May 5, 2021

ನಮ್ಮೊಳಗಿನ ಭ್ರಷ್ಟತೆಯನ್ನು ಹೊರ ಹಾಕುತ್ತಿರುವ ಕರೋನಾ!

ಕಷ್ಟಗಳು ಎದುರಾದಾಗಲೇ ನಮ್ಮೊಳಗಿನ ಶಕ್ತಿ, ಸಾಮರ್ಥ್ಯ ಹೊರಬರುವುದು. ಕರೋನಾದಂತಹ ಮಹಾಮಾರಿ ಬಂದಿರುವಂತಹ ಈ ಸಂದರ್ಭದಲ್ಲಿ ಶಿಸ್ತು, ಸಂಯಮಗಳೇ ನಮ್ಮನ್ನು ಕಾಪಾಡಬೇಕು. ಕಳೆದ ವರ್ಷ ಮಾರ್ಚ್ ತಿಂಗಳಲ್ಲೇ ಸಿಂಗಾಪುರಿನ ವೈದ್ಯಕೀಯ ವಿಜ್ಞಾನಿಗಳು ಕರೋನಾ ವೈರಸ್ ಗಾಳಿಯಲ್ಲಿ ಹದಿನೇಳು ಅಡಿಗಳಷ್ಟು ಚಲಿಸಬಲ್ಲದು ಎಂದು ಹೇಳಿದ್ದರು. ಅರೋಗ್ಯ ತಜ್ಞರ ಪ್ರಕಾರ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಮಯಕ್ಕೆ ಸರಿಯಾಗಿ ನಮ್ಮನ್ನು ನಾವು ಶುಚಿಯಾಗಿಟ್ಟುಕೊಳ್ಳುವುದರಿಂದ ಈ ರೋಗ ಹರಡದಂತೆ ತಡಗಟ್ಟಬಹುದು. ಕರೋನಾದ ಎರಡನೆ ಅಲೆಯ ಭೀಕರತೆಯನ್ನು ನಾವಿಂದು ಅನುಭವಿಸುತ್ತಿದ್ದೇವೆ. ಮನೆಯಲ್ಲಿ ಒಬ್ಬರಿಗೆ ಕರೋನಾ ಬಂದರೆ ಎಲ್ಲರಿಗೂ ಸೋಂಕು ಅಂಟಿರುವ ಹಲವು ಪ್ರಕರಣಗಳು ಹೊರಬಂದಿವೆ. ನಮ್ಮ ನಿರ್ಲಕ್ಷ್ಯದ ಕಾರಣ ಮನೆಯಲ್ಲಿದ್ದರೂ ಮಾಸ್ಕ್ ಧರಿಸಬೇಕಾದಂತಹ ಪರಿಸ್ಠಿತಿ ಬಂದಿದೆ ಎಂದು ಕರೋನಾ ಟಾಸ್ಕ್ ಫ಼ೋರ್ಸಿನ ಮುಖ್ಯಸ್ಥ ಡಾ. ವಿ.ಕೆ. ಪಾಲ್ ಹೇಳಿದ್ದಾರೆ. ಎರಡನೆ ಅಲೆಯಲ್ಲಿ ಸೋಂಕು ತಗುಲಿರುವ ಮತ್ತು ಸಾವಿನ ಪ್ರಕರಣದ ಸಂಖ್ಯೆ ಅಧಿಕವಾಗಿದೆ. ಇದಕ್ಕೆಲ್ಲಾ ಕಾರಣ ಯಾರು? ನಮ್ಮಲ್ಲಿ ಇದಕ್ಕಿರುವ ಉತ್ತರ ಒಂದೆ - ಸರ್ಕಾರ! ಸರ್ಕಾರದ ಹೊರತಾಗಿ ನಾವು ನಮ್ಮ ಜವಾಬ್ದಾರಿಯನ್ನು ಅರಿಯಬೇಕಾಗಿದೆ.

ಕಳೆದ ವರ್ಷದಿಂದ ಇಲ್ಲಿಯವರೆಗೆ ಭಾರತದಲ್ಲಿ ಅನೇಕ ಪ್ರತಿಭಟನೆ ಸಮಾವೇಶಗಳು ನಡೆದಿವೆ. ಮೊದಲೆ ಬಾರಿ ದೇಶದೆಲ್ಲೆಡೆ ಲಾಕ್ಡೌನ್ ಮಾಡಿದಾಗ ವಲಸೆ ಕಾರ್ಮಿಕರು ಪ್ರತಿಭಟನೆಗೆ ಮುಂದಾದರು. ಕೃಷಿ ಸುಧಾರಣೆ ಬಿಲ್ ಕುರಿತು ಕಳೆದ ಡಿಸೆಂಬರಿನಲ್ಲಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದವು. 2021 ಜನವರಿ 26 ರಂದು ದೆಹಲಿಯಲ್ಲಿ ದೇಶವೇ ನಾಚಿಸುವಂತಹ ಘಟನೆಗಳು ನಡೆದವು. ಕರ್ನಾಟಕದಲ್ಲಿ ಕೂಡ ಕೃಷಿ ಮಸೂದೆಯ ವಿರುದ್ಧ, ಮರಾಠಾ ಪ್ರಾಧಿಕಾರದ ಸ್ಥಾಪನೆ ವಿರುದ್ಧ ಪ್ರತಿಭಟನೆ ಮತ್ತು ರ್ಯಾಲಿಗಳು ನಡೆದವು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ದೆಹಲಿಯಲ್ಲಿ ಸುಮಾರು 40 ಸಾವಿರ ಮಹಿಳೆಯರು ಹರಿಯಾಣ, ಪಂಜಾಬ್, ಉತ್ತರ ಪ್ರದೇಶದ ಭಾಗಗಳಿಂದ ಪ್ರತಿಭಟನೆಗೆಂದು ಸೇರಿದ್ದರು. ಪಂಜಾಬಿನ 401 ಮಾದರಿಗಳಲ್ಲಿ 81% ರಷ್ಟು ಬ್ರಿಟನ್ ರೂಪಾಂತರಿ ವೈರಸ್ ಪತ್ತೆಯಾಗಿದೆ ಎಂದು ಪಂಜಾಬಿನ ಮುಖ್ಯಮಂತ್ರಿ ಅಮರೇಂದರ್ ಸಿಂಗ್ ಹೇಳಿದ್ದಾರೆ. ಈ ಎಲ್ಲಾ ಪ್ರತಿಭಟನೆಗಳಲ್ಲಿ ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಜನರು ಪಾಲಿಸಲಿಲ್ಲ. ಪ್ರತಿಭಟನೆ ಮಾಡುವುದು ಸಾಂವಿಧಾನಿಕವಾಗಿ ನಮಗೆ ಸಿಕ್ಕಿರುವ ಹಕ್ಕು ಆದರೆ, ಯಾವ ಸಂದರ್ಭದಲ್ಲಿ ಪ್ರತಿಭಟಿಸಬೇಕು ಎಂಬ ಪರಿಜ್ಞಾನ ನಾವು ಕಳೆದುಕೊಂಡೆವು.
 
Migrants protest during 1st lock down and Women protesting on International Women's Day

Farmers protesting against Agricultural Bill

Statement from CM of Punjab

ಕಳೆದ 2 ತಿಂಗಳಲ್ಲಿ ಕರ್ನಾಟಕಲ್ಲಿ ಉಪಚುಣಾವಣೆಯೂ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಮತ್ತು ಪುದುಚೆರಿಯಲ್ಲಿ ವಿಧಾನ ಸಭೆ ಚುಣಾವಣೆಗಳು ನಡೆದವು. ಈ ಸಂದರ್ಭದಲ್ಲಿ ಅನೇಕ ರಾಜಕೀಯ ಸಮಾವೇಶಗಳು, ರೋಡ್ ಶೋಗಳು ನಡೆದವು. ಇಲ್ಲಿಯೂ ಕೂಡ ಲಕ್ಷಾಂತರ ಜನಗಳು ಸೇರಿದ್ದರು ಮತ್ತು ನೆನಪಿಡಿ, ಸಾಮಾಜಿಕ ಅಂತರ ಎಂಬುದು ಮರೆತು ಹೋದ ಸಂಗತಿಯಾಗಿತ್ತು. ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಆಸೆಗೆ ಸಮಾವೇಶ, ರ್ಯಾಲಿಗಳನ್ನು ನಡೆಸಿದರು ಆದರೆ, ಇಂತಹ ಪರಿಸ್ಥಿತಿಯಲ್ಲಿ ಅಷ್ಟು ಜನ ಸೇರುವ ಅಗತ್ಯತೆ ಏನಿತ್ತು? ಎಂದು ನಾವು ಯೋಚಿಸಲೇ ಇಲ್ಲ. ಕರೋನಾ ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬ ಅರಿವು ನಮ್ಮಲ್ಲಿ ಇರಲಿಲ್ಲವ? ಡಿಸೆಂಬರ್ ಇಂದ ಫ಼ೆಬ್ರವರಿ ತನಕ ಅನೇಕ ಮದುವೆ, ಜಾತ್ರೆ ಮತ್ತಿತರ ಸಮಾರಂಭಗಳನ್ನು ನಾವೆಲ್ಲರೂ ನಡೆಸಿದೆವು. 8-9 ತಿಂಗಳ ನಂತರ ಲಾಕ್ಡೌನ್ ಮುಗಿದಿತ್ತು ಎಂಬ ಕಾರಣಕ್ಕೆ ಎಂದಿನಂತೆ ಸಮಾರಂಭಗಳಲ್ಲಿ ಜನಜಂಗುಳಿ ಶುರುವಾಯಿತು. ಸಂಭ್ರಮದಲ್ಲಿ ಮೈಮರೆತ ನಾವು ಕರೋನಾ ತಡೆಗಟ್ಟುವ ನಿಯಮಗಳನ್ನು ಮೀರಿದೆವು. ಮದುವೆ ಮತ್ತಿತಿರ ಸಭೆ, ಸಮಾರಂಭಗಳಲ್ಲಿ ಫ಼ೋಟೊ ತೆಗೆಸಿಕೊಳ್ಳುವ ಸಲುವಾಗಿ ಮಾಸ್ಕ್ ಧರಿಸಲೇ ಇಲ್ಲ. 
 
ಕಳೆದ ವಾರದಿಂದ ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಎಂದು ಸರ್ಕಾರ ಘೋಷಣೆ ಮಾಡಿತು. ಬೆಳಿಗ್ಗೆ 6 ರಿಂದ 10 ತನಕ ತರಕಾರಿ, ಹಾಲು ಮತ್ತಿತರ ಅಗತ್ಯ ವಸ್ತುಗಳನ್ನು ಕೊಳ್ಳಲು ಅಂಗಡಿ ಮತ್ತು ಮಾರುಕಟ್ಟೆಗಳನ್ನು ತೆರೆಯಬಹುದು ಎಂದು ಸರ್ಕಾರ ಹೇಳಿತು. 3-4 ದಿನಗಳ ಹಿಂದೆ ಈ ಸಮಯವನ್ನು ಸಂಜೆ 6 ತನಕ ವಿಸ್ತರಿಸಿದರು. ಕರ್ಫ್ಯೂ ಸಡಿಲಗೊಳಿಸಿರುವ ಈ ಹೊತ್ತಲ್ಲಿ ಜನರು ತರಕಾರಿ, ದಿನಸಿ ಇತರ ವಸ್ತುಗಳಿಗಾಗಿ ಮುಗಿಬಿದ್ದರು. ಇಲ್ಲಿಯೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನ ವಿಫಲವಾದರು. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟವರಿಗೂ, ಎಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗು ಲಸಿಕೆ ಕೊಡುವುದಾಗಿ ಸರ್ಕಾರ ಘೋಷಿಸಿತು. ಮೊದಲ ಕೆಲವು ದಿನಗಳು ಲಸಿಕೆ ತೆಗೆದುಕೊಳ್ಳುವಲ್ಲಿ ಜನ ಉತ್ಸಾಹ ತೋರಿಸಿದರಷ್ಟೇ ಅದರೆ, ಎಪ್ರಿಲ್ 10 ರ ನಂತರ ಪ್ರತಿದಿನ ಲಸಿಕೆ ತೆಗುದುಕೊಳ್ಳುವ ಸರಾಸರಿ ಇಳಿಯುತ್ತಾ ಬಂತು.ಇದಕ್ಕೆ ಲಸಿಕೆ ಪೂರೈಸುವಲ್ಲಿ ಸರ್ಕಾರದ ವೈಫಲ್ಯ ಕಾರಣವೋ ಅಥವಾ ನಮ್ಮ ಜನಗಳ ನಿರ್ಲಕ್ಷ್ಯ ಕಾರಣವೊ ಎಂಬುದು ಪ್ರಶ್ನಾರ್ಹ!
 
Average number of people vaccinated per day in India

ಚಾಮರಾಜನಗರಲ್ಲಿ ಆಮ್ಲಜನಕ ಸಿಗಲಿಲ್ಲವೆಂದು 24 ಜನ ಮೃತಪಟ್ಟರು ಎಂಬ ಸುದ್ದಿ ಹೊರಬಂತು. ನಂತರ ಆ ಸಂಖ್ಯೆ 34ಕ್ಕೆ ಹೋಯಿತು. ಸರ್ಕಾರವನ್ನು ಲೆಕ್ಕ ಕೇಳಿದರೆ 3 ಜನ ಮಾತ್ರ ಆಮ್ಲಜನಕದ ಕೊರತೆಯಿಂದ ಸತ್ತರು ಎನ್ನುತ್ತದೆ. 04 ಮೇ 2021, ಮಂಗಳವಾರ ಕೋವಿಡ್ ವಾರ್ ರೂಂ ಮೇಲೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ರೇಡ್ ಮಾಡಿ ಬೆಡ್ ಬ್ಲಾಕಿಂಗ್ ದಂಧೆಯನ್ನು ಹೊರಗೆಳೆದರು. ಸರ್ಕಾರ, ವಿರೋಧ ಪಕ್ಷಗಳು, ಮಾಧ್ಯಮಗಳು ಏನು ಮಾಡುತ್ತಿವೆ ಎನ್ನುವುದಕ್ಕಿಂತಲೂ ಕರೋನಾದಂತಹ ಸಮಯದಲ್ಲೂ ಈ ರೀತಿ ದಂಧೆ ಮಾಡುವ ಭ್ರಷ್ಟ ಮನಸ್ಥಿತಿ ನಮ್ಮ ಜನರಲ್ಲಿ ಇರುವುದು ನಿಜಕ್ಕೂ ಅಸಹ್ಯಕರವಾದುದು. ಈ ವಿಚಾರದಲ್ಲೂ ರಾಜಕೀಯದವರು, ಕಮ್ಯೂನಿಷ್ಟರು ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ರೇಡ್ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯದ ನಡುವೆ ಹುಳಿಹಿಂಡುವ ಕೆಲಸಕ್ಕೆ ತೇಜಸ್ವಿ ಮುಂದಾಗಿದ್ದಾರೆ ಎಂದು, ಭ್ರಷ್ಟಾಚಾರ ಹಿಂದೆಯೂ ಇತ್ತು, ಅದು ಕೋವಿಡ್ ಸಮಯದಲ್ಲಿ ಹೆಚ್ಚಾಗಿದೆ ಎಂಬಂತಹ ಮಾತುಗಳನ್ನಾಡಿದ್ದಾರೆ. ಹೌದು, ಕಷ್ಟದ ಪರಿಸ್ಥಿತಿ ಬರುತ್ತದೆ, ಹಾಗೆಂದು ಭ್ರಷ್ಟತೆಯನ್ನು ಬೆಂಬಲಿಸುವಷ್ಟರ ಮಟ್ಟಿಗೆ ನಾವು ಇಳಿಯಬಾರದು. ಕೆಲವು ಪತ್ರಕರ್ತರಂತೂ ಭಾರತದಲ್ಲಿ ಹೆಣ ಸುಡುವ ಚಿತ್ರಗಳನ್ನು ಆನ್ಲೈನ್ ಅಲ್ಲಿ ಮಾರಾಟ ಮಾಡುವ ಕೀಳುಮಟ್ಟಕ್ಕೂ ಇಳಿದಿದ್ದಾರೆ.
 


ಕರೋನಾ ರೋಗವೇ ಸರಿ ಆದರೆ, ನಮ್ಮ ಸಮಾಜದ, ಸರ್ಕಾರದ ಹುಳುಕುಗಳನ್ನೆಲ್ಲಾ ಹೊರತರುತ್ತಿದೆ ಎಂಬುದಂತೂ ಸತ್ಯ! ಮಾ.ಹಿರಣ್ಣಯ್ಯ ತಮ್ಮ ನಾಟಕದಲ್ಲಿ ಹೇಳಿರುವ ಮಾತು ನೆನಪಿಗೆ ಬರುತ್ತದೆ. "ಈಗ switch ಹಾಕಿದ್ರೆ fan ತಿರುಗುತ್ತದೆ. ಇನ್ಮುಂದೆ ನಮ್ಮ ಮಕ್ಕಳ ಕಾಲಕ್ಕೆ switch ಹಾಕಿ fan ಮೇಲೆ 20 ರೂಪಾಯಿ ಇಟ್ರೇನೇ ಅದು ತಿರುಗೋದು". ಈ ಮಾತು ಇಂದು ಸತ್ಯವಾಗಿರೋದು ನಮ್ಮ ದೌರ್ಭಗ್ಯ. 
 
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವಿದೆ. ಕರ್ನಾಟಕದ್ದೇ ಉದಾಹರಣೆ ತೆಗುದುಕೊಳ್ಳೋಣ. ಚುಣಾವಣೆ ಮತ್ತದರ ಪ್ರಚಾರ ನಡೆದದ್ದು ಬೆಳಗಾವಿಯಲ್ಲಿ ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಮತ್ತು ಸಾವು ಸಂಭವಿಸುತ್ತಿರುವುದು ಬೆಂಗಳೂರಿನಲ್ಲಿ. ನಮ್ಮ ಸುತ್ತಲಿನ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ನೇಪಾಳ, ಮಯನ್ಮಾರಿನಲ್ಲಿ ಕಳೆದ 1.5 ತಿಂಗಳಿನಿಂದ ಕರೋನಾ ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿಲ್ಲ. ಇದ್ದಕಿದ್ದ ಹಾಗೆ ಚೀನಾ ಕೋವಿಡ್ ವಿರುದ್ಧ ಭಾರತಕ್ಕೆ ಸಹಾಯ ಮಾಡುವ ಮಾತಾಡುತ್ತಿದೆ. ಚೀನಾ ಸಹಾಯ ಮಾಡುತ್ತಿದೆ ಎಂದಾದರೆ ಅದರಲ್ಲೇನೊ ಷಡ್ಯಂತ್ರವಿರುವುದಂತೂ ಸತ್ಯ. ಭಾರತದ ರೂಪಾಂತರಿ ವೈರಸ್ ಚೀನಾದ ಕೆಲವು ನಗರಗಳಲ್ಲಿ ಕಾಣಿಸಿಕೊಂಡಿದೆ ಎಂದು ಚೀನಾದ ಪತ್ರಿಕೆಗಳು ವರದಿ ಮಾಡಿದೆ.
 
chinese media reporting about Indian variant of Covid-19
 
ಇದನ್ನೆಲ್ಲಾ ಗಮನಿಸಿದರೆ ಕರೋನಾದ ಎರಡನೆ ಅಲೆ ಭಾರತದ ವಿರುದ್ದದ ಯೋಜಿತ ಜೈವಿಕ ಯುದ್ಧವೇ ಎಂಬ ಅನುಮಾನ ಕಾಡುತ್ತಿದೆ. 

3 comments:

  1. ಎಂದಿನಂತೆ ನಿಮ್ಮ ಅಂಕಣದಲ್ಲಿ ಸರಿಯಾದ ಮಾಹಿತಿ ಇದೆ

    ReplyDelete
  2. ಶರಾವ್ನನಾMay 8, 2021 at 3:28 PM

    ಉತ್ತಮ ಸಮತೋಲಿತ ಲೇಖನ.

    ಹೌದು ಎಲ್ಲರೂ ಜನರು ಮತ್ತು ಸಮಾಜ ಎಂದು ದೂಷಿಸುವುದು.

    ಸರ್ಕಾರ ಮತ್ತು ಅದರ ನಾಯಕರು ಕೂಡ ಈ ಸಮಾಜದ ವ್ಯಾಪ್ತಿಗೆ ಬರುತ್ತಾರೆ.

    ತೇಜಸ್ವಿ ಸೂರ್ಯನ ವಿಷಯಕ್ಕೆ ಇನ್ನೂ ಕೆಲವು ಸ್ಪಷ್ಟೀಕರಣಗಳು ಬೇಕಾಗಿದ್ದರೂ, ಅವರ ಕಾರ್ಯಗಳು ಕೋಮು ಅಸಮ್ಮತಿಗೆ ಕಾರಣವಾಗುತ್ತವೆ ಎಂಬ ವರದಿಗಳಿವೆ.

    ಆದರೆ ಇದಲ್ಲದೆ ಒಳ್ಳೆಯ ಕೆಲಸ ದಯವಿಟ್ಟು ಬರೆಯುತ್ತಲೇ ಇರಿ ✌️.

    ReplyDelete