ಗೆದ್ದಲು ತನ್ನ ವಾಸಕ್ಕೆಂದು ಕಷ್ಟಪಟ್ಟು ಮಣ್ಣು ಸಂಗ್ರಹಿಸಿ ಹುತ್ತವನ್ನು ಕಟ್ಟುತ್ತದೆ. ಆದರೆ, ಕಾಲಕ್ರಮೇಣ ಹುತ್ತದಲ್ಲಿ ವಾಸಿಸುವುದು ಹಾಗೂ ಪಾರುಪತ್ಯ ನಡೆಸುವುದು ಮಾತ್ರ ಹಾವು. ಮುಂದೊಂದು ದಿನ ಆ ಹಾವನ್ನು ಆಗಸದಲ್ಲಿ ಹಾರಾಡುವ ಗರುಡ ಕೊಲ್ಲುತ್ತದೆ. ಮಾಡಿದ ಕರ್ಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ಜಗದ ನಿಯಮ. ಈ ನಿಯಮವನ್ನು ನಾನು ಒಪ್ಪುವುದಿಲ್ಲ, ಈ ನಿಯಮದಿಂದ ನನಗೆ ವಿನಾಯಿತಿ ಬೇಕು, ಈ ನಿಯಮ ನನಗೆ ಅನ್ವಯಿಸುವುದಿಲ್ಲ ಎಂದು ಹಾವು ಕೂಗಾಡಿದರೆ ಗರುಡವಾಗಲಿ, ಪ್ರಕೃತಿಯಾಗಲಿ ಕೇಳುವುದುಂಟೆ? ದೇಶದಲ್ಲಿ ಕಾಂಗ್ರೇಸಿನ ಪರಿಸ್ಥಿತಿ ಕೂಡ ಹಾವಿನಂತೆ ಆಗಿದೆ. ಸ್ವಾತಂತ್ರ್ಯ ಹೋರಾಟಗಾರರು ಕಷ್ಟಪಟ್ಟು ದುಡಿದ ಹಣದಲ್ಲಿ ಕಟ್ಟಿದ ಸಂಸ್ಥೆಯನ್ನು ಕಾಂಗ್ರೇಸಿನ ಅಧಿನಾಯಕಿ, ನೆಹರು ವಂಶಸ್ಥರು ಸ್ವಾಧೀನಪಡಿಸಿಕೊಂಡರು. ಈಗ ಕಾನೂನು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀಯ ಕಾಂಗ್ರೇಸ್ ಪಕ್ಷ ಒಂದು ಪರಿವಾರದ ಆಳಿನ ರೀತಿ ಪ್ರತಿಭಟನೆ ಮಾಡುತ್ತಿದೆ. ಇದು ಗುಲಾಮಿ ಮಾನಸೀಕತೆ ಅಲ್ಲದೇ ಮತ್ತೇನು?
ಹೌದು, ಇದು ನ್ಯಾಷನಲ್ ಹೆರಾಲ್ಡ್ ಪ್ರಕರಣವೇ. ನ್ಯಾಷನಲ್ ಹೆರಾಲ್ಡ್ ಎಂಬುದು ನೆಹರೂ ಹಾಗೂ ಇತರ 5000 ಸ್ವಾತಂತ್ರ್ಯ ಹೋರಾಟಗಾರರು 1938 ರಲ್ಲಿ ಸ್ಥಾಪಿಸಿದ ಕಾಂಗ್ರೇಸ್ ಸಂಘಟನೆಯ ಮುಖವಾಣಿ. ಅಸೋಸಿಯೇಟ್ ಜರ್ನಲ್ಸ್ ಲಿಮಿಟೆಡ್ ಎಂಬ ಸಂಸ್ಥೆ ಈ ಪತ್ರಿಕೆಯನ್ನು ನಡೆಸುತ್ತಿತ್ತು. ಈ ಸಂಸ್ಥೆ ಆಂಗ್ಲದಲ್ಲಿ ನ್ಯಾಷನಲ್ ಹೆರಾಲ್ಡ್, ನವಜೀವನ್ ಎಂದು ಹಿಂದಿಯಲ್ಲಿ ಹಾಗೂ ಕ್ವಾಮಿ ಆವಾಜ್ ಎಂಬ ಉರ್ದು ಪತ್ರಿಕೆಗಳನ್ನು ಪ್ರಕಟಿಸುತ್ತಿತ್ತು. ಆದರೆ, ಈ ಸಂಸ್ಥೆ ಒಬ್ಬ ವ್ಯಕ್ತಿಯ ಮಾಲಿಕತ್ವಕ್ಕೆ ಒಳಪಟ್ಟಿರಲಿಲ್ಲ ಬದಲಾಗಿ ಸಾರ್ವಜನಿಕ ಸಂಸ್ಥೆಯಾಗಿತ್ತು. 1942 ರಲ್ಲಿ 'ಭಾರತ ಬಿಟ್ಟು ತೊಲಗಿ' ಆಂದೋಲನದ ಕಾರಣ ನಿಷೇಧಕ್ಕೊಳಾಗಾದ ಪತ್ರಿಕೆ 1945 ರಲ್ಲಿ ಮತ್ತೆ ಕಾರ್ಯರೂಪಕ್ಕೆ ಬರುತ್ತದೆ. ಸ್ವಾತಂತ್ರ್ಯ ನಂತರವೂ ಸಣ್ಣ ಮಟ್ಟದಲ್ಲಿ ಪತ್ರಿಕೆಯನ್ನು ನಡೆಸಿಕೊಂಡು ಬಂದ ಈ ಸಂಸ್ಥೆಗೆ ಕಾಂಗ್ರೇಸ್ ಸರ್ಕಾರ ದೆಹಲಿಯ ಮಧ್ಯಭಾಗದಲ್ಲಿ ಕಛೇರಿಗಾಗಿ ಅರ್ಧ ಎಕರೆ ಜಾಗವನ್ನು ಮಂಜೂರು ಮಾಡಿತು. ದೆಹಲಿ ಅಷ್ಟೇ ಅಲ್ಲದೆ ಮುಂಬೈ, ಕೊಲ್ಕೊತ್ತಾ ಹಾಗೂ ಇತರ ಕಡೆ ಪತ್ರಿಕೆ ನಡೆಸುವ ಸಲುವಾಗಿ ಆಸ್ತಿಗಳನ್ನು ಮಂಜೂರು ಮಾಡಿತು. ಈ ಸಂಸ್ಥೆಗೆ 2002 ರಿಂದ ಮೊತಿಲಾಲ್ ವೋರಾ, 2010 ರಿಂದ ಆಸ್ಕರ್ ಫರ್ನಾಂಡಿಸ್, ಸಾಂ ಪಿತ್ರೋಡಾ, ಸುಮನ್ ಡುಬೆ ಹಾಗೂ 2015 ರಿಂದ ದೀಪೆಂದರ್ ಸಿಂಗ್ ಮತ್ತು ದೀಪಕ್ ಕುಮಾರ್ ಬಬಾರಿಯಾ ನಿರ್ದೇಶಕರಾದರು. ಮೊತಿಲಾಲ್ ವೋರಾ ನಿಧನದ ನಂತರ ಅವರ ಜಾಗಕ್ಕೆ ನೇಮಕವಾದವರೇ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ. ಇಲ್ಲಿರುವ ಇಷ್ಟೂ ಜನ ಕಾಂಗ್ರೇಸ್ ಪಕ್ಷಕ್ಕೆ ಸಂಬಂಧಪಟ್ಟವರೇ.
![]() |
| The Accused |
ಕಾಮನ್ ವೆಲ್ತ್ ಗೇಮ್ಸ್, 2ಜಿ ಹಗರಣ ಸೇರಿದಂತೆ ಭ್ರಷ್ಟಾಚಾರದ ಕೂಪವಾಗಿದ್ದ ಯೂಪಿಎ-2 ಸರ್ಕಾರದ ಅವಧಿಯಲ್ಲಿ ಇಂತಹದೊಂದು ಹಗರಣ ನಡೆದದ್ದು ಅನೇಕರಿಗೆ ಗೊತ್ತು ಆಗಲಿಲ್ಲ. 1057 ಜನ ಮಾಲಿಕತ್ವದ, 5000 ಕೋಟಿ ಮೌಲ್ಯದ ಆಸ್ತಿಯನ್ನು ಕಾಂಗ್ರೇಸ್ ಪಕ್ಷಕ್ಕೆ ದೇಣಿಗೆ ಎಂದು ಕೊಟ್ಟ ಸಾರ್ವಜನಿಕರ ಹಣದಲ್ಲಿ ಸೋನಿಯಾ, ರಾಹುಲ್ ಮತ್ತು ಇತರರು 90 ಕೋಟಿ ರೂ ಕೊಟ್ಟು ಖರೀದಿ ಮಾಡಿದರು. ಆಗ 2012 ರಲ್ಲಿ ಅಸೋಸಿಯೇಟ್ ಜರ್ನಲ್ ಸಂಸ್ಥೆಯನ್ನು ಸ್ವಾಧೀನ ಪಡಿಸಿಕೊಂಡ ಪ್ರಕ್ರಿಯೆ ಅಕ್ರಮ ಎಂದು ಸುಬ್ರಮಣ್ಯಂ ಸ್ವಾಮೀ ಕೋರ್ಟಿನ ಮೆಟ್ಟಿಲೇರಿದರು. 2015 ರಲ್ಲಿ ನಡೆದ ವಿಚಾರಣೆಯಲ್ಲಿ ಸೋನಿಯಾ ಮತ್ತು ರಾಹುಲ್ ಗೆ ಕೋರ್ಟು ಜಾಮೀನು ನೀಡುತ್ತದೆ. ನೆನಪಿಡಿ, ಕಾಂಗ್ರೇಸಿಗರು ಹೇಳುವಂತೆ ಪ್ರರಕಣ ಇನ್ನೂ ಮುಗಿದಿಲ್ಲ. ನಂತರ, ಪ್ರಕರಣವನ್ನು ವಜಾ ಮಾಡುವ ಅರ್ಜಿಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿತು. 2019 ರಲ್ಲಿ 64 ಕೋಟಿ ಮೌಲ್ಯದ ನ್ಯಾಷನಲ್ ಹೆರಾಲ್ಡ್ ಆಸ್ತಿಯನ್ನು ಇ.ಡಿ. ಇಲಾಖೆ ಜಫ್ತಿ ಮಾಡಿದ ನಂತರ ಶುರುವಾಗಿದ್ದು ಮಲ್ಲಿಖಾರ್ಜುನ ಖರ್ಗೆ ರವರ ವಿಚಾರಣೆ. ಮತ್ತೀಗ ಶುರುವಾಗಿರುವುದು ರಾಹುಲ್ ಮತ್ತು ಸೋನಿಯಾ ರವರ ವಿಚಾರಣೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಅಸೋಸಿಯೇಟ್ ಜರ್ನಲ್ ಕೂಡ ಕಾಂಗ್ರೇಸ್ ನದ್ದು, ಯಂಗ್ ಇಂಡಿಯಾ ಸಹ ಸೋನಿಯಾ, ರಾಹುಲ್ ಮತ್ತಿತರ ಕಾಂಗ್ರೇಸ್ ನಾಯಕರಿಗೆ ಸೇರಿದ್ದು ತನ್ಮೂಲಕ ಇದು ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದು ಎಂಬುದು ರಾಜಕೀಯವಾಗಿ ಕಾಂಗ್ರೇಸ್ ಮಾಡುತ್ತಿರುವ ವಾದ. ಇದಕ್ಕಾಗಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ಗುಲಾಮಿ ಮಾನಸಿಕತೆ ಹೊಂದಿರುವ ಕಾಂಗ್ರೇಸ್ ಪಕ್ಷದವರ ದೃಷ್ಟಿಯಲ್ಲಿ ಹಾಗೂ ಭಾವನಾತ್ಮಕವಾಗಿ ಸೋನಿಯಾ ಕುಟುಂಬ ಹಾಗೂ ಕಾಂಗ್ರೇಸ್ ಪಕ್ಷ ಒಂದೇ ಇರಬಹುದು. ಆದರೆ, ಕಾನೂನು, ವ್ಯವಹಾರ ಮತ್ತು ಸ್ವಾಭಿಮಾನದ ದೃಷ್ಟಿಯಲ್ಲಿ ಕುಟುಂಬ ಮತ್ತು ಪಕ್ಷ ಅಥವಾ ಸಂಘಟನೆ ಬೇರೆ ಬೇರೆ.
ತಾನು ದಲಿತರ ಪರ ಎಂದು ಬಿಂಬಿಸಿಕೊಳ್ಳುವ ಕಾಂಗ್ರೇಸ್ ಈ ಪ್ರಕರಣದಲ್ಲಿ ಯಾವ ಪಾಲೂ ಹೊಂದಿರದಿದ್ದ, ಹೆಸರಿಗಷ್ಟೇ ನಿರ್ದೇಶಕರಾಗಿರುವ ಕರ್ನಾಟಕದ ದಲಿತ ನಾಯಕ ಖರ್ಗೆ ಅವರನ್ನು ಸಿಲುಕಿಸಿದೆ. ಖರ್ಗೆ ಅವರ ವಿಚಾರಣೆ ನಡೆದದ್ದು ಸುದ್ದಿಯಾಗಲೇ ಇಲ್ಲ. ಆದರೆ, ಸೋನಿಯಾರನ್ನು ವಿಚಾರಣೆಗೆ ಕರೆದಾಗ ಕರೋನಾ ಬರುತ್ತದೆ, ರಾಹುಲ್ ರನ್ನು ವಿಚಾರಣೆಗೆ ಕರೆದಾಗ ಎಲ್ಲಡೆ ಪ್ರತಿಭಟನೆ ವ್ಯಕ್ತವಾಗುತ್ತದೆ. ಹಾಗಿದ್ದಲ್ಲಿ ದಲಿತ ನಾಯಕರಿಗೆ ಇವರು ಕೊಡುವ ಬೆಲೆ ಇಷ್ಟೆಯೇ? "I'm not Savarkar. I'm Rahul Gandhi" ಎಂದೆಲ್ಲಾ ಪ್ಲಕಾರ್ಡ್ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಸಾವರ್ಕರ್ ಆಗುವ ಯೋಗ್ಯತೆ ಇಲ್ಲ ಅನ್ನುವುದು ಬೇರೆ ಮಾತು. ಆದರೆ ಎಲ್ಲ ಬಿಟ್ಟು ರಾಹುಲ್ ಗಾಂಧಿ! ನೆಹರೂ ಕುಟುಂಬವೆಂದರೆ ಗಾಂಧಿ ಕುಟುಂಬ ಎಂದು ಬಿಂಬಿಸುವುದರಿಂದ ಹಿಡಿದು ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಕ ನಡೆದಿರುವುದು ಬರಿ ಹಗರಣಗಳೇ. ಸ್ವಾತಂತ್ರ್ಯ ಹೋರಾಟಗಾರರು ಕೊಟ್ಟ ಹಣವನ್ನೂ ತಮ್ಮ ಸ್ವಂತ ಆಸ್ತಿ ಎಂದು ಭಾವಿಸುವ ಕುಟುಂಬವನ್ನು ಈ ದೇಶದಿಂದ ಓಡಿಸುವ ಕಾಲ ಹತ್ತಿರವಾಗುತ್ತಿದೆ. ಸಾರ್ವಜನಿಕರ ಹಣ, ಆಸ್ತಿ ಎಂದರೆ ನಮ್ಮಪ್ಪನ ಆಸ್ತಿ ಎಂದು ಭಾವಿಸುವವರ ಸಂತತಿ ಇಲ್ಲಿಗೆ ಕೊನೆಯಾಗಬೇಕಿದೆ.
![]() |
| Senseless Poster from Congressmen |
***********************************************************
References:


No comments:
Post a Comment