ್ಥಾನ ಪಡೆದು ಸುಮಾರು ಐದಾರು ಸಾವಿರ ಪ್ರದರ್ಶನ ಕಂಡಿತು. ಒಂದು ಕಾಲದಲ್ಲಿ ಕ್ಯಾಂಪ್ ಕ್ಲೋಸ್, ದುಡ್ಡುಗಳಿಸದ ನಾಟಕವಾಗಿದ್ದ ಬಿಕನಾಸಿ ನಂತರದ ದಿನಗಳಲ್ಲಿ ಸಂಸ್ಥೆಗೆ ಲಾಭ ತಂದುಕೊಡುವ ನಾಟಕವಾಯಿತು. ಬಹುಶಃ ಬೆಂಗಳೂರಿನಲ್ಲಿ ಆ ನಾಟಕಕ್ಕೆ ಯೋಗ ಕೂಡಿಬಂತು ಅನ್ನಬಹುದು

ಇದನ್ನೇ ನಾರಾಭೋಗ ಶಿಲಾಭೋಗ ಅನ್ನುವುದು. ಎಲ್ಲಕ್ಕೂ ಕಾಲ ಕೂಡಿಬರಬೇಕು ಅನ್ನುತ್ತಾರಲ್ಲ ಅದೇ. ಹಾಗೆಂದು ಎಲ್ಲಕ್ಕೂ ಕಾಲ ಕೂಡಿ ಬರಲಿ ಎಂದಷ್ಟೇ ಇರದೇ ನಮ್ಮ ಪ್ರಯತ್ನ ಮಾಡಲೇ ಬೇಕಾಗುತ್ತದೆ. ಅರುಣ್ ಯೋಗಿರಾಜ್ ಆ ಕಲ್ಲಿನಲ್ಲಿ ಬಾಲರಾಮನನ್ನು ಇಷ್ಟು ಚಂದವಾಗಿ ಕೆತ್ತುವ ಶ್ರಮ ಹಾಕದೇ ಇದ್ದಿದ್ದರೆ ಆ ಕಲ್ಲಿಗೆ ಪೂಜೆಯ ಯೋಗ ಬರುತ್ತಿರಲಿಲ್ಲ. ಮಾ.ಹಿರಣ್ಣಯ್ಯ ಬಿಕನಾಸಿ ನಾಟಕವನ್ನು ಅಗತ್ಯಕ್ಕೆ ತಕ್ಕಂತೆ ಪರಿಷ್ಕರಣೆ ಮಾಡದಿದ್ದಿದ್ದರೆ ಅದು ನಡುಬೀದಿ ನಾರಾಯಣ ಆಗುತ್ತಿರಲಿಲ್ಲ. ಹಾಗೆಯೇ ನಮ್ಮ ಜೀವನದಲ್ಲಿ ಔನ್ನತ್ಯ ಸಾಧಿಸಲು ದೈವಾನುಗ್ರಹದ ಜೊತೆಗೆ ನಮ್ಮ ಶ್ರದ್ಧೆಯ ಪರಿಶ್ರಮವೂ ಅಗತ್ಯ. 500 ವರ್ಷಗಳ ಹೋರಾಟ, ಸಂಕಲ್ಪ, ಪ್ರಾರ್ಥನೆಗಳ ನಂತರ ಸಮಸ್ತ ಹಿಂದೂಗಳ ಹೆಬ್ಬಯಕೆ ನಮ್ಮ ಕಾಲದಲ್ಲಿ ಪೂರ್ಣಗೊಂಡಿದೆ. ಇದು ನಮ್ಮ ಭಾಗ್ಯ, ಪುಣ್ಯವೆಂದೇ ಹೇಳಬೇಕು. ಆದಷ್ಟು ಬೇಗ ಎಲ್ಲರಿಗೂ ಬಾಲರಾಮನ ದರ್ಶನವಾಗಲಿ. ಸರ್ವರಿಗೂ ರಾಮ ಒಳಿತು ಮಾಡಲಿ, ಭಾರತ ಅಖಂಡವಾಗಲಿ ಹಾಗೂ ರಾಮ ರಾಜ್ಯವಾಗಲಿ.

January 14, 2024

ಫ್ರಜೈಲ್ 5 ಟು ಫಾಬ್ಯುಲಸ್ 5

'ಏನೇ ಹೇಳಿ... ಹಿಂದಿನ ಕಾಲವೇ ಚಂದ' ಎಂದು ಹೇಳುವ ಅನೇಕರನ್ನು ನಾವು ನೋಡಿದ್ದೇವೆ. ಬಹುಶಃ ಸಂಬಂಧ, ಭಾವನಾತ್ಮಕ ವಿಚಾರಗಳಲ್ಲಿ ಇದು ನಿಜ ಇರಬಹುದು. ಆದರೆ, ಆರ್ಥಿಕತೆಯ ವಿಚಾರಕ್ಕೆ ಬಂದಾಗ ಇದು ಅಕ್ಷರಶಃ ಸುಳ್ಳು. ನಮ್ಮ ಶಾಲ ದಿನಗಳಲ್ಲಿ ಪಠ್ಯಪುಸ್ತಕಗಳಲ್ಲಿ ಭಾರತ ಬಡ ರಾಷ್ಟ್ರ, ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಓದುತ್ತಿದ್ದೆವು. ಕೇವಲ ಹತ್ತು ವರ್ಷಗಳ ಹಿಂದೆ ನೋಡಿ. ಜಾಗತಿಕವಾಗಿ ಭಾರತದ ಸ್ಥಾನ 'ಬಲಹೀನ ಐದು' ಎಂದಿತ್ತು. ಅದೇ ಈಗ ದೇಶ 'ಸಶಕ್ತ ಐದು' ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಜಾಗತಿಕ ಮಟ್ಟ ತುಂಬಾ ದೊಡ್ಡದ್ದು ಎನಿಸಿದರೆ ವ್ಯಯಕ್ತಿಕವಾದ ವಿಚಾರ ಹೇಳುತ್ತೇನೆ. ನಾನು ಚಿಕ್ಕವನಾಗಿದ್ದಾಗ ಬೆಂಗಳೂರಿಂದ ಶಿವಮೊಗ್ಗ ತಲುಪಲು ರೈಲು ಅಥವಾ ಬಸ್ಸಿನಲ್ಲಿ 8-10 ಗಂಟೆಗಳ ಪ್ರಯಾಣ ಮಾಡಬೇಕಿತ್ತು. ಈಗ ಶಿವಮೊಗ್ಗ ತಲುಪಲು ವಿಮಾನ ವ್ಯವಸ್ಥೆ ಇದೆ. ಈ ದೃಷ್ಠಿಯಲ್ಲಿ ಭಾರತವನ್ನು ಎರಡು ರೀತಿ ನೋಡಬಹುದು. ಮೋದಿ ಪ್ರಧಾನಿಯಾಗುವ ಮುನ್ನ ಹಾಗೂ ಪ್ರಧಾನಿಯಾದ ನಂತರ!

Building a Strong Bharat

"ನಾನು ಏನನ್ನಾದರೂ ಪ್ರಾರಂಭಿಸಿದಾಗ ನನಗೆ ಆ ಕಾರ್ಯದ ಅಂತಿಮ ಗುರಿ ತಿಳಿದಿರುತ್ತದೆ. ಆದರೆ ಪ್ರಾರಂಭದಲ್ಲೇ ಗಮ್ಯವನ್ನಾಗಲಿ, ಸಾಗುವ ಮಾರ್ಗವನ್ನಾಗಲಿ ನಾನು ಘೋಷಿಸುವುದಿಲ್ಲ. ಇಂದು ನೀವು ನೋಡುತ್ತಿರುವುದು ಗಮ್ಯವಲ್ಲ. ನನ್ನ ಇಂದಿನ ಕೆಲಸಗಳು ಮುಂದೆ ಬಹುದೊಡ್ಡ ಚಿತ್ರಣಕ್ಕೆ ನಾಂದಿಯಾಗಿರುತ್ತದೆ" ಎಂದು 2023ರ ವರ್ಷಾಂತ್ಯಕ್ಕೆ ಮೋದಿ ಹೇಳಿದರು. 2016ರಲ್ಲಿ ನಡೆದ ನೋಟು ಅಮಾನ್ಯಿಕರಣ ಅನ್ನುವ ಪ್ರಕ್ರಿಯೆಯ ಫಲ ನಾವಿಂದು ನೋಡುತ್ತಿದ್ದೇವೆ. ಹಿಂದೆ ನಮ್ಮ ಬಳಿ ಏಟಿಎಂ ಕಾರ್ಡ್ ಇದ್ದಾಗ್ಯೂ ಸಹ ನಾವು ವ್ಯವಹಾರದಲ್ಲಿ ನಗದನ್ನೇ ಬಳಸುತ್ತಿದ್ದೆವು. ಅಂಗಡಿ, ಪೆಟ್ರೋಲ್ ಬಂಕ್ಗಳಲ್ಲಿ ಹಣ ಕೊಟ್ಟು ಚಿಲ್ಲರೆಗಾಗಿ ಮಾತು, ಜಗಳಗಳಾಗಿದ್ದಿವೆ. ಬ್ಯಾಂಕಿನ ಪಾಸ್ಬುಕ್ ನಮೂದನೆಯನ್ನು ನಾವಿಂದು ಮರೆತಿದ್ದೇವೆ, ವಿದ್ಯುತ್, ನೀರಿನ ಬಿಲ್ ಪಾವತಿಗಾಗಿ, ಸಿನಿಮಾ ಟಿಕೆಟ್ಗಾಗಿ ಸರತಿಯಲ್ಲಿ ನಾವಿಂದು ನಿಲ್ಲಬೇಕಿಲ್ಲ. ನಮ್ಮ ಬಹುತೇಕ ಹಣಕಾಸಿನ ವ್ಯವಹಾರ ಈಗ ಮೊಬೈಲ್ ಫೋನಿನಲ್ಲೇ ಅರ್ಥಾತ್ ಡಿಜಿಟಲ್ ಬ್ಯಾಂಕಿಕ್ ಮೂಲಕವೇ. ಡಿಜಿಟಲ್ ಬ್ಯಾಂಕಿಂಗ್ ಎಂದರೆ ಹಣವನ್ನು ಪತ್ತೆ ಹಚ್ಚಬಹುದು ಮತ್ತು ಕಡಿಮೆ ಭ್ರಷ್ಟಾಚಾರ ಎಂದೇ.

ಸ್ವಾತಂತ್ರ್ಯ ನಂತರದ 66 ವರ್ಷಗಳಲ್ಲಿ ಅಂದರೆ 2013 ಹೊತ್ತಿಗೆ ದೇಶದ ಜಿಡಿಪಿ 1.86 ಟ್ರಿಲಿಯನ್ ಡಾಲರಷ್ಟಿತ್ತು. ವಾಜಪೇಯಿ ಆಡಳಿತದ ಅಂತ್ಯಕ್ಕೆ 'ಭಾರತ ಹೊಳೆಯುತ್ತಿದೆ' ಎಂಬ ಹಣೆಪಟ್ಟಿಯಿಂದ ಜಗತ್ತಿನ ಐದು ಅತ್ಯಂತ ಬಲಹೀನ ಅರ್ಥವ್ಯವಸ್ಥೆ ಎಂಬ ಹಣೆಪಟ್ಟಿ ದೇಶಕ್ಕೆ ಅಂಟಿತ್ತು. ಅದೂ ಕೂಡ ಅರ್ಥಶಾಸ್ತ್ರಜ್ಞನೋರ್ವ ದೇಶದ ಚುಕ್ಕಾಣಿ ಹಿಡಿದ್ದಿದ್ದಾಗ! ಹತ್ತುವರ್ಷದ ಕರಾಳ ಅಧ್ಯಾಯ ಮುಗಿದ ಮೇಲೆ ನರೇಂದ್ರ ಮೋದಿ ಬಂದರು. ಅವರ ಮೊದಲ ಐದು ವರ್ಷಗಳ ಆಡಳಿತದ ಅಂತ್ಯಕ್ಕೆ ದೇಶದ ಜಿಡಿಪಿ 2.83 ಟ್ರಿಲಿಯನ್ ಡಾಲರ್​ಗಳಾಯಿತು. ಅಂದರೆ ಐದೇ ವರ್ಷಗಳಲ್ಲಿ ಸುಮಾರು 1 ಟ್ರಿಲಿಯನ್ ಡಾಲರ್ ಅಷ್ಟು ವೃದ್ಧಿ! ಎರಡನೇ ಅವಧಿಯಲ್ಲಿ ಕರೋನಾ ಮಹಾಮಾರಿ ವಕ್ಕರಿಸಿ ಇಡೀ ಪ್ರಪಂಚದ ಆರ್ಥಿಕತೆ ಕುಸಿಯಿತು. ಅಷ್ಟಾಗಿಯೂ ಭಾರತದ ಜಿಡಿಪಿ 2.67 ಟ್ರಿಲಿಯನ್ ಡಾಲರ್ಗಷ್ಟೇ ಇಳಿದದ್ದು. ಕೋವಿಡ್ ನಂತರ ಭಾರತದ ಪ್ರಗತಿಯನ್ನು ಕಂಡು ಪ್ರಪಂಚ ಅಚ್ಚರಿಗೊಳಗಾಗಿದೆ. 2021-22ರಲ್ಲಿ ಜಿಡಿಪಿ 3.15 ಟ್ರಿಲಿಯನ್ ಡಾಲರ್ ಗೆ ಏರಿ, ನವೆಂಬರ್ 2023 ಹೊತ್ತಿಗೆ ಜಿಡಿಪಿ 3.72 ಟ್ರಿಲಿಯನ್ ಡಾಲರ್ ಆಗಿ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ! ಇನ್ನೊಂದೆರಡು ವರ್ಷಗಳಲ್ಲಿ ಮೂರನೇ ಒಂದು ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂಬುದು ಈಗ ನಿರ್ವಿವಾದವಾಗಿದೆ. ಭಾರತದ ಪಾಸ್ಪೋರ್ಟಿಗಿಂದು ಬೆಲೆ ಏರಿದೆ. ಇಷ್ಟೇ ಅಲ್ಲದೇ ಹತ್ತು ಕೋಟಿ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ, ಹನ್ನೊಂದು ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವ್ಯವಸ್ಥೆ ಮಾಡಿ, ಹದಿಮೂರೂವರೆ ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ. ಇದಕ್ಕೆಲ್ಲಾ ತಳಪಾಯ ಹಾಕಿದ್ದು ಮೋದಿಯವರ ಸೋರಿಕೆಯಿಲ್ಲದ ಅರ್ಥ ವ್ಯವಸ್ಥೆ ಹಾಗೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ.

ಯೂರೋಪಿನಲ್ಲಿ ಆರ್ಥಿಕ ಸಂಕಷ್ಟಕ್ಕೆ ಅನೇಕ ಕಾರಣಗಳಲ್ಲಿ ಒಂದು ಯುದ್ಧ ಪ್ರದೇಶಗಳಿಂದ ಬರುತ್ತಿರುವ, ಬಹುಮುಖ್ಯವಾಗಿ ಇಸ್ಲಾಂ ದೇಶಗಳಿಂದ ಬರುತ್ತಿರುವ ನಿರಾಶ್ರಿತರು. ಪೋಲಾಂಡ್ ಹೊರತು ಪಡಿಸಿ ಇತರ ಯೂರೋಪ್ ದೇಶಗಳು ನಿರಾಶ್ರಿತರೆಡೆಗೆ ತೋರುಸುತ್ತಿರುವ ಉದಾರತೆ. ಜರ್ಮನಿಯ ವಿಚಾರ ಹೇಳುತ್ತೇನೆ. ಆ ನಿರಾಶ್ರಿತರಿಗೆ ಬಿಟ್ಟಿ ಕೂಳು, ಶಿಕ್ಷಣ, ವೈದ್ಯಕಿಯ ವ್ಯವಸ್ಥೆ ಒದಗಿಸುತ್ತಿದೆ. ಅದಷ್ಟಲ್ಲದೇ ಓರ್ವ ನಿರಾಶ್ರಿತನಿಗೆ ಭತ್ಯೆಯೆಂದು ತಿಂಗಳಿಗೆ 1500 ಯೂರೋ ಅಂದರೆ ಅಂದಾಜು 1.25 ಲಕ್ಷ ರೂಪಾಯಿ ಕೊಡುತ್ತಿದ್ದಾರೆ. 'ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲಲ್ಲ' ಎಂಬುದಾಗಿದೆ ಅಲ್ಲಿನ ಪರಿಸ್ಥಿತಿ. ಒಂದು ಅಧ್ಯಯನದ ಪ್ರಕಾರ ದೇಶದ ಜನಸಂಖ್ಯೆ ಒಂದು ಹಂತಕ್ಕೆ ಏರಿ ನಂತರ ಇಳಿಯುತ್ತದೆ. ಅದೇ ಇಂದಿನ ಯೂರೋಪಿನ ಸ್ಥಿತಿ. ಚೀನಾದ ಸ್ಥಿತಿ ಕೂಡ ಹೀಗೆ ಆಗಲಿದೆ ಎಂಬುದು ಸತ್ಯ. ದುಡಿಯುವ ಕೈಗಳು ಕಮ್ಮಿಯಾದಷ್ಟು ದೇಶವೊಂದರ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿಗೆ ಜಗತ್ತು ಹೆಚ್ಚು ಯಾಂತ್ರಿಕರಣ ಹಾಗೂ ಕೃತಕ ಬುದ್ಧಿಮತೆಯೆಡೆಗೆ ತೆರಳುತ್ತಿದೆ. ಭಾರತ ಕೂಡ ಈ ತಂತ್ರಜ್ಞಾನದೆಡೆಗೆ ಕೆಲಸ ಮಾಡುತ್ತಿದೆ ಎಂಬುದು ಸಮಾಧಾನಕರ. ಕೊರೋನಾಕ್ಕೆ ತನ್ನ ಸ್ವಂತ ಔಷಧ ಕಂಡುಹಿಡಿದ್ದು ಭಾರತದ ಸರ್ಕಾರ ಸಂಶೋಧನೆಗೆ ಒತ್ತು ಕೊಟ್ಟುತ್ತಿದೆ ಎಂಬುದಕ್ಕೆ ನಿದರ್ಶನ.

ಮೋದಿ ಹೇಳಿದಂತೆ ದೊಡ್ಡದೊಂದು ಗುರಿಯೊಂದಿಗೆ ಭಾರತ ಕೆಲಸ ಮುಂದುವರೆಯುತ್ತಿದೆ. ಹಳ್ಳಹಿಡಿದಿದ್ದ ಆರ್ಥಿಕತೆಯನ್ನು ಬುಲೆಟ್ ರೈಲಿನ ಹಳಿ ಹಾಗೂ ವೇಗಕ್ಕೆ ದೇಶವನ್ನು ತಂದಿರಿಸಿದ ಕೀರ್ತಿ ನರೇಂದ್ರ ಮೋದಿಗೆ ಸೇರುತ್ತದೆ. ಭಾರತ ಮತ್ತಷ್ಟು ಬೆಳಗಲಿ, ಜಾಗತಿಕ ಶಕ್ತಿಯಾಗಲಿ ಎಂಬುದು ನಮ್ಮ ಆಶಯ. ಅದಾಕಬೇಕೆಂದರೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಿ ಆಯ್ಕೆಯಾಗಲೇಬೇಕಿದೆ. ಅವರನ್ನು ಪುನರಾಯ್ಕೆ ಮಾಡುವುದು ಭಾರತೀಯರ ಆದ್ಯ ಕರ್ತವ್ಯವಾಗಿದೆ.