February 2, 2021

ಭಾರತದಲ್ಲಿ ಸ್ವಾತಂತ್ರ್ಯದ ಮೊದಲ ಹೆಜ್ಜೆ ಇಟ್ಟದ್ದೇ ಸುಭಾಷ್ ಬೋಸ್!

ಆಂಗ್ಲರ ವಿರುದ್ಧ ಹೋರಾಟದಲ್ಲಿ ಸುಭಾಷ್ ಬೋಸರು ಸುಮಾರು 11 ಸಲ ಜೈಲಿಗೆ ಹೋಗಿಬಂದರು. ಕಾಂಗ್ರೇಸಿನ ಅಧ್ಯಕ್ಷರಾಗಿದ್ದರೂ ಸ್ವಾತಂತ್ರ್ಯ ಹೋರಾಟಕ್ಕೆ ತೀವ್ರ ಸ್ವರೂಪ ಕೊಡಲಾಗಲಿಲ್ಲ ಎಂಬ ಕೊರಗು ಸುಭಾಷರ ಮನಸ್ಸಿನಲ್ಲಿತ್ತು. ಕಾಂಗ್ರೇಸ್ ಪಕ್ಷವಂತೂ ಆಂಗ್ಲರ ವಿರುದ್ಧ ಹೋರಾಟ ಮಾಡುವುದರ ಬದಲು ಬೇಡಿಕೊಳ್ಳುವ ಸ್ಥಿತಿಯಲ್ಲಿತ್ತು. ಸರ್ಕಾರವಂತೂ ಸುಭಾಷರ ಮೇಲೆ ತೀವ್ರವಾದ ನಿಗ ಇಟ್ಟಿತ್ತು. ಆರೋಗ್ಯದ ದೃಷ್ಟಿಯಿಂದ ಸುಭಾಷರನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು. ಮುಂದೇನು ಎಂಬ ಪ್ರಶ್ನೆ ಸುಭಾಷರನ್ನು ಕಾಡುತ್ತಲೇ ಇತ್ತು, ಅದರ ಕುರಿತು ಚಿಂತನೆ ನಡೆಸುತ್ತಲೇ ಇದ್ದರು. ಅವರ ಮುಂದಿನ ಮಹಾಕಾರ್ಯಕ್ಕೆ ದಾರಿ ತೋರಿದವರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ್ ಸಾವರ್ಕರ್! ಆಗ ಎರಡನೇ ವಿಶ್ವಯುದ್ಧ ಪ್ರಾರಂಭವಾಗುವ ಹೊತ್ತಾಗಿತ್ತು. ಅಂಗ್ಲರ ವಿರುದ್ದ ಇರುವ ಶತ್ರು ರಾಷ್ಟ್ರಗಳೆಲ್ಲವನ್ನು ಭೇಟಿಮಾಡಿ, ಅಲ್ಲಿದ ಭಾರತೀಯ ಯುದ್ಧ ಖೈದಿಗಳನ್ನು ಸೇರಿಸಿಕೊಂಡು, ಭಾರತ ಮೇಲೆ ಆಕ್ರಮಣ ಮಾಡಿ ಆಂಗ್ಲರನ್ನು ಹೊರದೋಡಿಸುವ ಪರಿಕಲ್ಪನೆ ಸಾವರ್ಕರ್ರದಾಗಿತ್ತು. ಇಂತಹದೊಂದು ಪ್ರಯತ್ನವನ್ನು ಮೊದಲನೆ ವಿಶ್ವಯುದ್ಧದ ಹೊತ್ತಲ್ಲಿ ರಾಸ್ ಬಿಹಾರಿ ಘೋಷ್ ಮಾಡಿದ್ದರು. ಅವರು ಕಟ್ಟಿರುವ ಸೈನ್ಯದ ಸಹಕಾರ ತೆಗೆದುಕೊಂಡು ಈ ಮಹತ್ಕಾರ್ಯವನ್ನು ಸಾಧಿಸುವ ಯೋಜನೆಯನ್ನು ಮುಂದಿಟ್ಟರು. ಸಾವರ್ಕರ್ ಮಾತನ್ನು ಕೇಳಿದ ಸುಭಾಷರು ಈ ಕೆಲಸ ತಾನೆ ಮಾಡುವುದಾಗಿ ದಿಟ್ಟ ನಿರ್ಧಾರ ಮಾಡಿ, ಆಂಗ್ಲರ ವಿರುದ್ಧದ ಯುದ್ಧಕ್ಕೆ ತಯಾರಾದರು.

Subash Chandra Bose meets Veer Sawarkar

ಗೃಹಬಂಧನಕ್ಕೊಳಗಾದ ಸುಭಾಷರು ಹೊರಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆ, ಅಣ್ಣ ಶರತ್ಚಂದ್ರರೊಂದಿಗೆ ಮಾತ್ರ ಮಾತಾಡುತ್ತಿದ್ದರು. ಕಿಟಕಿಯ ಮೂಲಕ ಊಟಕೊಡುವ ಮಟ್ಟಿಗೆ ಸುಭಾಷರು ಏಕಾಂತವಾದರು. ಸುಭಾಷರು ಅಧ್ಯಾತ್ಮಿಕ ಸಾಧನೆ ಮಾಡುತ್ತಿದ್ದಾರೆ, ಸನ್ಯಾಸಿಯಾಗುವತ್ತ ಸಾಗಿದ್ದಾರೆ ಎಂಬಂತಹ ಸುದ್ಧಿ ಹೊರಜಗತ್ತಿಗೆ ತಿಳಿಯುವಂತಾಯ್ತು. ಅದಕ್ಕೆ ತಕ್ಕಂತೆ ಸುಭಾಷರು ಗಡ್ಡವನ್ನು ಬಿಟ್ಟರು. ಆಂಗ್ಲರಿಗೆ ಸುಭಾಷರ ಮೇಲೆ ಸದಾ ಕಾಲ ಅನುಮಾನ ಕಾಡುತ್ತಲೇ ಇತ್ತು. ಅವರ ಮನೆ ಸುತ್ತಾ ಅನೇಕ ಪೋಲಿಸರ ಪಹರೆ ಯಾವಾಗಲೂ ಇರುತ್ತಿತ್ತು. ಅದೊಂದು ದಿನ ಶರತ್ಚಂದ್ರರ ಪುತ್ರ ಶಿಶಿರ್ಚಂದ್ರ ಕರಿ ಕಾರು ಮತ್ತು ಮುಸಲ್ಮಾನರ ಬಟ್ಟೆ ತಂದು ಕೊಡುತ್ತಾನೆ. ವೇಷ ಮರೆಸಿಕೊಂಡು, ಮುಸಲ್ಮಾನನಂತೆ ಗಡ್ಡ ಬಿಟ್ಟು, ಕಾರಿನಲ್ಲಿ ಕೂತು ಯಾರಿಗೂ ಗೊತ್ತಾಗದಂತೆ ಸುಭಾಷರು ತಪ್ಪಿಸಿಕೊಂಡು ಹೊರಡುತ್ತಾರೆ. ಮನೆಯಿಂದ ಹೊರಟ ಸುಭಾಷರು ಇನ್ಸುರೆನ್ಸ್ ಆಫ಼ೀಸರ್ ವೇಷದಲ್ಲಿ ಕಾಬುಲ್ಗೆ ತೆರಳುತ್ತಾರೆ. ಸುಭಾಷರು ಡಿಸೆಂಬರ್ ಕೊನೆಯಲ್ಲಿ ಮನೆಯಿಂದ ತಪ್ಪಿಸಿಕೊಂಡಿದ್ದರು. 
 
ಶಿಶಿರ್ಚಂದ್ರ ಬೋಸ್

ಆದರೆ, ಸುಭಾಷರು ಕಾಣುತ್ತಿಲ್ಲ ಎಂದು ಬ್ರಿಟೀಷರಿಗೆ ತಿಳಿದದ್ದೆ ಜನವರಿ 12ರ ನಂತರ. ಕಾಬುಲ್ನಿಂದ ಮೂಗನಾಗಿ ನಟಿಸುತ್ತಾ ಅಡ್ಡಾ ಶರೀಫ಼್ ಎಂಬ ಜಾಗಕ್ಕೆ ತೆರಳಿ, ಜರ್ಮನಿ, ಇಟಾಲಿ, ರಷ್ಯಾದ ದೂತಾವಾಸರ ಸಹಾಯದಿಂದ ಜರ್ಮನಿಗೆ ಹೊಗುವ ತಯಾರಿ ನಡೆಸಿದರು. ಈ ತಯಾರಿಗೂ ಸಹ 8-9 ತಿಂಗಳು ಹಿಡಿಯಿತು. ಕೊನೆಗೆ ರಷ್ಯಾಗೆ ತೆರಳಿ ಬರ್ಲಿನ್ಗೆ ಹೊಗುವ ವ್ಯವಸ್ಥೆಯಾಗುತ್ತದೆ. ಸುಭಾಷರು ಒರ್ಲಾಂಡೊ ಮೆಗ್ಸೊಟ ಎಂಬ ಹೆಸರಿನಲ್ಲಿ ರಷ್ಯಾಗೆ ತೆರಳಿ ಅಲ್ಲಿಂದ ಬರ್ಲಿನ್ಗೆ ತೆರೆಳುತ್ತಾರೆ. ಹಿಂದೊಮ್ಮೆ ಜರ್ಮನಿ, ಇಟಾಲಿ, ಆಸ್ಟ್ರಿಯಾ ತಿರುಗಾಡಿದ್ದ ಸುಭಾಷರಿಗೆ ಜರ್ಮನ್ ಭಾಷೆ ಸುಲಲಿತವಾಗಿ ಮಾತನಾಡಲು ಬರುತ್ತಿತ್ತು. ಅದೇ ಸಮಯದಲ್ಲಿ ಸುಭಾಷರು 1920-1934ರ ನಡುವಿನ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪುಸ್ತಕ ಬರೆದರು. ಈ ಕೆಲಸದಲ್ಲಿ ಸುಭಾಷರಿಗೆ ಸಹಾಯ ಮಾಡಿದ್ದು ಎಮಿಲಿ ಶೆಂಕೆಲ್ ಎಂಬ ಹೆಣ್ಣು ಮಗಳು. ನಂತರದ ದಿನಗಳಲ್ಲಿ ಆಕೆಯನ್ನು ಸುಭಾಷರು ಮದುವೆಯಾಗುತ್ತಾರೆ. ಅಲ್ಲಿನ ಸೈನ್ಯಾಧಿಕಾರಿಗಳ ಮೂಲಕ ಸುಭಾಷರು ಹಿಟ್ಲರನ್ನು ಭೇಟಿಮಾಡುವ ಅವಕಾಶವನ್ನು ಪಡೆಯುತ್ತಾರೆ. ಹಿಟ್ಲರ್ರನ್ನು ಭೇಟಿ ಮಾಡಿ ತಮ್ಮ ತಯಾರಿ ಮತ್ತು ಬೇಡಿಕೆಯನ್ನು ಮುಂದಿಡುತ್ತಾರೆ. 

1. ಜರ್ಮನಿಯಲ್ಲಿ 'ಫ಼್ರೀ ಇಂಡಿಯಾ ಸೊಸೈಟಿ' ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು

2. ಜರ್ಮನಿಯಿಂದ ಜಗತ್ತಿನಾದ್ಯಂತ ಪ್ರಸಾರವಾಗುವಂತೆ ಅವರ ರೇಡಿಯೋ ಬಳಸಿಕೊಳ್ಳಲು ಅಣುವು ಮಾಡಿಕೊಡಬೇಕು

3. ಅಲ್ಲೇ ಇದ್ದ ಭಾರತೀಯ ಯುದ್ಧ ಖೈದಿಗಳನ್ನು ಬಳಸಿಕೊಂಡು ಸೈನ್ಯವನ್ನು ತಯಾರಿ ಮಾಡಲು ಅವಕಾಶ ಮಾಡಿಕೊಡಬೇಕು

ಸುಭಾಷರ ಈ ಇಚ್ಚಾಶಕ್ತಿಯನ್ನು ನೋಡಿದ ಹಿಟ್ಲರ್ ಮೂರು ಬೇಡಿಕೆಗಳನ್ನು ಯಾವುದೇ ತಕರಾರಿಲ್ಲದೆ ಒಪ್ಪಿಕೊಳ್ಳುತ್ತಾನೆ. ಸುಭಾಷರಿಗೆ ಈ ಕೆಲಸದಲ್ಲಿ ಆಗುತ್ತಿದ್ದ ಖರ್ಚನ್ನು ಸಹ ಜರ್ಮನಿಯವರೇ ವಹಿಸಿಕೊಳ್ಳುತ್ತಾರೆ. ಸುಭಾಷರು ಈ ಹಣವನ್ನು ಸಾಲ ಎಂದು ಸ್ವೀಕರಿಸಿದ್ದರು. ಮುಂದೆ, ಪೂರ್ವ ಏಷ್ಯಾದಲ್ಲಿ ಗಳಿಸಿದ ಹಣದಿಂದ ಜರ್ಮನಿಗೆ ಸಾಲವನ್ನು ತೀರಿಸುತ್ತಾರೆ. ಇದರ ಮೂಲಕ ಸುಭಾಷರು ಭಾರತದ ಸ್ವಾಭಿಮಾನವನ್ನು ಉಳಿಸುತ್ತಾರೆ.

Subhas Chandra Bose meets Adolf Hitler

ಭಾರತದಿಂದ ತಪ್ಪಿಸಿಕೊಂಡು ಹೋದ 1 ವರ್ಷದ ಮೇಲೆ ಆಜಾದ್ ಹಿಂದ್ ರೇಡಿಯೋ ಮೂಲಕ 'ನಾನು ಸುಭಾಷ್ ಚಂದ್ರ ಬೋಸ್ ಮಾತಾಡುತ್ತಿದ್ದೇನೆ' ಎಂದು ಸುಭಾಷರು ಹೇಳಿದಾಗ ಇಡೀ ಭಾರತ ರೋಮಾಂಚನಗೊಳ್ಳುತ್ತದೆ. ಇಂಗ್ಲೀಷ್ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಸುಭಾಷರ ಭಾಷಣ ಬರಬರುತ್ತಾ ಬಂಗಾಳಿ, ತೆಲುಗು, ಹಿಂದಿ, ತಮಿಳು, ಪುಸ್ತೂನ್ ಭಾಷೆಗಳಿಗೆ ಅನುವಾದಗೊಂಡು ಮರು ಪ್ರಸಾರವಾಗುತ್ತಿತ್ತು. ಅವರ ಭಾಷಣದಲ್ಲಿ ಬ್ರಿಟೀಷರು ಮಾಡುತ್ತಿದ್ದ ಅನ್ಯಾಯ, ಕಾಂಗ್ರೇಸರ ನಡುವಳಿಕೆ, ಭಾರತದಲ್ಲಿ ನಡೆಯುತ್ತಿದ್ದ ಕೆಲವು ವಿಚಾರವನ್ನು ತಿಳಿಸಿಸುತ್ತಿದ್ದರು. ಕ್ರಿಪ್ಸ್ ಭಾರತಕ್ಕೆ ಬರುವ ಹೊತ್ತಲ್ಲಿ ಅವರ ವಿರುದ್ಧ ಭಾಷಣ ಮಾಡಿ ಭಾರತದಲ್ಲಿ ಕಾಂಗ್ರೇಸ್ ಅನಿವಾರ್ಯವಾಗಿ ಕ್ರಿಪ್ಸ್ ಕಮಿಷನ್ ವಿರುದ್ಧ ನಿಲ್ಲಬೇಕಾಗತ್ತದೆ. ಸುಭಾಷರು ದೇಶದ ಹೊರಗಿದ್ದೂ ಭಾರತವನ್ನು ನಿಯಂತ್ರಿಸುತ್ತಿದ್ದಕ್ಕೆ ಒಂದು ನಿದರ್ಶನ. 1 ವರ್ಷದ ಈ ಅವಧಿಯಲ್ಲಿ ಸುಮಾರು 3-4 ಸಾವಿರದಷ್ಟು ಯುದ್ಧ ಖೈದಿಗಳನ್ನೊಳಗೊಂಡ ಸೈನ್ಯವನ್ನು ಜರ್ಮನಿಯಲ್ಲಿ ಕಟ್ಟಿದ್ದರು. ಅದೇ ಹೊತ್ತಲ್ಲಿ ಬ್ರಿಟೀಷರಿಂದ ಸಿಂಗಾಪುರವನ್ನು ಜಪಾನ್ ವಶಪಡಿಸಿಕೊಂಡಿತು. ಜಗತ್ತಿನ ಆಗುಹೋಗನ್ನು ಗಮನಿಸುತ್ತಿದ್ದ ಸುಭಾಷರಿಗೆ ಆದಷ್ಟು ಬೇಗ ಜಪಾನಿಗೆ ಹೋಗುವ ತವಕಶುರುವಾಗಿತ್ತು. ಅದಕ್ಕಾಗಿ ಸುಭಾಷರು ತಯಾರಿ ನಡೆಸಿದರು. ಜರ್ಮನಿಯಿಂದ ಜಪಾನ್ ತನಕ ಸಬ್ಮರೈನಲ್ಲಿ ತೆರಳುವ ತಯಾರಿ ಮಾಡಿಕೊಳ್ಳುತ್ತಾರೆ. ಬರೋಬ್ಬರಿ 7 ತಿಂಗಳ ಪ್ರಯಾಣ, ಸದಾ ಜನರೊಟ್ಟಿಗೆ ಬೆರೆಯುತ್ತಿದ್ದ ಸುಭಾಷರಿಗೆ ಸಹಾಯ ಮಾಡಿದ್ದು ಅಂತರ್ಮುಖಿ ವ್ಯಕ್ತಿತ್ವ, ಧ್ಯಾನ ಮತ್ತು ಅಧ್ಯಯನ.

Subash Chandra Bose in submarine on voyage to Japan

ಜಪಾನಿಗೆ ತೆರಳಿದ ಸುಭಾಷರಿಗೆ ರಾಸ್ ಬಿಹಾರಿ ಘೋಷ್ ಕಟ್ಟಿದ್ದ ಸೈನ್ಯ ಅಭೂತಪೂರ್ವ ಸ್ವಾಗತ ಕೊಡುತ್ತದೆ. ಸುಭಾಷರಿಗಾಗಿಯೇ ಕಾಯುತ್ತಿದ್ದ ಘೋಷರು ತಮ್ಮ ಸೈನ್ಯವನ್ನು ಅವರಿಗೆ ಸಂಪೂರ್ಣ ವಹಿಸಿಬಿಡುತ್ತಾರೆ. ಆ ಸೈನ್ಯವನ್ನು ಕೆಲವು ರೆಜಿಮೆಂಟ್ಗಳನ್ನಾಗಿ ವಿಭಾಗಿಸಿ, ಮಹಿಳ ಮತ್ತು ಮಕ್ಕಳ ಸೈನ್ಯವನ್ನು ಕಟ್ಟುತ್ತಾರೆ. ಚರಕವಿದ್ದ ಜಾಗದಲ್ಲಿ ಹಾರುವ ಹುಲಿಯನ್ನು ಹಾಕಿ ಅದನ್ನು ತಮ್ಮ ಧ್ವಜವನ್ನಾಗಿ ಅಳವಡಿಸಿಕೊಳ್ಳುತ್ತಾರೆ.

Subash Chandra Bose with Jhansi Regiment of INA

ಅದಲ್ಲದೆ 'ಜೈ ಹಿಂದ್' ಎಂಬ ಘೋಷಣೆಯನ್ನು ಮೊಳಗಿಸುತ್ತಾರೆ. ಬ್ರಿಟೀಷರ ವಿರುದ್ಧದ ಯುದ್ಧಕ್ಕೆ ಸಹಕಾರ ಕೊಡಲು ಸುಭಾಷರು ಜಪಾನ್ ಸರ್ಕಾರಕ್ಕೆ ಕೇಳಿಕೊಳ್ಳುತ್ತಾರೆ. ಆದರೆ, 'ನೀವು ಯಾರೆಂದು ನಿಮ್ಮೊಟ್ಟಿಗೆ ಸೈನ್ಯವನ್ನು ಕಳಿಸಬೇಕು? ನೀವೊಂದು ದೇಶದ ಸರ್ಕಾರವೆಂದಾದರೆ ಸಹಕಾರ ಕೊಡಬಹುದು' ಎಂದು ಜಪಾನ್ ಸರ್ಕಾರ ಹೇಳುತ್ತದೆ. ಈ ಮಾತಿನ ಸೂಕ್ಷ್ಮತೆಯನ್ನು ಅರಿತ ಸುಭಾಷರು ಸಿಂಗಪೂರಿನ ಕ್ಯಾತೆ ಥಿಯೇಟರಿನಲ್ಲಿ ಭಾರತದ ಹಂಗಾಮಿ ಸರ್ಕಾರವನ್ನು ಜಾರಿಗೆ ತರುತ್ತಾರೆ. ಸುಭಾಷರು ಭಾರತದ ಸರ್ಕಾರದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ, ವಿದೇಶಾಂಗ, ಯುದ್ಧ ಮತ್ತು ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ. ಈ ಸರ್ಕಾರಕ್ಕೆ 7-8 ದೇಶಗಳು ಅನುಮೋದನೆ ನೀಡುತ್ತದೆ. ಮುಂದಿನ ಬಾರಿ ಜಪಾನ್ ಸರ್ಕಾರದೊಂದಿಗೆ ಭಾರತದ ಪ್ರಧಾನಿಯಾಗಿ ಸುಭಾಷರು ಮಾತಾಡುತ್ತಿದ್ದರು. 

Subash Chandra Bose taking oath as Prime Minister in Singapore

ಬ್ರಿಟೀಷರ ವಿರುದ್ಧ ಗೆದ್ದ ಜಾಗಗಳನ್ನು ಭಾತರಕ್ಕೆ ಬಿಟ್ಟುಕೊಡಬೇಕು ಎಂಬ ಷರತ್ತನ್ನು ಹಾಕಿ, ಅಲ್ಲಿ ತಮ್ಮ ಸರ್ಕಾರದ ಪ್ರತಿನಿಧಿಯನ್ನು ಸ್ಥಾಪಿಸಿ, ಅಂಡಮಾನ್ ನಿಕೋಬಾರನ್ನು ವಶಪಡಿಸಿಕೊಳ್ಳುತ್ತಾರೆ. ಅದಕ್ಕೆ ಸ್ವರಾಜ್ ಮತ್ತು ಶಹೀದ್ ದ್ವೀಪ ಎಂದು ನಮಾಕಾರಣ ಮಾಡುತ್ತಾರೆ. ಭಾರತ ಸರ್ಕಾರದ ಹೆಸರಲ್ಲಿ ಸುಭಾಷರು ಒಂದು ಬ್ಯಾಂಕನ್ನು ಸಹ ಶುರು ಮಾಡುತ್ತಾರೆ. ಜಪಾನ್ ಮತ್ತು ಭಾರತೀಯ ಸೈನ್ಯ ಕೊಹಿಮಾ ಮತ್ತು ಇಂಫ಼ಾಲ್ ಮೂಲಕ ಭಾರತದ ಮೇಲೆ ಆಕ್ರಮಣಕ್ಕೆ ತಯಾರಿ ನಡೆಸುತ್ತದೆ. ಅದೇ ಸಮಯಕ್ಕೆ ಅತೀಯಾದ ಮಳೆಬಂದು ಸೈನ್ಯ ಮುಂದುವರೆಯಲು ಆಗದೆ, ಹಿಂದಿರುಗಲು ಆಗದೆ ರೋಗಕ್ಕೆ ಶರಣಾಗುತ್ತದೆ. ಅಮೇರಿಕಾದ ಬಾಂಬ್ ದಾಳಿಗೆ ಸಿಲುಕಿ ಜಪಾನ್ ಯುದ್ಧದಲ್ಲಿ ಸೋತು, ಸಿಂಗಾಪುರ ಮತ್ತೆ ಬ್ರಿಟೀಷರ ವಶವಾಗುತ್ತದೆ. ಸೋತಿದ್ದು ಜಪಾನ್ ಭಾರತವಲ್ಲ ಎಂದು ಸುಭಾಷರು ರಷ್ಯಾದ ಸಹಕಾರ ತೆಗೆದುಕೊಳ್ಳಲು ತಯಾರಾಗುತ್ತಾರೆ. ಸೈಗಾನ್ ವಿಮಾನ ನಿಲ್ದಾಣದಿಂದ ಟೋಕಿಯೋಕ್ಕೆ ತೆರಳಲು ವಿಮಾನ ಹತ್ತುತ್ತಾರೆ. ವಿಮಾನ ಅಪಘಾತಕ್ಕೆ ಈಡಾಗಿ ಸುಭಾಷರು ತೀರಿಕೊಂಡರು ಎಂಬ ಸುದ್ಧಿ ಅವರ ಜೊತೆ ತೆರಳಿದ್ದ ಹಬಿಬುರ್ ರೆಹಮಾನ್ ಮೂಲಕ ತಿಳಿದು ಬರುತ್ತದೆ.

Subash Chandra Bose's last journey

ಐ.ಎನ್.ಎ ಸೈನ್ಯಕರನ್ನು ಆಂಗ್ಲರು ಬಂಧನಕ್ಕೊಳಪಡಿಸಿ ಕೋರ್ಟ್ ಮಾರ್ಷಲ್ ಮಾಡಲು ತಯಾರಿ ಮಾಡುತ್ತಾರೆ. ಖ್ಯಾತ ವಕೀಲ ಬೋಲಾಬಾಯಿ ದೆಸಾಯಿ ಸೈನಿಕರ ಪರವಾಗಿ ವಾದಮಾಡಿ ಅವರಿಗೆ ನೇಣು ಶಿಕ್ಷೆಗೆ ಬದಲಾಗಿ ಗಡಿಪಾರಿನ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಾರೆ. ಸುಭಾಷರ ಸಾಧನೆಯನ್ನು ಕೇಳಿ ಗಾಂಧೀಜಿ ಅವರನ್ನು 'ದೇಶಭಕ್ತರ ದೇಶಭಕ್ತ' ಎಂದು ಹೊಗಳುತ್ತಾರೆ. ಐ.ಎನ್.ಎ. ಸೈನ್ಯದ ಪರವಾಗಿ, ಸುಭಾಷರ ಪರವಾಗಿ ಇಡೀ ದೇಶದಲ್ಲಿ ಒಕ್ಕೊರಲಿನ ಕೂಗು ಏಳುತ್ತದೆ. ರೈಲ್ವೆ ಹಳಿ, ಟೆಲಿಫ಼ೋನಿಕ್ ತಂತಿಯನ್ನು ಕಿತ್ತು ಬಿಸಾಡುತ್ತಾರೆ, ಕಾಂಗ್ರೇಸು ಕೂಡ ತನಗೆ ತಿಳಿಯದಂತೆ ಉಗ್ರತ್ವದ ಮಾರ್ಗಕ್ಕೆ ಹೊರಳುತ್ತದೆ. ಮುಂಬೈ ಬಂದರಿನಲ್ಲಿ ಸೈನ್ಯ ಬಂಡಾಯವೇಳುತ್ತದೆ. ಆಂಗ್ಲರಿಗೆ 1857ರ ಬಂಡಾಯದ ಬಿಸಿ ನೆನೆಪಾಗಿ ಭಾರತಕ್ಕೆ ಸ್ವಾತಂತ್ರ ನೀಡಲು ಮುಂದಾಗುತ್ತಾರೆ. ಸುಭಾಷರು ಎಣಿಸಿದಂತೆ ಭಾರತವನ್ನು 3 ತುಂಡುಗಳನ್ನಾಗಿ ಮಾಡಿ, ಆಂಗ್ಲರು ಭಾರತವನ್ನು ಬಿಟ್ಟು ಹೊರಡುತ್ತಾರೆ. 1857ರಲ್ಲಿ ಮಂಗಲ್ ಪಾಂಡೆ, ತಾತ್ಯ ತೋಪೆ ಸ್ವಾತಂತ್ರ್ಯ ಹೋರಾಟ ವ್ಯಾಪಕವಾಗಿ ಶುರುಮಾಡಿದರೆ ಅದಕ್ಕೊಂದು ತಾರ್ಕಿಕ ಅಂತ್ಯವನ್ನು ತಂದದ್ದು ಸುಭಾಷ್ ಚಂದ್ರ ಬೋಸ್! ಭಾರತದ ಮೊದಲ ಪ್ರಧಾನಿಯಾಗಿ ಮೆರೆದದ್ದು ಅವರೇ. ಭಾರತದಲ್ಲಿ ಸ್ವಾತಂತ್ರ್ಯದ ಮೊದಲ ಹೆಜ್ಜೆ ಇಟ್ಟದ್ದೇ ಸುಭಾಷ್ ಬೋಸ್!

No comments:

Post a Comment