January 25, 2021

ಅಗಾಧತೆಗೆ ಮೀರಿದ ವ್ಯಕ್ತಿತ್ವ ಸುಭಾಷ್ ಬೋಸ್!

ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು 15 ಆಗಸ್ಟ್, 1947. ಆದರೆ, ಸ್ವಾತಂತ್ರ್ಯ ಹೋಗಿದ್ದು ಯಾವಾಗ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕಲ್ಕತ್ತಾದಲ್ಲಿ ಮೀರ್ ಜಾಫ಼ರ್ ನ ಕಾರಣದಿಂದಾಗಿ ರಾಬರ್ಟ್ ಕ್ಲೈವ್ನ ಪುಟ್ಟಸೇನೆ ಎದುರಿಗೆ ಭಾರತದ ದೊಡ್ಡ ಸೇನೆ ಶರಣಾಗಿತ್ತು. ಬಹುಶಃ 1757ರ ಆ ಕಾಲಘಟ್ಟದಲ್ಲಿ ಭಾರತ ಸ್ವಾತಂತ್ರ್ಯ ಕಳೆದುಕೊಂಡಿತು ಎನ್ನಬಹುದು. ಅಲ್ಲಿಂದಾಚೆಗೆ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೆರೆದಾಡಿತು. ಭಾರತದ ಕರಾಳ ದಿನಗಳು ಪ್ರಾರಂಭವಾಯಿತು. ಬ್ರಿಟೀಷರು ಭಾರತವನ್ನು ಲೂಟಿ ಮಾಡುವುದಲ್ಲದೆ ಸಮಾನ್ಯ ಜನಜೀವನದಲ್ಲೂ ಹಸ್ತಕ್ಷೇಪ ಮಾಡಿದರು. ನಮ್ಮ ಧಾರ್ಮಿಕ ಆಚರಣೆಯನ್ನು ಅವಹೇಳನ ಮಾಡಿ, ಭಾರತವನ್ನೇ ಕ್ರಿಸ್ತೀಕರಣ ಮಾಡಲು ಮುಂದಾದರು. ಇದರಿಂದಾಗಿ 1857 ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ರೂಪದಲ್ಲಿ ಸಿಡಿದು ಬಿತ್ತು. ಸೈನಿಕರು ಮಾತ್ರವಲ್ಲದೆ ಜಮೀನ್ದಾರು, ರೈತರು, ಸಾಮನ್ಯ ಜನ ಜಾತಿ, ಮತ, ಪಂಥವನ್ನು ಮರೆತು ಬ್ರಿಟೀಷರ ವಿರುದ್ಧ ತಿರುಗಿಬಿದ್ದರು. ವ್ಯವಸ್ತಿತ ಹೋರಾಟದ ಕೊರತೆಯ ಕಾರಣ ಸಂಗ್ರಾಮ ನೆಲಕಚ್ಚಿತು. ಇದಾದ ನಂತರ ಬ್ರಿಟೀಷರು ಬಹಳ ಜಾಗರೂಕರಾದರು. ಭಾರತೀಯ ಸೈನ್ಯ ಯಾವುದೇ ಕಾರಣಕ್ಕೂ ತಮ್ಮ ವಿರುದ್ಧ ತಿರುಗಿ ಬೀಳಬಾರದು ಎನ್ನುವ ಮಟ್ಟಿಗೆ ತಮ್ಮ ನೀತಿಯನ್ನು ಬದಲಾಯಿಸಿದರು. ನಮ್ಮದೇ ಸೈನಿಕರು ನಮ್ಮದೇ ಜನರ ನರಮೇಧ ಮಾಡಿದ ಜಲಿಯನ್ ವಾಲಾ ಭಾಗ್ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆ. ಇಂತಹ ಸ್ಥಿತಿಯಲ್ಲಿ ಐ.ಎನ್.ಎ. ಮೂಲಕ ಭಾರತೀಯ ಸೈನ್ಯವನ್ನು ಒಳಹೊಕ್ಕು ಮತ್ತೊಮ್ಮೆ ಬಂಡಾಯವನ್ನೆಬ್ಬಿಸಿ ಅದರ ಮೂಲಕ ಬ್ರಿಟೀಷರನ್ನು ಭಾರತ ಬಿಟ್ಟು ಹೋಗುವಂತೆ ಮಾಡಿದ ಕೀರ್ತಿ ಅಕ್ಷರಶಃ ಸುಭಾಷರದ್ದೇ.


ಸುಭಾಷರದ್ದು ಚಿಕ್ಕವಯಸ್ಸಿನಿಂದಲೇ ಅಂತರ್ಮುಖಿ ವ್ಯಕ್ತಿತ್ವ. ಸ್ವಾಮೀ ವಿವೇಕಾನಂದರ ಪ್ರೇರೇಪಣೆಯಿಂದ ತನ್ನ ಸ್ನೇಹಿತರೊಂದಿಗೆ ಸೇವಾ ಚಟುವಟಿಕೆಯಲ್ಲಿ ನಿರತರಾದವರು. ತಾನು ಆಧ್ಯಾತ್ಮಿಕ ಜೀವನದಲ್ಲಿ ಮುಂದುವರೆಯಲು ಗುರು ಅಗತ್ಯವೆಂದು ಮನೆಬಿಟ್ಟು ಬನಾರಸ್, ಮಥುರಾ, ಹೃಷೀಕೇಶವೆಲ್ಲ ಅಲೆದು ಯಾರೂ ಸಿಗದ ಕಾರಣ ಮನೆಗೆ ಹಿಂತಿರುಗಿ ಮತ್ತೊಮ್ಮೆ ಸೇವಾ ಚಟುವಟಿಕೆಯಲ್ಲಿ ನಿರತರಾಗುತ್ತಾರೆ. ಕಾಲೇಜು ಸೇರಿದ ಸುಭಾಷರು ಅಲ್ಲಿದ್ದ ಸೈನಿಕ ವಿಭಾಗಕ್ಕೆ ಸೇರುತ್ತಾರೆ. ಭಾರತದ ಬಗ್ಗೆ ಸ್ಪಷ್ಟಕಲ್ಪನೆ ಹೊಂದಿದ್ದ ಅವರಿಗೆ ತನ್ನ ಜೀವನ ಇರುವುದೇ ಬ್ರಿಟೀಷರನ್ನು ಹೊಡೆದೋಡಿಸಲು ಎಂದು ತೀರ್ಮಾನಿಸುತ್ತಾರೆ. ಸ್ವಾತಂತ್ರ್ಯ ಹೋರಾಟ ತೀವ್ರವಾಗುತ್ತಿದ್ದ ಕಾಲವದು. ಸುಭಾಷರು ಹೋರಾಟಕ್ಕೆ ಇಳಿಯಬಹುದು ಎಂಬ ಸ್ಪಷ್ಟಕಲ್ಪನೆ ಇದ್ದ ಅವರ ತಂದೆ ಐ.ಸಿ.ಎಸ್. ಪರೀಕ್ಷೆ ಬರೆಯಲು ವಿದೇಶಕ್ಕೆ ಕಳಿಸುತ್ತಾರೆ. ತಂದೆಯ ಮಾತಿಗೆ ಬೆಲೆಕೊಟ್ಟು ಸುಮಾರು 9-10 ತಿಂಗಳ ಸತತ ಅಧ್ಯಯನದ ನಂತರ ಸುಭಾಷರು ಐ.ಸಿ.ಎಸ್. ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದು ತೇರ್ಗಡೆ ಹೊಂದುತ್ತಾರೆ. ಬ್ರಿಟೀಷರ ವಿರುದ್ಧ ಹೋರಾಡಬೇಕೆಂದು ಐ.ಸಿ.ಎಸ್. ಪದವಿಯನ್ನು ದಿಕ್ಕರಿಸಿ, ಬ್ರಿಟೀಷರಿಗೆ ತನ್ನ ಸ್ಕಾಲರ್ಶಿಪ್ ಹಣವನ್ನು ಕೊಟ್ಟು ಮರಳಿ ಭಾರತಕ್ಕೆ ಹಿಂದಿರುಗುತ್ತಾರೆ. ಲಂಡನ್ನಿನಲ್ಲಿ ಇದ್ದಾಗಲೇ ಭಾರತದ ಹೋರಾಟ ಯಾವ ದಿಕ್ಕಿನಲ್ಲಿ ಸಾಗಬೇಕು, ಕಾಂಗ್ರೇಸಿನ ನೀತಿ ಯಾವ ಸ್ವರೂಪದಲ್ಲಿ ಬದಲಾಗಬೇಕು ಎಂದೆಲ್ಲ ಬಂಗಾಳದ ಕ್ರಾಂತಿಕಾರಿ ಚಿತ್ತರಂಜನ್ ದಾಸರ ಜೊತೆ ಪತ್ರವ್ಯವಹಾರ ನಡೆಸಿದ್ದರು ಬೋಸ್. ಭಾರತಕ್ಕೆ ಮರಳಿ ಬಂದ ಬೋಸರು ಗಾಂಧೀಜೀ ಎದುರಿಗೆ ನಿಂತು ತಮ್ಮ ಪ್ರಶ್ನೆಗಳನ್ನು ಮುಂದಿಡುತ್ತಾರೆ - 'ಅಸಹಕಾರ ಚಳುವಳಿ, ಸತ್ಯಾಗ್ರಹದ ಹೋರಾಟಕ್ಕೆ ಹೆದರಿ ಬ್ರಿಟೀಷರು ಸ್ವಾತಂತ್ಯ್ರ ಕೊಡುತ್ತಾರ?, 1 ವರ್ಷದಲ್ಲಿ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಹೇಳುತ್ತೀರಲ್ಲ ಅದು ಹೇಗೆ?'. ಈ ಎರಡು ಪ್ರಶ್ನೆಗಳಿಗೂ ಸಮರ್ಪಕ ಉತ್ತರ ಸಿಕ್ಕದೆ ಬೋಸರು ಚಿತ್ತರಂಜನ್ ದಾಸರ ಬಳಿ ತೆರಳುತ್ತಾರೆ. ಸ್ವರಾಜಿಸ್ಟ್ ಪಾರ್ಟಿಯ ಮುಂದಾಳತ್ವ ಮತ್ತು ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲ್ ಜವಾಬ್ದಾರಿ ಬೋಸರ ಹೆಗಲಿಗೆ ಬೀಳುತ್ತದೆ. ಕಾಲೇಜನ್ನು ಅಭಿವೃದ್ಧಿ ಪಡಿಸುವುದರೊಟ್ಟಿಗೆ ದೊಡ್ಡದೊಂದು ಸ್ವಯಂಸೇವಕರ ತಂಡವನ್ನೇ ಕಟ್ಟಿದರು. ಕಲ್ಕತ್ತಾದ ಮುನ್ಸಿಪಲ್ ಚುಣಾವಣೆಯಲ್ಲಿ ಸ್ವರಾಜಿಸ್ಟ್ ಪಾರ್ಟಿ ಗೆದ್ದು ಜನರಿಗೆ ತಮ್ಮದೇ ಆದ ಸರ್ಕಾರ ಬಂದಿದೆ ಎಂಬಂತಹ ಭಾವನೆ ಬರುವಂತೆ ಆಡಳಿತ ನೀಡುತ್ತಾರೆ. ಬೋಸರ ಆಡಳಿತದಲ್ಲಿ ಶಾಲೆ, ಕಾಲೇಜು, ಸಣ್ಣ ಪ್ರಮಾಣದ ಕೈಗಾರಿಕೆ ಉದ್ಯಮವನ್ನು ಅಭಿವೃದ್ದಿ ಪಡಿಸುತ್ತಾರೆ. ಬೋಸರ ಕಾರ್ಯವೈಖಿರಿ ಕಂಡು ಬ್ರಿಟೀಷರಿಗೆ ಸಹಿಸಲಾಗಲಿಲ್ಲ. 1918 ರ ಯಾವುದೋ ಕಾಯ್ದೆಯನ್ನು ಮುಂದಿಟ್ಟುಕೊಂಡು ಬೋಸರನ್ನು ಬಂಧಿಸಿ ಮಾಂಡಲೆ ಜೈಲಿಗೆ ಕಳಿಸುತ್ತಾರೆ. ಅವರ ಬಿಡುಗಡೆಗೆ ದೇಶದಲ್ಲಿ ಪ್ರತಿಭಟನೆ ವ್ಯಕ್ತವಾದಾಗ ಬ್ರಿಟೀಷರು ಸುಭಾಷರಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಡುತ್ತಾರೆ. ಇದಕ್ಕೊಪ್ಪಿದರೆ ದೇಶಬಿಟ್ಟು ಹೋಗಲು ತಾನೆ ಪರವಾನಿಗಿ ಪಡೆದಂತಾಗುತ್ತದೆ ಎಂದು ಬ್ರಿಟೀಷರ ಕೊಡುಗೆಯನ್ನು ನಿರಾಕರಿಸುತ್ತಾರೆ.


ಸುಭಾಷರು 1 ವರ್ಷದ ನಂತರ ಬಿಡುಗಡೆಯಾಗುತ್ತಾರೆ. ಅಷ್ಟರಲ್ಲಿ ಚಿತ್ತರಂಜನ್ ದಾಸರ ದೇಹತ್ಯಾಗವಾಗಿರುತ್ತದೆ. ಏನು ಮಾಡಲು ತೋಚದೆ ಗಾಂಧೀಜೀಯವರೊಂದಿಗೆ ಇದ್ದುಗೊಂಡು ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿ ತೀವ್ರವಾದಿಯಾಗಿದ್ದ ಸುಭಾಷರು ಮೃದುವಾದಿಯಾಗಿತ್ತಾರೆ. ಕಾಂಗ್ರೇಸ್ ಪಕ್ಷದ ಸದಸ್ಯರಾಗಿ ದೇಶದಾದ್ಯಂತ ಪ್ರವಾಸ ಮಾಡಿ ಪ್ರದೇಶ ಕಾಂಗ್ರೇಸ್ ಸಮಿತಿಯ ಸದಸ್ಯರನ್ನು ತಮ್ಮ ಹತ್ತಿರಕ್ಕೆ ಸೆಳೆದುಕೊಂಡರು. ಅನೇಕ ಕಾಲೇಜು ವಿದ್ಯಾರ್ಥಿಗಳನ್ನು ಮಾತಾಡಿಸಿ, ಅವರಿಗೆ ಕ್ರಾಂತಿಕಾರ್ಯ, ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿಕೊಟ್ಟು, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಣೆ ನೀಡುತ್ತಾರೆ. ಆಂಗ್ಲರ ವಿರುದ್ಧದ ಹೊರಾಟದಲ್ಲಿ ಸುಭಾಷರು 11 ಸಲ ಜೈಲಿಗೆ ಹೋಗಿ ಬಂದರು. ಸುಭಾಷರು ಜೈಲಿನಲ್ಲಿದ್ದಾರೆ ಎಂದರೆ ಹೊರಗೆ ಹೋರಾಟದ ಕಾವು ಏರುತ್ತಿತ್ತು. ಅದನ್ನು ತಡೆಯಲು ಸುಭಾಷರನ್ನು ಯೂರೋಪಿಗೆ ಕಳಿಸುತ್ತಾರೆ. ಆಸ್ಟ್ರಿಯಾದಲ್ಲಿ ಸುಭಾಷರಿಗೆ ಸರ್ದಾರ್ ಪಟೇಲರ ಅಣ್ಣ ವಿಠ್ಠಲ್ ಭಾಯ್ ಪಟೇಲರು ಸಿಗುತ್ತಾರೆ. ಅಲ್ಲಿಯೂ ಕೂಡ ಇಬ್ಬರು ಕಾಂಗ್ರೇಸಿನ ನೀತಿ, ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕಿನ ಬಗ್ಗೆ, ಕ್ರಾಂತಿಯ ಮಹತ್ವದ ಬಗ್ಗೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡುತ್ತಾರೆ. 1938ರಲ್ಲಿ ಕಾಂಗ್ರೇಸ್ ತನ್ನ ಅಧ್ಯಕ್ಷರನ್ನಾಗಿ ಸುಭಾಷರನ್ನು ಆರಿಸಿಕೊಳ್ಳುತ್ತದೆ. ಬಡತನ ನಿರ್ಮೂಲನೆ, ಯೋಜನ ಆಯೋಗದ ಪರಿಕಲ್ಪನೆ, ಜನಸಂಖ್ಯೆ ಕಡಿವಾಣ, ಜಮಿನ್ದಾರಿ ಪದ್ಧತಿಯ ನಿರ್ಮೂಲನೆ ಕುರಿತು ಮಾತಾಡಿ ಅದ್ಭುತವಾದ ಅಧ್ಯಕ್ಷೀಯ ಭಾಷಣವನ್ನು ಪ್ರಸ್ತುತಪಡಿಸುತ್ತಾರೆ. ಕಾಂಗ್ರೇಸಿನ ಕಾರ್ಯಕಾರಿ ಸಮಿತಿಗೆ ಹೊಸಬರನ್ನು ತರುವ ಯೋಚನೆ ಸುಭಾಷರದ್ದು. ಒಂದು ವರ್ಷದ ಅಧ್ಯಕ್ಷ ಅವಧಿ ಮುಗಿದ ಮೇಲೆ ಮತ್ತೊಂದು ಅವಧಿಗೆ ಅಧ್ಯಕ್ಷ ಪದವಿಯನ್ನು ಕೇಳುತ್ತಾರೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುಣಾವಣೆ ನಡೆಯಲಿ ಎಂದು ತಮ್ಮ ವಾದವನ್ನು ಮುಂದಿಡುತ್ತಾರೆ. ಸುಭಾಷ್ ಮತ್ತು ಪಟ್ಟಾಬಿ ಸೀತಾರಮಯ್ಯನವರ ನಡುವೆ ಚುಣಾವಣೆ ನಡೆದು ಸುಭಾಷರು ಸುಮಾರು 200 ವೋಟುಗಳಿಂದ ಗೆದ್ದು ಮತ್ತೊಮ್ಮ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಸುಭಾಷರ ಈ ಗೆಲುವು ಮತ್ತು ಅವರ ಕೆಲಸದ ತೀವ್ರತೆಯನ್ನು ಕಂಡು ಇತರ ಕಾಂಗ್ರೇಸಿಗರಿಗೆ ಮತ್ತು ದುರಾದೃಷ್ಟವಷಾತ್ ಗಾಂಧೀಜಿಗೆ ಸರಿಬರದೆ ಅವರನ್ನು ಪ್ರದೇಶ ಕಾಂಗ್ರೇಸ್ ಸಮಿತಿಯಿಂದಲೂ ಸಹ ಹೊರಹಾಕಿದರು. ಈ ಘಟನೆಯ ನಂತರ ಸುಭಾಷರು ಫ಼ಾರ್ವರ್ಡ್ ಬ್ಲಾಕ್ ಎಂಬ ಪತ್ರಿಕೆಯ ಮೂಲಕ ಬೆಂಕಿಯುಗುಳಲು ಪ್ರಾರಂಭಿಸುತ್ತಾರೆ. ಕಾಂಗ್ರೇಸ್ ಏನಾದರು ತಪ್ಪು ಮಾಡಿದರೆ ಮುಲಾಜಿಲ್ಲದೆ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಕಾಂಗ್ರೇಸ್ ಇಂದ ಹೊರಗೆ ಬಂದ ಸುಭಾಷರಿಗೆ ಮುಂದೇನು ಎಂಬ ಪ್ರಶ್ನೆ ಕಾಡತೊಡಗಿತು. ದೇಶಕ್ಕಾಗಿ ಏನಾದರು ಮಾಡಲು ಅವರ ಮನಸ್ಸು ಹಾತೊರೆಯುತ್ತಿತ್ತು.


ಸುಭಾಷ್ ಬೋಸರೆಂದರೆ ನಮ್ಮ ಪಠ್ಯಪುಸ್ತಕದಲ್ಲಿ ಐ.ಎನ್.ಎ. ಕಟ್ಟಿ ಹೊರಾಟ ಮಾಡಿದರು ಎಂದು ಮಾತ್ರ ತೋರಿಸಲಾಗಿದೆ. ಆದರೆ, ಅವರ ವ್ಯಕ್ತಿತ್ವ ಬಹಳ ಅಗಾಧ. ಐ.ಸಿ.ಎಸ್. ಪರೀಕ್ಷೆ ತೇರ್ಗಡೆ ಹೊಂದಿದ್ದ ಬೋಸರು ಐಶಾರಾಮಿ ಜೀವನ ನಡೆಸಬಹುದಿತ್ತು. ಆದರೆ, ಆ ಜೀವನವನ್ನು ಬಿಟ್ಟು ಭಾರತದ ಸ್ವಾತಂತ್ರ್ಯಕ್ಕಾಗಿ ಮರಳಿ ಬರುತ್ತಾರೆ. ಚಿಕ್ಕಂದಿನಿಂದಲೇ ಸ್ವಾಮೀ ವಿವೇಕಾನಂದರಿಂದ ಪ್ರಭಾವಿತರಾದ ಬೋಸರು ಸೇವಾಮಾಗ್ರವನ್ನು ರೂಢಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯಗಳಿಸುವುದಷ್ಟೇ ಅವರ ಧ್ಯೇಯವಾಗಿರದೆ ಸ್ವಾತಂತ್ರ್ಯ ನಂತರ ದೇಶವನ್ನು ಮುನ್ನಡೆಸುವ ಯೋಜನೆಯನ್ನು ಅವರು ಹೊಂದಿದ್ದರು. ಜಗತ್ತಿನ ಇತಿಹಾಸವನ್ನು ತಿಳಿದಿದ್ದ ಸುಭಾಷರು ಬ್ರಿಟೀಷರು ಭಾರತವನ್ನು ತುಂಡು ಮಾಡುವುದಾಗಿ 1924 ರಲ್ಲೇ ಊಹಿಸಿದ್ದರು. ಸುಭಾಷರು ವಿದೇಶದಲ್ಲಿ ಮಾಡಿದ ಕೆಲಸ ಮತ್ತಷ್ಟು ರೋಚಕವಾಗಿದ್ದು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ತಂದ ಪ್ರಕ್ರಿಕೆಯನ್ನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳುತ್ತೇನೆ.

January 16, 2021

ಬ್ರದರ್ ಫ಼್ರಮ್ ಅನದರ್ ಮದರ್!

ಬದುಕಿನಲ್ಲಿ ಕಷ್ಟಗಳು ಸಹಜ. ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಕಷ್ಟಗಳನ್ನು ಅನುಭವಿಸಿಯೇ ಇರುತ್ತೇವೆ. ಮನೆ ಕೊಳ್ಳಲು ಹಣ ಹೊಂದಿಸಲು ಪಟ್ಟ ಪಾಡು, ಮುಖ್ಯವಾದ ಕೆಲಸಕ್ಕೆ ಹೋಗಬೇಕಾದರೆ ಆಗುವ ಆಕ್ಸಿಡೆಂಟ್, ಪರೀಕ್ಷೆಯಲ್ಲಿ ಫ಼ೇಲ್, ಕೆಲಸಕ್ಕಾಗಿ ಅಲೆದಾಟ, ಪ್ರೀತಿಸಿದ ಹುಡುಗ (ಹುಡುಗಿ) ಯಾವುದೋ ಕಾರಣಕ್ಕೆ ನಮ್ಮನ್ನು ಒಪ್ಪಿಕೊಳ್ಳದಿರುವುದು, ತೀರ ಹತ್ತಿರದವರಿಂದಲೇ ನಂಬಿಕೆ ದ್ರೋಹ, ಅಪ್ಪ, ಅಮ್ಮ ಬಯ್ಯುವುದು. ಹೀಗೆ ಹೇಳುತ್ತಾ ಹೋದರೆ ಕೊನೆ ಇರುವುದಿಲ್ಲ. ಈ ಎಲ್ಲಾ ಕಷ್ಟಗಳಲ್ಲೂ ನಮ್ಮ ಮನಸ್ಸು ಕುಸಿಯುವುದು ಸಹಜ. ಎಷ್ಟರ ಮಟ್ಟಕ್ಕೆ ಕುಸಿಯುತ್ತದೆ ಎಂಬುದು ಅವರವರ ಮಾನಸಿಕ ಸ್ಥೈರ್ಯದ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಮಗೆಲ್ಲ ಧೈರ್ಯ ತುಂಬಿ, ಸಲಹೆ ಕೊಟ್ಟು, ಒಳ್ಳೆಯದನ್ನು ಹಾರೈಸಲು ನಮ್ಮ ಬದುಕಿನಲ್ಲಿದ್ದೂ ಇರದ ಹಾಗೆ ಇರುವವರೇ - ಅ ಬ್ರದರ್ ಫ಼್ರಮ್ ಅನದರ್ ಮದರ್ ಅರ್ಥಾತ್ Neutral Friend!

ಅದೊಂದು ದಿನ ಅವನಿಗೆ ಒಂದು ಕರೆ ಬಂತು, ಪರಿಚಯರದ್ದೇ ಕರೆ. ಪರಿಚಯ ಅಂದರೆ ಮನೆಗೆ ಬಂದು ಹೋಗೋ ಅಷ್ಟು ಪರಿಚಯವಿಲ್ಲ. ಅದರೂ ಒಂದಷ್ಟು ಸಲಿಗೆ. ಕರೆ ಮಾಡಿದ್ದೇ ತಡ ಅಳುವಿನ ಸದ್ದು ಕೇಳಲು ಶುರುವಾಯಿತು. ಮಾತಿಲ್ಲ, ಬರಿ ಬಿಕ್ಕಳಿಕೆ, ಅಳು. ಒಂದೆರಡು ನಿಮಿಷದ ನಂತರ ಮಾತು ಶುರುವಾಯಿತು. ಮದುವೆಯಾಗಿ 4 ವರ್ಷವಾದರೂ ಮಕ್ಕಳಿಲ್ಲ, ಗಂಡ ಕುಡುಕ, ಗಂಡನ ಮನೆಯಲ್ಲಿ ಕಿರುಕುಳ. ಅಪ್ಪ ಆಮ್ಮನ ಮನೆಯಲ್ಲಿ ಅಣ್ಣ ಅತ್ತಿಗೆಯ ಮುದ್ದಾದ ಸಂಸಾರ. ಹಾಗಾಗಿ ಅಲ್ಲಿಗೆ ಹೋದರೆ ಅವರ ಖುಷಿ ಹಾಳಾಗುತ್ತದೆ ಎಂಬ ಹಿಂಜರಿಕೆ. ಗಂಡನ ಮನೆಯಲ್ಲಿರಲು ಆಗದೆ, ತವರಿಗೆ ಹೋಗುವ ಮನಸ್ಸಿಲ್ಲದೆ ಅವಳು ತನ್ನ ಸ್ನೇಹಿತನಿಗೆ ಕರೆಮಾಡಿದ್ದಳು. ಸಮಯ ಸಿಕ್ಕಾಗಲೆಲ್ಲ ಸ್ನೇಹಿತನಿಗೆ ಕರೆಮಾಡುತ್ತಿದ್ದಳು. ಅವನು ಆದಷ್ಟು ಧೈರ್ಯ ಹೇಳಿ, ಮುಂದಿನ ದಾರಿ ತೋರುತ್ತಿದ್ದ. ಅಪ್ಪನ ಹತ್ತಿರ ಮಾತಾಡು, ವಿಚ್ಚೇದನೆ ಪಡೆದು ನೆಮ್ಮದಿಯಾಗಿರು ಎಂದು ಒಪ್ಪಿಸಿದ. ಹಾಗೆ ಆಯಿತು, ತನ್ನ ಅಪ್ಪನೊಂದಿಗೆ ಮಾತಾಡಿ ತವರಿಗೆ ಬಂದು 1 ವರ್ಷದ ನಂತರ ವಿಚ್ಚೇದನೆ ಪಡೆದಳು. ಬದುಕು ಮುಂದುವರೆಯಬೇಕಿತ್ತು. ಮನೆಯಲ್ಲಿ ಹೆಣ್ಣುಮಗಳನ್ನು ಒಂಟಿಯಾಗಿ ಇಟ್ಟುಕೊಳ್ಳಲು ಯಾವ ತಂದೆ ತಾಯಿ ತಾನೇ ಒಪ್ಪಿಯಾರು? ಮತ್ತೊಂದು ಮದುವೆ ಮಾಡಲು ತಯಾರಾದರು. ಅವಳಿಗೆ ಮತ್ತೊಮ್ಮೆ ಹಿಂಜರಿಕೆ. ವಿಚ್ಚೇದಿತ ಹೆಣ್ಣನ್ನು ಮದುವೆಯಾಗಲು ಯಾರಾದರು ಮುಂದೆ ಬರುತ್ತಾರ? ಮತ್ತೊಂದು ಮದುವೆ ಬೇಕಾ? ಮತ್ತೊಮ್ಮೆ ಕಷ್ಟ ಎದುರಾದರೆ ಹೇಗೆ? ಮನೆಯಲ್ಲಿ ಅಣ್ಣ ಅತ್ತಿಗೆಯ ಸಂಸಾರ ನೋಡಿ ಒಳಗೊಳಗೆ ಅಸೂಯೆ. ಮನಸ್ಸಿಗೆ ಸಮಾಧಾನ ಬೇಕಿತ್ತು. ಆಗ ಮತ್ತೊಮ್ಮೆ ನೆನಪಾಗಿದ್ದು ಅದೇ ಸ್ನೇಹಿತ. ತನ್ನ ಮನಸ್ಸಿನ ತೊಳಲಾಟವನ್ನು ಹೇಳಿಕೊಂಡಳು, ಯಾವುದೇ ಮುಚ್ಚುಮರೆ ಅಲ್ಲಿರಲಿಲ್ಲ. ಅವನು ಸಹ ಆಕೆಯನ್ನು ಬಯ್ಯಲಿಲ್ಲ, ಆಡಿಕೊಳ್ಳಲಿಲ್ಲ. ಸಮಾಧಾನ ಮಾಡಿದ, ಭಾವನೆಗಳು ಸಹಜ, ನಿನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಸಿಗುತ್ತಾನೆ ಎಂದು ಹಾರೈಸಿದ. ಕಡೆಗೊಂದು ದಿನ ಆಕೆಯ ಮದುವೆ ಗೊತ್ತಾಯಿತು. ಆಕೆ ಖುಷಿಯಿಂದ ಹಸೆಮಣೆ ಏರಿದಳು. ಸ್ನೇಹಿತನು ಸಹ ಆಕೆಯ ಮದುವೆಗೆ ಹೋಗಿ ಸಂತಸದಿಂದ ಹಾರೈಸಿ ಬಂದ. ಅಷ್ಟೇ, ಇನ್ನೆಂದಿಗೂ ಆಕೆ ಅವನಿಗೆ ಕರೆ ಮಾಡಲಿಲ್ಲ. 

ಅವನು ಕೆಲಸ ಮಾಡುವ ಕಛೇರಿಯಲ್ಲೊಬ್ಬ ಸ್ನೇಹಿತ. ಮನೆಯಲ್ಲಾಗಲಿ, ಕಛೇರಿಯಲ್ಲಾಗಲಿ, ಇನ್ನೆಲ್ಲೇ ಏನೇ ಆಗಲಿ ಸ್ನೇಹಿತನೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ. ಕೆಲಸ ಹೆಚ್ಚಾಗಿ ಬಿಡುವಿನ ಸಮಯ ಸಿಕ್ಕದಿದ್ದಾಗ ರಾತ್ರಿ 1-2 ತನಕ ಇವರ ಮಾತು-ಕಥೆ ನಡೆಯುತ್ತಿತ್ತು. ಫ಼ೋನಿನ ಮಾತು-ಕಥೆಯಲ್ಲಿ ತಮ್ಮ ಕೆಲವು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದರು. ಕೆಲಸದ ಯಾವುದೋ ಒಂದು ಸಮಸ್ಯೆಯಲ್ಲಿ ಕೆಲವು ತಿಂಗಳಿಂದ ಸಿಕ್ಕಿಹಾಕಿಕೊಂಡಿದ್ದ. ಆ ರಾತ್ರಿ ಲೋಕಾರುಡಿಯಾಗಿ ಮಾತಾಡುತ್ತಿದ್ದ ಅವರು ಸಮಸ್ಯೆ ಬಗ್ಗೆ ಚರ್ಚಿಸಲು ಶುರುಮಾಡಿ, ರಾತ್ರಿ 2ರ ಹೊತ್ತಿಗೆ ಪರಿಹಾರ ಕೊಂಡರು. ಮುಂದೆ ಅವನು ಒಂದು ಹುಡುಗಿಯನ್ನು ಪ್ರೀತಿರ್ಸುತ್ತಾನೆ. ಪ್ರೇಮ ನಿವೇದನೆ ಮಾಡಿಕೊಳ್ಳಲು ಹಿಂಜರಿಕೆ, ಮನೆಯಲ್ಲಿ ಹೇಳಲು ಆಗುತ್ತಿಲ್ಲ, ಮನಸ್ಸಿನ ಭಾವನೆಯನ್ನು ತಡೆಹಿಡಿಯಲು ಆಗುತ್ತಿಲ್ಲ. ಆಗ ಅವನಿಗೆ ಕಂಡದ್ದು ತನ್ನ ಸ್ನೇಹಿತ. ತನಗಾಗುತ್ತಿದ್ದ ತಳಮಳ, ಪ್ರೇಮ ನಿವೇದನೆಯ ಉತ್ಸುಕತೆ, ಅಪ್ಪ, ಅಮ್ಮನನ್ನು ಎದುರಿಸಬೇಕಾದ ರೀತಿ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದ. ತನಗೆ ಬೇಕಾದ ಸಲಹೆ, ಸಮಾದಾನದ ಮಾತು ಸ್ನೇಹಿತನಿಂದ ದೊರೆಯುತ್ತಿತ್ತು. ಪ್ರೇಮ ನಿವೇದನೆ ಆಯಿತು ಆದರೆ, ಹುಡುಗಿಯ ಬಾಳದಾರಿಯಲ್ಲಿ ಅವನಿರಲಿಲ್ಲ. ದುಃಖ ಮನಸ್ಸನ್ನು ಆವರಿಸಿತು. ಸಾಂತ್ವಾನದ ದನಿಯ ಅವಶ್ಯಕತೆಯಿತ್ತು, ಮತ್ತೊಮ್ಮೆ ತನ್ನ ಸ್ನೇಹಿತ ನೆರವಿಗೆ ಬಂದ, ಮಾನಸಿಕವಾಗಿ ಜೊತೆಯಲ್ಲಿ ನಿಂತ. ನಂತರದ ದಿನಗಳಲ್ಲಿ ಮದುವೆ ಗೊತ್ತಾಯಿತು. ಪ್ರೇಮಿಯ ನೆನಪು, ಹೆಂಡತಿಯಾಗುವವಳ ಜೊತೆಗಿನ ಸಾಂಗತ್ಯ ಗೊಂದಲಕ್ಕೀಡುಮಾಡಿತು. ಮನಸ್ಸಿನಲ್ಲಿನ ಗೊಂದಲ ಸ್ನೇಹಿತನೊಂದಿಗೆ ಹೇಳಿಕೊಂಡ. ಸರಿಯಾದ ಸಮಯಕ್ಕೆ ಸಲಹೆ ಮತ್ತು ಗೊಂದಲ ನಿವಾರಣೆ ಮಾಡಿದ. ಮುಂದೆ ಮದುವೆಯಾಯಿತು, ಸ್ನೇಹಿತ ಬಂದು ಮನಸಾರೆ ಹಾರೈಸಿ ಹೋದ. ಮತ್ತೊಮ್ಮೆ ಜೊತೆಯಾಗಲು ದಿನಗಳನ್ನು ಕಾಯುತ್ತಾ ಮುಂದುವರೆದರು. 

ನಮ್ Buddy ಮಕ್ಳು 

Deepak - ಕಿವಿಲಿ ರಕ್ತ ಬರ್ಸೋನು

Prajwala ಅಲಿಯಾಸ್ PJ - ಗೂಬೆ

Pavan Kumar - ನನಗಿಂತಲೂ ಜಾಸ್ತಿ ಮನೆಹಾಳ

ಮನಸ್ಸು ಯಾವಾಗಲೂ ಮುಕ್ತವಾಗಿರುವುದನ್ನು ಬಯಸುತ್ತದೆ. ಯಾವುದೇ ಗೊಂದಲಕ್ಕಾಗಲಿ, ಬದ್ಧತೆಗಾಗಲಿ ಒಳಗಾಗಲು ಇಚ್ಚಿಸುವುದಿಲ್ಲ, ಅದು ಕುಸಿದಾಗ ಮುಕ್ತವಾದ ಬೆಂಬಲವನ್ನು ಅಪೇಕ್ಷಿಸುತ್ತದೆ. ಅಂತಹ ಬೆಂಬಲ ದೊರೆಯುವುದು ಸುಲಭ ಸಾಧ್ಯವಲ್ಲ. ನಮ್ಮ ಬದುಕಿನಲ್ಲಿ ಇದ್ದರೂ ಇಲ್ಲದವರಾಗಿರಬೇಕು, ನಮ್ಮ ಬದುಕಿಗೆ ಬೆಂಬಲವಾಗಿ ನಿಲ್ಲಬೇಕು ಆದರೆ, ನಮ್ಮ ಮೇಲೆ ಪ್ರಭಾವ ಬೀರದಂತೆ ಇರಬೇಕು. ಆ ಬಾಂಧವ್ಯದಲ್ಲಿ ಒಬ್ಬರಿಗೊಬ್ಬರು ಏನನ್ನು ಅಪೇಕ್ಷೆಪಡದಂತಿರಬೇಕು, ಸ್ವಾರ್ಥರಹಿತವಾಗಿರಬೇಕು. ರಕ್ತ ಸಂಬಂಧದ ಬಾಂಧವ್ಯದಲ್ಲಿ ಬಂಧನ, ಬದ್ಧತೆ ಇದೆ. ಇಲ್ಲಿ ಮನಸ್ಸು ಮುಕ್ತವಾಗಿರಲು ಕಷ್ಟಸಾಧ್ಯ. ಪ್ರತಿಯೊಬ್ಬರಿಗೂ ಮುಕ್ತವಾಗಿ ಬೆಂಬಲಿಸುವ ನ್ಯೂಟ್ರಲ್ ಸ್ನೇಹಿತ ಇರಬೇಕು. ಮನಸ್ಸು ಮುಕ್ತವಾಗಿ, ಖುಷಿಯಾಗಿರಬೇಕು.

January 1, 2021

ಭಾರತಕ್ಕೆ ಜಲಕಂಟಕವಾಗಬಹುದೇ ಚೀನಾ...?

ಚೀನಾ ದಕ್ಷಿಣ ಏಷ್ಯಾ ರಾಷ್ಟ್ರಗಳ ವಿರುದ್ಧ ನೀರನ್ನು ಯುದ್ಧದ ಅಸ್ತ್ರವಾಗಿ ಬಳಸಬಹುದು ಎಂಬುದು ಭಾರತದ ಪ್ರಮುಖ ಕಾಳಜಿಯಾಗಿದೆ. 2017 ರಲ್ಲಿ ಭಾರತಕ್ಕೆ ಜಲ ವಿಜ್ಞಾನದ ಮಾಹಿತಿಯನ್ನು ನೀಡಲು ಚೀನಾ ನಿರಾಕರಿಸಿದ್ದು ಮುಂದೆ ಸಂಭವಿಸಿದ ಸಾವಿಗೆ ಕಾರಣವಾಯ್ತು. ಭಾರತದ ಮೇಲ್ಭಾಗದಲ್ಲಿರುವ ಚೀನಾ ಪ್ರತಿ ವರ್ಷ ಪ್ರವಾಹ ಸಂಭವಿಸಬಹುದಾದ ಸಮಯವಾದ ಮೇ ಯಿಂದ ನವೆಂಬರ್ ವರೆಗೆ ಭಾರತಕ್ಕೆ ಬ್ರಹ್ಮಪುತ್ರ ನದಿಯ ಮಾಹಿತಿಯನ್ನು ಕೊಡಬೇಕು. ಆದರೆ, ಚೀನಾ ಆ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ಕಳೆದ ವರ್ಷ ಅಸ್ಸಾಮಿನಲ್ಲಿ ಪ್ರವಾಹದಿಂದ ಉಂಟಾದ ಅನಾಹುತಕ್ಕೆ ಚೀನಾ ಮಾಹಿತಿ ನೀಡದಿರುವುದು ಒಂದು ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. 

ಇಷ್ಟಕ್ಕು ಚೀನಾ ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ? ಕಾರಣವಿಷ್ಟೆ ಮತ್ತೊಂದು ದೇಶದೊಂದಿಗೆ ನೀರು ಹಂಚಿಕೊಳ್ಳಲು ಚೀನಾ ಇಚ್ಚಿಸುವುದಿಲ್ಲ! ಗಂಗಾ, ಬ್ರಹ್ಮಪುತ್ರ, ಇಂಡಸ್, ಮಯನ್ಮಾರಿನ ಇರ್ರಾವಡ್ಡಿ ನದಿಗಳು ದಕ್ಷಿಣ ಏಷ್ಯಾದ ಪ್ರಮುಖ ನದಿಗಳು. ಇವೆಲ್ಲವೂ ಟಿಬೇಟ್ ಪ್ರಾಂತ್ಯದಲ್ಲಿ ಉಗಮವಾಗುತ್ತದೆ. ಟಿಬೇಟ್ಟನ್ನು ಆಕ್ರಮಿಸಿಕೊಂಡು ದಕ್ಷಿಣ ಏಷ್ಯಾದ ನೀರಿನ ನಕ್ಷೆಯನ್ನೇ ಬದಲಾಯಿಸಿದೆ. 1960 ರ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ ವಿಶ್ವದ ಅತ್ಯಂತ ಉದಾರವಾದ ನೀರು ಹಂಚಿಕೆ ವ್ಯವಸ್ಥೆ ಎಂದು ಹೇಳಲಾಗಿದೆ. ಇದರಿಂದ ಭಾರತಕ್ಕೆ ಹೆಚ್ಚೇನು ಉಪಯೋಗವಾಗಿಲ್ಲ. ಒಪ್ಪಂದದ ಪ್ರಕಾರ ಸಿಂಧೂ ನದಿಯ ಆರು ಉಪನದಿಗಳಿಂದ ಬರುವ 80% ರಷ್ಟು ನೀರನ್ನು ಪಾಕಿಸ್ತಾನಕ್ಕೆ ಮೀಸಲಿಡಲಾಗಿದೆ. ರಾವಿ, ಬಿಯಾಸ್ ಮತ್ತು ಸಟ್ಲೆಜ್ ಎಂಬ ಸಣ್ಣ ಉಪನದಿಗಳ ನೀರು ಮಾತ್ರ ಭಾರತದ ಪಾಲು. ಈ ಒಪ್ಪಂದಕ್ಕೆ ಒಪ್ಪುವ ಮೂಲಕ ಭಾರತವು ಪಾಕಿಸ್ತಾನಕ್ಕೆ ಜಮ್ಮು ಕಾಶ್ಮೀರದಲ್ಲಿ ನಿರ್ಣಾಯಕ ಭೌಗೋಳಿಕ ರಾಜಕೀಯ ಲಾಭವನ್ನು ನೀಡಿತು. ಒಪ್ಪಂದ ಮಾಡಿಕೊಂಡ 5 ವರ್ಷದಲ್ಲೇ ಅಂದರೇ 1965 ರಲ್ಲಿ ಪಾಕೀಸ್ತಾನ ನಮ್ಮ ಮೇಲೆ ಯುದ್ಧವನ್ನು ಘೋಷಿಸಿದರು. ಈ ಒಪ್ಪಂದದ ಪರಿಣಾಮಗಳಿಂದಾಗಿ ಪಂಜಾಬ್, ಹರಿಯಾಣ ಮತ್ತು ದೆಹಲಿ ನಡುವಿನ ನೀರು ಹಂಚಿಕೆ ಮತ್ತು ಅದರ ಕಹಿ ವಿವಾದಗಳು ನೀರಿನ ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳುತ್ತವೆ ಹಾಗೂ ನೀರಿನ ಸಂರಕ್ಷಣೆ ಕುರಿತು ಹೊಸ ಮಾರ್ಗಗಳನ್ನು ತರಬೇಕಾಗಿದೆ. 

ವಾಸ್ತವವಾಗಿ ಚೀನಾ ಅಣೆಕಟ್ಟು ನಿರ್ಮಾಣದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದು, ವಿಶ್ವದ ಇತರ ಭಾಗಗಳಿಗಿಂತ ದೊಡ್ಡ ಅಣೆಕಟ್ಟನ್ನು ಹೊಂದಿದೆ. ಇದು ದಕ್ಷಿಣ ಏಷ್ಯಾ ಪ್ರಾಂತ್ಯದ ಅನೇಕ ದೇಶಗಳಿಗೆ ಚಿಂತೆಗೀಡುಮಾಡಿದೆ. ಚೀನಾ ಮತ್ತು ಅದರ ನೆರೆ ರಾಷ್ಟ್ರದ ಪರಿಸರ ಒಂದಕ್ಕೊಂದು ಅವಲಂಬಿತವಾಗಿದೆ. ಜಗತ್ತಿನ ಅತಿದೊಡ್ಡ ಮತ್ತು ಎತ್ತರದ ಪ್ರಸ್ಥಭೂಮಿ ಟಿಬೆಟ್ಟಿನಲ್ಲಾಗುವ ಪರಿಸರದ ಬದಲಾವಣೆ ಇಡೀ ಏಷ್ಯಾದಾದ್ಯಂತ ಹವಾಮಾನ ಮತ್ತು ಮಳೆಯ ಸ್ವರೂಪದ ಮೇಲೆ ಪ್ರಭಾವಬೀರುತ್ತದೆ. ಈ ಪ್ರದೇಶದಾಲ್ಲಾಗುವ ನೀರಿನ ಮಾಲಿನ್ಯ ಏಷ್ಯಾದ ಹವಾಮಾನ ಮತ್ತು ಜಲ ಸ್ಥಿರತೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ಧೀರ್ಘಕಾಲದ ಪ್ರವಾಹ ಮತ್ತು ಬರಗಾಲದ ಚಕ್ರವನ್ನು ಬೆಳೆಸುತ್ತದೆ. ಮಾಲಿನ್ಯದ ಕಾರಣ ಜಲಾನಯನ ಪ್ರದೇಶಗಳು, ಜಲಸಂಪನ್ಮೂಲಗಳು, ಕರಾವಳಿ ಪರಿಸರ ವ್ಯವಸ್ಥೆಯೂ ಅವನತಿಯಾಗುತ್ತದೆ. ಇದಕ್ಕೆ ಇಂಡೋನೇಷಿಯಾದ ಜಕಾರ್ತ ಉತ್ತಮ ಉದಾಹರಣೆಯಾಗಿದೆ. ಅಂತರ್ಜಲ ಕ್ಷೀಣತೆಯಿಂದಾಗಿ ಇತರ ನಗರಗಳಿಗಿಂತ ವೇಗವಾಗಿ ಜಕಾರ್ತ ಮುಳುಗುತ್ತಿದೆ. ಆ ದೇಶದಾತ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಬಾವಿಗಳು ಅಂತರ್ಜಲವನ್ನು ಹೆಕ್ಕಿ ತೆಗೆಯುತ್ತಿದೆ. ಇದರಿಂದಾಗಿ ಜಾವಾ ಸಮುದ್ರದ ಮಟ್ಟ ಏರಿಕೆಯಾಗಿ 40% ರಷ್ಟು ಸುಮಾತ್ರಾ ನಗರ ಸಮುದ್ರ ಮಟ್ಟಕ್ಕಿಂತ ಕೆಳಗಿದೆ ಎಂದು ಹೇಳಲಾಗುತ್ತದೆ. 

ಭಾರತದೊಂದಿಗಿನ ವಿವಾದಿತ ಗಡಿಯಲ್ಲಿರುವ ಬ್ರಹ್ಮಪುತ್ರನದಿಗೆ ಚೀನಾ ಬೃಹತ್ ಅಣೆಕಟ್ಟನ್ನು ಕಟ್ಟುವ ಯೋಜನೆ ಹಾಕಿಕೊಂಡಿದೆ. ಚೀನಾದ ಕಮ್ಯುನಿಸ್ಟ್ ಪತ್ರಿಕೆ ಹುವಾನ್ಕಿಯು ಶಿಬಾವೊ ಇತ್ತೀಚಿನ ಲೇಖನವೊಂದರಲ್ಲಿ - ಚೀನಾ ಗಡಿಯಾಚೆಗಿನ ನೀರಿನ ಮೇಲೆ ನಿಯಂತ್ರಣವನ್ನು 'ಶಸ್ತ್ರಸಜ್ಜಿತಗೊಳಿಸಬಹುದು' ಮತ್ತು ಭಾರತೀಯ ಆರ್ಥಿಕತೆಯನ್ನು ಕುಸಿಯುವಂತೆ ಮಾಡಬಹುದು ಎಂಬಂತಹ ಲೇಖನವೊಂದನ್ನು ಪ್ರಕಟಿಸಿತು. ಟಿಬೇಟ್ ಪ್ರಾಂತ್ಯದ ಮೇಲೆ ಚೀನಾ ಸಾಧಿಸಿರುವ ಪ್ರಭುತ್ವ ಭಾರತಕ್ಕೆ ಎಲ್ಲಾ ರೀತಿಯಲ್ಲೂ ಕಂಟಕವೇ ಸರಿ. ಜಲಸಂಪನ್ಮೂಲವನ್ನು ಉಪಯೋಗಿಸಿಕೊಂಡು ಭಾರತವಷ್ಟೇ ಅಲ್ಲದೇ ದಕ್ಷಿಣ ಏಷ್ಯಾ ದೇಶಗಳನ್ನು ಹತೋಟಿಯಲ್ಲಿಡುತ್ತಾ ಚೀನಾ ಎಂಬ ಅನುಮಾನ ಕಾಡುತ್ತಿದೆ.