'ಸ್ವಾತಂತ್ರ್ಯ ವೀರ' ಎಂದರೆ ಸಾವರ್ಕರ್ ಒಬ್ಬರೇ ಎಂಬುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ, ಒಪ್ಪಿಕೊಂಡಿದ್ದ ಸತ್ಯ. ಆದರೆ ಇಟಲಿಯ ಸೋನಿಯಾ ಗಾಂಧಿ ಭಾರತದ ರಾಜಕೀಯಕ್ಕೆ ಪ್ರವೇಶವಾದ ನಂತರ ಒಂದು ಪಂಗಡ ಸಾವರ್ಕರ್ ವಿರುದ್ಧ ಮಾತಾಡಲು ಪ್ರಾರಂಭಿಸಿತು. ಈ ನೀಚ ಪ್ರಕ್ರಿಯೆಯನ್ನು ಪ್ರಾರಂಬಿಸಿದ್ದು ಪಾಕಿಸ್ತಾನಕ್ಕೆ ಹೆದರುವ ಮಣಿಶಂಕರ್ ಅಯ್ಯರ್! ನಂತರದ ದಿನಗಳಲ್ಲಿ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಬಾಲಂಗೋಚಿಗಳು ಇತಿಹಾಸದ ಅಧ್ಯಯನವಿಲ್ಲದೇ ಸಾವರ್ಕರ್ ವಿರುದ್ಧ ಅಪದ್ಧದ ಮಾತುಗಳನ್ನಾಡಲು ಪ್ರಾರಂಭಿಸಿದರು. ಟಿ.ವಿ. ಮಾಧ್ಯಮದ ಚರ್ಚೆಯೊಂದರಲ್ಲಿ '1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವರ್ಕರ್ ನೇಪಾಳದ ಪರವಾಗಿದ್ದರು' ಎಂದು ಪ್ರೊಫೆಸರ್ ಅನ್ನಿಸಿಕೊಳ್ಳುವವರೊಬ್ಬರು ವಾದ ಮಂಡಿಸಿದರು! ಮತ್ತೊಂದೆಡೆ ಕಾಂಗ್ರೆಸ್ ವಿರೋಧದ ಪಂಗಡ ಸಾವರ್ಕರ್'ರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ವೈಭವಿಕರಿಸಿತು. ಸಾವರ್ಕರ್ ಎಂಬ ಘನ ವ್ಯಕ್ತಿತ್ವವನ್ನು ತಮ್ಮ ಸಂಕುಚಿತ ಮನೋಭಾವದ ತಳಹದಿಯಲ್ಲಿ ನೋಡುವಂತಾಯಿತು. ಯಾವುದೇ ಇತಿಹಾಸದ ವ್ಯಕ್ತಿತ್ವವನ್ನು ಸಮಗ್ರವಾಗಿ ನೋಡಬೇಕೇ ಹೊರತು ಪರ, ವಿರೋಧ ಅಥವಾ ಈ ಕಾಲದ ಸರಿ ತಪ್ಪಿನ ನೆಲೆಗಟ್ಟಿನಲ್ಲಲ್ಲ. ಸಾವರ್ಕರ್ ರವರ 141 ನೇ ಜಯಂತಿಯ ಪ್ರಯುಕ್ತ ಅವರ ಬಗ್ಗೆ ತಿಳಿಯುವ ಸಣ್ಣ ಪ್ರಯತ್ನ ಈ ಲೇಖನ.
1883ರಲ್ಲಿ ಜನಿಸಿದ ಸಾವರ್ಕರ್ ಸ್ವಭಾವತಃ ತೀಕ್ಷ್ಣಮತಿ. ತಮ್ಮ 16ನೇ ವಯಸ್ಸಿಗೆ ಸ್ವಾತಂತ್ರ್ಯ ಯಜ್ಞದಲ್ಲಿ ಧುಮುಕಿ ದೇಶದ ಮೊಟ್ಟಮೊದಲ ಕ್ರಾಂತಿಕಾರಿ ಸಂಘಟನೆ 'ಮಿತ್ರಮೇಳ' ಕಟ್ಟುತ್ತಾರೆ. ಇದನ್ನೇ 'ಅಭಿನವ ಭಾರತ' ಎಂದು ಮರು ನಾಮಕರಣ ಮಾಡಿ, ವಿದೇಶಿ ವಸ್ತ್ರಗಳನ್ನು ಸುಟ್ಟು, ಭರ್ಜರಿ ಹೋಳಿ ಆಚರಿಸುತ್ತಾರೆ. ನಂತರ ಫರ್ಗ್ಯುಸನ್ ಕಾಲೇಜಿನಲ್ಲಿ ಯುವಕರ ಪಡೆ ಕಟ್ಟಿ ಅಲ್ಲಿಯೂ ವಿದೇಶಿ ವಸ್ತ್ರಗಳ ಹೋಳಿ ಸಂಘಟಿಸುತ್ತಾರೆ. 'ಬ್ರಿಟಿಷರು ಭಾರತಕ್ಕೆ ಬಂದು ಆಳುವುದಾದರೆ ನಾನೇಕೆ ಲಂಡನ್'ಗೆ ತೆರಳಿ ಅಲ್ಲಿಯೇ ಕ್ರಾಂತಿ ಎಬ್ಬಿಸಬಾರದು?' ಎಂಬ ಯೋಚನೆಯೊಂದಿಗೆ ಲಂಡನ್'ಗೆ ತೆರಳಿ ಭಾರತೀಯರ ಕ್ಷಾತ್ರತೇಜವನ್ನು ಬಡಿದೆಬ್ಬಿಸಲು ಮ್ಯಾಜಿನಿಯ ಆತ್ಮಕತೆ ಬರೆದರು. ಅನಂತರ ಅವರು ಬರೆದ '1857 ಭಾರತದ ಸ್ವಾತಂತ್ರ್ಯ ಸಂಗ್ರಾಮ' ಕೃತಿ ಪ್ರಕಟವಾಗುವ ಮುನ್ನವೇ ನಿಷೇಧಕ್ಕೊಳಗಾಯಿತು! ಅದಾಗ್ಯೂ ಈ ಕೃತಿ ಭಾರತದಲ್ಲಿ ಹಬ್ಬಿಸಬೇಕಾದ ಕಿಚ್ಚು ಹಬ್ಬಿಸಿತು, ಕ್ರಾಂತಿಕಾರಿಗಳ ಪಾಲಿಗೆ ಭಗವದ್ಗೀತೆಯಾಯಿತು.
ಸಾವರ್ಕರ್ ಸ್ಪರ್ಶ ಮಣಿ. ತನ್ನೆಡೆಗೆ ಬಂದವರನ್ನು ಬದಲಾಯಿಸದೆ ಬಿಡುವ ವ್ಯಕ್ತಿತ್ವ ಅವರದ್ದಲ್ಲ. ಶೋಕಿ ಮಾಡುತ್ತಿದ್ದ ಮದನ್ ಲಾಲ್ ಧಿಂಗ್ರಾ ಸಾವರ್ಕರ್ ಸಂಪರ್ಕಕ್ಕೆ ಬಂದು, ಕರ್ಜನ್ ವೈಲಿಯನ್ನು ಸಂಹಾರ ಮಾಡಿ ಹುತಾತ್ಮನಾದ. ಇದೇ ಕಾರಣಕ್ಕೆ ಬ್ರಿಟೀಷ್ ಸರ್ಕಾರ ಸಾವರ್ಕರ್'ರನ್ನು ಬಂಧಸಿತು. ಭಾರತದಕ್ಕೆ ಕಳಿಸುವಾಗ ಹಡಗಿನಿಂದ ಹಾರಿ, ಸಮುದ್ರದಲ್ಲಿ ಈಜಿ, ಫ್ರಾನ್ಸ್ ನೆಲದಲ್ಲಿ ಮತ್ತೊಮ್ಮೆ ಆಂಗ್ಲ ಪೋಲಿಸರಿಗೆ ಸಿಕ್ಕಿ ಬೀಳುತ್ತಾರೆ. ನಂತರ, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಥಮ ಬಾರಿಗೆ ಸಾವರ್ಕರ್ ರೂಪದಲ್ಲಿ ರಾಜಕೀಯ ಖೈದಿಯೊಬ್ಬನ ವಿಚಾರಣೆ. ಫ್ರಾನ್ಸ್ ಹಾಗೂ ಆಂಗ್ಲರಿಗೆ ತೀವ್ರ ಮುಖಭಂಗವಾದರೂ ಸಾವರ್ಕರ್ ವಿಚಾರಣೆ ಭಾರತದಲ್ಲೇ ನಡೆಯಬೇಕಾಯಿತು. ತತ್ಕಾರಣ ಸಾವರ್ಕರ್'ಗೆ 25 ವರ್ಷ ಅವಧಿಯ ಎರಡೆರಡು ಜೀವಾವಧಿ ಕರಿನೀರಿನ ಶಿಕ್ಷೆ ಘೋಷಣೆಯಾಯ್ತು. ಅಂಡಮಾನಿನ ಜೈಲಿನಲ್ಲಿ ಅವರು ಪಟ್ಟ ಯಾತನೆ, ಮಾಡಿದ ಹೋರಾಟ, ತಂದ ಸುಧಾರಣ ಕ್ರಮಗಳು ಸಮಾಜದಲ್ಲಿ ಹೆಚ್ಚು ಪ್ರಚಲಿತ. ಸಾವರ್ಕರ್'ರವರನ್ನು ವಿರೋಧಿಸುವ ಬಣ ಕ್ಷಮಾಪಣ ಪತ್ರ ಹಿಡಿದು ವಾದಿಸುತ್ತಾರೆ. ಆದರೆ, ಇದೆಲ್ಲದರ ಹೊರತಾಗಿ ಸಾವರ್ಕರ್ ಬಗ್ಗೆ ಸಮಾಜ ಅರಿತುಕೊಳ್ಳಬೇಕಾದುದು ಅವರು ಅಂಡಮಾನಿನ ಸೆರೆಮನೆಯಿಂದ ಹೊರಬಂದು ಮಾಡಿದ ಸಾಮಾಜಿಕ ಕೆಲಸಗಳ ಬಗ್ಗೆ. ಸಾಹಿತಿಯಾಗಿ, ಇತಿಹಾಸಕಾರರಾಗಿ, ಮಿಲಿಟರಿ ತಜ್ಞರಾಗಿ ಸಾವರ್ಕರ್'ರ ಕೊಡುಗೆಯನ್ನು ನಾವಿಂದು ನೆನೆಯಬೇಕಿದೆ.
ಸಾವರ್ಕರ್ ಅಂಡಮಾನಿನ ಸೆರೆಯಲ್ಲಿದಾಗಲೇ ಹಿಂದೂಗಳ ಒಗ್ಗಟ್ಟು ಹಾಗೂ ಮತಾಂತರವಾಗಿದ್ದವರ ಶುದ್ಧಿಕರಣದ ಕಾರ್ಯ ಪ್ರಾರಂಭಿಸುತ್ತಾರೆ. ಭಾರತಕ್ಕೆ ಮರಳಿದ ನಂತರ ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆ, ಜಾತಿ ತಾರತಮ್ಯವನ್ನು ಇಲ್ಲವಾಗಿಸುವ ಪ್ರಯತ್ನಕ್ಕೆ ಮುಂದಾದರು. ಎಲ್ಲಾ ಹಿಂದೂಗಳಿಗೂ ಪ್ರವೇಶ ಸಿಗಬಹುದಾದ ಪತಿತ ಪಾವನ ಮಂದಿರವನ್ನು ರತ್ನಾಗಿರಿಯಲ್ಲಿ ಕಟ್ಟಿಸಿದರು. ಪಂಡಿತರ ಸಮೂಹವನ್ನು ತಮ್ಮ ವಾದದಲ್ಲಿ ಸೋಲಿಸಿ 'ಅಸ್ಪೃಶ್ಯತೆ, ಹಿಂದೂ ಧರ್ಮಕ್ಕೆ ಅಂಟಿಕೊಂಡು ಬಂದದ್ದಲ್ಲ, ರೂಢಿಯಿಂದ ಬಂದದ್ದು' ಎಂಬ ನಿರ್ಣಯಕ್ಕೆ ಬಂದು ಪತಿತ ಪಾವನ ಪಾವನ ಮಂದಿರವನ್ನು ತೀರ್ಥಸ್ಥಳವಾಗಿಸಿದರು. ಸ್ವತಃ ಅಂಬೇಡ್ಕರರು ತಮ್ಮ ಪತ್ರಿಕೆಯಲ್ಲಿ ಸಾವರ್ಕರ್'ರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಮತ್ತೊಮ್ಮೆ ಸ್ವದೇಶಿ ಚಳುವಳಿ ಪುನರಾರಂಭಿಸಿ 'ಸ್ವದೇಶಿ ಭಂಡಾರ' ತೆರೆದರು. ಸ್ವದೇಶಿ ಪ್ರಚಾರ ಬಿರುಸಾಗುತ್ತಿದ್ದಂತೆ ಸ್ವದೇಶಿ ಭಂಡಾರ ಲಾಭದತ್ತ ಹೊರಳಿತು. ಸ್ವದೇಶಿ ಚಿಂತನೆಯ ಭಾಗವಾಗಿಯೇ ಮರಾಠಿ ಭಾಷಾ ಶುದ್ಧಿಕರಣಕ್ಕೆ ನಾಂದಿ ಹಾಡಿದರು. ಉರ್ದು ಹಾಗೂ ಪಾರ್ಸಿ ಭಾಷೆಯ ಪದಗಳನ್ನು ತೆಗೆದು ಮರಾಠಿಯನ್ನು ಶುದ್ಧಗಳಿಸಲು ಕರೆ ನೀಡಿದರು. ಮರಾಠಿ ಕವಿ ಸಮ್ಮೇಳನದಲ್ಲಿ ಈ ನಿರ್ಣಯವನ್ನು ಅಂಗೀಕರಿಸಿ ಶುದ್ಧ ಮರಾಠಿ ಶಬ್ಧಕೋಶವನ್ನು ರಚಿಸಲಾಯ್ತು. ನಮ್ಮ ರಾಷ್ಟ್ರಧ್ವಜದಲ್ಲಿ ಚರಕ ಬೇಡ, ಪ್ರಗತಿಯ ಸಂಕೇತವಾಗಿರುವ, ಸಾಂಸ್ಕೃತಿಕ ಹಿನ್ನಲೆ ಇರುವಂತಹ ಧರ್ಮಚಕ್ರ (ಈಗ ನಾವು ಕರೆಯುವ ಅಶೋಕ ಚಕ್ರ) ಇರಬೇಕೆಂದು ಪ್ರತಿಪಾದಿಸಿದ್ದು ಸಾವರ್ಕರ್!
ಇಷ್ಟೇ ಅಲ್ಲದೇ ಸಾವರ್ಕರ್ ಒರ್ವ ಕವಿಯೂ ಹೌದು. ಇಂದಿಗೂ ಪ್ರಚಲಿತವಾಗಿರುವ 'ಜಯೋಸ್ತುತೆ' ಪದ್ಯವನ್ನು ಬರೆದಾಗ ಅವರಿಗೆ ಕೇವಲ 22 ವರ್ಷ! ಲತಾ ಮಂಗೇಶ್ಕರ್ ರವರ ತಂದೆ ಸಾವರ್ಕರ್'ರವರು ಬರೆದ 'ಸಂಯಸ್ತ ಖಡ್ಗ' ಎಂಬ ನಾಟಕವನ್ನು ಒಂದು ವರ್ಷಗಳ ಕಾಲ ಆಡಿದ್ದರು. ಮೋಪ್ಲಾ ದಂಗೆಯಾದ ಒಂದೆರಡು ವರ್ಷಗಳಲ್ಲಿ ಆ ವಿಷಯದ ಕುರಿತು ಕಾದಂಬರಿ, ಪೋರ್ಚಿಗೀಸರು ಗೋವಾದಲ್ಲಿ ನಡೆಸಿದ ಅತ್ಯಾಚಾರ ಕುರಿತು 'ಗೋಮಾಂತಕ' ಎಂಬ ಕಾವ್ಯ ರಚಿಸಿದ್ದು ಸಾವರ್ಕರ್. ಮಹಾರಾಷ್ಟ್ರದಲ್ಲಿ ನಡೆದ ಅಖಿಲ ಭಾರತ ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ಸಾವರ್ಕರ್! ಮಹರಾಷ್ಟ್ರದ ಅನೇಕ ಸಾಂಸ್ಕೃತಿಕ ವೇದಿಕೆಗಳಲ್ಲಿ ಇಂದಿಗೂ ಸಹ ಸಾವರ್ಕರ್ ವಿರಚಿತ ಗೀತೆಗಳನ್ನು ಹಾಡುವುದುಂಟು.
ಸ್ವಾತಂತ್ರ್ಯ ಹೋರಾಟ, ರಾಜಕೀಯ, ಸಾಹಿತ್ಯ ಹೊರತಾಗಿ ಇತಿಹಾಸ ಹಾಗೂ ಮಿಲಿಟರಿ ತಜ್ಞರಾಗಿಯೂ ಸಹ ಸಾವರ್ಕರ್ ಅಗ್ರಣಿ. ಜಗತ್ತಿನ ಆಗು ಹೋಗುಗಳನ್ನು ಅರಿತುಕೊಂಡಿದ್ದರು. ಎರಡನೇ ವಿಶ್ವಯುದ್ಧ ಪ್ರಾರಂಭವಾಗುವ ಮುನ್ನ ಸಾವರ್ಕರ್'ರನ್ನು ಸುಭಾಷರು ಭೇಟಿಯಾಗುತ್ತಾರೆ. 'ಶತ್ರುವಿನ ಶತ್ರು ನಮ್ಮ ಮಿತ್ರ' ಎಂಬ ತತ್ವವನ್ನು ಮುಂದಿಟ್ಟು ಬ್ರಿಟೀಷರ ಶತ್ರು ರಾಷ್ಟ್ರಗಳ ಜೊತೆ ಸಂಪರ್ಕ ಸಾಧಿಸಿ ಆಂಗ್ಲರನ್ನು ಸೋಲಿಸುವ ಯೋಜನೆ ಹಾಕಿಕೊಟ್ಟದ್ದು ಸಾವರ್ಕರ್. ಹಿಂದೂಗಳಿಗೆ ಸೈನ್ಯ ಸೇರಲು ಸಾವರ್ಕರ್ ಪ್ರೇರೇಪಿಸುತ್ತಿದ್ದರು. ಸ್ವಾತಂತ್ರ್ಯಗಳಿಸಿದ ಕೆಲವೇ ತಿಂಗಳಲ್ಲಿ ಪಾಕಿಸ್ತಾನ ಕಾಶ್ಮೀರದ ಮೇಲೆ ದಾಳಿ ಮಾಡಿತು. ಆಗ ಭಾರತವನ್ನು ಉಳಿಸಿದ್ದು ಇದೇ ಸೈನಿಕರು. ಅಂದು ಸಾವರ್ಕರ್ ಹಿಂದೂಗಳನ್ನು ಸೈನ್ಯಕ್ಕೆ ಸೇರಲು ಪ್ರೇರೇಪಿಸದಿದ್ದರೆ ಜಿಹಾದಿ ಮನಸ್ಥಿತಿಯವರ ಸಂಖ್ಯೆ ಹೆಚ್ಚಾಗಿ ಭಾರತ ನಾಶವಾಗುತ್ತಿತ್ತು. 'ಪಾಕಿಸ್ತಾನ ಒಂದು ಪುಂಡು ರಾಷ್ಟ್ರ, ಐವತ್ತು ವರ್ಷಗಳ ಕಾಲ ಹೀನ ಬದುಕನ್ನು ಬದುಕಿ ಮುಂದೆ ಮತ್ತೊಮ್ಮೆ ಭಾರತದೊಂದಿಗೆ ವಿಲೀನವಾಗಿವುದು ಖಂಡಿತ' ಎಂದು ಸಾವರ್ಕರ್ ಹೇಳಿದ್ದು ಸತ್ಯವಾಗುತ್ತಿರುದನ್ನು ನಾವಿಂದು ನೋಡುತ್ತಿದ್ದೇವೆ. ಮೋದಿಯವರ ಮೂರನೇ ಅವಧಿಯಲ್ಲಿ ಪಿಒಕೆ ಅನ್ನು ಭಾರತ ತೆಗೆದುಕೊಂಡು ನಂತರದ ಹತ್ತು ವರ್ಷಗಳಲ್ಲಿ ಪಾಪಿ ರಾಷ್ಟ್ರ ಭಾರತದೊಂದಿಗೆ ಒಂದಾಗುತ್ತದೆ. ಇದನ್ನು ನೋಡುವುದು ನಮ್ಮ ಭಾಗ್ಯವೇ ಸರಿ. ಇದು ಸಾವರ್ಕರರ ಇತಿಹಾಸದ ಜ್ಞಾನ ಹಾಗೂ ದೂರದೃಷ್ಠಿಯ ಬಗೆಗಿನ ಒಂದು ನಿದರ್ಶನ.
ನಮ್ಮ ನಮ್ಮ ರಾಜಕೀಯ ಹಿತಾಸಕ್ತಿಗಾಗಿ ಐತಿಹಾಸಿಕ ವ್ಯಕ್ತಿಗಳ ಪರ, ವಿರೋಧ ನಿಲ್ಲುವುದು, ಅವರ ಕುರಿತು ಅಪದ್ಧದ ಚರ್ಚೆ ಮಾಡುವುದು ನಿಲ್ಲಿಸಬೇಕಾಗಿದೆ. ಟಿ.ವಿ. ಮಾಧ್ಯಮದಲ್ಲಾಗಲಿ, ಸಾಮಾಜಿಕ ಜಾಲತಾಣದಲ್ಲಾಗಲಿ, ಯಾವುದೇ ಚರ್ಚಾ ವೇದಿಕೆಗಳಲ್ಲಾಗಲಿ ಸಾವರ್ಕರರನ್ನು ಈ ಪರ ವಿರೋಧದ ಚರ್ಚೆಗಳಿಂದ ಹೊರತರಬೇಕಿದೆ. ರಾಜಕೀಯಕ್ಕಿಂತ ಸಮಾಜ ದೊಡ್ಡದ್ದು. ಅದರಂತೆ ಸಾವರ್ಕರ್ ಕಂಡ ಅಖಂಡ ಭಾರತದ ಕನಸು, ಜಾತಿ, ಮತ, ಪಂಥವನ್ನು ಮೀರಿದ ಸದೃಢ ಹಿಂದೂ ಸಮಾಜವನ್ನು ಕಟ್ಟುವಲ್ಲಿ ನಾವು ದಾಪುಗಾಲಿಡೋಣ. ಅದೇ ಅವರ ಜಯಂತಿಗೆ ನಾವು ಅರ್ಪಿಸಬಹುದಾದ ಕೊಡುಗೆ.

No comments:
Post a Comment