March 4, 2022

ಭಾರತ ಎಂದಿಗೂ ಕಷ್ಟಕಾಲದ ಗೆಳೆಯ

ರಷ್ಯಾ ಉಕ್ರೇನ್ ನಡುವಿನ ಯುದ್ಧದ ಕಾರಣ ಸಧ್ಯಕ್ಕೆ ಭಾರತಕ್ಕೆ ಒದಗಿರುವ ಕಷ್ಟವೆಂದರೇ ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದು. ಯುದ್ಧ ಪ್ರಾರಂಭವಾಗುವುದಕ್ಕೆ ಮುನ್ನ ಉಕ್ರೇನ್ನಲ್ಲಿ ಭಾರತದ ಇಷ್ಟೊಂದು ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿದ್ದಾರೆ ಎನ್ನುವುದು ನಮ್ಮಲ್ಲಿ ಬಹುತೇಕರಿಗೆ ತಿಳಿದೇ ಇರಲಿಲ್ಲ. ಪ್ರಧಾನಿ ಮೋದಿ ಮತ್ತವರ ತಂಡ ಭಾರತೀಯರನ್ನು ಯುದ್ಧ ವಲಯದಿಂದ ತ್ವರಿತವಾಗಿ ಸ್ಥಳಾಂತರಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಉಕ್ರೇನ್ ನೆರೆರಾಷ್ಟ್ರಗಳಾದ ರೋಮಾನಿಯಾಕ್ಕೆ ನಾಗರೀಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸ್ಲೋವೇನಿಯಾಕ್ಕೆ ಕಾನೂನು ಮಂತ್ರಿ ಕಿರಣ್ ರಿಜಿಜು, ಹಂಗೇರಿಗೆ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್, ಪೋಲಾಂಡಿಗೆ ರಾಜ್ಯ ಮಂತ್ರಿ ಜನರಲ್ ವಿ.ಕೆ. ಸಿಂಗ್ ರವರನ್ನು ಕಳಿಸಿ 'ಆಪರೇಷನ್ ಗಂಗಾ' ಮೂಲಕ ಸ್ಥಳಾಂತರಿಸುವ ಕಾರ್ಯಕ್ಕೆ ವೇಗ ನೀಡಿದ್ದಾರೆ.

Operation Ganga in a Nutshell

ಮಾರ್ಚ್ ಮೂರನೇ ತಾರೀಖಿನ ಹೊತ್ತಿಗೆ ಸುಮಾರು 17 ಸಾವಿರ ಭಾರತೀಯರನ್ನು ಉಕ್ರೇನಿನಿಂದ ಸ್ಥಳಾಂತರಿಸಿದ್ದಾರೆ. ರಾಜಧಾನಿ ಕೀವ್ ನಗರದಿಂದ ಎಲ್ಲಾ ಭಾರತೀಯರನ್ನು ಸ್ಥಳಾಂತರಿಸಿದ ಮೇಲೆಯೇ ರಾಯಭಾರ ಕಚೇರಿಯನ್ನು ಮುಚ್ಚಿದ್ದಾರೆ. ಪಿಯೂಷ್ ಗೋಯಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅಂತಹ ಕ್ಯಾಬಿನೆಟ್ ಮಂತ್ರಿಗಳು ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಬರಮಾಡಿಕೊಂಡರೆ, ಪ್ರಧಾನಿಯವರು ಸಂಪೂರ್ಣ ಈ ಕಾರ್ಯವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಕಳೆದ ತಿಂಗಳ 20 ತಾರೀಖಿನಿಂದಲೇ ಭಾರತ ರಾಯಭಾರ ಕಚೇರಿ ಅಲ್ಲಿನ ಪರಿಸ್ಥಿತಿ ಶೀಘ್ರ ಹದಗೆಡಬಹುದು ಎಂಬ ಎಚ್ಚರಿಕೆ ನೀಡುತ್ತಿತ್ತು. ಏರ್ ಸ್ಪೇಸ್ ಮಿತಿಯನ್ನು ಹೆಚ್ಚಿಸಿ ಅದರ ಆಡಿಯಲ್ಲಿ ವಿಶೇಷ ವಿಮಾನಗಳನ್ನು ಸಹ ಪ್ರಾರಂಭಿಸಲಾಯಿತು. ಫೆಬ್ರವರಿ 20 ರಿಂದ 23ರ ನಡುವೆ ಮೂರು ವಿಮಾನಗಳು ಮತ್ತು ಯುದ್ಧ ಪ್ರಾರಂಭವಾಗುವ ಹಿಂದಿನ ದಿನದವರೆಗೂ ಇದೇ ರೀತಿ ವಿಮಾನಗಳು ಭಾರತೀಯರನ್ನು ಹೊತ್ತು ತಂದವು. ಆ ದಿನದ ತನಕ ಸುಮಾರು 4000 ಭಾರತೀಯರು ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿದ್ದರು. ಖಾರ್ಕೀವ್ ನಿಂದ ಪೋಲಾಂಡ್ ವರೆಗೆ ಸುಮಾರು 1400 ಕಿಲೋಮೀಟರ್ ಇದೆ ಆದರೆ, ರಷ್ಯಾಕ್ಕೆ ಕೇವಲ 20 ಕಿಲೋಮೀಟರ್. ಇದರ ಉಪಯೋಗ ಪಡೆದುಕೊಳ್ಳಲು ಪ್ರಧಾನಿ ಮೋದಿ ರಷ್ಯಾಧ್ಯಕ್ಷ ಪೂತಿನ್ ಜೊತೆ ಮಾತಾಡಿದ್ದಾರೆ. ರಷ್ಯಾ ಕೂಡ ಅದಕ್ಕೆ ಸ್ಪಂದಿಸಿ, ಭಾರತೀಯರನ್ನು ಕರೆದುಕೊಂಡು ಬರಲು ತಾನು 130 ಬಸ್ಗಳನ್ನು ಕಳಿಸುವುದಾಗಿ ತಿಳಿಸಿದೆ. ರಾಯಭಾರ ಕಚೇರಿ ಇಲ್ಲವೆಂಬ ಕಾರಣ ತನ್ನ ನಾಗರೀಕರನ್ನು ಕರೆದುಕೊಂಡು ಬರಲು ನೇಪಾಳವೂ ಸಹ ಭಾರತವನ್ನು ಕೇಳಿಕೊಂಡಿದೆ. ಇದು ಮೋದಿಯವರ ವಿದೇಶಾಂಗ ನೀತಿಗೆ ಹಿಡಿದ ಕೈಗನ್ನಡಿ.

ಭಾರತಕ್ಕೆ ಇದೇನು ಮೊದಲಲ್ಲ. ಇಂತಹ ಕಷ್ಟ ಕಾಲದಲ್ಲಿ ಹಿಂದಿನಿಂದಲೂ ಭಾರತ ಮೂಂಚೂಣಿಯಲ್ಲಿ ನಿಂತು ತನ್ನ ನಾಗರೀಕರ ಸುರಕ್ಷತೆಯನ್ನು ಕಾಪಾಡಿಕೊಂಡಿದೆ. 1990-91ರ ಗಲ್ಫ್ ಯುದ್ಧದ ಸಮಯದಲ್ಲಿ ಭಾರತವು ಕುವೈತ್‌ನಿಂದ 1,70,000 ಜನರನ್ನು ಸ್ಥಳಾಂತರಿಸಿತು. ಏರ್ ಇಂಡಿಯಾ ಆ ಸಮಯದಲ್ಲಿ ಎರಡು ತಿಂಗಳಲ್ಲಿ ಸುಮಾರು 500 ವಿಮಾನಗಳ ಮೂಲಕ ಈ ಮಹತ್ಕಾರ್ಯವನ್ನು ಸಾಧಿಸಿತು. ಇದು ಇತಿಹಾಸದಲ್ಲಿ ವಿಮಾನದ ಮೂಲಕ ನಡೆದ ಅತೀ ದೊಡ್ಡ ಸ್ಥಳಾಂತರ ಕಾರ್ಯವಾಗಿದೆ. 2006 ರಲ್ಲಿ ಲೆಬನಾನ್ ಯುದ್ಧದ ಸಮಯದಲ್ಲಿ ಆಪರೇಷನ್ ಸುಕೂನ್ ಮೂಲಕ 1764 ಭಾರತೀಯರನ್ನು ಸೇರಿದಂತೆ 112 ಶ್ರೀಲಂಕಾ, 64 ನೇಪಾಳ ಹಾಗೂ 07 ಲೆಬನಾನ್ ದೇಶಗಳ ನಾಗರೀಕರನ್ನು ಸಹ ಭಾರತದ ನೌಕದಳ ಸ್ಥಳಾಂತರಿಸಿತ್ತು. ಹಾಗೆಯೇ 2011 ರಲ್ಲಿ ಭಾರತದ ನೌಕದಳ ಮತ್ತು ವಾಯುದಳ ಜಂಟಿಯಾಗಿ ಒಂದು ತಿಂಗಳಲ್ಲಿ ಸುಮಾರು 15 ಸಾವಿರ ಭಾರತದ ನಾಗರೀಕರನ್ನು ಲಿಬಿಯಾದ ಅಂತರ್ಯುದ್ಧದ ನಡುವೆ ಯಶಸ್ವಿಯಾಗಿ ಸ್ಥಳಾಂತರದ ಕಾರ್ಯಚರಣೆ ನಡೆಸಿತ್ತು. ಆಪರೇಷನ್ ಮೈತ್ರಿ, ನೇಪಾಳದಲ್ಲಿ 2015 ರಲ್ಲಿ ಸಂಭವಿಸಿದ ಭೀಕರ ಭೂಕಂಪ ನೆನಪಿರಬೇಕಲ್ಲ. ಕೇವಲ 15 ನಿಮಿಷದಲ್ಲಿ ಭಾರತ ಸ್ಪಂದಿಸಿತು. ಭಾರತ ಸರ್ಕಾರ ಮತ್ತು ಭೂಸೇನೆ ಸುಮಾರು 5188 ಜನರನ್ನು ಸ್ಥಳಾಂತರಿಸಿತ್ತು. 750 ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರಿಗೆ ಟ್ರಾನ್ಸಿಟ್ ವಿಸಾ ಭಾರತ ನೀಡಿ ಸಹಾಯ ಮಾಡಿತು. 2016 ರಲ್ಲಿ ಬ್ರೂಸೆಲ್ಸ್ ನಲ್ಲಿ ಆತ್ಮಹತ್ಯೆ ಬಾಂಬ್ ದಾಳಿ ನಡೆದಾಗ 242 ಭಾರತೀಯರನ್ನು ಜೆಟ್ ಏರ್ವೇಸ್ ಮೂಲಕ ಸ್ಥಳಾಂತರಿಸಲಾಯ್ತ. 2015 ರ ಯಮೆನ್ ಅಲ್ಲಿ ನಡೆದ ಯುದ್ಧದ ನಡುವೆ 4600ಕ್ಕೂ ಹೆಚ್ಚು ಭಾರತಿಯರನ್ನು ಹಾಗೂ 41 ದೇಶಗಳ 960 ನಾಗರೀಕರನ್ನು ಆಪರೇಷನ್ ರಾಹತ್ ಮೂಲಕ ಸ್ಥಳಾಂತರಿಸಿದ್ದು ನಮ್ಮ ಭಾರತ.

ಇದೆಲ್ಲಾ ಹಳೆಯ ಕಥೆಯಾದರೆ, ಕಳೆದ ಎರಡು ವರ್ಷದಲ್ಲಿ ಭಾರತ ತನ್ನ ದೇಶದವನ್ನಷ್ಟೇ ಅಲ್ಲದೇ ಅನೇಕ ವಿದೇಶಿ ನಾಗರೀಕರನ್ನು ಸುರಕ್ಷಿತವಾಗಿ ಸ್ಥಾಳಾಂತರಿಸಿದೆ. ಇಡೀ ಜಗತ್ತು ಕರೋನಾದ ಎದುರು ಏನು ಮಾಡಲಾಗದೆ ಕಂಗೆಟ್ಟಿದ್ದ ದಿನಗಳು ಅವು. ಆಗ ಭಾರತ ಆಪರೇಷನ್ ಸಮುದ್ರ ಸೇತು ಪ್ರಾರಂಭಿಸಿತು. 2020 ರಲ್ಲಿ 3992 ಜನರನ್ನು ಸುಮಾರು 23 ಸಾವಿರ ಕಿಲೋಮೀಟರ್ ಸಮುದ್ರದ ಪ್ರಯಾಣ ಮೂಲಕ ಭಾರತೀಯರನ್ನು ಕರೆದುಕೊಂಡು ಬರಲಾಯ್ತು. 2021 ರಲ್ಲಿ ಎರಡನೇ ಹಂತದಲ್ಲಿ 09 ನೌಕೆಗಳ ಮೂಲಕ ವಿವಿಧ ದೇಶಗಳಿಂದ ಆಮ್ಲಜನಕ ತುಂಬಿದ ಕ್ರಯೋಜೆನಿಕ್ ಕಂಟೈನರ್‌ಗಳು ಮತ್ತು ಸಂಬಂಧಿತ ವೈದ್ಯಕೀಯ ಉಪಕರಣಗಳನ್ನು ತರಲಾಯ್ತು. ವಂದೇ ಭಾರತ್ ಮಿಷನ್ ಅಡಿಯಲ್ಲಿ 1.83 ಕೋಟಿ ಭಾರತೀಯರನ್ನು ವಿವಿಧ ದೇಶಗಳಿಂದ ಅನೇಕ ಹಂತಗಳಲ್ಲಿ ಕರೆದುಕೊಂಡು ಬರಲಾಯ್ತು. ಅಮೇರಿಕಾ ಕಳೆದ ವರ್ಷ ಅಫ್ಘಾನಿಸ್ತಾನವನ್ನು ಅತಂತ್ರವಾಗಿ ತಾಲಿಬಾನಿಗಳ ವಶಕ್ಕೆಕೊಟ್ಟು ತೆರಳಿತು. ಆಗಸ್ಟ್ 16 ರಿಂದ 21 ರವರೆಗೆ 259 ಭಾರತಿಯರನ್ನು, ಅಫ್ಘನ್ ಹಿಂದುಗಳು, ಸಿಖ್ಖರು ಮತ್ತು ನೇಪಾಳಿಗಳನ್ನು ಸಹ ಭಾರತ ಸುರಕ್ಷಿಸಿತು.

ತಮ್ಮ ಅಧಿಕಾರದ ಮದ ಅಥವಾ ವಿಸ್ತರಣವಾದದ ಸಲುವಾಗಿ ಅನೇಕ ದೇಶಗಳು ಯುದ್ಧಗಳನ್ನು ಮಾಡಿದೆ. ಶಾಂತಿಗೆ ಹೆಸರಾದ ಭಾರತ ತನ್ನ ಸುರಕ್ಷತೆಗಾಗಿ ಮಾತ್ರ ಯುದ್ಧ ಮಾಡಿದೆ. ಇಂತಹ ಸಂದರ್ಭದಲ್ಲಿ ತನ್ನ ಜನರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡೇ ಮುಂದಿನ ನಡೆಯನ್ನು ನಿರ್ಧರಿಸಿದೆ. ಈಗಲೂ ಸಹ ಅಷ್ಟೇ, ಭಾರತ ಉರ್ಕೇನ್ ಅಥವಾ ರಷ್ಯಾ ಪರವಾಗಿ ಮಾತಾಡಲೇ ಇಲ್ಲ. ಮೋದಿ ಪೂತಿನ್ ಜೊತೆಗಿನ ಮಾತುಕತೆಯಲ್ಲೂ ಸಹ ಶಾಂತಿ ಕಾಪಾಡುವಂತೆ ಹೇಳಿ, ತಮ್ಮ ನಾಗರೀಕರ ಸುರಕ್ಷತೆ ಬಗೆಗೆ ಮಾತ್ರ ಮಾತಾಡಿದ್ದಾರೆ. ದುರಾದೃಷ್ಟವಷಾತ್ ಹಾವೇರಿಯ ವಿದ್ಯಾರ್ಥಿಯೋರ್ವನನ್ನು ಕಳೆದುಕೊಂಡಿದ್ದೇವೆ. ಆತನ ಶವವನ್ನು ಭಾರತಕ್ಕೆ ತರುವುದು ಈ ಸಂದರ್ಭದಲ್ಲಿ ಸುಲಭ ಸಾಧ್ಯವಲ್ಲ. ಇಂತಹ ಸಂದರ್ಭದಲ್ಲೂ ಕಾಂಗ್ರೇಸ್, ಕಮ್ಯೂನಿಸ್ಟರು ಮತ್ತು ಇತರ ಸಮಯ ಸಾಧಕರು ಅತ್ಯಂತ ನೀಚರಾಗಿ ನಡೆದುಕೊಂಡಿರುವುದು ನಮ್ಮ ದೌಭಾಗ್ಯ. ಸಿದ್ಧರಾಮಯ್ಯನವರಂತೂ ಉತ್ತರ ಪ್ರದೇಶದ ಚುಣಾವಣೆ ಕಾರಣ ಈ ಸ್ಥಳಾಂತರದ ಪ್ರಕ್ರಿಯೆಗೆ 'ಆಪರೇಷನ್ ಗಂಗಾ' ಎಂಬ ಹೆಸರಿಟ್ಟಿದ್ದಾರೆ ಎಂದು ತುಚ್ಛವಾಗಿ ಟ್ವೀಟ್ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತಕ್ಕೆ ಬಂದ ನಂತರ ನಮ್ಮ ಸರ್ಕಾರದ ತಾಕತ್ತಿನ ಬಗ್ಗೆ ಮಾತಾಡಿದ್ದಾರೆ. ಇನ್ನೂ ಕೆಲವರು ಶಿಕ್ಷಣ ವ್ಯವಸ್ಥೆ ಕುರಿತು ಪ್ರಧಾನಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಇವರದು 2024 ರಲ್ಲಿ ಮೋದಿಯವರನ್ನು ಸೋಲಿಸುವುದಷ್ಟೇ ಗುರಿ. ಇಂತಹ ಹೊಲಸು ಮನಸ್ಥಿತಿಯವರನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಭಾರತಕ್ಕಿದೆ.

Low level thoughts and statements by opposition

ಏನೇ ಹೇಳಿ, ಯುದ್ಧದ ನಡುವೆ ಭಾರತ ಸರ್ಕಾರ ತನ್ನ ಜನರಿಗಾಗಿ ನಡೆಸುತ್ತಿರುವ ಈ ಕಾರ್ಯಾಚರಣೆಗೆ ನಾವು ತಲೆಬಾಗಲೇ ಬೇಕು. ಓಟ್ಟಿನಲ್ಲಿ ಪಾಶ್ಚಾತ್ಯ ದೇಶಗಳ ಉಪಟಳ ನಿಂತು, ಯುದ್ಧವು ಅಂತ್ಯವಾಗಿ, ಜಗತ್ತಿನಲ್ಲಿ ಶಾಂತಿ ನೆಲೆಸಲಿ ಅಂಬುದಷ್ಟೇ ನಮ್ಮ ಪ್ರಾರ್ಥನೆ.
 

***********************************************************

 

1 comment:

  1. ತುಂಬಾ ಚೆನ್ನಾಗಿ ವಿಶ್ಲೇಷಣೆ ನೀಡಿದ್ದೀರ ಅಣ್ಣ

    ReplyDelete