ನಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು 15 ಆಗಸ್ಟ್, 1947. ಆದರೆ, ಸ್ವಾತಂತ್ರ್ಯ ಹೋಗಿದ್ದು ಯಾವಾಗ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕಲ್ಕತ್ತಾದಲ್ಲಿ ಮೀರ್ ಜಾಫ಼ರ್ ನ ಕಾರಣದಿಂದಾಗಿ ರಾಬರ್ಟ್ ಕ್ಲೈವ್ನ ಪುಟ್ಟಸೇನೆ ಎದುರಿಗೆ ಭಾರತದ ದೊಡ್ಡ ಸೇನೆ ಶರಣಾಗಿತ್ತು. ಬಹುಶಃ 1757ರ ಆ ಕಾಲಘಟ್ಟದಲ್ಲಿ ಭಾರತ ಸ್ವಾತಂತ್ರ್ಯ ಕಳೆದುಕೊಂಡಿತು ಎನ್ನಬಹುದು. ಅಲ್ಲಿಂದಾಚೆಗೆ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೆರೆದಾಡಿತು. ಭಾರತದ ಕರಾಳ ದಿನಗಳು ಪ್ರಾರಂಭವಾಯಿತು. ಬ್ರಿಟೀಷರು ಭಾರತವನ್ನು ಲೂಟಿ ಮಾಡುವುದಲ್ಲದೆ ಸಮಾನ್ಯ ಜನಜೀವನದಲ್ಲೂ ಹಸ್ತಕ್ಷೇಪ ಮಾಡಿದರು. ನಮ್ಮ ಧಾರ್ಮಿಕ ಆಚರಣೆಯನ್ನು ಅವಹೇಳನ ಮಾಡಿ, ಭಾರತವನ್ನೇ ಕ್ರಿಸ್ತೀಕರಣ ಮಾಡಲು ಮುಂದಾದರು. ಇದರಿಂದಾಗಿ 1857 ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ರೂಪದಲ್ಲಿ ಸಿಡಿದು ಬಿತ್ತು. ಸೈನಿಕರು ಮಾತ್ರವಲ್ಲದೆ ಜಮೀನ್ದಾರು, ರೈತರು, ಸಾಮನ್ಯ ಜನ ಜಾತಿ, ಮತ, ಪಂಥವನ್ನು ಮರೆತು ಬ್ರಿಟೀಷರ ವಿರುದ್ಧ ತಿರುಗಿಬಿದ್ದರು. ವ್ಯವಸ್ತಿತ ಹೋರಾಟದ ಕೊರತೆಯ ಕಾರಣ ಸಂಗ್ರಾಮ ನೆಲಕಚ್ಚಿತು. ಇದಾದ ನಂತರ ಬ್ರಿಟೀಷರು ಬಹಳ ಜಾಗರೂಕರಾದರು. ಭಾರತೀಯ ಸೈನ್ಯ ಯಾವುದೇ ಕಾರಣಕ್ಕೂ ತಮ್ಮ ವಿರುದ್ಧ ತಿರುಗಿ ಬೀಳಬಾರದು ಎನ್ನುವ ಮಟ್ಟಿಗೆ ತಮ್ಮ ನೀತಿಯನ್ನು ಬದಲಾಯಿಸಿದರು. ನಮ್ಮದೇ ಸೈನಿಕರು ನಮ್ಮದೇ ಜನರ ನರಮೇಧ ಮಾಡಿದ ಜಲಿಯನ್ ವಾಲಾ ಭಾಗ್ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆ. ಇಂತಹ ಸ್ಥಿತಿಯಲ್ಲಿ ಐ.ಎನ್.ಎ. ಮೂಲಕ ಭಾರತೀಯ ಸೈನ್ಯವನ್ನು ಒಳಹೊಕ್ಕು ಮತ್ತೊಮ್ಮೆ ಬಂಡಾಯವನ್ನೆಬ್ಬಿಸಿ ಅದರ ಮೂಲಕ ಬ್ರಿಟೀಷರನ್ನು ಭಾರತ ಬಿಟ್ಟು ಹೋಗುವಂತೆ ಮಾಡಿದ ಕೀರ್ತಿ ಅಕ್ಷರಶಃ ಸುಭಾಷರದ್ದೇ.
ಸುಭಾಷರದ್ದು ಚಿಕ್ಕವಯಸ್ಸಿನಿಂದಲೇ ಅಂತರ್ಮುಖಿ ವ್ಯಕ್ತಿತ್ವ. ಸ್ವಾಮೀ ವಿವೇಕಾನಂದರ ಪ್ರೇರೇಪಣೆಯಿಂದ ತನ್ನ ಸ್ನೇಹಿತರೊಂದಿಗೆ ಸೇವಾ ಚಟುವಟಿಕೆಯಲ್ಲಿ ನಿರತರಾದವರು. ತಾನು ಆಧ್ಯಾತ್ಮಿಕ ಜೀವನದಲ್ಲಿ ಮುಂದುವರೆಯಲು ಗುರು ಅಗತ್ಯವೆಂದು ಮನೆಬಿಟ್ಟು ಬನಾರಸ್, ಮಥುರಾ, ಹೃಷೀಕೇಶವೆಲ್ಲ ಅಲೆದು ಯಾರೂ ಸಿಗದ ಕಾರಣ ಮನೆಗೆ ಹಿಂತಿರುಗಿ ಮತ್ತೊಮ್ಮೆ ಸೇವಾ ಚಟುವಟಿಕೆಯಲ್ಲಿ ನಿರತರಾಗುತ್ತಾರೆ. ಕಾಲೇಜು ಸೇರಿದ ಸುಭಾಷರು ಅಲ್ಲಿದ್ದ ಸೈನಿಕ ವಿಭಾಗಕ್ಕೆ ಸೇರುತ್ತಾರೆ. ಭಾರತದ ಬಗ್ಗೆ ಸ್ಪಷ್ಟಕಲ್ಪನೆ ಹೊಂದಿದ್ದ ಅವರಿಗೆ ತನ್ನ ಜೀವನ ಇರುವುದೇ ಬ್ರಿಟೀಷರನ್ನು ಹೊಡೆದೋಡಿಸಲು ಎಂದು ತೀರ್ಮಾನಿಸುತ್ತಾರೆ. ಸ್ವಾತಂತ್ರ್ಯ ಹೋರಾಟ ತೀವ್ರವಾಗುತ್ತಿದ್ದ ಕಾಲವದು. ಸುಭಾಷರು ಹೋರಾಟಕ್ಕೆ ಇಳಿಯಬಹುದು ಎಂಬ ಸ್ಪಷ್ಟಕಲ್ಪನೆ ಇದ್ದ ಅವರ ತಂದೆ ಐ.ಸಿ.ಎಸ್. ಪರೀಕ್ಷೆ ಬರೆಯಲು ವಿದೇಶಕ್ಕೆ ಕಳಿಸುತ್ತಾರೆ. ತಂದೆಯ ಮಾತಿಗೆ ಬೆಲೆಕೊಟ್ಟು ಸುಮಾರು 9-10 ತಿಂಗಳ ಸತತ ಅಧ್ಯಯನದ ನಂತರ ಸುಭಾಷರು ಐ.ಸಿ.ಎಸ್. ಪರೀಕ್ಷೆಯಲ್ಲಿ 4ನೇ ಸ್ಥಾನ ಪಡೆದು ತೇರ್ಗಡೆ ಹೊಂದುತ್ತಾರೆ. ಬ್ರಿಟೀಷರ ವಿರುದ್ಧ ಹೋರಾಡಬೇಕೆಂದು ಐ.ಸಿ.ಎಸ್. ಪದವಿಯನ್ನು ದಿಕ್ಕರಿಸಿ, ಬ್ರಿಟೀಷರಿಗೆ ತನ್ನ ಸ್ಕಾಲರ್ಶಿಪ್ ಹಣವನ್ನು ಕೊಟ್ಟು ಮರಳಿ ಭಾರತಕ್ಕೆ ಹಿಂದಿರುಗುತ್ತಾರೆ. ಲಂಡನ್ನಿನಲ್ಲಿ ಇದ್ದಾಗಲೇ ಭಾರತದ ಹೋರಾಟ ಯಾವ ದಿಕ್ಕಿನಲ್ಲಿ ಸಾಗಬೇಕು, ಕಾಂಗ್ರೇಸಿನ ನೀತಿ ಯಾವ ಸ್ವರೂಪದಲ್ಲಿ ಬದಲಾಗಬೇಕು ಎಂದೆಲ್ಲ ಬಂಗಾಳದ ಕ್ರಾಂತಿಕಾರಿ ಚಿತ್ತರಂಜನ್ ದಾಸರ ಜೊತೆ ಪತ್ರವ್ಯವಹಾರ ನಡೆಸಿದ್ದರು ಬೋಸ್. ಭಾರತಕ್ಕೆ ಮರಳಿ ಬಂದ ಬೋಸರು ಗಾಂಧೀಜೀ ಎದುರಿಗೆ ನಿಂತು ತಮ್ಮ ಪ್ರಶ್ನೆಗಳನ್ನು ಮುಂದಿಡುತ್ತಾರೆ - 'ಅಸಹಕಾರ ಚಳುವಳಿ, ಸತ್ಯಾಗ್ರಹದ ಹೋರಾಟಕ್ಕೆ ಹೆದರಿ ಬ್ರಿಟೀಷರು ಸ್ವಾತಂತ್ಯ್ರ ಕೊಡುತ್ತಾರ?, 1 ವರ್ಷದಲ್ಲಿ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಹೇಳುತ್ತೀರಲ್ಲ ಅದು ಹೇಗೆ?'. ಈ ಎರಡು ಪ್ರಶ್ನೆಗಳಿಗೂ ಸಮರ್ಪಕ ಉತ್ತರ ಸಿಕ್ಕದೆ ಬೋಸರು ಚಿತ್ತರಂಜನ್ ದಾಸರ ಬಳಿ ತೆರಳುತ್ತಾರೆ. ಸ್ವರಾಜಿಸ್ಟ್ ಪಾರ್ಟಿಯ ಮುಂದಾಳತ್ವ ಮತ್ತು ನ್ಯಾಷನಲ್ ಕಾಲೇಜಿನ ಪ್ರಿನ್ಸಿಪಾಲ್ ಜವಾಬ್ದಾರಿ ಬೋಸರ ಹೆಗಲಿಗೆ ಬೀಳುತ್ತದೆ. ಕಾಲೇಜನ್ನು ಅಭಿವೃದ್ಧಿ ಪಡಿಸುವುದರೊಟ್ಟಿಗೆ ದೊಡ್ಡದೊಂದು ಸ್ವಯಂಸೇವಕರ ತಂಡವನ್ನೇ ಕಟ್ಟಿದರು. ಕಲ್ಕತ್ತಾದ ಮುನ್ಸಿಪಲ್ ಚುಣಾವಣೆಯಲ್ಲಿ ಸ್ವರಾಜಿಸ್ಟ್ ಪಾರ್ಟಿ ಗೆದ್ದು ಜನರಿಗೆ ತಮ್ಮದೇ ಆದ ಸರ್ಕಾರ ಬಂದಿದೆ ಎಂಬಂತಹ ಭಾವನೆ ಬರುವಂತೆ ಆಡಳಿತ ನೀಡುತ್ತಾರೆ. ಬೋಸರ ಆಡಳಿತದಲ್ಲಿ ಶಾಲೆ, ಕಾಲೇಜು, ಸಣ್ಣ ಪ್ರಮಾಣದ ಕೈಗಾರಿಕೆ ಉದ್ಯಮವನ್ನು ಅಭಿವೃದ್ದಿ ಪಡಿಸುತ್ತಾರೆ. ಬೋಸರ ಕಾರ್ಯವೈಖಿರಿ ಕಂಡು ಬ್ರಿಟೀಷರಿಗೆ ಸಹಿಸಲಾಗಲಿಲ್ಲ. 1918 ರ ಯಾವುದೋ ಕಾಯ್ದೆಯನ್ನು ಮುಂದಿಟ್ಟುಕೊಂಡು ಬೋಸರನ್ನು ಬಂಧಿಸಿ ಮಾಂಡಲೆ ಜೈಲಿಗೆ ಕಳಿಸುತ್ತಾರೆ. ಅವರ ಬಿಡುಗಡೆಗೆ ದೇಶದಲ್ಲಿ ಪ್ರತಿಭಟನೆ ವ್ಯಕ್ತವಾದಾಗ ಬ್ರಿಟೀಷರು ಸುಭಾಷರಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಡುತ್ತಾರೆ. ಇದಕ್ಕೊಪ್ಪಿದರೆ ದೇಶಬಿಟ್ಟು ಹೋಗಲು ತಾನೆ ಪರವಾನಿಗಿ ಪಡೆದಂತಾಗುತ್ತದೆ ಎಂದು ಬ್ರಿಟೀಷರ ಕೊಡುಗೆಯನ್ನು ನಿರಾಕರಿಸುತ್ತಾರೆ.
ಸುಭಾಷರು 1 ವರ್ಷದ ನಂತರ ಬಿಡುಗಡೆಯಾಗುತ್ತಾರೆ. ಅಷ್ಟರಲ್ಲಿ ಚಿತ್ತರಂಜನ್ ದಾಸರ ದೇಹತ್ಯಾಗವಾಗಿರುತ್ತದೆ. ಏನು ಮಾಡಲು ತೋಚದೆ ಗಾಂಧೀಜೀಯವರೊಂದಿಗೆ ಇದ್ದುಗೊಂಡು ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿ ತೀವ್ರವಾದಿಯಾಗಿದ್ದ ಸುಭಾಷರು ಮೃದುವಾದಿಯಾಗಿತ್ತಾರೆ. ಕಾಂಗ್ರೇಸ್ ಪಕ್ಷದ ಸದಸ್ಯರಾಗಿ ದೇಶದಾದ್ಯಂತ ಪ್ರವಾಸ ಮಾಡಿ ಪ್ರದೇಶ ಕಾಂಗ್ರೇಸ್ ಸಮಿತಿಯ ಸದಸ್ಯರನ್ನು ತಮ್ಮ ಹತ್ತಿರಕ್ಕೆ ಸೆಳೆದುಕೊಂಡರು. ಅನೇಕ ಕಾಲೇಜು ವಿದ್ಯಾರ್ಥಿಗಳನ್ನು ಮಾತಾಡಿಸಿ, ಅವರಿಗೆ ಕ್ರಾಂತಿಕಾರ್ಯ, ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿಕೊಟ್ಟು, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಣೆ ನೀಡುತ್ತಾರೆ. ಆಂಗ್ಲರ ವಿರುದ್ಧದ ಹೊರಾಟದಲ್ಲಿ ಸುಭಾಷರು 11 ಸಲ ಜೈಲಿಗೆ ಹೋಗಿ ಬಂದರು. ಸುಭಾಷರು ಜೈಲಿನಲ್ಲಿದ್ದಾರೆ ಎಂದರೆ ಹೊರಗೆ ಹೋರಾಟದ ಕಾವು ಏರುತ್ತಿತ್ತು. ಅದನ್ನು ತಡೆಯಲು ಸುಭಾಷರನ್ನು ಯೂರೋಪಿಗೆ ಕಳಿಸುತ್ತಾರೆ. ಆಸ್ಟ್ರಿಯಾದಲ್ಲಿ ಸುಭಾಷರಿಗೆ ಸರ್ದಾರ್ ಪಟೇಲರ ಅಣ್ಣ ವಿಠ್ಠಲ್ ಭಾಯ್ ಪಟೇಲರು ಸಿಗುತ್ತಾರೆ. ಅಲ್ಲಿಯೂ ಕೂಡ ಇಬ್ಬರು ಕಾಂಗ್ರೇಸಿನ ನೀತಿ, ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕಿನ ಬಗ್ಗೆ, ಕ್ರಾಂತಿಯ ಮಹತ್ವದ ಬಗ್ಗೆ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡುತ್ತಾರೆ. 1938ರಲ್ಲಿ ಕಾಂಗ್ರೇಸ್ ತನ್ನ ಅಧ್ಯಕ್ಷರನ್ನಾಗಿ ಸುಭಾಷರನ್ನು ಆರಿಸಿಕೊಳ್ಳುತ್ತದೆ. ಬಡತನ ನಿರ್ಮೂಲನೆ, ಯೋಜನ ಆಯೋಗದ ಪರಿಕಲ್ಪನೆ, ಜನಸಂಖ್ಯೆ ಕಡಿವಾಣ, ಜಮಿನ್ದಾರಿ ಪದ್ಧತಿಯ ನಿರ್ಮೂಲನೆ ಕುರಿತು ಮಾತಾಡಿ ಅದ್ಭುತವಾದ ಅಧ್ಯಕ್ಷೀಯ ಭಾಷಣವನ್ನು ಪ್ರಸ್ತುತಪಡಿಸುತ್ತಾರೆ. ಕಾಂಗ್ರೇಸಿನ ಕಾರ್ಯಕಾರಿ ಸಮಿತಿಗೆ ಹೊಸಬರನ್ನು ತರುವ ಯೋಚನೆ ಸುಭಾಷರದ್ದು. ಒಂದು ವರ್ಷದ ಅಧ್ಯಕ್ಷ ಅವಧಿ ಮುಗಿದ ಮೇಲೆ ಮತ್ತೊಂದು ಅವಧಿಗೆ ಅಧ್ಯಕ್ಷ ಪದವಿಯನ್ನು ಕೇಳುತ್ತಾರೆ. ಪ್ರಜಾಪ್ರಭುತ್ವದ ಮಾದರಿಯಲ್ಲಿ ಚುಣಾವಣೆ ನಡೆಯಲಿ ಎಂದು ತಮ್ಮ ವಾದವನ್ನು ಮುಂದಿಡುತ್ತಾರೆ. ಸುಭಾಷ್ ಮತ್ತು ಪಟ್ಟಾಬಿ ಸೀತಾರಮಯ್ಯನವರ ನಡುವೆ ಚುಣಾವಣೆ ನಡೆದು ಸುಭಾಷರು ಸುಮಾರು 200 ವೋಟುಗಳಿಂದ ಗೆದ್ದು ಮತ್ತೊಮ್ಮ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಸುಭಾಷರ ಈ ಗೆಲುವು ಮತ್ತು ಅವರ ಕೆಲಸದ ತೀವ್ರತೆಯನ್ನು ಕಂಡು ಇತರ ಕಾಂಗ್ರೇಸಿಗರಿಗೆ ಮತ್ತು ದುರಾದೃಷ್ಟವಷಾತ್ ಗಾಂಧೀಜಿಗೆ ಸರಿಬರದೆ ಅವರನ್ನು ಪ್ರದೇಶ ಕಾಂಗ್ರೇಸ್ ಸಮಿತಿಯಿಂದಲೂ ಸಹ ಹೊರಹಾಕಿದರು. ಈ ಘಟನೆಯ ನಂತರ ಸುಭಾಷರು ಫ಼ಾರ್ವರ್ಡ್ ಬ್ಲಾಕ್ ಎಂಬ ಪತ್ರಿಕೆಯ ಮೂಲಕ ಬೆಂಕಿಯುಗುಳಲು ಪ್ರಾರಂಭಿಸುತ್ತಾರೆ. ಕಾಂಗ್ರೇಸ್ ಏನಾದರು ತಪ್ಪು ಮಾಡಿದರೆ ಮುಲಾಜಿಲ್ಲದೆ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಕಾಂಗ್ರೇಸ್ ಇಂದ ಹೊರಗೆ ಬಂದ ಸುಭಾಷರಿಗೆ ಮುಂದೇನು ಎಂಬ ಪ್ರಶ್ನೆ ಕಾಡತೊಡಗಿತು. ದೇಶಕ್ಕಾಗಿ ಏನಾದರು ಮಾಡಲು ಅವರ ಮನಸ್ಸು ಹಾತೊರೆಯುತ್ತಿತ್ತು.
ಸುಭಾಷ್ ಬೋಸರೆಂದರೆ ನಮ್ಮ ಪಠ್ಯಪುಸ್ತಕದಲ್ಲಿ ಐ.ಎನ್.ಎ. ಕಟ್ಟಿ ಹೊರಾಟ ಮಾಡಿದರು ಎಂದು ಮಾತ್ರ ತೋರಿಸಲಾಗಿದೆ. ಆದರೆ, ಅವರ ವ್ಯಕ್ತಿತ್ವ ಬಹಳ ಅಗಾಧ. ಐ.ಸಿ.ಎಸ್. ಪರೀಕ್ಷೆ ತೇರ್ಗಡೆ ಹೊಂದಿದ್ದ ಬೋಸರು ಐಶಾರಾಮಿ ಜೀವನ ನಡೆಸಬಹುದಿತ್ತು. ಆದರೆ, ಆ ಜೀವನವನ್ನು ಬಿಟ್ಟು ಭಾರತದ ಸ್ವಾತಂತ್ರ್ಯಕ್ಕಾಗಿ ಮರಳಿ ಬರುತ್ತಾರೆ. ಚಿಕ್ಕಂದಿನಿಂದಲೇ ಸ್ವಾಮೀ ವಿವೇಕಾನಂದರಿಂದ ಪ್ರಭಾವಿತರಾದ ಬೋಸರು ಸೇವಾಮಾಗ್ರವನ್ನು ರೂಢಿಸಿಕೊಳ್ಳುತ್ತಾರೆ. ಸ್ವಾತಂತ್ರ್ಯಗಳಿಸುವುದಷ್ಟೇ ಅವರ ಧ್ಯೇಯವಾಗಿರದೆ ಸ್ವಾತಂತ್ರ್ಯ ನಂತರ ದೇಶವನ್ನು ಮುನ್ನಡೆಸುವ ಯೋಜನೆಯನ್ನು ಅವರು ಹೊಂದಿದ್ದರು. ಜಗತ್ತಿನ ಇತಿಹಾಸವನ್ನು ತಿಳಿದಿದ್ದ ಸುಭಾಷರು ಬ್ರಿಟೀಷರು ಭಾರತವನ್ನು ತುಂಡು ಮಾಡುವುದಾಗಿ 1924 ರಲ್ಲೇ ಊಹಿಸಿದ್ದರು. ಸುಭಾಷರು ವಿದೇಶದಲ್ಲಿ ಮಾಡಿದ ಕೆಲಸ ಮತ್ತಷ್ಟು ರೋಚಕವಾಗಿದ್ದು, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ತಂದ ಪ್ರಕ್ರಿಕೆಯನ್ನು ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳುತ್ತೇನೆ.



No comments:
Post a Comment