ಚೀನಾ ದಕ್ಷಿಣ ಏಷ್ಯಾ ರಾಷ್ಟ್ರಗಳ ವಿರುದ್ಧ ನೀರನ್ನು ಯುದ್ಧದ ಅಸ್ತ್ರವಾಗಿ ಬಳಸಬಹುದು ಎಂಬುದು ಭಾರತದ ಪ್ರಮುಖ ಕಾಳಜಿಯಾಗಿದೆ. 2017 ರಲ್ಲಿ ಭಾರತಕ್ಕೆ ಜಲ ವಿಜ್ಞಾನದ ಮಾಹಿತಿಯನ್ನು ನೀಡಲು ಚೀನಾ ನಿರಾಕರಿಸಿದ್ದು ಮುಂದೆ ಸಂಭವಿಸಿದ ಸಾವಿಗೆ ಕಾರಣವಾಯ್ತು. ಭಾರತದ ಮೇಲ್ಭಾಗದಲ್ಲಿರುವ ಚೀನಾ ಪ್ರತಿ ವರ್ಷ ಪ್ರವಾಹ ಸಂಭವಿಸಬಹುದಾದ ಸಮಯವಾದ ಮೇ ಯಿಂದ ನವೆಂಬರ್ ವರೆಗೆ ಭಾರತಕ್ಕೆ ಬ್ರಹ್ಮಪುತ್ರ ನದಿಯ ಮಾಹಿತಿಯನ್ನು ಕೊಡಬೇಕು. ಆದರೆ, ಚೀನಾ ಆ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ಕಳೆದ ವರ್ಷ ಅಸ್ಸಾಮಿನಲ್ಲಿ ಪ್ರವಾಹದಿಂದ ಉಂಟಾದ ಅನಾಹುತಕ್ಕೆ ಚೀನಾ ಮಾಹಿತಿ ನೀಡದಿರುವುದು ಒಂದು ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಇಷ್ಟಕ್ಕು ಚೀನಾ ನದಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ? ಕಾರಣವಿಷ್ಟೆ ಮತ್ತೊಂದು ದೇಶದೊಂದಿಗೆ ನೀರು ಹಂಚಿಕೊಳ್ಳಲು ಚೀನಾ ಇಚ್ಚಿಸುವುದಿಲ್ಲ! ಗಂಗಾ, ಬ್ರಹ್ಮಪುತ್ರ, ಇಂಡಸ್, ಮಯನ್ಮಾರಿನ ಇರ್ರಾವಡ್ಡಿ ನದಿಗಳು ದಕ್ಷಿಣ ಏಷ್ಯಾದ ಪ್ರಮುಖ ನದಿಗಳು. ಇವೆಲ್ಲವೂ ಟಿಬೇಟ್ ಪ್ರಾಂತ್ಯದಲ್ಲಿ ಉಗಮವಾಗುತ್ತದೆ. ಟಿಬೇಟ್ಟನ್ನು ಆಕ್ರಮಿಸಿಕೊಂಡು ದಕ್ಷಿಣ ಏಷ್ಯಾದ ನೀರಿನ ನಕ್ಷೆಯನ್ನೇ ಬದಲಾಯಿಸಿದೆ. 1960 ರ ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದ ವಿಶ್ವದ ಅತ್ಯಂತ ಉದಾರವಾದ ನೀರು ಹಂಚಿಕೆ ವ್ಯವಸ್ಥೆ ಎಂದು ಹೇಳಲಾಗಿದೆ. ಇದರಿಂದ ಭಾರತಕ್ಕೆ ಹೆಚ್ಚೇನು ಉಪಯೋಗವಾಗಿಲ್ಲ. ಒಪ್ಪಂದದ ಪ್ರಕಾರ ಸಿಂಧೂ ನದಿಯ ಆರು ಉಪನದಿಗಳಿಂದ ಬರುವ 80% ರಷ್ಟು ನೀರನ್ನು ಪಾಕಿಸ್ತಾನಕ್ಕೆ ಮೀಸಲಿಡಲಾಗಿದೆ. ರಾವಿ, ಬಿಯಾಸ್ ಮತ್ತು ಸಟ್ಲೆಜ್ ಎಂಬ ಸಣ್ಣ ಉಪನದಿಗಳ ನೀರು ಮಾತ್ರ ಭಾರತದ ಪಾಲು. ಈ ಒಪ್ಪಂದಕ್ಕೆ ಒಪ್ಪುವ ಮೂಲಕ ಭಾರತವು ಪಾಕಿಸ್ತಾನಕ್ಕೆ ಜಮ್ಮು ಕಾಶ್ಮೀರದಲ್ಲಿ ನಿರ್ಣಾಯಕ ಭೌಗೋಳಿಕ ರಾಜಕೀಯ ಲಾಭವನ್ನು ನೀಡಿತು. ಒಪ್ಪಂದ ಮಾಡಿಕೊಂಡ 5 ವರ್ಷದಲ್ಲೇ ಅಂದರೇ 1965 ರಲ್ಲಿ ಪಾಕೀಸ್ತಾನ ನಮ್ಮ ಮೇಲೆ ಯುದ್ಧವನ್ನು ಘೋಷಿಸಿದರು. ಈ ಒಪ್ಪಂದದ ಪರಿಣಾಮಗಳಿಂದಾಗಿ ಪಂಜಾಬ್, ಹರಿಯಾಣ ಮತ್ತು ದೆಹಲಿ ನಡುವಿನ ನೀರು ಹಂಚಿಕೆ ಮತ್ತು ಅದರ ಕಹಿ ವಿವಾದಗಳು ನೀರಿನ ಸಂರಕ್ಷಣೆಯ ಅಗತ್ಯವನ್ನು ಒತ್ತಿ ಹೇಳುತ್ತವೆ ಹಾಗೂ ನೀರಿನ ಸಂರಕ್ಷಣೆ ಕುರಿತು ಹೊಸ ಮಾರ್ಗಗಳನ್ನು ತರಬೇಕಾಗಿದೆ.
ವಾಸ್ತವವಾಗಿ ಚೀನಾ ಅಣೆಕಟ್ಟು ನಿರ್ಮಾಣದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದು, ವಿಶ್ವದ ಇತರ ಭಾಗಗಳಿಗಿಂತ ದೊಡ್ಡ ಅಣೆಕಟ್ಟನ್ನು ಹೊಂದಿದೆ. ಇದು ದಕ್ಷಿಣ ಏಷ್ಯಾ ಪ್ರಾಂತ್ಯದ ಅನೇಕ ದೇಶಗಳಿಗೆ ಚಿಂತೆಗೀಡುಮಾಡಿದೆ. ಚೀನಾ ಮತ್ತು ಅದರ ನೆರೆ ರಾಷ್ಟ್ರದ ಪರಿಸರ ಒಂದಕ್ಕೊಂದು ಅವಲಂಬಿತವಾಗಿದೆ. ಜಗತ್ತಿನ ಅತಿದೊಡ್ಡ ಮತ್ತು ಎತ್ತರದ ಪ್ರಸ್ಥಭೂಮಿ ಟಿಬೆಟ್ಟಿನಲ್ಲಾಗುವ ಪರಿಸರದ ಬದಲಾವಣೆ ಇಡೀ ಏಷ್ಯಾದಾದ್ಯಂತ ಹವಾಮಾನ ಮತ್ತು ಮಳೆಯ ಸ್ವರೂಪದ ಮೇಲೆ ಪ್ರಭಾವಬೀರುತ್ತದೆ. ಈ ಪ್ರದೇಶದಾಲ್ಲಾಗುವ ನೀರಿನ ಮಾಲಿನ್ಯ ಏಷ್ಯಾದ ಹವಾಮಾನ ಮತ್ತು ಜಲ ಸ್ಥಿರತೆಯನ್ನು ದುರ್ಬಲಗೊಳಿಸುತ್ತದೆ ಹಾಗೂ ಧೀರ್ಘಕಾಲದ ಪ್ರವಾಹ ಮತ್ತು ಬರಗಾಲದ ಚಕ್ರವನ್ನು ಬೆಳೆಸುತ್ತದೆ. ಮಾಲಿನ್ಯದ ಕಾರಣ ಜಲಾನಯನ ಪ್ರದೇಶಗಳು, ಜಲಸಂಪನ್ಮೂಲಗಳು, ಕರಾವಳಿ ಪರಿಸರ ವ್ಯವಸ್ಥೆಯೂ ಅವನತಿಯಾಗುತ್ತದೆ. ಇದಕ್ಕೆ ಇಂಡೋನೇಷಿಯಾದ ಜಕಾರ್ತ ಉತ್ತಮ ಉದಾಹರಣೆಯಾಗಿದೆ. ಅಂತರ್ಜಲ ಕ್ಷೀಣತೆಯಿಂದಾಗಿ ಇತರ ನಗರಗಳಿಗಿಂತ ವೇಗವಾಗಿ ಜಕಾರ್ತ ಮುಳುಗುತ್ತಿದೆ. ಆ ದೇಶದಾತ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಬಾವಿಗಳು ಅಂತರ್ಜಲವನ್ನು ಹೆಕ್ಕಿ ತೆಗೆಯುತ್ತಿದೆ. ಇದರಿಂದಾಗಿ ಜಾವಾ ಸಮುದ್ರದ ಮಟ್ಟ ಏರಿಕೆಯಾಗಿ 40% ರಷ್ಟು ಸುಮಾತ್ರಾ ನಗರ ಸಮುದ್ರ ಮಟ್ಟಕ್ಕಿಂತ ಕೆಳಗಿದೆ ಎಂದು ಹೇಳಲಾಗುತ್ತದೆ.
ಭಾರತದೊಂದಿಗಿನ ವಿವಾದಿತ ಗಡಿಯಲ್ಲಿರುವ ಬ್ರಹ್ಮಪುತ್ರನದಿಗೆ ಚೀನಾ ಬೃಹತ್ ಅಣೆಕಟ್ಟನ್ನು ಕಟ್ಟುವ ಯೋಜನೆ ಹಾಕಿಕೊಂಡಿದೆ. ಚೀನಾದ ಕಮ್ಯುನಿಸ್ಟ್ ಪತ್ರಿಕೆ ಹುವಾನ್ಕಿಯು ಶಿಬಾವೊ ಇತ್ತೀಚಿನ ಲೇಖನವೊಂದರಲ್ಲಿ - ಚೀನಾ ಗಡಿಯಾಚೆಗಿನ ನೀರಿನ ಮೇಲೆ ನಿಯಂತ್ರಣವನ್ನು 'ಶಸ್ತ್ರಸಜ್ಜಿತಗೊಳಿಸಬಹುದು' ಮತ್ತು ಭಾರತೀಯ ಆರ್ಥಿಕತೆಯನ್ನು ಕುಸಿಯುವಂತೆ ಮಾಡಬಹುದು ಎಂಬಂತಹ ಲೇಖನವೊಂದನ್ನು ಪ್ರಕಟಿಸಿತು. ಟಿಬೇಟ್ ಪ್ರಾಂತ್ಯದ ಮೇಲೆ ಚೀನಾ ಸಾಧಿಸಿರುವ ಪ್ರಭುತ್ವ ಭಾರತಕ್ಕೆ ಎಲ್ಲಾ ರೀತಿಯಲ್ಲೂ ಕಂಟಕವೇ ಸರಿ. ಜಲಸಂಪನ್ಮೂಲವನ್ನು ಉಪಯೋಗಿಸಿಕೊಂಡು ಭಾರತವಷ್ಟೇ ಅಲ್ಲದೇ ದಕ್ಷಿಣ ಏಷ್ಯಾ ದೇಶಗಳನ್ನು ಹತೋಟಿಯಲ್ಲಿಡುತ್ತಾ ಚೀನಾ ಎಂಬ ಅನುಮಾನ ಕಾಡುತ್ತಿದೆ.


No comments:
Post a Comment