ಬದುಕಿನಲ್ಲಿ ಕಷ್ಟಗಳು ಸಹಜ. ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಎಲ್ಲರೂ ಒಂದಲ್ಲ ಒಂದು ವಿಧದಲ್ಲಿ ಕಷ್ಟಗಳನ್ನು ಅನುಭವಿಸಿಯೇ ಇರುತ್ತೇವೆ. ಮನೆ ಕೊಳ್ಳಲು ಹಣ ಹೊಂದಿಸಲು ಪಟ್ಟ ಪಾಡು, ಮುಖ್ಯವಾದ ಕೆಲಸಕ್ಕೆ ಹೋಗಬೇಕಾದರೆ ಆಗುವ ಆಕ್ಸಿಡೆಂಟ್, ಪರೀಕ್ಷೆಯಲ್ಲಿ ಫ಼ೇಲ್, ಕೆಲಸಕ್ಕಾಗಿ ಅಲೆದಾಟ, ಪ್ರೀತಿಸಿದ ಹುಡುಗ (ಹುಡುಗಿ) ಯಾವುದೋ ಕಾರಣಕ್ಕೆ ನಮ್ಮನ್ನು ಒಪ್ಪಿಕೊಳ್ಳದಿರುವುದು, ತೀರ ಹತ್ತಿರದವರಿಂದಲೇ ನಂಬಿಕೆ ದ್ರೋಹ, ಅಪ್ಪ, ಅಮ್ಮ ಬಯ್ಯುವುದು. ಹೀಗೆ ಹೇಳುತ್ತಾ ಹೋದರೆ ಕೊನೆ ಇರುವುದಿಲ್ಲ. ಈ ಎಲ್ಲಾ ಕಷ್ಟಗಳಲ್ಲೂ ನಮ್ಮ ಮನಸ್ಸು ಕುಸಿಯುವುದು ಸಹಜ. ಎಷ್ಟರ ಮಟ್ಟಕ್ಕೆ ಕುಸಿಯುತ್ತದೆ ಎಂಬುದು ಅವರವರ ಮಾನಸಿಕ ಸ್ಥೈರ್ಯದ ಮೇಲೆ ಅವಲಂಬಿತವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ನಮಗೆಲ್ಲ ಧೈರ್ಯ ತುಂಬಿ, ಸಲಹೆ ಕೊಟ್ಟು, ಒಳ್ಳೆಯದನ್ನು ಹಾರೈಸಲು ನಮ್ಮ ಬದುಕಿನಲ್ಲಿದ್ದೂ ಇರದ ಹಾಗೆ ಇರುವವರೇ - ಅ ಬ್ರದರ್ ಫ಼್ರಮ್ ಅನದರ್ ಮದರ್ ಅರ್ಥಾತ್ Neutral Friend!
ಅದೊಂದು ದಿನ ಅವನಿಗೆ ಒಂದು ಕರೆ ಬಂತು, ಪರಿಚಯರದ್ದೇ ಕರೆ. ಪರಿಚಯ ಅಂದರೆ ಮನೆಗೆ ಬಂದು ಹೋಗೋ ಅಷ್ಟು ಪರಿಚಯವಿಲ್ಲ. ಅದರೂ ಒಂದಷ್ಟು ಸಲಿಗೆ. ಕರೆ ಮಾಡಿದ್ದೇ ತಡ ಅಳುವಿನ ಸದ್ದು ಕೇಳಲು ಶುರುವಾಯಿತು. ಮಾತಿಲ್ಲ, ಬರಿ ಬಿಕ್ಕಳಿಕೆ, ಅಳು. ಒಂದೆರಡು ನಿಮಿಷದ ನಂತರ ಮಾತು ಶುರುವಾಯಿತು. ಮದುವೆಯಾಗಿ 4 ವರ್ಷವಾದರೂ ಮಕ್ಕಳಿಲ್ಲ, ಗಂಡ ಕುಡುಕ, ಗಂಡನ ಮನೆಯಲ್ಲಿ ಕಿರುಕುಳ. ಅಪ್ಪ ಆಮ್ಮನ ಮನೆಯಲ್ಲಿ ಅಣ್ಣ ಅತ್ತಿಗೆಯ ಮುದ್ದಾದ ಸಂಸಾರ. ಹಾಗಾಗಿ ಅಲ್ಲಿಗೆ ಹೋದರೆ ಅವರ ಖುಷಿ ಹಾಳಾಗುತ್ತದೆ ಎಂಬ ಹಿಂಜರಿಕೆ. ಗಂಡನ ಮನೆಯಲ್ಲಿರಲು ಆಗದೆ, ತವರಿಗೆ ಹೋಗುವ ಮನಸ್ಸಿಲ್ಲದೆ ಅವಳು ತನ್ನ ಸ್ನೇಹಿತನಿಗೆ ಕರೆಮಾಡಿದ್ದಳು. ಸಮಯ ಸಿಕ್ಕಾಗಲೆಲ್ಲ ಸ್ನೇಹಿತನಿಗೆ ಕರೆಮಾಡುತ್ತಿದ್ದಳು. ಅವನು ಆದಷ್ಟು ಧೈರ್ಯ ಹೇಳಿ, ಮುಂದಿನ ದಾರಿ ತೋರುತ್ತಿದ್ದ. ಅಪ್ಪನ ಹತ್ತಿರ ಮಾತಾಡು, ವಿಚ್ಚೇದನೆ ಪಡೆದು ನೆಮ್ಮದಿಯಾಗಿರು ಎಂದು ಒಪ್ಪಿಸಿದ. ಹಾಗೆ ಆಯಿತು, ತನ್ನ ಅಪ್ಪನೊಂದಿಗೆ ಮಾತಾಡಿ ತವರಿಗೆ ಬಂದು 1 ವರ್ಷದ ನಂತರ ವಿಚ್ಚೇದನೆ ಪಡೆದಳು. ಬದುಕು ಮುಂದುವರೆಯಬೇಕಿತ್ತು. ಮನೆಯಲ್ಲಿ ಹೆಣ್ಣುಮಗಳನ್ನು ಒಂಟಿಯಾಗಿ ಇಟ್ಟುಕೊಳ್ಳಲು ಯಾವ ತಂದೆ ತಾಯಿ ತಾನೇ ಒಪ್ಪಿಯಾರು? ಮತ್ತೊಂದು ಮದುವೆ ಮಾಡಲು ತಯಾರಾದರು. ಅವಳಿಗೆ ಮತ್ತೊಮ್ಮೆ ಹಿಂಜರಿಕೆ. ವಿಚ್ಚೇದಿತ ಹೆಣ್ಣನ್ನು ಮದುವೆಯಾಗಲು ಯಾರಾದರು ಮುಂದೆ ಬರುತ್ತಾರ? ಮತ್ತೊಂದು ಮದುವೆ ಬೇಕಾ? ಮತ್ತೊಮ್ಮೆ ಕಷ್ಟ ಎದುರಾದರೆ ಹೇಗೆ? ಮನೆಯಲ್ಲಿ ಅಣ್ಣ ಅತ್ತಿಗೆಯ ಸಂಸಾರ ನೋಡಿ ಒಳಗೊಳಗೆ ಅಸೂಯೆ. ಮನಸ್ಸಿಗೆ ಸಮಾಧಾನ ಬೇಕಿತ್ತು. ಆಗ ಮತ್ತೊಮ್ಮೆ ನೆನಪಾಗಿದ್ದು ಅದೇ ಸ್ನೇಹಿತ. ತನ್ನ ಮನಸ್ಸಿನ ತೊಳಲಾಟವನ್ನು ಹೇಳಿಕೊಂಡಳು, ಯಾವುದೇ ಮುಚ್ಚುಮರೆ ಅಲ್ಲಿರಲಿಲ್ಲ. ಅವನು ಸಹ ಆಕೆಯನ್ನು ಬಯ್ಯಲಿಲ್ಲ, ಆಡಿಕೊಳ್ಳಲಿಲ್ಲ. ಸಮಾಧಾನ ಮಾಡಿದ, ಭಾವನೆಗಳು ಸಹಜ, ನಿನ್ನನ್ನು ಅರ್ಥ ಮಾಡಿಕೊಳ್ಳುವ ಹುಡುಗ ಸಿಗುತ್ತಾನೆ ಎಂದು ಹಾರೈಸಿದ. ಕಡೆಗೊಂದು ದಿನ ಆಕೆಯ ಮದುವೆ ಗೊತ್ತಾಯಿತು. ಆಕೆ ಖುಷಿಯಿಂದ ಹಸೆಮಣೆ ಏರಿದಳು. ಸ್ನೇಹಿತನು ಸಹ ಆಕೆಯ ಮದುವೆಗೆ ಹೋಗಿ ಸಂತಸದಿಂದ ಹಾರೈಸಿ ಬಂದ. ಅಷ್ಟೇ, ಇನ್ನೆಂದಿಗೂ ಆಕೆ ಅವನಿಗೆ ಕರೆ ಮಾಡಲಿಲ್ಲ.
ಅವನು ಕೆಲಸ ಮಾಡುವ ಕಛೇರಿಯಲ್ಲೊಬ್ಬ ಸ್ನೇಹಿತ. ಮನೆಯಲ್ಲಾಗಲಿ, ಕಛೇರಿಯಲ್ಲಾಗಲಿ, ಇನ್ನೆಲ್ಲೇ ಏನೇ ಆಗಲಿ ಸ್ನೇಹಿತನೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ. ಕೆಲಸ ಹೆಚ್ಚಾಗಿ ಬಿಡುವಿನ ಸಮಯ ಸಿಕ್ಕದಿದ್ದಾಗ ರಾತ್ರಿ 1-2 ತನಕ ಇವರ ಮಾತು-ಕಥೆ ನಡೆಯುತ್ತಿತ್ತು. ಫ಼ೋನಿನ ಮಾತು-ಕಥೆಯಲ್ಲಿ ತಮ್ಮ ಕೆಲವು ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುತ್ತಿದ್ದರು. ಕೆಲಸದ ಯಾವುದೋ ಒಂದು ಸಮಸ್ಯೆಯಲ್ಲಿ ಕೆಲವು ತಿಂಗಳಿಂದ ಸಿಕ್ಕಿಹಾಕಿಕೊಂಡಿದ್ದ. ಆ ರಾತ್ರಿ ಲೋಕಾರುಡಿಯಾಗಿ ಮಾತಾಡುತ್ತಿದ್ದ ಅವರು ಸಮಸ್ಯೆ ಬಗ್ಗೆ ಚರ್ಚಿಸಲು ಶುರುಮಾಡಿ, ರಾತ್ರಿ 2ರ ಹೊತ್ತಿಗೆ ಪರಿಹಾರ ಕೊಂಡರು. ಮುಂದೆ ಅವನು ಒಂದು ಹುಡುಗಿಯನ್ನು ಪ್ರೀತಿರ್ಸುತ್ತಾನೆ. ಪ್ರೇಮ ನಿವೇದನೆ ಮಾಡಿಕೊಳ್ಳಲು ಹಿಂಜರಿಕೆ, ಮನೆಯಲ್ಲಿ ಹೇಳಲು ಆಗುತ್ತಿಲ್ಲ, ಮನಸ್ಸಿನ ಭಾವನೆಯನ್ನು ತಡೆಹಿಡಿಯಲು ಆಗುತ್ತಿಲ್ಲ. ಆಗ ಅವನಿಗೆ ಕಂಡದ್ದು ತನ್ನ ಸ್ನೇಹಿತ. ತನಗಾಗುತ್ತಿದ್ದ ತಳಮಳ, ಪ್ರೇಮ ನಿವೇದನೆಯ ಉತ್ಸುಕತೆ, ಅಪ್ಪ, ಅಮ್ಮನನ್ನು ಎದುರಿಸಬೇಕಾದ ರೀತಿ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದ. ತನಗೆ ಬೇಕಾದ ಸಲಹೆ, ಸಮಾದಾನದ ಮಾತು ಸ್ನೇಹಿತನಿಂದ ದೊರೆಯುತ್ತಿತ್ತು. ಪ್ರೇಮ ನಿವೇದನೆ ಆಯಿತು ಆದರೆ, ಹುಡುಗಿಯ ಬಾಳದಾರಿಯಲ್ಲಿ ಅವನಿರಲಿಲ್ಲ. ದುಃಖ ಮನಸ್ಸನ್ನು ಆವರಿಸಿತು. ಸಾಂತ್ವಾನದ ದನಿಯ ಅವಶ್ಯಕತೆಯಿತ್ತು, ಮತ್ತೊಮ್ಮೆ ತನ್ನ ಸ್ನೇಹಿತ ನೆರವಿಗೆ ಬಂದ, ಮಾನಸಿಕವಾಗಿ ಜೊತೆಯಲ್ಲಿ ನಿಂತ. ನಂತರದ ದಿನಗಳಲ್ಲಿ ಮದುವೆ ಗೊತ್ತಾಯಿತು. ಪ್ರೇಮಿಯ ನೆನಪು, ಹೆಂಡತಿಯಾಗುವವಳ ಜೊತೆಗಿನ ಸಾಂಗತ್ಯ ಗೊಂದಲಕ್ಕೀಡುಮಾಡಿತು. ಮನಸ್ಸಿನಲ್ಲಿನ ಗೊಂದಲ ಸ್ನೇಹಿತನೊಂದಿಗೆ ಹೇಳಿಕೊಂಡ. ಸರಿಯಾದ ಸಮಯಕ್ಕೆ ಸಲಹೆ ಮತ್ತು ಗೊಂದಲ ನಿವಾರಣೆ ಮಾಡಿದ. ಮುಂದೆ ಮದುವೆಯಾಯಿತು, ಸ್ನೇಹಿತ ಬಂದು ಮನಸಾರೆ ಹಾರೈಸಿ ಹೋದ. ಮತ್ತೊಮ್ಮೆ ಜೊತೆಯಾಗಲು ದಿನಗಳನ್ನು ಕಾಯುತ್ತಾ ಮುಂದುವರೆದರು.
ನಮ್ Buddy ಮಕ್ಳು
![]() |
| Deepak - ಕಿವಿಲಿ ರಕ್ತ ಬರ್ಸೋನು |
| Pavan Kumar - ನನಗಿಂತಲೂ ಜಾಸ್ತಿ ಮನೆಹಾಳ |
ಮನಸ್ಸು ಯಾವಾಗಲೂ ಮುಕ್ತವಾಗಿರುವುದನ್ನು ಬಯಸುತ್ತದೆ. ಯಾವುದೇ ಗೊಂದಲಕ್ಕಾಗಲಿ, ಬದ್ಧತೆಗಾಗಲಿ ಒಳಗಾಗಲು ಇಚ್ಚಿಸುವುದಿಲ್ಲ, ಅದು ಕುಸಿದಾಗ ಮುಕ್ತವಾದ ಬೆಂಬಲವನ್ನು ಅಪೇಕ್ಷಿಸುತ್ತದೆ. ಅಂತಹ ಬೆಂಬಲ ದೊರೆಯುವುದು ಸುಲಭ ಸಾಧ್ಯವಲ್ಲ. ನಮ್ಮ ಬದುಕಿನಲ್ಲಿ ಇದ್ದರೂ ಇಲ್ಲದವರಾಗಿರಬೇಕು, ನಮ್ಮ ಬದುಕಿಗೆ ಬೆಂಬಲವಾಗಿ ನಿಲ್ಲಬೇಕು ಆದರೆ, ನಮ್ಮ ಮೇಲೆ ಪ್ರಭಾವ ಬೀರದಂತೆ ಇರಬೇಕು. ಆ ಬಾಂಧವ್ಯದಲ್ಲಿ ಒಬ್ಬರಿಗೊಬ್ಬರು ಏನನ್ನು ಅಪೇಕ್ಷೆಪಡದಂತಿರಬೇಕು, ಸ್ವಾರ್ಥರಹಿತವಾಗಿರಬೇಕು. ರಕ್ತ ಸಂಬಂಧದ ಬಾಂಧವ್ಯದಲ್ಲಿ ಬಂಧನ, ಬದ್ಧತೆ ಇದೆ. ಇಲ್ಲಿ ಮನಸ್ಸು ಮುಕ್ತವಾಗಿರಲು ಕಷ್ಟಸಾಧ್ಯ. ಪ್ರತಿಯೊಬ್ಬರಿಗೂ ಮುಕ್ತವಾಗಿ ಬೆಂಬಲಿಸುವ ನ್ಯೂಟ್ರಲ್ ಸ್ನೇಹಿತ ಇರಬೇಕು. ಮನಸ್ಸು ಮುಕ್ತವಾಗಿ, ಖುಷಿಯಾಗಿರಬೇಕು.


No comments:
Post a Comment