January 14, 2024

ಫ್ರಜೈಲ್ 5 ಟು ಫಾಬ್ಯುಲಸ್ 5

'ಏನೇ ಹೇಳಿ... ಹಿಂದಿನ ಕಾಲವೇ ಚಂದ' ಎಂದು ಹೇಳುವ ಅನೇಕರನ್ನು ನಾವು ನೋಡಿದ್ದೇವೆ. ಬಹುಶಃ ಸಂಬಂಧ, ಭಾವನಾತ್ಮಕ ವಿಚಾರಗಳಲ್ಲಿ ಇದು ನಿಜ ಇರಬಹುದು. ಆದರೆ, ಆರ್ಥಿಕತೆಯ ವಿಚಾರಕ್ಕೆ ಬಂದಾಗ ಇದು ಅಕ್ಷರಶಃ ಸುಳ್ಳು. ನಮ್ಮ ಶಾಲ ದಿನಗಳಲ್ಲಿ ಪಠ್ಯಪುಸ್ತಕಗಳಲ್ಲಿ ಭಾರತ ಬಡ ರಾಷ್ಟ್ರ, ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಓದುತ್ತಿದ್ದೆವು. ಕೇವಲ ಹತ್ತು ವರ್ಷಗಳ ಹಿಂದೆ ನೋಡಿ. ಜಾಗತಿಕವಾಗಿ ಭಾರತದ ಸ್ಥಾನ 'ಬಲಹೀನ ಐದು' ಎಂದಿತ್ತು. ಅದೇ ಈಗ ದೇಶ 'ಸಶಕ್ತ ಐದು' ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಜಾಗತಿಕ ಮಟ್ಟ ತುಂಬಾ ದೊಡ್ಡದ್ದು ಎನಿಸಿದರೆ ವ್ಯಯಕ್ತಿಕವಾದ ವಿಚಾರ ಹೇಳುತ್ತೇನೆ. ನಾನು ಚಿಕ್ಕವನಾಗಿದ್ದಾಗ ಬೆಂಗಳೂರಿಂದ ಶಿವಮೊಗ್ಗ ತಲುಪಲು ರೈಲು ಅಥವಾ ಬಸ್ಸಿನಲ್ಲಿ 8-10 ಗಂಟೆಗಳ ಪ್ರಯಾಣ ಮಾಡಬೇಕಿತ್ತು. ಈಗ ಶಿವಮೊಗ್ಗ ತಲುಪಲು ವಿಮಾನ ವ್ಯವಸ್ಥೆ ಇದೆ. ಈ ದೃಷ್ಠಿಯಲ್ಲಿ ಭಾರತವನ್ನು ಎರಡು ರೀತಿ ನೋಡಬಹುದು. ಮೋದಿ ಪ್ರಧಾನಿಯಾಗುವ ಮುನ್ನ ಹಾಗೂ ಪ್ರಧಾನಿಯಾದ ನಂತರ!

Building a Strong Bharat

"ನಾನು ಏನನ್ನಾದರೂ ಪ್ರಾರಂಭಿಸಿದಾಗ ನನಗೆ ಆ ಕಾರ್ಯದ ಅಂತಿಮ ಗುರಿ ತಿಳಿದಿರುತ್ತದೆ. ಆದರೆ ಪ್ರಾರಂಭದಲ್ಲೇ ಗಮ್ಯವನ್ನಾಗಲಿ, ಸಾಗುವ ಮಾರ್ಗವನ್ನಾಗಲಿ ನಾನು ಘೋಷಿಸುವುದಿಲ್ಲ. ಇಂದು ನೀವು ನೋಡುತ್ತಿರುವುದು ಗಮ್ಯವಲ್ಲ. ನನ್ನ ಇಂದಿನ ಕೆಲಸಗಳು ಮುಂದೆ ಬಹುದೊಡ್ಡ ಚಿತ್ರಣಕ್ಕೆ ನಾಂದಿಯಾಗಿರುತ್ತದೆ" ಎಂದು 2023ರ ವರ್ಷಾಂತ್ಯಕ್ಕೆ ಮೋದಿ ಹೇಳಿದರು. 2016ರಲ್ಲಿ ನಡೆದ ನೋಟು ಅಮಾನ್ಯಿಕರಣ ಅನ್ನುವ ಪ್ರಕ್ರಿಯೆಯ ಫಲ ನಾವಿಂದು ನೋಡುತ್ತಿದ್ದೇವೆ. ಹಿಂದೆ ನಮ್ಮ ಬಳಿ ಏಟಿಎಂ ಕಾರ್ಡ್ ಇದ್ದಾಗ್ಯೂ ಸಹ ನಾವು ವ್ಯವಹಾರದಲ್ಲಿ ನಗದನ್ನೇ ಬಳಸುತ್ತಿದ್ದೆವು. ಅಂಗಡಿ, ಪೆಟ್ರೋಲ್ ಬಂಕ್ಗಳಲ್ಲಿ ಹಣ ಕೊಟ್ಟು ಚಿಲ್ಲರೆಗಾಗಿ ಮಾತು, ಜಗಳಗಳಾಗಿದ್ದಿವೆ. ಬ್ಯಾಂಕಿನ ಪಾಸ್ಬುಕ್ ನಮೂದನೆಯನ್ನು ನಾವಿಂದು ಮರೆತಿದ್ದೇವೆ, ವಿದ್ಯುತ್, ನೀರಿನ ಬಿಲ್ ಪಾವತಿಗಾಗಿ, ಸಿನಿಮಾ ಟಿಕೆಟ್ಗಾಗಿ ಸರತಿಯಲ್ಲಿ ನಾವಿಂದು ನಿಲ್ಲಬೇಕಿಲ್ಲ. ನಮ್ಮ ಬಹುತೇಕ ಹಣಕಾಸಿನ ವ್ಯವಹಾರ ಈಗ ಮೊಬೈಲ್ ಫೋನಿನಲ್ಲೇ ಅರ್ಥಾತ್ ಡಿಜಿಟಲ್ ಬ್ಯಾಂಕಿಕ್ ಮೂಲಕವೇ. ಡಿಜಿಟಲ್ ಬ್ಯಾಂಕಿಂಗ್ ಎಂದರೆ ಹಣವನ್ನು ಪತ್ತೆ ಹಚ್ಚಬಹುದು ಮತ್ತು ಕಡಿಮೆ ಭ್ರಷ್ಟಾಚಾರ ಎಂದೇ.

ಸ್ವಾತಂತ್ರ್ಯ ನಂತರದ 66 ವರ್ಷಗಳಲ್ಲಿ ಅಂದರೆ 2013 ಹೊತ್ತಿಗೆ ದೇಶದ ಜಿಡಿಪಿ 1.86 ಟ್ರಿಲಿಯನ್ ಡಾಲರಷ್ಟಿತ್ತು. ವಾಜಪೇಯಿ ಆಡಳಿತದ ಅಂತ್ಯಕ್ಕೆ 'ಭಾರತ ಹೊಳೆಯುತ್ತಿದೆ' ಎಂಬ ಹಣೆಪಟ್ಟಿಯಿಂದ ಜಗತ್ತಿನ ಐದು ಅತ್ಯಂತ ಬಲಹೀನ ಅರ್ಥವ್ಯವಸ್ಥೆ ಎಂಬ ಹಣೆಪಟ್ಟಿ ದೇಶಕ್ಕೆ ಅಂಟಿತ್ತು. ಅದೂ ಕೂಡ ಅರ್ಥಶಾಸ್ತ್ರಜ್ಞನೋರ್ವ ದೇಶದ ಚುಕ್ಕಾಣಿ ಹಿಡಿದ್ದಿದ್ದಾಗ! ಹತ್ತುವರ್ಷದ ಕರಾಳ ಅಧ್ಯಾಯ ಮುಗಿದ ಮೇಲೆ ನರೇಂದ್ರ ಮೋದಿ ಬಂದರು. ಅವರ ಮೊದಲ ಐದು ವರ್ಷಗಳ ಆಡಳಿತದ ಅಂತ್ಯಕ್ಕೆ ದೇಶದ ಜಿಡಿಪಿ 2.83 ಟ್ರಿಲಿಯನ್ ಡಾಲರ್​ಗಳಾಯಿತು. ಅಂದರೆ ಐದೇ ವರ್ಷಗಳಲ್ಲಿ ಸುಮಾರು 1 ಟ್ರಿಲಿಯನ್ ಡಾಲರ್ ಅಷ್ಟು ವೃದ್ಧಿ! ಎರಡನೇ ಅವಧಿಯಲ್ಲಿ ಕರೋನಾ ಮಹಾಮಾರಿ ವಕ್ಕರಿಸಿ ಇಡೀ ಪ್ರಪಂಚದ ಆರ್ಥಿಕತೆ ಕುಸಿಯಿತು. ಅಷ್ಟಾಗಿಯೂ ಭಾರತದ ಜಿಡಿಪಿ 2.67 ಟ್ರಿಲಿಯನ್ ಡಾಲರ್ಗಷ್ಟೇ ಇಳಿದದ್ದು. ಕೋವಿಡ್ ನಂತರ ಭಾರತದ ಪ್ರಗತಿಯನ್ನು ಕಂಡು ಪ್ರಪಂಚ ಅಚ್ಚರಿಗೊಳಗಾಗಿದೆ. 2021-22ರಲ್ಲಿ ಜಿಡಿಪಿ 3.15 ಟ್ರಿಲಿಯನ್ ಡಾಲರ್ ಗೆ ಏರಿ, ನವೆಂಬರ್ 2023 ಹೊತ್ತಿಗೆ ಜಿಡಿಪಿ 3.72 ಟ್ರಿಲಿಯನ್ ಡಾಲರ್ ಆಗಿ ಜಗತ್ತಿನ ಐದನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ! ಇನ್ನೊಂದೆರಡು ವರ್ಷಗಳಲ್ಲಿ ಮೂರನೇ ಒಂದು ಆರ್ಥಿಕ ಶಕ್ತಿಯಾಗಿ ಬೆಳೆಯಲಿದೆ ಎಂಬುದು ಈಗ ನಿರ್ವಿವಾದವಾಗಿದೆ. ಭಾರತದ ಪಾಸ್ಪೋರ್ಟಿಗಿಂದು ಬೆಲೆ ಏರಿದೆ. ಇಷ್ಟೇ ಅಲ್ಲದೇ ಹತ್ತು ಕೋಟಿ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿಗಳ ಆರೋಗ್ಯ ವಿಮೆ, ಹನ್ನೊಂದು ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ವ್ಯವಸ್ಥೆ ಮಾಡಿ, ಹದಿಮೂರೂವರೆ ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿದೆ. ಇದಕ್ಕೆಲ್ಲಾ ತಳಪಾಯ ಹಾಕಿದ್ದು ಮೋದಿಯವರ ಸೋರಿಕೆಯಿಲ್ಲದ ಅರ್ಥ ವ್ಯವಸ್ಥೆ ಹಾಗೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ.

ಯೂರೋಪಿನಲ್ಲಿ ಆರ್ಥಿಕ ಸಂಕಷ್ಟಕ್ಕೆ ಅನೇಕ ಕಾರಣಗಳಲ್ಲಿ ಒಂದು ಯುದ್ಧ ಪ್ರದೇಶಗಳಿಂದ ಬರುತ್ತಿರುವ, ಬಹುಮುಖ್ಯವಾಗಿ ಇಸ್ಲಾಂ ದೇಶಗಳಿಂದ ಬರುತ್ತಿರುವ ನಿರಾಶ್ರಿತರು. ಪೋಲಾಂಡ್ ಹೊರತು ಪಡಿಸಿ ಇತರ ಯೂರೋಪ್ ದೇಶಗಳು ನಿರಾಶ್ರಿತರೆಡೆಗೆ ತೋರುಸುತ್ತಿರುವ ಉದಾರತೆ. ಜರ್ಮನಿಯ ವಿಚಾರ ಹೇಳುತ್ತೇನೆ. ಆ ನಿರಾಶ್ರಿತರಿಗೆ ಬಿಟ್ಟಿ ಕೂಳು, ಶಿಕ್ಷಣ, ವೈದ್ಯಕಿಯ ವ್ಯವಸ್ಥೆ ಒದಗಿಸುತ್ತಿದೆ. ಅದಷ್ಟಲ್ಲದೇ ಓರ್ವ ನಿರಾಶ್ರಿತನಿಗೆ ಭತ್ಯೆಯೆಂದು ತಿಂಗಳಿಗೆ 1500 ಯೂರೋ ಅಂದರೆ ಅಂದಾಜು 1.25 ಲಕ್ಷ ರೂಪಾಯಿ ಕೊಡುತ್ತಿದ್ದಾರೆ. 'ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲಲ್ಲ' ಎಂಬುದಾಗಿದೆ ಅಲ್ಲಿನ ಪರಿಸ್ಥಿತಿ. ಒಂದು ಅಧ್ಯಯನದ ಪ್ರಕಾರ ದೇಶದ ಜನಸಂಖ್ಯೆ ಒಂದು ಹಂತಕ್ಕೆ ಏರಿ ನಂತರ ಇಳಿಯುತ್ತದೆ. ಅದೇ ಇಂದಿನ ಯೂರೋಪಿನ ಸ್ಥಿತಿ. ಚೀನಾದ ಸ್ಥಿತಿ ಕೂಡ ಹೀಗೆ ಆಗಲಿದೆ ಎಂಬುದು ಸತ್ಯ. ದುಡಿಯುವ ಕೈಗಳು ಕಮ್ಮಿಯಾದಷ್ಟು ದೇಶವೊಂದರ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿಗೆ ಜಗತ್ತು ಹೆಚ್ಚು ಯಾಂತ್ರಿಕರಣ ಹಾಗೂ ಕೃತಕ ಬುದ್ಧಿಮತೆಯೆಡೆಗೆ ತೆರಳುತ್ತಿದೆ. ಭಾರತ ಕೂಡ ಈ ತಂತ್ರಜ್ಞಾನದೆಡೆಗೆ ಕೆಲಸ ಮಾಡುತ್ತಿದೆ ಎಂಬುದು ಸಮಾಧಾನಕರ. ಕೊರೋನಾಕ್ಕೆ ತನ್ನ ಸ್ವಂತ ಔಷಧ ಕಂಡುಹಿಡಿದ್ದು ಭಾರತದ ಸರ್ಕಾರ ಸಂಶೋಧನೆಗೆ ಒತ್ತು ಕೊಟ್ಟುತ್ತಿದೆ ಎಂಬುದಕ್ಕೆ ನಿದರ್ಶನ.

ಮೋದಿ ಹೇಳಿದಂತೆ ದೊಡ್ಡದೊಂದು ಗುರಿಯೊಂದಿಗೆ ಭಾರತ ಕೆಲಸ ಮುಂದುವರೆಯುತ್ತಿದೆ. ಹಳ್ಳಹಿಡಿದಿದ್ದ ಆರ್ಥಿಕತೆಯನ್ನು ಬುಲೆಟ್ ರೈಲಿನ ಹಳಿ ಹಾಗೂ ವೇಗಕ್ಕೆ ದೇಶವನ್ನು ತಂದಿರಿಸಿದ ಕೀರ್ತಿ ನರೇಂದ್ರ ಮೋದಿಗೆ ಸೇರುತ್ತದೆ. ಭಾರತ ಮತ್ತಷ್ಟು ಬೆಳಗಲಿ, ಜಾಗತಿಕ ಶಕ್ತಿಯಾಗಲಿ ಎಂಬುದು ನಮ್ಮ ಆಶಯ. ಅದಾಕಬೇಕೆಂದರೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಿ ಆಯ್ಕೆಯಾಗಲೇಬೇಕಿದೆ. ಅವರನ್ನು ಪುನರಾಯ್ಕೆ ಮಾಡುವುದು ಭಾರತೀಯರ ಆದ್ಯ ಕರ್ತವ್ಯವಾಗಿದೆ.

No comments:

Post a Comment