ಹಾಲ್ಸ್ಟಾಟ್ ಎಂಬುದು ಆಸ್ಟ್ರಿಯಾ ಎಂಬ ಯೂರೋಪ್ ದೇಶದಲ್ಲಿನ ಒಂದು ಸಣ್ಣ ಹಳ್ಳಿ. ಎಲ್ಲ ಹಳ್ಳಿಗಳಲ್ಲೂ ಇರುವಂತೆ ಅಲ್ಲೂ ಒಂದು ಚರ್ಚ್ ಇದೆ; ಸೈಂಟ್ ಮೈಕಲ್ ಚರ್ಚ್. ಊರಿಗೊಂದು ಚರ್ಚ್ ಅನ್ನೋದು ಭಾರತದಲ್ಲೇ ಸಾಮಾನ್ಯ ಸಂಗತಿಯಾಗಿರುವುದರಿಂದ ಯೂರೋಪಿನ ಹಳ್ಳಿಯಲ್ಲಿ ಚರ್ಚ್ ಇರೋದರಲ್ಲಿ ಏನು ವಿಶೇಷವಿಲ್ಲ ಆದರೆ, ಈ ಚರ್ಚಿನ ಪಕ್ಕದಲ್ಲಿ ಒಂದು ಸಣ್ಣ ಕೋಣೆ ಇದೆ. ಅದೇ Hallstatt Charnel - ಅರ್ಥಾತ್ ಹಾಲ್ಸಾಟ್ ಅಲ್ಲಿನ ಬುರುಡೆ ಮನೆ.
![]()  | 
| The Charnel House at Hallstatt; Austria | 
ಈ ಚರ್ಚು ಹಾಗೂ ಬುರುಡೆ ಮನೆ ಸುಮಾರು 12ನೇ ಶತಮಾನದಲ್ಲಿ ನಿರ್ಮಾಣವದದ್ದು. ಇಲ್ಲಿ ಸುಮಾರು 1200 ತಲೆಬುರುಡೆಗಳಿದ್ದು ಅದರಲ್ಲಿ 610 ಬುರುಡೆಗಳನ್ನು ಅವರವರ ಮನೆತನದ ಹೆಸರಿನ ಪ್ರಕಾರ ಜೋಡಿಸಿದ್ದಾರೆ. ವಿಚಿತ್ರ ಅನ್ನಿಸಿತು. ಅಸಲಿ ವಿಚಾರ ಇಷ್ಟು; ಚರ್ಚಿನ ಪಕ್ಕದಲ್ಲಿದ್ದ ಸ್ಮಶಾಣದ ಜಾಗ ತುಂಬಾ ಚಿಕ್ಕದಾಗಿತ್ತು. ಹಾಗಾಗಿ ಹೆಣಗಳನ್ನು ಹೂತ 10-20 ವರ್ಷಗಳ ನಂತರ ಸಮಾಧಿಯನ್ನು ತೆಗೆದು ಅಲ್ಲಿದ್ದ ಪಳೆಯುಳಿಕೆಗಳನ್ನು ಹೊರತೆಗೆದಾಗ ಹೊಸ ಹೆಣಗಳನ್ನು ಹೂಳಲು ಜಾಗವಾಗುತ್ತಿತ್ತು. ಆದರೆ ತೆಗೆದ ಪಳೆಯುಳಿಕೆಗಳನ್ನು ಏನು ಮಾಡುವುದು? ಅದನ್ನು ತೊಳೆದು, ಮೂಳೆಗಳ ಮೇಲೆ ಕೊಳೆತ ಕರೆಗಳು ಮಾಯವಾಗುವ ತನಕ ಹಗಲು ರಾತ್ರಿ ಒಣಗಿಸುತ್ತಿದ್ದರು. ನಂತರ, ಆ ಬುರುಡೆಗಳಿಗೆ ರಾಸಾಯನಿಕಗಳನ್ನು ಹಚ್ಚಿ, ಅದರ ಮೇಲೆ ಮೃತಪಟ್ಟಿರುವವರ ಹೆಸರು ಹಾಗೂ ಮರಣ ಹೊಂದಿರುವ ದಿನಾಂಕವನ್ನು ಬರೆದು ಈ ಮನೆಯಲ್ಲಿ ಜೋಡಿಸುತ್ತಿದ್ದರು. ಇಲ್ಲಿ ಕಡೆಯ ಬುರುಡೆ ಇರಿಸಿದ್ದು 1995 ರಲ್ಲಿ.
ಮನೆಯ ಗೋಡೆಯ ಮಧ್ಯದಲ್ಲಿ ಏಸುವನ್ನು ಶಿಲುಬೆ ಏರಿಸಿರುವ ಮೂರ್ತಿಯೊಂದಿದೆ. ಅದರ ಮುಂದೆಯಲ್ಲಿ 1983ರಲ್ಲಿ ಮೃತಪಟ್ಟ ಒರ್ವ ಮಹಿಳೆಯ ಬುರುಡೆ ಇಟ್ಟಿದ್ದು ಆಕೆಯ ಒಂದು ಹಲ್ಲು ಚಿನ್ನದ್ದಾಗಿತ್ತು. ಅದು ಇಂದಿಗೂ ಲಭ್ಯವಿದೆ. ಅವಳ ಬುರುಡೆ ಇಲ್ಲಿ ಇರಿಸಬೇಕೆಂಬುದು ಆಕೆಯ ಕಡೆಯ ಇಚ್ಛೆಯಾಗಿತ್ತು ಎಂದ ಹೇಳುತ್ತಾರೆ.
ಹಾಲ್ಸ್ಟಾಟ್ ಎನ್ನುವ ಹಳ್ಳಿ ಪ್ರಾಕೃತಿಕವಾಗಿ ಅದ್ಭುತ ಹೌದು ಅದರ ಹೊರತು ಬುರುಡೆಯ ಮನೆ ವಿಶೇಷ ಅನ್ನಿಸಿತು. ಹಾಲ್ಸ್ಟಾಟ್ ಹಾಗೂ ಸಾಲ್ಸ್ಬರ್ಗ್ ಊರುಗಳಲ್ಲಿ ಉಪ್ಪಿನ ಗಣಿಗಳಿವೆ. ಅದರ ಬಗ್ಗೆ ಮುಂದೆ ಬರೆಯುತ್ತೇನೆ.

No comments:
Post a Comment