ಮನಸ್ಸೆಂಬ ಕಡಲಿನಾಳದಲ್ಲಿ ಉದಯಿಸಿತು ಪ್ರೀತಿ
ಭಾವದ ನೌಕೆಯನ್ನೇರಿ ಸಾಗಿತು ಬದುಕು
ತೇಲಿ ಹೋದಳು ಅವಳು... ನಾವಿಕ ನಾನಾಗಲಿಲ್ಲ
ಮನದಾಳದಲ್ಲಿ ಮುಳುಗಿಹೋದ ನೆನಪು ನಾನಾದೆ
ನೆನಪಿಗೇ ಬಾರದ ನೆನಪು ನಾನಾದೆ!
ನೆನೆನೆನೆದು ಬತ್ತು ಹೋಯಿತು ಕಣ್ಣು
ಆಲಿಸಿದಲ್ಲೆಲ್ಲಾ ನೀರವ ಮೌನ
ಹೃದಯದಲ್ಲೊಂದು ಹಸಿಯಾದ ಹುಣ್ಣು
ಸುಳಿಯೊಂದರಲ್ಲಿ ಸಿಲುಕಿಹುದು ಮನ
ಕಮರಿ ಹೋದ ನೆತ್ತರಿನ ಕಾವು
ಯಾವ ಹೂವು ಯಾರ ಮುಡಿಗೊ...?
ಎದುರಿಗಿಹುದು ವಿಧಿಯಾಟದ ನಗು
ಬಾಳದಾರಿ... ಮದುವೆಗೋ ಮಸಣಕೋ...?
ಅವಿತಿಟ್ಟ ಭಾವ ಮುನ್ನೆಲೆಗೆ ಬರಬೇಕಿದೆ
ನನ್ನಿರುವನ್ನೇ ಮರೆಸುವ ಒಲವು ಬೇಕಿದೆ
ಭಾರವಾದ ಬದುಕು ಹಗುರಾಗಬೇಕಿದೆ
ಅವಳ ಮಡಿಲಲ್ಲಿ ಪವಡಿಸುವ ಪ್ರೀತಿ ನಾನಾಗಬೇಕಿದೆ
ಕಣ್ಣಂಚಲಿ ಕಾಣುವ ಪ್ರೀತಿ ಮನತುಂಬಬೇಕಿದೆ
ಮನದಲ್ಲಿ ಆಕೆಯ ಬಿಂಬ ಅಚಲವಾಗಬೇಕಿದೆ
ನನ್ನ ಬದುಕಿನ ಸ್ಫೂರ್ತಿ ಅವಳಾಗಬೇಕಾಗಿದೆ
ನಾ ಸೋತರು ಅವಳು ನನ್ನ ಗೆಲುವಾಗಬೇಕಿದೆ !

No comments:
Post a Comment