ಕರ್ನಾಟಕದಲ್ಲಿ ಶಾಲಾ ಪಠ್ಯಪುಸ್ತಕದ ಪರಿಷ್ಕರಣೆ ಕಾರ್ಯ ಪೂರ್ಣವಾಗಿ ಪಠ್ಯಪುಸ್ತಕಗಳು ಪ್ರಕಟವಾಗುತ್ತಿವೆ. ಈ ಹಿನ್ನಲೆಯಲ್ಲಿ ಚರ್ಚೆಗಿಂತಲೂ ವಿವಾದವೇ ಹೆಚ್ಚಾಗಿದೆ. ಪರಿಷ್ಕೃತಗೊಂಡಿರುವ ವಿಚಾರಗಳ, ಗುಣಾತ್ಮಕ ಅಂಶಗಳ ಬಗ್ಗೆ ಅದರ ಸತ್ಯಾಸತ್ಯತೆಗಳ ಬಗ್ಗೆ ಚರ್ಚೆಯಾಗಬೇಗಕಿತ್ತು. ಅದರೆ, ಪೂರ್ವಾಗ್ರಹ ಪೀಡಿತರಾಗಿ, ವಿಚಾರಗಳನ್ನು ಹೊರತು ಪಡಿಸಿ ವ್ಯಕ್ತಿ ಕೇಂದ್ರಿತವಾಗಿ ವಿವಾದವನ್ನು ಹುಟ್ಟು ಹಾಕುತ್ತಿರುವುದು ಸೋಚನೀಯ. ಎಡಪಂಕ್ತಿಯರು, ತಮ್ಮನ್ನು ತಾವು ಬುದ್ಧಿಜೀವಿ ಎಂದು ಕರೆದುಕೊಳ್ಳುವವರು, ರಾಜಕೀಯ ನಾಯಕರು ತಿರುಗಿ ಬೀಳುತ್ತಿರುವುದನ್ನು ಗಮನಿಸಿದರೆ ಸತ್ಯವನ್ನು ಮರೆಮಾಚುವ ಪ್ರಯತ್ನದಂತೆ ತೋರುತ್ತದೆ. ಕಾಂಗ್ರೇಸ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ಗೂಂಡಾ ಪ್ರವೃತ್ತಿ ತೋರಿದೆ. ತಿಪಟೂರಿನಲ್ಲಿರುವ ಮಾನ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಮನೆಯ ಮೇಲೆ ಎನ್.ಎಸ್.ಯೂ.ಐ. ಸಂಘಟನೆ ದಾಳಿ ಮಾಡಿದೆ. ಒಂದಂತೂ ಸತ್ಯ, ಕಾಂಗ್ರೇಸ್ ಮತ್ತು ಕಮ್ಮ್ಯೂನಿಸ್ಟರು ವಿರೋಧ ಮಾಡುತ್ತಿದ್ದಾರೆಂದರೆ ಮಾಡಿದ ಕೆಲಸ ನಿಜಕ್ಕೂ ಸರಿಯಾಗಿದೆ ಎಂದರ್ಥ. ಈ ದೃಷ್ಟಿಯಲ್ಲಿ ನೋಡುವುದಾದರೆ, ರೋಹಿತ್ ಚಕ್ರತೀರ್ಥರವರ ನೇತೃತ್ವದಲ್ಲಿ ನಡೆದಿರುವ ಪಠ್ಯ ಪುಸ್ತಕ ಪರಿಷ್ಕರಣೆ ಕಾರ್ಯವನ್ನು ಖಂಡಿತವಾಗಿಯೂ ಸಮಾಜ ಒಪ್ಪಬಹುದು.
ಪರಿಷ್ಕರಣಾ ಸಮಿತಿಗೆ ರೋಹಿತ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ದಿನದಿಂದಲೇ ಬರಗೂರು ರಾಮಚಂದ್ರಪ್ಪ ಮತ್ತವರ ಗುಂಪು ವಿರೋಧ ಮಾಡಲು ಪ್ರಾರಂಭಿಸಿತು. ಪಠ್ಯದಲ್ಲಿ ರೋಹಿತ್ ಮಾಡಬಹುದಾದ ಬದಲಾವಣೆಗಳೇನು ಎಂಬುದು ತಿಳಿಯದೇ ವ್ಯಕ್ತಿಗತವಾಗಿ ವಿರೋಧ ಮಾಡಲು ಪ್ರಾರಂಭಿಸಿದರು. ಪಠ್ಯದಲ್ಲಿ ಹೆಗಡೆವಾರರ ಭಾಷಣ, ಚಕ್ರವರ್ತಿಯವರ ಲೇಖನ, ಬನ್ನಂಜೆ ಗೋವಿಂದಾಚಾರ್ಯರ ಬರಹ, ಶತಾವಧಾನಿ ಗಣೇಶರ ಮಾತುಗಳನ್ನು ಪಾಠವಾಗಿ ಸೇರಿಸಿದ್ದಾರೆ ಎಂದು ತಿಳಿದ ಮೇಲಂತೂ ಎಲ್ಲಿಲ್ಲದ ಗಲಾಟೆ ಶುರುವಾಯಿತು. ಆ ಪಠ್ಯಗಳಲ್ಲಿರುವ ವಿಚಾರವೇನು ಎಂಬುದನ್ನು ಓದದೇ ವ್ಯಕ್ತಿರಿಕ್ತವಾದ ವಿರೋಧವೇ ಮೇಲಾಯ್ತು! ಆದರ್ಶ ಪುರುಷ, ಭಾರತಾಂಬೆಯ ಅಮರಪುತ್ರರು, ಭಾರತೀಯ ಚಿಂತನೆಗಳು, ರಾಮಾಯಣದಲ್ಲಿ ಬರುವ ಶುಕಾಸನನ ಉಪದೇಶವನ್ನು ಪಠ್ಯವಾಗಿ ಕೊಟ್ಟಿದ್ದಾರೆ. ಇದರಲ್ಲಿ ಯಾವುದೇ ಸಮುದಾಯದ ಓಲೈಕೆಯಾಗಲಿ, ಜಾತಿ ನಿಂದನೆಯಾಗಲಿ ಇರದೇ ಮಕ್ಕಳಿಗೆ ಬೇಕಾದ ವಿಚಾರಗಳನ್ನೇ ಕೊಟ್ಟಿದ್ದಾರೆ. ಕುವೆಂಪುರವರ 'ಕಿಂದರಿ ಜೋಗಿ' ಪದ್ಯವನ್ನು ಸೇರಿಸಿದ್ದೇವೆ ಎಂದು ಸ್ವತಃ ರೋಹಿತ್ ಅವರು ಅನೇಕ ಚರ್ಚೆಗಳಲ್ಲಿ ಹೇಳಿದ್ದಾರೆ. ಪಠ್ಯದಲ್ಲಿರುವ ವಿಚಾರಗಳು ಸತ್ವಯುತವಾಗಿದ್ದರೂ ಮೊಸರಲ್ಲಿ ಕಲ್ಲು ಹುಡುಕುವ ಚಟ ವಿರೋಧಿಗಳದ್ದು!
ಬರಗೂರು ರಾಮಚಂದ್ರಪ್ಪ ಪಠ್ಯ ಪುಸ್ತಕದಲ್ಲಿ ಮಾಡಿದ 'ಎಡ'ವಟ್ಟುಗಳನ್ನು ಒಮ್ಮೆ ನೋಡೋಣ. ಕರ್ನಾಟಕದ ವಿಕಾಸಕ್ಕೆ ಮುನ್ನುಡಿ ಬರೆದ ಮೈಸೂರಿನ ಅರಸರನ್ನು ನಿರ್ಲಕ್ಷಿಸಿದರು, ಹಿಂದೂ ಧರ್ಮದ ಬಗ್ಗೆ ನಕಾರಾತ್ಮಕ ಅಂಶಗಳನ್ನೇ ಪಠ್ಯದಲ್ಲಿ ತುಂಬಿದರು, ರೈತರ ಗೀತೆಯಾದ 'ನೇಗಿಲ ಯೋಗಿ' ಹಾಡನ್ನು ತೆಗೆದರು, ಭಗತ್ ಸಿಂಗನ ಬಗ್ಗೆ ಇದ್ದದ್ದು ಒಂದು ಪರಿಚ್ಛೇದ ಮಾತ್ರ, ಅದು ಕಮ್ಯುಸಿಸ್ಟರು ಬರೆದದ್ದು. ಬೆಂಗಳೂರನ್ನು ಕಟ್ಟಿದ ಕೆಂಪೆಗೌಡರ ಪಾಠ ಇರಲಿಲ್ಲ, ಬಸವಣ್ಣ ಹಾಗೂ ಜೇಡರ ದಾಸಿಮಯ್ಯರ ವಚನಗಳನ್ನು ಕೈಬಿಟ್ಟಿದ್ದರು, ವಿವೇಕಾನಂದರ ವಿಚಾರಗಳನ್ನು ತದ್ವಿರುದ್ಧವಾಗಿ ಪ್ರಸ್ತುತ ಪಡಿಸಿದ್ದರು, ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಟಿಪ್ಪೂವನ್ನು ಮಾತ್ರ ಹೋರಾಟಗಾರ ಎಂದು ಬಿಂಬಿಸಿದ್ದರು. ಈಗ ನಡೆದಿರುವ ಪರಿಷ್ಕರಣೆಯನ್ನು ಗಮನಿಸೋಣ. 17 ವರ್ಷ ಆಳಿದ ಟಿಪ್ಪೂವಿನ ನೈಜ ಇತಿಹಾಸ ತಿಳಿಸಿದ್ದಾರೆ, ಹಿಂದೂ, ಬೌದ್ಧ, ಜೈನ ಧರ್ಮದ ಬಗ್ಗೆ ಸೇರಿಸಿದ್ದಾರೆ, ರಾಷ್ಟ್ರವಾದಿ ಚಕ್ರವರ್ತಿ ಸೂಲಿಬೆಲೆ ವಿರಚಿತ ಭಗತ್ ಸಿಂಗ್ ಜೀವನದ ಸಮಗ್ರ ಚಿತ್ರಣ ಸೇರಿಸಿದ್ದಾರೆ, ನಾಡಪ್ರಭು ಕೆಂಪೇಗೌಡರ ಬಗ್ಗೆ ಕಥೆಯ ಮೂಲಕ ತಿಳಿಸಿದ್ದಾರೆ, ಮೆಣಸಿನ ರಾಣಿ ಚೆನ್ನಭೈರಾದೇವಿ ಹಾಗೂ ಇತರ ಹೋರಾಟಗಾರರ ಕುರಿತು ಪಠ್ಯದಲ್ಲಿ ಸೇರಿಸಲಾಗಿದೆ, ಕೈಬಿಟ್ಟ ವಚನಗಳನ್ನು ಮತ್ತೆ ಸೇರಿಸಲಾಗಿದೆ. ಈಗ ನಡೆದಿರುವ ಪಠ್ಯ ಪರಿಷ್ಕರಣೆ ಖಂಡಿತ ಭಾರತೀಯತೆಯನ್ನು ಎತ್ತಿ ಹಿಡಿಯುತ್ತಿದೆ. ಇದೇ ಕಮ್ಯುಸಿಸ್ಟರ, ಕಾಂಗ್ರೇಸ್ ಕೃಪಾಪೋಷಿತ ಓ(ಹೋ)ರಾಟಗಾರರ ಹೊಟ್ಟೆ ಉರಿಗೆ ಕಾರಣವಾಗಿದೆ.
ವೈಚಾರಿಕವಾಗಿ ಯಾವಾಗ ಚರ್ಚೆ ಸಾಧ್ಯವಾಗಲಿಲ್ಲವೋ ಆಗ ವಿರೋಧಿಗಳು ಜಾತಿವಾದವನ್ನು ಎಳೆತಂದರು. ಪಠ್ಯಪುಸ್ತಕದಲ್ಲಿ ಬ್ರಾಹ್ಮಣ್ಯ ಹೆಚ್ಚಾಗಿದೆ ಎಂದು ಊಳಿಟ್ಟರು. ಭಗತ್ ಸಿಂಗ್ ಅವರನ್ನು ಕೈಬಿಟ್ಟಿದ್ದಾರೆ, ಕುವೆಂಪು ಬಗ್ಗೆ ಬರೆದಿರುವ ಸಾಲುಗಳು ಸರಿಯಿಲ್ಲ ಎಂಬತಹ ಸುಳ್ಳುಗಳನ್ನು ಹರಡಲು ಪ್ರಾರಂಭಿಸಿದರು. ರಾಮಚಂದ್ರಪ್ಪನವರ ಸಮಿತಿಯ ಸದಸ್ಯ ಆಂಗ್ಲ ಪತ್ರಿಕೆಯಲ್ಲಿ ವಿಜ್ಞಾನದ ಪಠ್ಯದಲ್ಲಿ ನಡೆದಿರುವ ಪರಿಷ್ಕರಣೆ ಬಗ್ಗೆ ಅಸಮಾಧಾನವಿದೆ ಎಂದು ಬರೆದರು. ಸ್ವಯಂಘೋಷಿತ ಶಿಕ್ಷಣ ತಜ್ಞರೊಬ್ಬರು ವಿಜ್ಞಾನ ಪಠ್ಯದ ಪರಿಷ್ಕರಣೆ ಬಗ್ಗೆ ಮನಸ್ಸಿಗೆ ಬಂದಂತೆ ಬರೆದರು. ಅಸಲಿಗೆ ರೋಹಿತ್ ಅವರ ಸಮಿತಿ ವಿಜ್ಞಾನ ಪಠ್ಯವನ್ನು ಮುಟ್ಟೇ ಇಲ್ಲ. ವಿರೋಧಿಸುವವರ ಬೌದ್ಧಿಕ ದಿವಾಳಿತನಕ್ಕೆ ಇದೊಂದು ಸಾಕ್ಷಿ! ಈ ವಾದವೆಲ್ಲ ನೆಲಕಚ್ಚಿದ ನಂತರ ಶುರುವಾದದ್ದೇ ಅನುಮತಿ ವಾಪ್ಸಿ ಪರ್ವ. ತಾವು ಬರೆದಿರುವ ಗದ್ಯವನ್ನೋ ಪದ್ಯವನ್ನೋ ಪಠ್ಯದಲ್ಲಿ ಬಳಸಿಕೊಳ್ಳುವ ಅನಿಮತಿಯನ್ನು ಹಿಂಪಡೆಯುತ್ತಿದ್ದೇವೆ ಎಂದು ಸರ್ಕಾರಕ್ಕೆ ಪತ್ರವನ್ನು ಬರೆಯಲು ಶುರು ಮಾಡಿದರು. ನೆಹರು ರಾಜಿನಾಮೆ ಬೆದರಿಕೆಯಂತೆ ಇದೂ ಕೂಡ! 
![]()  | 
| ಬರಗೂರು ಸಮಿತಿಯ ಸದಸ್ಯರ ಅರ್ಥವಿಲ್ಲದ ಲೇಖನ | 
ಚಿನ್ನಸ್ವಾಮಿ ಎನ್ನುವವರು ಫೇಸ್ಬುಕ್ ಅಲ್ಲಿ ತಾವು ಅನುಮತಿ ಪಡೆದಿರುವ ಕವಿತೆಯ ಚಿತ್ರವನ್ನು ಹಾಕಿಕೊಂಡಿದ್ದಾರೆ. ಅದು ಕವಿತೆ ಹೌದೋ ಅಲ್ಲವೋ ಅನ್ನೋದು ಬೇರೆ ಚರ್ಚೆ ಆದರೆ, ಅವರ ಬರಹದಲ್ಲಿ 'ಕೃಷ್ಣನ ರಸಿಕತೆಯೂ ಬೇಕು' ಎಂಬ ಸಾಲನ್ನು ಗಮನಿಸಿ. ಆ ವ್ಯಕ್ತಿಗೆ ಗೀತಾಚಾರ್ಯನಾದ ಕೃಷ್ಣನ ವಿಶ್ವಗುರುತ್ವ ಕಾಣಲಿಲ್ಲ, ಕಂಸನನ್ನು ಕೊಂದ ಮೇಲೆ ಅಧಿಕಾರವನ್ನು ತನ್ನ ತಂದೆಗೆ ಕೊಟ್ಟು ಧರ್ಮಸಂಸ್ಥಾಪನೆಗೆ ನಿಂತ ತ್ಯಾಗ ಕಾಣಲಿಲ್ಲ, ಅಂತಸ್ತಿನ ಭೇದ ಮರೆತು ಕುಚೇಲನೊಂದಿಗೆ ವರ್ತಿಸಿದ ಸರಳತೆ ಕಾಣಲಿಲ್ಲ, ರಾಧೆಯೊಂದಿಗಿನ ಪ್ರೇಮ ಕಾಣಲಿಲ್ಲ ಬದಲಾಗಿ, ಇವರಿಗೆ ಕಂಡದ್ದು ರಸಿಕತೆಯೇ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎಂದು ಇಂತಹವರನ್ನು ನೋಡಿಯೇ ಹೇಳಿರಬೇಕು.
![]()  | 
| ಸ್ವಯಂಘೋಷಿತ ಕವಿತೆ | 
ಇಷ್ಟೆಲ್ಲಾ ವಾದ ವಿವಾದ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರವಾದದ ಮಾತಾಡುವವರು, ನುರಿತ ಶಿಕ್ಷಣ ತಜ್ಞರು, ಭಾಜಾಪಾ ಪಕ್ಷದ ನೇತಾರಾರು ರೋಹಿತ್ ಮತ್ತವರ ಸಮಿತಿ ಪರವಾಗಿ ಗಟ್ಟಿಯಾದ ದನಿ ಎತ್ತುತ್ತಿಲ್ಲ ಎಂಬುದೇ ಬೇಸರದ ಸಂಗತಿ. ರೋಹಿತ್ ಅವರನ್ನು ಪದವಿ ಪೂರ್ವ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಸದಸ್ಯರನ್ನಾಗಿ ಮಾಡಿ ಪರೋಕ್ಷವಾಗಿ ಬೆಂಬಲ ಸೂಚಿಸಿದರೂ ನೇರವಾದ, ಸ್ಪಷ್ಟವಾದ ದನಿ ಎತ್ತುವ ಅಗತ್ಯ ಖಂಡಿತ ಇದೆ. ಈ ಎಡಚರರು ಗೊಂದಲ ಸೃಷ್ಟಿ ಮಾಡುವುದರಲ್ಲಿ ನಿಸ್ಸೀಮರು. ತಮ್ಮ ಪತ್ರಗಳಿಂದ ಹಾಗೂ ಜೋರಾದ ದನಿಯಿಂದ ಮಕ್ಕಳು ಹಾಗೂ ಪೋಷಕರ ಮನಸ್ಸಿನಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಪರಿಷ್ಕರಣೆ ಕುರಿತ ತಮ್ಮ ನಿಲುವನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದು.
ಸಿದ್ಧಾಂತಗಳನ್ನು ಹೇಳಲೆಂದೇ ಬಳಕೆಯಾಗುತ್ತಿದ್ದ ಪಠ್ಯಪುಸ್ತಕದಲ್ಲಿ ಹೊಸತನದ ಅವಶ್ಯಕತೆ ಖಂಡಿತ ಇದೆ. ಚುನಾವಣೆ ಸಮೀಪಿಸುತ್ತಿದ್ದಂತೆ ನಮ್ಮಲ್ಲಿ ವಿವಾದಗಳು ಹುಟ್ಟುವುದು ಸಾಮಾನ್ಯವಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯೂ ರಾಜಕೀಯದ ಕೆಸರಾಟಕ್ಕೆ ಬಲಿಯಾಗದೆ ನೈಜತೆ, ಕ್ರಿಯಾಶೀಲತೆ ಹೆಚ್ಚಿಸುವ ಸಂಜೀವಿನಿಯಾಗಲಿ. ಈಗ ನಡೆದಿರುವುದು ಪರಿಷ್ಕರಣೆ ಮಾತ್ರ ಅದು ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ ಮಾತ್ರ. ನನಗಿರುವ ಪ್ರಶ್ನೆ ಪಠ್ಯ ಪರಿಷ್ಕರಣೆ ಇಷ್ಟೇ ಸಾಕೆ...? 


ಇಲ್ಲ ಇನ್ನ ದೊಡ್ಡ ಮಟ್ಟದಲ್ಲಿ ಎಲ್ಲಾ ವಿಷಯಗಳಲ್ಲೂ ಪರಿಷ್ಕರಣೆ ನಡೆಯಬೇಕು
ReplyDeleteಹಾಗೂ ನೈಜ ಇತಿಹಾಸ ಜನರಿಗೆ ತಿಳಿಯಬೇಕು