December 28, 2023
ಒಲವಿನ ಆಟ
December 10, 2023
ದೇಶ ಮೊದಲು; ಇದು ಭಾರತದ ವಿದೇಶಾಂಗ ನೀತಿ
ಪ್ರತಿಯೊಂದು ದೇಶಕ್ಕೂ ತನ್ನ ಮಿತ್ರ ರಾಷ್ಟ್ರಗಳಾವುದು, ಶತ್ರುಗಳಾರು, ಯಾವ ದೇಶದೊಡನೆ ಎಷ್ಟರ ಮಟ್ಟಿಗೆ ಸಂಬಂಧವಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ಕಲ್ಪನೆ ಇರುತ್ತದೆ. ಒಂದು ಸಾಲಲ್ಲಿ ಹೇಳುವುದಾದರೆ ರಾಷ್ಟ್ರವೊಂದರ ಸರ್ಕಾರ ಅನ್ಯರಾಷ್ಟ್ರಗಳೊಂದಿಗೆ ವ್ಯವಹರಿಸಲು ಬಳಸುವ ನೀತಿಯೇ ವಿದೇಶಾಂಗ ನೀತಿ. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ವಿದೇಶಾಂಗ ವ್ಯವಹಾರ ನೀತಿ ಬಗ್ಗೆ ಗಮನ ಹರಿಸಿದ್ದು ಅತ್ಯಲ್ಪ. ಒಂದು ವಿಧದಲ್ಲಿ ಹೇಳುವುದಾದರೆ ವಿದೇಶಾಂಗ ನೀತಿ ಎಂಬುದು ನಗಣ್ಯ, ಕೆಲಸಕ್ಕೆ ಬಾರದ ಖಾತೆ ಎನ್ನುವಂತಿತ್ತು. ಆದರೆ 2014 ಮೇಲೆ - ನರೇಂದ್ರ ಮೋದಿ ಪ್ರಧಾನಿಯಾದ ನಂತರ ಈ ವಿಚಾರದಲ್ಲಿ ಆಮೂಲಾಗ್ರವಾದ ಬದಲಾವಣೆ ಬಂದಿದೆ. ದೇಶದ ಅಭಿವೃದ್ಧಿಯ ಉಪಯೋಗಕ್ಕೆ ಬಾರದ ಅಲಿಪ್ತ ನೀತಿಯನ್ನು ತೊರೆದು 'ದೇಶ ಮೊದಲು (ನೇಷನ್ ಫಸ್ಟ್)' ಎಂಬ ನೀತಿಗೆ ಭಾರತ ಇಂದು ಬಲವಾಗಿ ಆತುಕೊಂಡಿದೆ.
![]() |
| Nation First - India's Foreign Policy |
ವಿಶ್ವದ ಎರಡನೇ ಮಹಾಯುದ್ಧ ಮುಗಿದು ಭಾರತ ಸ್ವತಂತ್ರ್ಯಗೊಳ್ಳುವ ಹೊತ್ತಿಗೆ ಜಗತ್ತು ಎರಡು ಹೋಳಾಗಿ; ಅಮೇರಿಕಾ ಹಾಗೂ ರಷ್ಯಾದ ಒಕ್ಕೂಟಗಳ ನಡುವೆ ಶೀತಲ ಸಮರ ಪ್ರಾರಂಭವಾಗಿತ್ತು. ದೂರದ ದ್ವೀಪ ಖಂಡದ ದೇಶಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲಾಂಡ್, ಇಸ್ರೇಲ್, ಜಪಾನ್, ದಕ್ಷಿಣ ಕೊರಿಯಾ, ಪಾಶ್ಚಾತ್ಯ ಯೂರೋಪ್ ದೇಶಗಳು ಕೂಡ ಅಮೇರಿಕಾ ಪರವಾಗಿತ್ತು. ಯೂರೋಪಿನ ಪೂರ್ವ ಭಾಗದ ರಾಷ್ಟ್ರಗಳು, ವಿಯಟ್ನಾಂ, ಉತ್ತರ ಕೊರಿಯಾ ಸೋವಿಯತ್ ಒಕ್ಕೂಟದ ಪರವಾಗಿದ್ದವು. ನೆರೆಯ ಶತ್ರು ರಾಷ್ಟ್ರ ಪಾಕಿಸ್ತಾನ ಅಮೇರಿಕಾ ಜೊತೆಗೂಡಿತ್ತು. ಪ್ರಪಂಚದ ಎಲ್ಲಾ ದೇಶಗಳು ಈ ಎರಡೂ ಜಾಗತಿಕ ಶಕ್ತಿಗಳ ನಡುವೆ ಒಂದನ್ನು ಬೆಂಬಲಿಸುವ ಅನಿವಾರ್ಯ ಒದಗಿತ್ತು. ಆಗ ತಾನೇ ಸ್ವತಂತ್ರ್ಯ ಪಡೆದುಕೊಂಡಿದ್ದ ಭಾರತ ಈ ಅನಿವಾರ್ಯತೆಗೆ ಹೊರತಾಗಿರಲಿಲ್ಲ. ಆದರೆ ನೆಹರೂ ನೇತೃತ್ವದ ಭಾರತ ಮಾತ್ರ ತಾನು ಯಾರೊಂದಿಗೂ ಸೇರುವುದಿಲ್ಲ, ಅಲಿಪ್ತ ನೀತಿ ಅನುಸರಿಸುತ್ತೇನೆಂದು ಚೀನಾ ಹಾಗೂ ಉಳಿದ ಬಡರಾಷ್ಟ್ರಗಳ ನಾಯಕ ಎಂದು ಬಿಂಬಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಯಿತು. ಸೈನಿಕರನ್ನು ಸಾಕುವುದು, ಇತರ ದೇಶಗಳಲ್ಲಿ ಹೂಡಿಕೆ ಮಾಡುವುದು ಯುದ್ಧ ಹಾಗೂ ಇನ್ನಿತರ ಕಷ್ಟದ ಸಂದರ್ಭಗಳಲ್ಲಿ ಬೆಂಬಲಿಸಲಿ ಎಂದು. ಅಲಿಪ್ತವಾಗಿರುತ್ತೇನೆ ಎಂದ ಭಾರತವನ್ನು ಯಾರೂ ಕೇಳಲಿಲ್ಲ. ಒಂದೆಡೆ ಪಾಕಿಸ್ತಾನ ಅಮೇರಿಕಾದ ಸಹಾಯ ಪಡೆಯುತ್ತಿತ್ತು, ಮತ್ತೊಂದೆಡೆ ಚೀನಾ ಅಲಿಪ್ತ ಎಂದುಕೊಂಡೇ ಆಂತರಿಕವಾಗಿ ಗಟ್ಟಿಯಾಗುತ್ತಾ ಮುಂದುವರೆಯಿತು. 15 ವರ್ಷದ ಅಂತರದಲ್ಲಿ ಚೀನಾ ಟಿಬೆಟ್ ಅನ್ನು ಕಬ್ಜಾ ಮಾಡಿಕೊಂಡು, ನಮ್ಮ ಮೇಲೆ ದಾಳಿ ಮಾಡಿ ಸೋಲಿಸಿತು. ಈ ಎಲ್ಲದರ ಕಾರಣ ಭಾರತದ ಆರ್ಥಿಕತೆ ಸಹ ಕುಸಿಯುತ್ತಾ ಸಾಗಿತು.
ನೆಹರೂ ನಂತರ ಶಾಸ್ತ್ರೀಯವರಿಗೆ ಬಹಳ ಸಮಯ ಸಿಗಲಿಲ್ಲ. ಪಾಕಿಸ್ತಾನ ದಾಳಿ ಮಾಡಿತ್ತು. ನಂತರ ಬಂದ ಇಂದಿರಾ ರಷ್ಯಾ ಜೊತೆ ಒಳಒಪ್ಪಂದ ಮಾಡಿಕೊಂಡು ಪಾಕಿಸ್ತಾನವನ್ನು ಒಡೆದು ಬಾಂಗ್ಲಾದೇಶವನ್ನು ಹುಟ್ಟುಹಾಕಿದರು. ಆದರೆ, ದೇಶ ತುರ್ತು ಪರಿಸ್ಥಿತಿಗೆ ಹೋಗಿ ಮತ್ತೆ ವಿದೇಶಾಂಗ ನೀತಿ ಹಳ್ಳ ಹಿಡಿಯಿತು. ಪಿ.ವಿ. ನರಸಿಂಹರಾಯರ ಕಾಲದಲ್ಲಿ 'ಲುಕ್ ಈಸ್ಟ್' ಪಾಲಿಸಿ ತಂದು ನಮ್ಮ ವಿದೇಶಾಂಗ ನೀತಿಯನ್ನು ಸುಧಾರಿಸುವ ಪ್ರಯತ್ನ ಪಟ್ಟರು. ಅಟಲ್ಜೀ ಫೋಖ್ರಾನ್ ಮೂಲಕ ದೇಶದ ಸ್ವಾಭಿಮಾನವನ್ನು ಹೆಚ್ಚಿಸಿದರು. 'ಇಂಡಿಯಾ ಶೈನಿಂಗ್' ಅನ್ನುವಂತಹ ಹಣೆಪಟ್ಟಿ ಕೊಟ್ಟು ಹೋದರು. ನಂತರ ಬಂದ ಕಾಂಗ್ರೇಸ್ಸಿನ ಮನಮೋಹನ್ ಸಿಂಗ್ ಸರ್ಕಾರ ದೇಶವನ್ನು ಹಳ್ಳಹಿಡಿಸಿತು. 2008ರಲ್ಲಿ ಚೀನಾದೊಂದಿಗೆ ಕಾಂಗ್ರೇಸ್ ಪಕ್ಷವಾಗಿ ಗುಪ್ತವಾಗಿ ಒಪ್ಪಂದ ಮಾಡಿಕೊಂಡಿತು. ನಂತರ ದೇಶದಾದ್ಯಂತ ಚೀನಿ ವಸ್ತುಗಳು ಓತಪ್ರೋತವಾಗಿ ಹರಿದು ಬಂತು, ಸಾಲು ಸಾಲು ಹಗರಣಗಳು ಬೆಳಕಿಗೆ ಬಂದವು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಡೆದ ಹಗರಣದ ಕಾರಣ ಭಾರತ ಜಗತ್ತಿನೆದುರಿಗೆ ತಲೆತಗ್ಗಿಸುವಂತಾಯಿತು. 2003ರ 'ಭಾರತ ಹೊಳೆಯುತ್ತಿದೆ' ಎಂಬ ಸ್ಥಿತಿಯಿಂದ 2013 ಹೊತ್ತಿಗೆ ದೇಶವನ್ನು ಪ್ರಪಂಚದ 5ನೇ ಅತ್ಯಂತ ದುರ್ಬಲ ಆರ್ಥಿಕತೆ ಹೊಂದುವಂತೆ ಮಾಡಿದ್ದು ಕಾಂಗ್ರೇಸ್ ಸರ್ಕಾರದ ಸಾಧನೆ.
![]() |
| India has improved a lot all the way since 1947. |
2014 ನಂತರ ಭಾರತದ ಭಾಗ್ಯದ ಬಾಗಿಲು ತೆರೆಯಿತು. ದೇಶದ ಜನತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಿದರು. ಮೋದಿ ಬಂದೊಡನೆ ವಿದೇಶ ಪ್ರವಾಸ ಮಾಡುವುದರ ಜೊತೆಗೆ ಅನೇಕ ವ್ಯಾವಹಾರಿಕ ಒಪ್ಪಂದಗಳನ್ನು ಮಾಡಿಕೊಂಡು ದೇಶ-ದೇಶಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾದರು. 2015 - ಸೀಶೆಲ್ಸ್ ನೊಂದಿಗೆ ಹಿಂದೂ ಮಹಾಸಾಗರ ಒಪ್ಪಂದ, ಸಿಂಗಾಪುರದೊಂದಿಗೆ ನೀತಿ ಆಯೋಗದ ಒಪ್ಪಂದ, ರಷ್ಯಾದ ರೈಲು, ಭೂಗರ್ಭ, ತೈಲ ವಿಭಾಗದೊಂದಿಗೆ ಒಪ್ಪಂದ, ಮಂಗೋಲಿಯಾ ಜೊತೆ ಔಷಧ ಮತ್ತು ಶಿಕ್ಷಣಕ್ಕೆ ಸಂಬಂಧಪಟ್ಟ ಒಪ್ಪಂದ. 2016 - ಸೌದಿಯೊಂದಿಗೆ ಭಯೋತ್ಪಾದನೆ ಕುರಿತು, ಇರಾನ್ ಜೊತೆ ಗಣಿ ಸಹಕಾರ, ಕೀನ್ಯಾದೊಡನೆ ಶಸ್ತ್ರಾಸ್ತ್ರ, ಇಸ್ರೇಲ್ ಜೊತೆ ಬಾಹ್ಯಾಕಾಶ, ಗಲ್ಫ್ ರಾಷ್ಟ್ರಗಳ ಜೊತೆ ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ, ಆಫ್ರಿಕಾ ಜೊತೆ ಕೃಷಿ ಒಪ್ಪಂದ ಮಾಡಿಕೊಂಡರು. ಅಮೇರಿಕಾರದಲ್ಲಿ ಹೌಡಿ ಮೋದಿ, ಇಂಗ್ಲೆಂಡಿನ ವೆಂಬ್ಲಿ, ಒಮನ್ ಪ್ರವಾಸ ನೆನಪಿರಬೇಕಲ್ಲ. ಇಸ್ರೇಲಿಗೆ ಭೇಟಿಕೊಟ್ಟ ಭಾರತದ ಮೊದಲ ಪ್ರಧಾನಿ ಮೋದಿ, 33 ವರ್ಷಗಳ ನಂತರ ಫಿಜಿಗೆ, 17 ವರ್ಷಗಳ ನಂತರ ನೇಪಾಳಕ್ಕೆ, 1950 ನಂತರ ಐರ್ಲಂಡಿಗೆ, 1973 ನಂತರ ಕೆನಡಾಕ್ಕೆ ಭೇಟಿಕೊಟ್ಟ ಭಾರತದ ಪ್ರಧಾನಿ ಇದ್ದರೆ ಅದು ಮೋದಿ.
![]() |
| Necklace of Diamond |
'ವಸುದೈವ ಕುಟುಂಬಕಂ' ಎಂಬ ತತ್ವದಡಿಯಲ್ಲಿ ಕರೋನಾ ಸಮಯದಲ್ಲಿ ನೂರಕ್ಕೂ ಹೆಚ್ಚು ರಾಷ್ಟ್ರಗಳಿಗೆ ಜೀವರಕ್ಷಕ ಕೋವಾಕ್ಸಿನ್ ಹಾಗೂ ಕೋವಿಡ್ ಶೀಲ್ಡ್ ಭಾರತ ನೀಡಿತು. ಇಷ್ಟೇ ಅಲ್ಲದೇ ಜಗತ್ತಿನಲ್ಲಿ ಯಾರಿಗೆ ಕಷ್ಟವಾದರೂ ಭಾರತ ಅವರ ಸಹಾಯಕ್ಕೆ ನಿಂತಿದೆ. 2015ರ ಯಮೆನ್ ಸೌದಿ ಯುದ್ಧದ ನಡುವೆ ಆಪರೇಷನ್ ರಾಹತ್, ಕರೋನಾ ಸಮಯದಲ್ಲಿ ಆಪರೇಷನ್ ವಂದೇ ಭಾರತ್, ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಆಪರೇಷನ್ ಗಂಗಾ ದಲ್ಲಿ ಭಾರತೀಯರನ್ನಷ್ಟೇ ಅಲ್ಲದೇ ವಿದೇಶಿಗರನ್ನು ಭಾರತ ರಕ್ಷಿಸಿದೆ. ಟರ್ಕಿಯ ಭೂಕಂಪದ ಸಂದರ್ಭದಲ್ಲಿ ಎಲ್ಲರಿಗಿಂತ ಮೊದಲು ಭಾರತ ತನ್ನ ಸಹಾಯ ಹಸ್ತ ಚಾಚಿತು. G20 ಸಮ್ಮಿಟ್ ನಲ್ಲಿ ಯಾರ ವಿರೋಧವೂ ಇಲ್ಲದೆ ಆಫ್ರಿಕಾದ ಒಕ್ಕೂಟವನ್ನು ಒಳಗೆ ಸೇರಿಸಿಕೊಂಡಿತು. ಭಾರತ ಸಹಾಯ ಮಾಡುವುದಷ್ಟೇ ಅಲ್ಲದೇ ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. ಭಾರತಕ್ಕೆ ಕಂಟಕ ಪ್ರಾಯರಾದ ಭಯೋತ್ಪಾದಕರು ಅವರು ನೆಲೆಸಿರುವಲ್ಲೇ ಅಸುನೀಗುತ್ತಿದ್ದಾರೆ. ಈ Unknown Gunman ಗಳು ಭಾರತವನ್ನು ಸದ್ದಿಲ್ಲದೇ ಕಾಪಾಡುತ್ತಿದ್ದಾರೆ. 2022 ಮಾರ್ಚಿನಿಂದ 2023 ಡಿಸೆಂಬರ್ ತನಕ 26 ಭಯೋತ್ಪಾದಕರನ್ನು ಪಾಕಿಸ್ತಾನ, ಕೆನಡಾ, ಲಂಡನ್ ನಲ್ಲಿ ಈ ಅನಾಮಧೇಯ ಬಂದೂಕುಧಾರಿಗಳು ಕೊಂದಿದ್ದಾರೆ. ಈ ಲೇಖನ ಪ್ರಕಟವಾಗುವಷ್ಟರಲ್ಲಿ ಮತ್ತೆರಡು ಭಯೋತ್ಪಾದಕರ ಅಥವಾ ಭೂಗತಪಾತಕಿಗಳ ಹೆಣಗಳು ಬಿದ್ದರೆ ಅಚ್ಚರಿ ಪಡಬೇಕಿಲ್ಲ! ಭಾರತದ ಬೇಹುಗಾರಿಕೆ ಸಂಸ್ಥೆಯನ್ನು ಇಸ್ರೇಲಿನ ಮೊಸಾದಿಗೆ ಹೋಲಿಸುವ ಅಮೃತಕಾಲ ಇದಾಗಿದೆ. ಇದು ನಮ್ಮ ವಿದೇಶಾಂಗ ನೀತಿಯ ಗೆಲುವಲ್ಲದೆ ಮತ್ತೇನು?
ಮೋದಿ ಸರ್ಕಾರ ಬರುವ ಮುನ್ನ ನಮ್ಮಲ್ಲಿ ವಿದೇಶಾಂಗ ಸಚಿವರಾರು ಎಂಬುದು ಬಹುತೇಕರಿಗೆ ತಿಳಿಯದ ವಿಚಾರವಾಗಿತ್ತು. ನೆಹರೂ ಕಾಲದಲ್ಲಿ ಅವರೊಬ್ಬರೇ ಎಲ್ಲಾ! ಶಾಸ್ತ್ರೀ, ಇಂದಿರಾ, ರಾಜೀವ್, ಪಿ.ವಿ.ಎನ್, ಗುಜ್ರಾಲ್, ಅಟಲ್ಜೀ ಕಾಲದಲ್ಲಿ ವಿದೇಶಾಂಗ ಸಚಿವರ್ಯಾರು ಎಂದರೆ ಗೂಗಲ್ ನೋಡುವ ಪರಿಸ್ಥಿತಿ ಇದೆ. ಯು.ಪಿ.ಎ ಕಾಲದಲ್ಲಿ ಎಸ್.ಎಂ.ಕೃಷ್ಣ ಕರ್ನಾಟಕದವರು ಎಂಬ ಕಾರಣಕ್ಕೆ ಕನ್ನಡಿಗರಿಗೆ ಗೊತ್ತಿತ್ತು ಅಷ್ಟೇ. ಈಗ ಕೇಳಿ ನೋಡಿ! ಸುಷ್ಮಾ ಸ್ವರಾಜ್, ಜಯಶಂಕರ್ ಯಾರೆಂಬುದು ಶಾಲಾ ಮಕ್ಕಳಿಗೂ ಸಹ ತಿಳಿದಿದೆ. ಹಣಕಾಸು, ಗೃಹ ಇಲಾಖೆ, ಸಾರಿಗೆ ಖಾತೆಗಳು ಮಾತ್ರವಲ್ಲ ವಿದೇಶಾಂಗ ನೀತಿಯೂ ದೇಶದ ಬೆಳವಣಿಗೆಗೆ ಅತ್ಯವಶ್ಯ ಎಂಬುದನ್ನು ದೇಶಕ್ಕೆ ಮನದಟ್ಟು ಮಾಡಿಸಿದ್ದು, ನಾವು ಯಾರೊಂದಿಗೆ ವ್ಯವಹಾರ ಮಾಡಿದರೂ ದೇಶಕ್ಕೆ ಒಳಿತಾಗುವಂತಹ 'ದೇಶ ಮೊದಲು' ಎಂಬ ವಿದೇಶಾಂಗ ನೀತಿಯನ್ನು ಜಾರಿಗೆ ತಂದದ್ದೇ ನರೇಂದ್ರ ಮೋದಿ ಸರ್ಕಾರ.
***********************************************************
References
November 5, 2023
ಬುರುಡೆ ಮನೆ
ಹಾಲ್ಸ್ಟಾಟ್ ಎಂಬುದು ಆಸ್ಟ್ರಿಯಾ ಎಂಬ ಯೂರೋಪ್ ದೇಶದಲ್ಲಿನ ಒಂದು ಸಣ್ಣ ಹಳ್ಳಿ. ಎಲ್ಲ ಹಳ್ಳಿಗಳಲ್ಲೂ ಇರುವಂತೆ ಅಲ್ಲೂ ಒಂದು ಚರ್ಚ್ ಇದೆ; ಸೈಂಟ್ ಮೈಕಲ್ ಚರ್ಚ್. ಊರಿಗೊಂದು ಚರ್ಚ್ ಅನ್ನೋದು ಭಾರತದಲ್ಲೇ ಸಾಮಾನ್ಯ ಸಂಗತಿಯಾಗಿರುವುದರಿಂದ ಯೂರೋಪಿನ ಹಳ್ಳಿಯಲ್ಲಿ ಚರ್ಚ್ ಇರೋದರಲ್ಲಿ ಏನು ವಿಶೇಷವಿಲ್ಲ ಆದರೆ, ಈ ಚರ್ಚಿನ ಪಕ್ಕದಲ್ಲಿ ಒಂದು ಸಣ್ಣ ಕೋಣೆ ಇದೆ. ಅದೇ Hallstatt Charnel - ಅರ್ಥಾತ್ ಹಾಲ್ಸಾಟ್ ಅಲ್ಲಿನ ಬುರುಡೆ ಮನೆ.
![]() |
| The Charnel House at Hallstatt; Austria |
ಈ ಚರ್ಚು ಹಾಗೂ ಬುರುಡೆ ಮನೆ ಸುಮಾರು 12ನೇ ಶತಮಾನದಲ್ಲಿ ನಿರ್ಮಾಣವದದ್ದು. ಇಲ್ಲಿ ಸುಮಾರು 1200 ತಲೆಬುರುಡೆಗಳಿದ್ದು ಅದರಲ್ಲಿ 610 ಬುರುಡೆಗಳನ್ನು ಅವರವರ ಮನೆತನದ ಹೆಸರಿನ ಪ್ರಕಾರ ಜೋಡಿಸಿದ್ದಾರೆ. ವಿಚಿತ್ರ ಅನ್ನಿಸಿತು. ಅಸಲಿ ವಿಚಾರ ಇಷ್ಟು; ಚರ್ಚಿನ ಪಕ್ಕದಲ್ಲಿದ್ದ ಸ್ಮಶಾಣದ ಜಾಗ ತುಂಬಾ ಚಿಕ್ಕದಾಗಿತ್ತು. ಹಾಗಾಗಿ ಹೆಣಗಳನ್ನು ಹೂತ 10-20 ವರ್ಷಗಳ ನಂತರ ಸಮಾಧಿಯನ್ನು ತೆಗೆದು ಅಲ್ಲಿದ್ದ ಪಳೆಯುಳಿಕೆಗಳನ್ನು ಹೊರತೆಗೆದಾಗ ಹೊಸ ಹೆಣಗಳನ್ನು ಹೂಳಲು ಜಾಗವಾಗುತ್ತಿತ್ತು. ಆದರೆ ತೆಗೆದ ಪಳೆಯುಳಿಕೆಗಳನ್ನು ಏನು ಮಾಡುವುದು? ಅದನ್ನು ತೊಳೆದು, ಮೂಳೆಗಳ ಮೇಲೆ ಕೊಳೆತ ಕರೆಗಳು ಮಾಯವಾಗುವ ತನಕ ಹಗಲು ರಾತ್ರಿ ಒಣಗಿಸುತ್ತಿದ್ದರು. ನಂತರ, ಆ ಬುರುಡೆಗಳಿಗೆ ರಾಸಾಯನಿಕಗಳನ್ನು ಹಚ್ಚಿ, ಅದರ ಮೇಲೆ ಮೃತಪಟ್ಟಿರುವವರ ಹೆಸರು ಹಾಗೂ ಮರಣ ಹೊಂದಿರುವ ದಿನಾಂಕವನ್ನು ಬರೆದು ಈ ಮನೆಯಲ್ಲಿ ಜೋಡಿಸುತ್ತಿದ್ದರು. ಇಲ್ಲಿ ಕಡೆಯ ಬುರುಡೆ ಇರಿಸಿದ್ದು 1995 ರಲ್ಲಿ.
ಮನೆಯ ಗೋಡೆಯ ಮಧ್ಯದಲ್ಲಿ ಏಸುವನ್ನು ಶಿಲುಬೆ ಏರಿಸಿರುವ ಮೂರ್ತಿಯೊಂದಿದೆ. ಅದರ ಮುಂದೆಯಲ್ಲಿ 1983ರಲ್ಲಿ ಮೃತಪಟ್ಟ ಒರ್ವ ಮಹಿಳೆಯ ಬುರುಡೆ ಇಟ್ಟಿದ್ದು ಆಕೆಯ ಒಂದು ಹಲ್ಲು ಚಿನ್ನದ್ದಾಗಿತ್ತು. ಅದು ಇಂದಿಗೂ ಲಭ್ಯವಿದೆ. ಅವಳ ಬುರುಡೆ ಇಲ್ಲಿ ಇರಿಸಬೇಕೆಂಬುದು ಆಕೆಯ ಕಡೆಯ ಇಚ್ಛೆಯಾಗಿತ್ತು ಎಂದ ಹೇಳುತ್ತಾರೆ.
ಹಾಲ್ಸ್ಟಾಟ್ ಎನ್ನುವ ಹಳ್ಳಿ ಪ್ರಾಕೃತಿಕವಾಗಿ ಅದ್ಭುತ ಹೌದು ಅದರ ಹೊರತು ಬುರುಡೆಯ ಮನೆ ವಿಶೇಷ ಅನ್ನಿಸಿತು. ಹಾಲ್ಸ್ಟಾಟ್ ಹಾಗೂ ಸಾಲ್ಸ್ಬರ್ಗ್ ಊರುಗಳಲ್ಲಿ ಉಪ್ಪಿನ ಗಣಿಗಳಿವೆ. ಅದರ ಬಗ್ಗೆ ಮುಂದೆ ಬರೆಯುತ್ತೇನೆ.
October 9, 2023
ಇಸ್ರೇಲ್ ವಿಚಾರ ನಮಗ್ಯಾಕೆ ಬೇಕು..?
ಮೊನ್ನೆ ಶುಕ್ರವಾರ ಹಮಾಸ್ ಎಂಬ ಭಯೋತ್ಪಾದಕ ಸಂಘಟನೆ ಇಸ್ರೇಲ್ ಮೇಲೆ ರಾಕೆಟ್ ಹಾಗೂ ಕ್ಷಿಪಣಿಗಳ ಮಳೆಗೈದಿದೆ. ಇಸ್ರೇಲಿನ ಮಾಧ್ಯಮಗಳ ಪ್ರಕಾರ 26 ಸೈನಿಕರು, 30 ಪೊಲೀಸ್ ಅಧಿಕಾರಿಗಳು ಹಾಗೂ 600ಕ್ಕೂ ಹೆಚ್ಚು ಜನರನ್ನು ಹಮಾಸ್ ಭಯೋತ್ಪಾದಕರು ಗಾಝಾ ಪಟ್ಟಿಯಲ್ಲಿ ಕೊಂದಿದ್ದಾರೆ. ಇಷ್ಟೇ ಅಲ್ಲದೇ ಅನೇಕ ಇಸ್ರೇಲಿಗರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಅಲ್ಲಿಂದ ಬರುತ್ತಿರುವ ಪ್ರತಿಯೊಂದು ವೀಡಿಯೋಗಳು ಅಮಾನುಷ ಹಾಗೂ ಆತ್ಯಂತ ಭೀಕರವಾಗಿವೆ. ಹಮಾಸ್ ಅನ್ನು ಮುಗಿಸುವ ಮಟ್ಟಿಗೆ 'ಆಪರೇಷನ್ ಸ್ವೋರ್ಡ್ಸ್ ಆಫ್ ಐರನ್ - ಉಕ್ಕಿನ ಖಡ್ಗ' ಎನ್ನುತ್ತಾ ಯುದ್ಧವನ್ನು ಇಸ್ರೇಲ್ ಸರ್ಕಾರ ಘೋಷಿಸಿದೆ. ಅದಾಗಲೇ ಹಮಾಸಿನ ಬೇಹುಗಾರಿಕೆ ಸಂಸ್ಥೆಯ ಕಟ್ಟಡವನ್ನು ಧ್ವಂಸ ಮಾಡಿದೆ ಎಂಬ ಸುದ್ಧಿ ಸಹ ಇದೆ. ಭಾರತದ ರಾಜಕೀಯ ಹಾಗೂ ವಿದ್ಯಮಾನಗಳನ್ನೆಲ್ಲಾ ಬಿಟ್ಟು ಇಸ್ರೇಲ್ ವಿಚಾರ ನಮಗ್ಯಾಕೆ ಅಂದುಕೊಳ್ಳಬಹುದು. ಆದರೆ, ಜಾಗತಿಕ ವಿದ್ಯಮಾನಗಳು ನಮ್ಮ ದೇಶದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿಯೇ ಈ ವಿಚಾರ ಮುಖ್ಯ.
![]() |
| Israel declares war, goes after Hamas fighters and bombards Gaza |
![]() |
| The Global Religious Landscape |
ಹಮಾಸಿನ ಈ ಅಮಾನುಷ ಕೃತ್ಯದ ವಿರುದ್ಧ ಜಗತ್ತಿನ ಅನೇಕ ದೇಶಗಳು ಇಸ್ರೇಲಿನ ಬೆಂಬಲಕ್ಕೆ ನಿಂತಿವೆ. ಭಾರತ ಕೂಡ ಇಸ್ರೇಲಿನ ಪರವಾಗಿ ಇದೆ. ನಮ್ಮ ಹಾಗೂ ಇಸ್ರೇಲ್ ಅಥವಾ ಯಹೂದಿಗಳ ಸಂಬಂಧ ಸ್ವಾತಂತ್ರ್ಯ ಪೂರ್ವದ್ದು. ಯಹೂದಿಗಳನ್ನು ಜಗತ್ತಿನ ಎಲ್ಲಾ ಜನಾಂಗ ಅಥವಾ ದೇಶಗಳು ಕೆಟ್ಟದಾಗಿ ನಡೆಸಿಕೊಂಡಿವೆ. ಅವರ ಸಂಸ್ಕೃತಿಯನ್ನು ಉಳಿಸಿಕೊಂಡು, ಮರ್ಯಾದೆಯಿಂದ ಬಾಳಲು ಅವಕಾಶ ನೀಡಿದ ಏಕೈಕ ರಾಷ್ಟ್ರ ಭಾರತ. ಹಾಗಾಗಿಯೇ ಇಸ್ರೇಲಿಗೆ ಭಾರತವೆಂದರೆ ಪ್ರೀತಿ. 1999ರ ಕಾರ್ಗಿಲ್ ಯುದ್ಧದಲ್ಲಿ, 2019ನಲ್ಲಿನ ಪುಲ್ವಾಮ ದಾಳಿ ಆದಾಗ ಇಸ್ರೇಲ್ ಭಾರತದ ಪರವಾಗಿ ನಿಂತಿದೆ. ಭಾರತ ಇಸ್ರೇಲಿನಿಂದ ಹೆರಾಪ್ ಎಂಬ ಅತ್ಮಹತ್ಯ ಡ್ರೋನ್ ಗಳನ್ನು ಖರಿಸಿದಿಸುವ ಒಪ್ಪಂದ ಸಹ ಮಾಡಿಕೊಂಡಿತ್ತು. ಹಾಗಾಗಿ; ಭಾರತ ಅಧಿಕೃತವಾಗಿ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದು ಇಸ್ರೇಲಿನ ಪರವಾಗಿ ನಿಂತಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲಿನ ಪರವಾದ ಪೋಸ್ಟ್ಗಳು ಓತಪ್ರೋತವಾಗಿ ಹರಿದಾಡುತ್ತಿದೆ. ಅಲ್ಲಿರುವ ಭಾರತೀಯರಿಗೆ ಸುರಕ್ಷಿತ ಜಾಗಗಳಿಗೆ ತೆರಳಲು ಸರ್ಕಾರ ಇಗಾಗಲೇ ತಿಳಿಸಿದೆ. ಕಾಂಗ್ರೇಸ್ ಪಕ್ಷ ಮಾತ್ರ ಮುಸಲ್ಮಾನರ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಈ ವಿಚಾರವಾಗಿ ಒಂದು ದಿನ ಪೂರ್ಣ ಮೌನವಹಿಸಿತ್ತು. ನಂತರ ನಾಮಕಾವಸ್ಥೆ ಎಂಬಂತೆ 'ತಾನೂ ಇಸ್ರೇಲಿನ ಪರವಾಗಿದ್ದೇನೆ' ಎಂಬ ಪತ್ರಿಕಾ ಹೇಳಿಕೆಯನ್ನು ಮೈಗೆ ಎಣ್ಣೆ ಹಚ್ಚಿಕೊಂಡಂತೆ ಜೈರಾಂ ರಮೇಶ್ ಮೂಲಕ ಕೊಡಿಸಿದೆ.
ಇಸ್ರೇಲ್ ಪಾಲೆಸ್ಟೈನ್ ನಡುವಿನ ಕಲಹ ಇಂದು ನೆನ್ನೆಯದ್ದಲ್ಲ. 1948ರಲ್ಲಿ ಇಸ್ರೇಲ್ ಒಂದು ದೇಶ ಎಂದು ಸ್ಥಾಪಿತವಾದಾಗಿನಿಂದಲೂ ಇದೆ. ಇದು ಆಧುನಿಕ ಜಗತ್ತಿನಲ್ಲಾದರೆ, ಐತಿಹಾಸಿಕವಾಗಿ ಮತದ ಹಿನ್ನಲೆಯಲ್ಲಿ ಇಸ್ಲಾಂ ಹುಟ್ಟಿದಾಗಿನಿಂದಲೂ ಯಹೂದಿ ಹಾಗೂ ಮುಸಲ್ಮಾನರ ನಡುವೆ ಈ ಕಾದಾಟ ನಡೆಯುತ್ತಲೇ ಬಂದಿದೆ. ಜರುಸಲೆಂ ಎಂಬ ಪವಿತ್ರ ಜಾಗಕ್ಕಾಗಿ ಇಸ್ಲಾಂ, ಯಹೂದಿ ಹಾಗೂ ಕ್ರೈಸ್ತ ಮತದವರು ಇತಿಹಾಸದುದ್ದಕ್ಕೂ ಕಾದಾಟ ಮಾಡುತ್ತಲೇ ಇದ್ದಾರೆ. ಆರು ದಿನಗಳ ಯುದ್ಧ, ಅರಬ್-ಇಸ್ರೇಲ್ ಯುದ್ಧ ಹಾಗೂ 50 ವರ್ಷಗಳ ಹಿಂದೆ ನಡೆದ ಯೋಮ್ ಕಿಪ್ಪೂರ್ ಯುದ್ಧ ಇಸ್ರೇಲ್ ಸ್ಥಾಪಿತವಾದ ನಂತರ ಅದರ ವಿರುದ್ಧ ನಡೆದ ಕೆಲವು ಪ್ರಮುಖ ಯುದ್ಧಗಳು. 1973ರ ನಂತರ ಇಸ್ರೇಲ್ ಮೇಲೆ ನಡೆದ ಅತೀ ಭೀಕರವಾದ ದಾಳಿ ಇದಾಗಿದೆ. ಇಷ್ಟಕ್ಕೂ ಇದ್ದಕ್ಕಿದ್ದಂತೆ ಹಮಾಸ್ ಈ ಪರಿಯ ದಾಳಿ ಮಾಡಿದ್ದೇಕೆ?
ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಒಂದು ದೇಶ ಎಂದೇ ಒಪ್ಪಿರಲಿಲ್ಲ. 1979ರಲ್ಲಿ ಈಜಿಪ್ಟ್, 1994ರಲ್ಲಿ ಜಾರ್ಡನ್ ರಾಜತಾಂತ್ರಿಕ ಕಾರಣಕ್ಕಾಗಿ ಇಸ್ರೇಲ್ ಅನ್ನು ರಾಷ್ಟ ಎಂದು ಒಪ್ಪಿಕೊಂಡಿತು. ಅದೇ ರೀತಿ ಯುಎಇ 2020ರಲ್ಲಿ ಇಸ್ರೇಲಿನೊಂದಿಗೆ ರಾಜತಾಂತ್ರಿಕ ಒಪ್ಪಂದಕ್ಕೆ ತೆರೆದುಕೊಂಡಿತು. ಇದಲ್ಲದೇ ಕಳೆದ ತಿಂಗಳು ಜಿ20 ಸಮಾವೇಶದಲ್ಲಿ ಭಾರತ, ಮಧ್ಯ ಪ್ರಾಚ್ಯ, ಇಸ್ರೇಲ್ ಹಾಗೂ ಯೂರೋಪ್ ನಡುವೆ ಆರ್ಥಿಕ ಕಾರಿಡಾರ್ (ಐಮೆಕ್) ಒಪ್ಪಂದ ಸಹ ಆಗಿದೆ. ಭಾರತದ ಮುಂಬೈನಿಂದ ದುಬೈ ತನಕ ಜಲ ಮಾರ್ಗ, ದುಬೈನಿಂದ ಸೌದಿ ಅರೇಬಿಯಾ, ಜೋರ್ಡಾನ್ ಹಾಗೂ ಇಸ್ರೇಲ್ ನಡುವೆ ರೈಲು ಮಾಗ್ರ, ನಂತರ ಇಸ್ರೇಲಿನ ಹೈಫಾ ಬಂದರಿನಿಂದ ಯೂರೋಪಿನವರೆಗೆ ಮತ್ತೆ ಜಲ ಮಾರ್ಗ ಹಾಗೂ ಅಲ್ಲಿಂದ ಮತ್ತೆ ರೈಲು. ಇದು ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ವಿರುದ್ಧ ಮಾಡುತ್ತಿರುವ ಯೋಜನೆ. ಇದಕ್ಕೆ ವಿರೋಧ ಮಾಡಿದ್ದು ಚೀನಾ, ಹಮಾಸ್ಸನ್ನು ಬೆಂಬಲಿಸುವ ದೇಶಗಳಾದ ಟರ್ಕಿ ಹಾಗೂ ಇರಾನ್ ಭಾರತದ ಏಳಿಗೆ ಚೀನಾ ಸಹಿಸುವುದಿಲ್ಲ, ತನ್ನನ್ನು ಹೊರತು ಪಡಿಸಿ ಆಗುತ್ತಿರುವ ಯೋಜನೆಯಿಂದ ಟರ್ಕಿಗೆ ಅಸಮಾಧಾನ, ಇಸ್ರೇಲ್ ಹಾಗೂ ಯುಎಇ ಒಂದಾಗುವುದು ಇರಾನ್ ಹಾಗೂ ಪಾಲೆಸ್ಟೈನಿಗೆ ಇಷ್ಟವಿಲ್ಲ. ಈಗ ಚುಕ್ಕಿಗಳನ್ನು ಜೋಡಿಸಿ ನೋಡಿ. ಈ ಯೋಜನೆಯನ್ನು ಮೊಳಕೆಯಲ್ಲೇ ನಾಶ ಮಾಡಬೇಕೆಂದೇ ಇರಾನ್ ಮತ್ತು ಟರ್ಕಿ ಹಮಾಸ್ ಮತ್ತು ಹೆಜ್ಬೊಲ್ಲಾಗಳ ಮೂಲಕ ಇಸ್ರೇಲಿನ ಮೇಲೆ ದಾಳಿ ನಡೆಸಿದೆ ಎಂಬುದು ನಿಸ್ಸಂಶಯವಾಗಿ ತಿಳಿಯುತ್ತದೆ! ಇತಿಹಾಸವನ್ನು ಗಮನಿಸಿದರೆ ಇಸ್ರೇಲ್ ಸುಮ್ಮನಿರುವ ದೇಶವಲ್ಲ. ಗಾಝಾ ಪಟ್ಟಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು, ಹಮಾಸ್ಸನ್ನು ನಾಶ ಮಾಡಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ, ಈಜಿಪ್ಟಿನ ಗಡಿಯೊಳಗೆ ನುಗ್ಗಿದರೂ ಆಶ್ಚರ್ಯವಿಲ್ಲ. ಪಾಲೆಸ್ಟೈನ್, ಹಮಾಸ್ ವಿರುದ್ಧದ ಈ ಯುದ್ಧದಲ್ಲಿ ಇಸ್ರೇಲ್ ಉಗ್ರವಾದಷ್ಟು ಇಸ್ಲಾಂ ರಾಷ್ಟ್ರಗಳು ತಮ್ಮ ಬ್ರಾತೃತ್ವದ ಭಾವನೆಯನ್ನು ಮುಂದಿಟ್ಟುಕೊಂಡು ಇಸ್ರೇಲ್ ವಿರುದ್ಧ ತಿರುಗಿ ಬೀಳುತ್ತದೆ. ಆಗ ಯುಎಇ ಹಾಗೂ ಸೌದಿಗೂ ವಿರೋಧಿಸುವುದು ಅನಿವಾರ್ಯವಾಗಿ, ಐಮೆಕ್ ಯೋಜನೆ ಹಳ್ಳಹಿಡಿಯುತ್ತದೆ!
ತುರುಕರ ಮನೆಹಾಳು ಮಾತು ಕೇಳಿ ಹಮಾಸ್ ಹಾಳಾಗುತ್ತಿದೆ. ಟರ್ಕಿ ಕೃತಘ್ನ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ. ಆಪರೇಷನ್ ದೋಸ್ತ್ ಮೂಲಕ ಸಹಾಯ ಹಸ್ತ ಚಾಚಿದ ಭಾರತಕ್ಕೆ ಟರ್ಕಿ ಮೋಸ ಮಾಡಿದೆ. ಭಾರತಕ್ಕಷ್ಟೇ ಅಲ್ಲದೇ ನ್ಯಾಟೋ ದೇಶಗಳ ಹಿತಾಸಕ್ತಿ ವಿರುದ್ಧ ಅದು ನಡೆದುಕೊಂಡಿದೆ! ಚೀನಾ ವಿರುದ್ಧ ಬಲವಾದ ಹೆಜ್ಜೆ ಇಡುವ ಪ್ರಯತ್ನ ಮಾಡಿದ ಭಾರತಕ್ಕೆ ಈ ಯುದ್ಧ ಎಷ್ಟರ ಮಟ್ಟಿಗೆ ಹಿನ್ನಡೆಯಾಗುತ್ತದೆ ಅಥವಾ ಇಲ್ಲ ಎಂಬುದನ್ನು ಮುಂದೆ ಕಾದು ನೋಡಬೇಕಿದೆ.
***********************************************************
References
September 15, 2023
ಭಾರತದಲ್ಲಿ ಜಿ20, ಯೂರೋಪಿನಲ್ಲಿ 4...!
ಈ ಬಾರಿಯ ಜಿ20 ಶೃಂಗಸಭೆ ನಿಜಕ್ಕೂ 'ಭಾರತ'ದ ಗೆಲುವು. 'ವಸುದೈವ ಕುಟುಂಬ' ಎಂಬ ಋಷಿ ವಾಕ್ಯದ ತಳಹದಿಯಲ್ಲಿ ನಡೆದ ಶೃಂಗಸಭೆಯ ಮೂಲಕ ಇಡಿಯ ಜಗತ್ತಿಗೆ ಮತ್ತೊಮ್ಮೆ ಭಾರತೀಯತೆಯ ಪರಿಚಯವಾಯಿತು. ಸಭೆಯನ್ನು ಆಯೋಜಿಸಿದ ರೀತಿ, 115 ವಿಷಯಗಳೊಳಗೊಂಡ ವಿಸ್ತೃತ ಘೋಷಣೆಯನ್ನು ಸದಸ್ಯರಾಷ್ಟ್ರಗಳ ಸರ್ವಸಮ್ಮತಿಯೊಂದಿಗೆ ಮಂಡಿಸಿದ ಭಾರತದ ರಾಜತಂತ್ರಿಕತೆ ನಿಜಕ್ಕೂ ಹೆಮ್ಮೆಪಡುವಂತಹ ವಿಚಾರವೇ. ಇಷ್ಟಾದರೂ ಈ ಸಭೆಯಲ್ಲಿ ಮಂಡಿಸಿದ ಕೆಲವು ವಿಚಾರಗಳು ಚೀನಾವನ್ನು ನಖಶಿಖಾಂತ ಉರಿಸಿರಲಿಕ್ಕೂ ಸಾಕು. ಚೀನಾದ ಹೊಟ್ಟೆಗೆ ಬಿದ್ದಿರುವ ಬೆಂಕಿಯ ಕಾವು ಯೂರೋಪ್ ನಲ್ಲಿ ರಾಹುಲ್ ಗಾಂಧಿಯ ಮಾತಿನಲ್ಲಿ ಪ್ರತಿಫಲನಗೊಂಡಿತು ಅಷ್ಟೇ!
![]() |
| Narendra Modi showing the mural of Konark Sun Temple Wheel from Odisha to US President Joe Biden |
ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡು; ಸಮಾರೋಪದವರೆಗೆ ತನ್ನ 60 ನಗರಗಳಲ್ಲಿ 200ಕ್ಕೂ ಹೆಚ್ಚು ಕಾರ್ಯಕ್ರಮ ಹಾಗೂ ಚರ್ಚಾಕೂಟಗಳನ್ನು ಏರ್ಪಡಿಸಿತು. ಸದಸ್ಯ ರಾಷ್ಟ್ರಗಳಲ್ಲದೇ ಈಜಿಪ್ಟ್, ಮಾರಿಷಸ್, ನೆದರ್ಲಾಂಡ್ಸ್, ನೈಜೀರಿಯಾ, ಒಮನ್, ಸಿಂಗಾಪುರ, ಸ್ಪೇನ್, ಅರಬ್ ರಾಷ್ಟ್ರಗಳ ಒಕ್ಕೂಟ ಹಾಗೂ ಬಾಂಗ್ಲಾದೇಶಗಳನ್ನು ಭಾರತ ಈ ಸಭೆಗೆ ಅಥಿತಿಗಳಾಗಿ ಆಹ್ವಾನಿಸಿತು. ನಮ್ಮ ಜೊತೆ ಸೌಹಾರ್ದಯುತವಾದ ಬಾಂಧವ್ಯ ಇದ್ದಿದ್ದರೆ ಪಾಕೀಸ್ತಾನವನ್ನು ಸಹ ಭಾರತ ಆಹ್ವಾನಿಸುತ್ತಿತ್ತೇನೊ! ಇಷ್ಟೇ ಅಲ್ಲದೇ ಆಫ್ರಿಕನ್ ಯೂನಿಯನ್, ಆಫ್ರಿಕನ್ ಯೂನಿಯನ್ ಡೆವೆಲಪ್ಮಂಟ್ ಏಜನ್ಸಿ, ಅಸೀಯಾನ್, ಅಂತರರಾಷ್ಟ್ರೀಯ ಸೌರ ಒಕ್ಕೂಟ, ಏಷಿಯನ್ ಡೆವೆಲಪ್ಮಂಟ್ ಬ್ಯಾಂಕ್ ಅಂತಹ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಸಹ ಭಾರತ ಆಹ್ವಾನಿಸಿತ್ತು. ಇಲ್ಲಿಯವರೆಗೆ ಆಫ್ರಿಕಾ ಖಂಡದಿಂದ ದಕ್ಷಿಣ ಆಫ್ರಿಕಾ ಮಾತ್ರವೇ ಜಿ20 ಯ ಸದಸ್ಯ ರಾಷ್ಟ್ರವಾಗಿತ್ತು. ಆದರೆ, ಈ ಬಾರಿ ಐರೋಪ್ಯ ಒಕ್ಕೂಟದ ರೀತಿಯಲ್ಲಿ ಆಫ್ರಿಕಾದ ಒಕ್ಕೂಟವನ್ನು ಜಿ20 ಒಳಗೆ ಕರೆದು ತಂದದ್ದು ಭಾರತ. ಈ ಕ್ರಮಕ್ಕೆ ಯಾವ ಸದಸ್ಯ ರಾಷ್ಟ್ರಗಳೂ ವಿರೋಧ ವ್ಯಕ್ತಪಡಿಸಲಿಲ್ಲ ಎಂಬುದು ಭಾರತದ ರಾಜತಾಂತ್ರಿಕತೆಯ ಗೆಲುವು. ಗಮನಿಸಿ, ಈಕ್ವಟಾರ್ ಗೆರೆಯ ಕೆಳಗೆ ಬರುವ ರಾಷ್ಟ್ರಗಳು ಸಾಮಾನ್ಯವಾಗಿ ಜಾಗತಿಕ ಮಟ್ಟದಲ್ಲಿ ಗಣನೆಗೆ ಬರುತ್ತಿರಲಿಲ್ಲ ಹಾಗೂ ಬಹುತೇಕ ಬಡರಾಷ್ಟ್ರಗಳೇ ಆಗಿವೆ. ಅಂತಹ ರಾಷ್ಟ್ರಗಳ ಪ್ರತಿನಿಧಿಯಾಗಿ ಭಾರತ ನಿಂತಿದೆ ಎಂಬ ಸ್ಪಷ್ಟ ಸಂದೇಶ ಈ ಸಭೆಯ ಮೂಲಕ ಕೊಟ್ಟಿದೆ.
![]() |
| Prime Minister Narendra Modi greets Chairperson of the African Union (AU) at G20 |
2023 ಸಾಲಿನ ಜಿ20 ಸಭೆಯಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಚೀನಾಕ್ಕೆ ಟಕ್ಕರ್ ಕೊಡುವಂತಹುದೇ. ಆಫ್ರಿಕಾ ಖಂಡ ನೈಸರ್ಗಿಕ ಸಂಪನ್ಮೂಲಗಳ ಆಗರ. ಅಲ್ಲಿನ ಅನೇಕ ರಾಷ್ಟ್ರಗಳನ್ನು ತನ್ನ ಸಾಲದ ಸಂಕೋಲೆಯಲ್ಲಿ ಹಿಡಿದುಕೊಂಡಿದ್ದು; ತನ್ಮೂಲಕ ಅಲ್ಲಿನ ಸಂಪತ್ತನ್ನು ಲೂಟಿ ಹೊಡೆಯುವುದು ಚೀನಾದ ಷಡ್ಯಂತ್ರವಾಗಿದೆ. ಅದಾಗಲೇ ರಷ್ಯಾ ಹಾಗೂ ಅಮೇರಿಕಾ ಆಫ್ರಿಕಾಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿವೆ. ಈಗ ಭಾರತ ಆಫ್ರಿಕಾವನ್ನು ತನ್ನ ಜೊತೆ ತೆಗೆದುಕೊಂಡು ಮುಂದುವರೆಯುತ್ತಿರುವುದು ಒಳಿತೇ. ಇದು ಚೀನಾಕ್ಕೆ ಅಸಹನೀಯ! ಚೀನಾದ ಮೋಸದ ಸುಳಿಯಲ್ಲಿ ಸಿಲುಕಿರುವ ದೇಶಗಳ ಮನಸ್ಥಿತಿಯನ್ನು ಬದಲಿಸಿ ತನ್ನತ್ತ ಸೆಳೆದುಕೊಳ್ಳುವುದು ಮೋದಿ ನೇತೃತ್ವದ ಭಾರತ ಸರ್ಕಾರಕ್ಕಿರುವ ಸವಾಲು. ಆಫ್ರಿಕಾ ಒಕ್ಕೂಟವನ್ನು ಜಿ2೦ ಯ ಸದಸ್ಯರನ್ನಾಗಿ ಮಾಡಿಕೊಂಡಿದ್ದು ಬಹುಶಃ ಆಫ್ರಿಕಾದ ಅನುಮಾನಗಳಿಗೆ ಉತ್ತರವಾಗಬಹುದು.
ಇದೆಲ್ಲದರ ಜೊತೆಗೆ ಬಹುಮುಖ್ಯವಾದ ಅಂಶವೊಂದಕ್ಕೆ ಈ ಸಮಾವೇಶದಲ್ಲಿ ಭಾರತ ನಾಂದಿ ಹಾಡಿತು. ಚೀನಾದ ಕುಖ್ಯಾತ ಬಿಆರ್ಐ ಯೋಜನೆಗೆ ವಿರುದ್ಧವಾಗಿ ಭಾರತ-ಮಧ್ಯಪ್ರಾಚ್ಯ-ಯೂರೋಪಿಯನ್ ಕಾರಿಡಾರ್ ಸ್ಥಾಪಿಸಲು ಅದಕ್ಕೆ ಸಂಬಂಧಿಸಿದ ರಾಷ್ಟ್ರಗಳು ನಿರ್ಧರಿಸಿವೆ. ಈ ಯೋಜನೆಗೆ ಅಮೇರಿಕಾ ಸಹ ಸಹಕಾರ ನೀಡುವುದಾಗಿ ಹೇಳಿದೆ. ಚೀನಾ ಜೊತೆಗಿದ್ದ ಜಿ7 ನ ಏಕೈಕ ದೇಶ ಇಟಲಿಯ ಪ್ರಧಾನಿ 'ಬಿಆರ್ಐ ನ ಸದಸ್ಯತ್ವದಿಂದ ನಮ್ಮ ದೇಶದ ಆರ್ಥಿಕತೆಗೆ ಅಷ್ಟೇನು ಪ್ರಯೋಜನವಿಲ್ಲ. ಹಾಗಾಗಿ, ಅದರಿಂದ ಹೊರಬರುವ ಯೋಚನೆಯಲ್ಲಿದ್ದೇವೆ' ಎಂದಿದ್ದಾರೆ. ಈ ನಡೆ ಚೀನಾಕ್ಕೆ ಸಹಿಸಲಸಾಧ್ಯ ಅನ್ನುವುದಂತೂ ಸತ್ಯ! ಭಾರತದ ಚೀನಾ ವಿರುದ್ಧದ ನಡೆಗೆ ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಬಾರದೆ ಉಳಿದ ಅಧ್ಯಕ್ಷ ಜಿಂಪಿಂಗ್ ನ ಗೈರುಹಾಜರಿ ಬಗ್ಗೆ ಯಾರೂ ತಲೆ ಕೆಡೆಸಿಕೊಳ್ಳಲಿಲ್ಲ. 'ಚೀನಾದ ಅಧ್ಯಕ್ಷನ ಅನುಪಸ್ಥಿತಿ ಶೃಂಗಸಭೆಯ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ' ಎಂದು ಹೇಳುವ ಮೂಲಕ ವಿದೇಶಾಂಗ ವ್ಯವಹಾರ ಸಚಿವ ಶ್ರೀ ಜಯಶಂಕರ್ ಜಿಂಪಿಂಗ್ ನ ಯೋಗ್ಯತೆಯನ್ನು ತೋರಿಸಿಕೊಟ್ಟಿದ್ದಾರೆ.
![]() |
| Proposed Indo - Middle East - European Corridor |
ಜಿ20 ಯ ಯಶಸ್ಸು ಚೀನಾದ ಹೊಟ್ಟೆಯಲ್ಲಿ ಎಷ್ಟು ಕಿಚ್ಚು ಹೊತ್ತಿಸಿದೆಯೋ ಇಲ್ಲವೋ ತಿಳಿಯದು ಆದರೆ, ಆ ದೇಶದ ಪರವಾಗಿ ಬಿಂಬಿತವಾಗುವ ರಾಹುಲನ ಉದರಕ್ಕೆ ಬೆಂಕಿ ಬಿದ್ದಿರುವುದಂತೂ ಸ್ಪಷ್ಟ! ಆತನ ಹೊಟ್ಟೆಗೆ ಬೆಂಕಿ ಬಿದ್ದರೆ ಬಿತ್ತು ನಮಗಾಗುವ ನಷ್ಟವೇನಿಲ್ಲ. ಆದರೇ, ಯೂರೋಪಿನ ಪ್ರವಾಸದಲ್ಲಿ ವಿದೇಶಿಯರ ಮುಂದೆ ಭಾರತದ ಆಂತರಿಕ ವಿಚಾರಗಳನ್ನು ಮಾತಾಡುತ್ತಾ, ಚೀನಾದ ಬಿಆರ್ಐ ಅನ್ನು ನಾಚಿಕೆಯಿಲ್ಲದೆ ಹೊಗಳುತ್ತಾನೆ! ಆ ದೇಶದ ಬೆಳವಣಿಗೆಗೆ ಅಲ್ಲಿರುವ ರಾಜಕೀಯ ಸ್ವಾತಂತ್ರ್ಯ ಕಾರಣ ಎಂದು ಚೀನಾಕ್ಕಿಂತಲೂ ಹೆಚ್ಚು ಚೀನಾ ಪರವಾಗಿ ಮಾತಾಡಿದ್ದಾನೆ! ಪ್ರತಿಯೊಂದು ದೇಶಕ್ಕೂ ಜಾಗತಿಕ ವಿದ್ಯಮಾನಗಳ ಕುರಿತು ತನ್ನದ್ದೇ ಆದ ನಿಲುವು ಹೊಂದಿರುತ್ತದೆ. ಅದಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಾದುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆದರೆ, ರಾಹುಲ್ ಮಾಡುತ್ತಿರುವ ಕೆಲಸ ನಿಜಕ್ಕೂ ಅಕ್ಷಮ್ಯ! ಭಾರತ ಚೀನಾಕ್ಕೆ ಎದುರಾಗಿ ಸ್ಪಷ್ಟವಾದ ಹೆಜ್ಜೆ ಇಡಬೇಕಾದರೇ ಚೀನಾದ ಗುಲಾಮರಿಗೆ ಸಂಕಟವಾಗಲೇ ಬೇಕಲ್ಲವೇ? ಅದಕ್ಕೆ ಸ್ಪಷ್ಟ ನಿದರ್ಶನ ರಾಹುಲ್! ಅಷ್ಟೇ ಅಲ್ಲದೇ ಇಲ್ಲಿನ ಕಾಂಗ್ರೇಸ್ ನಾಯಕರು ರಾಹುಲನ ಈ ನಡೆಯನ್ನು ಸಮರ್ಥಿಸಿಕೊಳ್ಳುವುದು ತೀರ ಅಸಹ್ಯಕರ! ಜಿ20 ಯ ನಾಯಕತ್ವದ ಬಗ್ಗೆ ಇತ್ತ ಜಗತ್ತಿನ ನಾಯಕರು ಭಾರತವನ್ನು ಹೊಗಳುತ್ತಿದ್ದಾರೆ, ಇಟಲಿ ಭಾರತದ ಪರ ಮಾತಾಡುತ್ತಿದೆ ಆದರೆ, ಅತ್ತ ಅದೇ ಇಟಲಿಯಮ್ಮನ ಮಗ ರಾಹುಲ್ ವಿದೇಶದಲ್ಲಿ ಭಾರತವನ್ನೇ ತೆಗಳುತ್ತಿದ್ದಾನೆ. ಥತ್!!
ಸನಾತನ ಧರ್ಮದ ಅಡಿಪಾಯವಾಗಿರುವ ಋಷಿವಾಕ್ಯದ ಆಧಾರದ ಮೇಲೆ ಜಗತ್ತಿನೆದುರು ಭಾರತ ವಿಜೃಂಭಿಸಿದೆ. ಜಗತ್ತಿನ ಒಳಿತಿಗೆ ಭಾರತ ಉಳಿಯುವುದು ಅವಶ್ಯಕವೆಂಬ ವಿಚಾರ ಭಾರತೀಯರೆಲ್ಲರಿಗೂ ಮನದಟ್ಟಾಗಲಿ, ದೇಶವನ್ನು ಕೊರೆಯುವ ಹುಳ(ಲ)ಗಳು ಅಳಿದು ಭಾರತ ಮತ್ತಷ್ಟು ಬಲಿಷ್ಠವಾಗಲಿ ಹಾಗೂ ಜಗತ್ತಿಗೆ ಗುರುವಾಗಲಿ ಎಂಬುದಷ್ಟೇ ನಮ್ಮ ಪ್ರಾರ್ಥನೆ.
***********************************************************
References
September 8, 2023
ಅವನೆಂದರೆ ಕಾಂಗ್ರೇಸ್ಸಿಗೇಕೆ ಉರಿ?
ಗೌತಮ್ ಅದಾನಿ - ಈ ಹೆಸರು ಕಿವಿಗೆ ಬಿದ್ದ ತಕ್ಷಣ ಕಾಂಗ್ರೇಸ್ಸಿಗರಿಗೆ ಉರಿ ಶುರುವಾಗುತ್ತದೆ. ವಿಚಾರ ಸ್ವಲ್ಪ ಹಳೆಯದಾದರೂ ಗಂಭೀರವಾದದ್ದು ಎಂಬ ಕಾರಣಕ್ಕೆ ಬರೆಯುತ್ತಿದ್ದೇನೆ. ಭಾರತದಲ್ಲಿ ಸಾಹುಕಾರರ ಸಾಲಲ್ಲಿ ಇರುವವರು ಆರ್ಸೆಲ್ಲರ್ ನ ಲಕ್ಷ್ಮೀ ಮಿತ್ತಲ್, ಮಹಿಂದ್ರಾ ಕಂಪನಿಯ ಆನಂದ್ ಮಹಿಂದ್ರಾ, ಬಿರ್ಲಾದ ಕುಮಾರ್ ಬಿರ್ಲಾ, ರಿಲಯನ್ಸ್ ನ ಅಂಬಾನಿ, ಇನ್ಫೋಸಿಸ್ ನ ನಾರಯಣ ಮೂರ್ತಿ, ವಿಪ್ರೋನ ಅಜೀಂ ಪ್ರೇಂಜೀ, ಗೌತಮ್ ಅದಾನಿ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುವುದು. ಇಷ್ಟೆಲ್ಲಾ ಶ್ರೀಮಂತರು, ಕೋಟ್ಯಾಧಿಪತಿಗಳಿದ್ದರೂ ಕಾಂಗ್ರೇಸ್ ಅದಾನಿಯನ್ನೇ ಗುರಿಯಾಗಿಸುತ್ತಿರುವುದೇಕೆ?
![]() |
| Ports under control of Adani Group |
ಈ ಪ್ರಶ್ನೆಗೆ ಉತ್ತರ ಹುಡುಕುವುದಾದರೆ ನಾವು ಸುಮಾರು 2000 ವರ್ಷಕ್ಕೂ ಹಿಂದಿನ ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಇದು ರಸ್ತೆ, ರೈಲು ಹಾಗೂ ಬಹು ಮುಖ್ಯವಾಗಿ ಸಮುದ್ರ ಮಾರ್ಗದ ಮೂಲಕ ಜಾಗತಿಕ ವ್ಯಾಪಾರದ ಪ್ರಾಬಲ್ಯದ ಇತಿಹಾಸ. "ಸಮುದ್ರದ ಮೇಲೆ ಅಧಿಪತ್ಯ ಹೊಂದಿರುವವನು ಚಕ್ರವರ್ತಿಯಾಗಿರುತ್ತಾನೆ" ಎಂದು ಅಥೆನ್ಸಿನ ರಾಜಕಾರಣಿ ಥೆಮಿಸ್ಟೋಕಲ್ಸ್ ಹೇಳಿದ ಮಾತನ್ನು ಅಕ್ಷರಶಃ ಪಾಲಿಸಿದವರು ಚೀನಿಯರು! ಕ್ರಿ.ಪೂ 14 ರ ಸಮಯದಲ್ಲಿ ತನ್ನ ದೇಶ ಹಾಗೂ ಪಶ್ಚಿಮದ ನಡುವಿನ ವ್ಯಾಪಾರವನ್ನು ಸುಗಮಗೊಳಿಸಲು ಚೀನಾ 6400 ಕಿ.ಮೀ ರಷ್ಟು ಉದ್ದದ ಸಿಲ್ಕ್ ರೋಡನ್ನು ನಿರ್ಮಿಸುತ್ತದೆ. ಇದು ಸಾ.ಶ.ವ 1500 ವರೆಗೆ ವ್ಯಾಪಾರಕ್ಕೆ ಪ್ರಮುಖ ಮಾರ್ಗವಾಗಿತ್ತು. ನಂತರ ಇದನ್ನೇ ಒನ್ ಬೆಲ್ಟ್ ಒನ್ ರೋಡ್ ಎಂದು ಚೀನಾ ಮರುನಾಮಕರಣ ಮಾಡಿತು. ಸುಮಾರು 155 ದೇಶಗಳಲ್ಲಿ ಮೂಲ ಸೌಕರ್ಯದ ನಿರ್ಮಾಣದ ಕಾರ್ಯಕ್ರಮವಿದು ಎಂದು ಇಡೀ ಜಗತ್ತನ್ನು ನಂಬಿಸುತ್ತಾ ತನ್ನ ವ್ಯಾಪಾರದ ಅನುಕೂಲಕ್ಕಾಗಿ ರಸ್ತೆ, ರೈಲ್ವೆ ಹಳಿ, ಪೈಪ್ ಲೈನ್, ಬಂದರುಗಳು, ವಿದ್ಯುತ್ ಸ್ಥಾವರಗಳು, ಎಸ್.ಇ.ಝಡ್ ಗಳನ್ನು ನಿರ್ಮಿಸುತ್ತಿದೆ.
![]() |
| One Belt One Road (OBOR) Initiative by china |
ಎರಡನೇ ವಿಶ್ವಯುದ್ಧದ ನಂತರ ಅಮೇರಿಕಾ ವಿಶ್ವದ ದೊಡ್ಡಣ್ಣ ಅನ್ನಿಸಿಕೊಂಡಿತು. ಜಾಗತೀಕರಣದ ಕಾರಣ ಅಮೇರಿಕಾ ಭಯೋತ್ಪಾದನೆ, ಹವಾಮಾನದ ವೈಪರಿತ್ಯ, ಹಾಗೂ ಇತರ ಜಾಗತಿಕ ಸಮಸ್ಯೆಗಳ ಕುರಿತು ಗಮನ ಹರಿಸಿತು. ಏತನ್ಮಧ್ಯೆ, ಚೀನಾ ಕಳೆದ ಮೂರು ದಶಕಗಳಲ್ಲಿ ಸದ್ದಿಲ್ಲದೆ ತನಗೆ ಬೇಕಾದ, ಆಯ್ದ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ವೃದ್ಧಿಸಿಕೊಳ್ಳುತ್ತಾ, ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿತು. ಇದಷ್ಟೇ ಅಲ್ಲದೇ ಚೀನಾ 149 ದೇಶಗಳಲ್ಲಿ ಆಕ್ರಮಣಕಾರಿಯಾಗಿ ಭಾರಿ ಮೊತ್ತದ ಹೂಡಿಕೆ ಮಾಡಿತು ತನ್ಮೂಲಕ ಕೀನ್ಯಾ, ಜಾಂಬಿಯಾ, ಲಾಒಸ್, ಮಂಗೋಲಿಯಾ, ಪಾಕೀಸ್ತಾನ ಸೇರಿದಂತೆ ಅನೇಕ ಬಡ ರಾಷ್ಟ್ರಗಳನ್ನು ತನ್ನ ಸಾಲದ ಸುಳಿಯಲ್ಲಿ ಸಿಲುಕಿಸಿತು. ಚೀನಾ ಪಾಲಿಗೆ ಎಲ್ಲವೂ ಸರಿ ಇತ್ತು, ತನಗೆ ಪ್ರತಿಸ್ಪರ್ಧಿಯೇ ಇಲ್ಲದಂತೆ ಮೆರೆಯುತ್ತಿತ್ತು. ಆದರೆ, 2019 ನಂತರ ಶನಿ ಚೀನಾದ ಹೆಗಲೇರಿ ಎಲ್ಲವೂ ಬದಲಾಯಿತು!
ಚೀನಾಕ್ಕೆ ಪ್ರತಿಸ್ಪರ್ಧಿಯಾಗಿ ಪ್ರಧಾನಿ ನರೇಂದ್ರ ಮೋದಿ ಬಂದರು. ಭಾರತವನ್ನು ವ್ಯಾಪಾರ, ಸಂಸ್ಕೃತಿ ಮೂಲಕ ಜಾಗತಿಕ ಶಕ್ತಿಯಾಗಿ ರೂಪಿಸಲು ಸಂಕಲ್ಪಬದ್ಧರಾಗಿ ಇಂದಿಗೂ ದುಡಿಯುತ್ತಿದ್ದಾರೆ. ರಾಷ್ಟ್ರದ ನಾಯಕರ ಸಂಕಲ್ಪವನ್ನು ಸಾಕಾರಗೊಳಿಸಲು ಸಹಕರಿಸುವುದು ದೇಶದ ವ್ಯಾಪಾರಸ್ಥರು. ಚೀನಾದ ಕ್ಸಿ ಜಿನ್‌ಪಿಂಗ್ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವುದು - ಚೀನಾ ಓಷನ್ ಶಿಪ್ಪಿಂಗ್ ಕಂಪನಿ, ಚೀನಾ ಮರ್ಚೆಂಟ್ಸ್ ಪೋರ್ಟ್ ಹೋಳ್ಡಿಂಗ್ಸ್, ಚೀನಾ ರೈಲ್ವೇ ಗ್ರೂಪ್, ಚೀನಾ ರೈಲ್ವೇ ಕನ್ಸ್ಟ್ರಕ್ಷನ್ ಕಾರ್ಪೋರೇಷನ್ ತರಹದ ಕಂಪನಿಗಳು. ಇದಲ್ಲದೇ ಡಿ.ಹೆಚ್.ಎಲ್, ಹೆಚ್.ಪಿ, ಜನರಲ್ ಎಲೆಕ್ಟ್ರಿಕ್ ನಂತಹ ವಿದೇಶಿ ಕಂಪನಿಗಳು ಸಹ ತಮ್ಮ ಲಾಭಕ್ಕಾಗಿ ಚೀನಾದ ಕಂಪನಿಗಳ ಜೊತೆಗೆ ಕೈಜೋಡಿಸಿದೆ. ಭಾರತದಲ್ಲೂ ಸಹ ಇಂತಹ ಕಂಪನಿಗಳು ದೇಶದ ಏಳಿಗೆಗಾಗಿ ಕೆಲಸ ಮಾಡುತ್ತಿವೆ. ಓ.ಎನ್.ಜಿ.ಸಿ, ಜಿ.ಏ.ಐ.ಎಲ್, ರಿಲಯನ್ಸ್, ಎಲ್&ಟಿ ಹಾಗೂ ಬಹು ಮುಖ್ಯವಾಗಿ ಅದಾನಿ ಗ್ರೂಪ್!
ಅದಾನಿ ಪೋರ್ಟ್ಸ್ & ಎಸ್ಇಜೆಡ್ ಲಿಮಿಟೆಡ್ 1998 ರಲ್ಲಿ ಪ್ರಾರಂಭವಾಗೊಂಡು ಗುಜರಾತಿನ ಮುಂದ್ರಾ ಬಂದರು ಸೇರಿದಂತೆ ಭಾರತದ ಪ್ರಮುಖ ಬಂದರುಗಳನ್ನು ನಿರ್ವಹಿಸುತ್ತಿದೆ. ಇದೇ ಸಂಸ್ಥೆ ತನ್ನ ಸ್ವಾಮ್ಯದ ಕಂಪನಿಯೊಂದನ್ನು 2020 ರಲ್ಲಿ ಸಿಂಗಾಪುರದಲ್ಲಿ ಕಟ್ಟಿತು ಹಾಗೂ 2030 ರ ವೇಳೆಗೆ ವಿಶ್ವದ ಅತಿದೊಡ್ಡ ಬಂದರು ನಿರ್ಮಿಸುವ ಕಂಪನಿಯಾಗುವುದಾಗಿ ಘೋಷಿಸಿಕೊಂಡಿತು. ಈ ನಡೆ ಭಾರತವನ್ನು ಜಾಗತಿಕ ಶಕ್ತಿಯಾಗಿಸುವತ್ತ ಒಂದು ಪ್ರಮುಖ ಹೆಜ್ಜೆಯಾಯ್ತು. ಈ ರೀತಿಯ ನಡೆಯನ್ನು ಚೀನಾ ನಿರೀಕ್ಷಿಸಿರಲಿಲ್ಲ. ಮುಂದಿನ ಹಂತದಲ್ಲಿ ಮಯನ್ಮಾರ್, ಬಾಂಗ್ಲಾದೇಶಗಳಲ್ಲಿ ಅದಾನಿ ಸಂಸ್ಥೆ ತನ್ನ ವ್ಯಾಪರದ ಬಾಹುಗಳನ್ನು ಚಾಚಿತು, 2022 ರಲ್ಲಿ ಪಕ್ಕದ ಶ್ರೀಲಂಕಾವನ್ನು ಪ್ರವೇಶಿಸಿತು. ಇದರಿಂದ ಚೀನಾ ಕೆಂಡಾಮಂಡಲವಾಯಿತು. ಕಾರಣ, ಅಲ್ಲಿಯವರೆಗೆ ಲಂಕಾದ ಬಂದರು ಚೀನಾದ ನಿಯಂತ್ರಣದಲ್ಲಿತ್ತು ಹಾಗೂ ಆ ಬಂದರು ಚೀನಾದ ಸೈನ್ಯದ ದೃಷ್ಟಿಯಿಂದ ಆಯಾಕಟ್ಟಿನ ಪ್ರದೇಶವಾಗಿತ್ತು.
ಅದಾನಿ ಅಲ್ಲಿಗೆ ನಿಲ್ಲಲಿಲ್ಲ. ಅರಬ್ ಒಕ್ಕೂಟ ರಾಷ್ಟ್ರಗಳ ಜೊತೆಗೂಡಿ ತಾಂಜಾನಿಯಾ ತನ್ಮೂಲಕ ಆಫ್ರಿಕಾಕ್ಕೆ ಲಗ್ಗೆ ಇಟ್ಟರು. ತಾಂಜಾನಿಯಾದಲ್ಲಿ ಚೀನಾ ಅದಾಗಲೇ ಒಂದು ವರ್ಷದಿಂದ ಬಾಗಮೊಯೋ ಬಂದರು ನಿರ್ಮಣದ ಪ್ರಯತ್ನದಲ್ಲಿತ್ತು. ಅದಾನಿ ಮೊರಾಕೊಗೆ ಹೋದರು ಅಲ್ಲೂ ಸಹ ಚೀನಾ ಅದಾಗಲೇ ತನ್ನ ಕಬಂದ ಬಾಹುಗಳನ್ನು ಚಾಚಿತ್ತು. ಇದೆಲ್ಲಕ್ಕೂ ಮಿಗಿಲಾಗಿ ಅದಾನಿ ಚೀನಾಕ್ಕೆ ಹೊಡೆದ ನೀಡಿದ್ದು ಇಸ್ರೇಲ್‌ನಲ್ಲಿ. ಜನವರಿ 2023 ರಲ್ಲಿ ಅದಾನಿ ಇಸ್ರೇಲ್‌ನ ಹೈಫಾ ಬಂದರುಗಳಲ್ಲೊಂದನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಚೀನಾ ಈ ಬಂದರನ್ನು ಪಡೆಯಲು ಶತಪ್ರಯತ್ನ ಮಾಡಿ ವಿಫಲವಾವಾಗಿತ್ತು. ಅದೇ ಸಮಯಕ್ಕೆ ಜಾರ್ಜ್ ಸೊರೋಸ್ ನ ಹಿಂಡೆನ್ಬರ್ಗ್ ವರದಿ ಬಂದದ್ದು! ಇದರ ನಂತರ ಅದಾನಿ ಈಜಿಪ್ಟಿಗೂ ಕಾಲಿಟ್ಟರು ಹಾಗೂ ಇತ್ತೀಚೆಗೆ ಗ್ರೀಸಿನ ಬಂದರಿಗಾಗಿ ಸಹ ಮಾತು ನಡೆಸುತ್ತಿದ್ದಾರೆ. ನೆನಪಿಡಿ, ನರೇಂದ್ರ ಮೋದಿ ಕಳೆದ ವಾರ ಬ್ರಿಕ್ಸ್ ಶೃಂಗಸಭೆ ನಂತರ ಗ್ರೀಸಿಗೆ ಭೇಟಿಕೊಟ್ಟರು. ಚೀನಾದ ನಿಯಂತ್ರಣದಲ್ಲಿರುವ ಪಿರಾಯಸ್ ಬಂದರನ್ನು ಭಾರತ ಪಡೆಯುವ ಪ್ರಯತ್ನದಲ್ಲಿದೆ.
![]() |
| Adani Group Enters Israel After Haifa Port Acquisition |
ಜಾಗತಿಕ ಮಾಧ್ಯಮಗಳು ಚೀನಾ ವಿರುದ್ಧ ಭಾರತ ಹಿಂದಿಕ್ಕಿದೆ ಎಂದು ಹೇಳಲಾರಂಭಿಸಿವೆ. ಮತ್ತೀಗ ಕಾಂಗ್ರೇಸ್ ನ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಅದಾನಿಯ ಗ್ರೀಸಿನ ನಡೆಯ ಕುರಿತು ಪ್ರಶ್ನೆ ಎತ್ತುತ್ತಿದೆ. ಈ ಹಿಂದೆಯೂ ರಾಹುಲ್ ಅದಾನಿ ಸಂಸ್ಥೆಯ ಮೇಲೆ ಕೂಗಾಡಿದ್ದಾನೆ, ಅದನ್ನೇ ಆಧಾರವಾಗಿಟ್ಟುಕೊಂಡು ಜಾಗತಿಕ ಮಟ್ಟದಲ್ಲಿ ಅದಾನಿಯನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. 2009 ರಲ್ಲಿ ರಾಹುಲ್ ಹಾಗೂ ಚೀನಾ ನಡುವೆ ಆದ ಒಪ್ಪಂದದ ವಿಚಾರ ಇಂದಿಗೂ ನಿಗೂಢವಾಗಿದೆ. ಚೀನಾ ಭಾರತದ ಗಡಿ ತಿದ್ದಿದರೆ ರಾಹುಲ್ ಇಲ್ಲಿನ ಕೇಂದ್ರ ಸರ್ಕಾರದ ವಿರುದ್ಧ ಮಾತಾಡುತ್ತಾನೆ. ಭಾರತದ ಪ್ರಧಾನಿಯಾಗಬೇಕೆಂಬ ಕನಸು ಕಾಣುತ್ತಿರುವ ವ್ಯಕ್ತಿ ಚೀನಾದ ಗುಲಾಮ. ಇವನನ್ನು ಕೂಡಿಕೊಂಡಿರುವವರು ದೇಶವನ್ನು ತುಂಡರಿಸಬೇಕೆಂಬ ಕನಸು ಕಾಣುತ್ತಿರುವ ಡಾಟ್ ಪಾರ್ಟಿಗಳು! ಇವರೆಲ್ಲರೆದುರು ನಿಂತು ಭಾರತವನ್ನು ಗೆಲ್ಲಿಸಬೇಕಾಗಿರುವುದು ನಾವು ಮತ್ತು ನೀವು.
***********************************************************
References
May 16, 2023
ಪುಗ್ಸಟ್ಟೆ ಅಂದರೆ ನಂಗೂ ಇರಲಿ ನನ್ನ ಮಗಂಗೂ ಇರಲಿ!
ಕರ್ನಾಟಕದ ಚುನಾವಣೆ ಮುಗಿದ ದಿನ ಅಂದರೆ ಎಕ್ಸಿಟ್ ಪೋಲ್ ದಿನ ಇಂಡಿಯಾ ಟುಡೆ ಒಂದು ವರದಿ ಬಿತ್ತರಿಸಿತ್ತು. ಶಾಲೆಗೆ ಹೋಗದಿರುವವರಲ್ಲಿ 52%, 12ನೇ ತರಗತಿ ಉತ್ತೀರ್ಣ ಆದವರಲ್ಲಿ 37%, ಪದವಿ ಹೊಂದಿದವರಲ್ಲಿ ಸರಾಸರಿ 34% ಹಾಗೂ ವೃತ್ತಿಪರ ಪದವಿ ಹೊಂದಿದವರಲ್ಲಿ ಕೇವಲ 29% ಅಷ್ಟು ಜನ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ ಎಂದು. ಅದರ ಸಾರಾಂಶ ಇಷ್ಟು. ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾದಷ್ಟು ಕಾಂಗ್ರೆಸ್ಸಿಗೆ ಬೀಳುವ ಮತಗಳು ಕಡಿಮೆ! ವಿದ್ಯೆ ಜೊತೆಗೆ ಪ್ರಜ್ಞೆ ಹೆಚ್ಚಾದಷ್ಟು ಅವರ ಮತಗಳಿಕೆಯ ಪ್ರಮಾಣ ಇನ್ನೂ ಕಮ್ಮಿಯಾಗುತ್ತದೆ. ಇದು ಹೌದಾದರೆ ಕರ್ನಾಟಕದ ಮತದಾರರಲ್ಲಿ ಅವಿದ್ಯಾವಂತರು ಹಾಗೂ ಪ್ರಜ್ಞೆ ಇಲ್ಲದವರು ಹೆಚ್ಚು ಎಂದಾಗುತ್ತದೆ. ಹೌದ? ನೋಡೋಣ.
ಕೇಂದ್ರದಲ್ಲಿ ಕಾಂಗ್ರೆಸ್ ದುರ್ಬಲವಾಗಿರಬಹುದು ಆದರೆ ದೃಢವಾದ ನಾಯಕತ್ವದ ಕಾರಣದಿಂದಾಗಿಯೇ ಕರ್ನಾಟಕದಲ್ಲಿ ಗಟ್ಟಿಯಾಗಿದೆ. ಭಾರತ್ ಜೋಡೋ ಯಾತ್ರೆ, ಮೇಕೆದಾಟು ಪಾದಯಾತ್ರೆ ಮೂಲಕ ಕಾಂಗ್ರೆಸ್ ತನ್ನ ಸಂಘಟನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿತು. ಪೇ ಸಿಎಂ ಹಾಗೂ ಸಾಕ್ಷ್ಯ ಇಲ್ಲದಿದ್ದರೂ 40% ಕಮಿಷನ್ ಸರ್ಕಾರ ಎಂದು ಪದೇ ಪದೇ ಹೇಳುತ್ತಾ, ಜಾಹಿರಾತುಗಳ ಮೂಲಕ ಜನರ ಮನಸ್ಸಿನಲ್ಲಿ ಭಾಜಪಾ ಆಡಳಿತದ ಸರ್ಕಾರ ಭ್ರಷ್ಟ ಎಂಬ ಭಾವನೆ ಮೂಡುವಂತೆ ಮಾಡಿದರು. ಉಚಿತ ಗ್ಯಾರಂಟಿಗಳ ಮೂಲಕ, ಹಳ್ಳಿಗಳಲ್ಲಿ ಗ್ಯಾರಂಟಿ ಕಾರ್ಡ್ಗಗಳಿಗೆ ಸಹಿ ಹಾಕಿಸಿಕೊಳ್ಳುವ ಮೂಲಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ತಿಂಗಳಿಗೆ ಮುಂಚಿತವಾಗಿಯೇ ಬಿಡುಗಡೆ ಮಾಡಿ ಜನರ ಮನಸ್ಸನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿತು. ಜಾತಿ ಸಮೀಕರಣ ಮಾಡುವಲ್ಲಿ ಈ ಬಾರಿ ಕಾಂಗ್ರೆಸ್ ಯಶಸ್ವಿಯಾಗಿದೆ. ಇಂಡಿಯಾ ಟುಡೇ ಅವರ ವರದಿಯನ್ನೇ ನಂಬುವುದಾದರೆ ಮುಸಲ್ಮಾನರು ಸಾರಸಗಟಾಗಿ ಕಾಂಗ್ರೆಸ್ಸಿಗೆ ಮತ ಹಾಕಿದ್ದಾರೆ.
![]() |
| Caste wise vote share as per exit polls |
ಇತ್ತ ಭಾಜಪದ ಪರಿಸ್ಥಿತಿ ತದ್ವಿರುದ್ಧ. ಕೇಂದ್ರದ ನಾಯಕತ್ವ ಗಟ್ಟಿಯಾಗಿದೆ, ಆದರೆ ರಾಜ್ಯದಲ್ಲಿ ಯಡಿಯೂರಪ್ಪ ಹೊರತು ಪಡಿಸಿ ಬಹುತೇಕರನ್ನು ಸೆಳೆಯಬಹುದಾದ ಮಾಸ್ ಲೀಡರ್ ಇಲ್ಲ ಹಾಗೂ ಅವರನ್ನು ಅವಧಿಗೂ ಮುನ್ನ ಕುರ್ಚಿಯಿಂದ ಇಳಿಸಿದ್ದು ದುಬಾರಿಯಾಯಿತು. ಸ್ಥಳೀಯ ನಾಯಕರು ಮೋದಿ ವರ್ಚಸ್ಸಿನ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದಾರೆ. ಕಾಂಗ್ರೆಸ್ ಅವರ 40% ಕಮಿಷನ್ ಆರೋಪಕ್ಕೆ ಇಲ್ಲಿನ ನಾಯಕರ ಬಳಿ ಸಮರ್ಥ ಉತ್ತರ ಇರಲಿಲ್ಲ. ಚುನಾವಣೆಗೆ ಒಂದು ವಾರದ ಮುನ್ನ ಟಿಕೆಟ್ ಹಂಚಿಕೆ ಗದ್ದಲ ಮಧ್ಯೆ ನಾಮಕಾವಸ್ಥೆ ಎಂಬಂತೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಇದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿತೇ ಹೊರತು ಸಾಮಾನ್ಯ ಜನರಿಗೆ ಹೋಗಲಿ ಭಾಜಪಾದ ತಳಮಟ್ಟದ ಕಾರ್ಯಕರ್ತರಿಗೆ ಮನದಟ್ಟಾಗಿರುವುದು ಅನುಮಾನ! ಅಂತಿಮ ಹಂತದಲ್ಲಿ ಮುಸಲ್ಮಾನರ ಮತಗಳನ್ನು ಕ್ರೋಡಿಕರಿಸಲು ಬಜರಂಗ ದಳ ನಿಷೇಧವೆಂಬ ಖೆಡ್ಡವನ್ನು ಕಾಂಗ್ರೆಸ್ ತೋಡಿತು. ಆ ಖೆಡ್ಡಾಕ್ಕೆ ಭಾಜಪಾದ ನಾಯಕರು ಬಿದ್ದರು. ಮುಸಲ್ಮಾನರಿಗೆ ಏನೇ ಸೌಕರ್ಯ, ಸೌಲಭ್ಯ ಕೊಟ್ಟರೂ ಅವರಿಗೆ ಅಂತಿಮವಾಗಿ ಮುಖ್ಯ ಅನ್ನಿಸುವುದು ಅವರ ಮತ ಮಾತ್ರ. ರಾಜ್ಯ ಸರ್ಕಾರಕ್ಕೆ ಇಂತಹ ಸಂಘಟನೆಯನ್ನು ನಿಷೇಧ ಮಾಡುವ ಹಕ್ಕಿಲ್ಲ, ಅದು ಮಾಡಬೇಕಾಗಿರುವುದು ಕೇಂದ್ರ ಸರ್ಕಾರ ಎಂಬುದನ್ನು ಸಹ ಯೋಚಿಸದೆ ಮುಸಲ್ಮಾನರು ಕಾಂಗ್ರೆಸ್ ಪರ ವಾಲಿದರು.
ರಾಹುಲ್ ಗಾಂಧಿಯ ಸಂಸತ್ ಸದಸ್ಯತ್ವ ನಿಷೇಧ, ದಲಿತ ಮುಖಂಡ ಅಖಂಡ ಶ್ರೀನಿವಾಸ ಮೂರ್ತಿಯವರಿಗಾದ ಅನ್ಯಾಯಗಳನ್ನು ಭಾಜಪಾ ಚುನಾವಣ ವಿಷಯವಾಗಿ ತೆಗೆದುಕೊಳ್ಳಲೇ ಇಲ್ಲ. ರಾಜ್ಯದಿಂದ 25 ಸಂಸದರು ಅಯ್ಕೆಯಾಗಿದ್ದಾರಾದರೂ ಚುನಾವಣ ಪ್ರಚಾರದಲ್ಲಿ ಬಹುತೇಕರು ತೊಡಿಗಿಸಿಕೊಳ್ಳಲೇ ಇಲ್ಲ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸ್ಥಳಿಯ ನಾಯಕರ ಅಹಂಕಾರ, ಕಾರ್ಯಕರ್ತರೆಡೆಗಿನ ನಿರ್ಲಕ್ಷ್ಯತನವನ್ನು ಹೊರಗೆಡೆವಿತು. ಮೂರು ವರ್ಷಗಳ ತಥಾಕತಿತ 'ಕಠಿಣ ಕ್ರಮ' ಮಾನ್ಯ ಗೃಹ ಸಚಿವರನ್ನು ಜನಸಾಮಾನ್ಯರ ದೃಷ್ಠಿಯಲ್ಲಿ ಜೋಕರ್ ಆಗಿಸಿತು. ಪಠ್ಯಪುಸ್ತಕ ಪರೀಷ್ಕರಣೆ ವಿಚಾರವನ್ನು ಸರ್ಕಾರ ನಿರ್ವಹಣೆ ಮಾಡಿದ ರೀತಿ ಯಾರಿಗೂ ಸಮಾಧಾನ ತರುವಂತಹುದಾಗಿರಲೇ ಇಲ್ಲ. ಬೆಲೆ ಏರಿಕೆ ಆಗಿರುವುದಂತೂ ಸತ್ಯ. ಆದರೆ ಅದರ ಹಿಂದಿನ ಕಾರಣ ಹಾಗೂ ಅನಿವಾರ್ಯತೆಯನ್ನು ಭಾಜಪಾದ ಯಾವ ನಾಯಕನೂ ಜನಸಾಮಾನ್ಯರಿಗೆ ಅರ್ಥ ಮಾಡಿಸುವ ಪ್ರಯತ್ನ ಸಹ ಮಾಡಲಿಲ್ಲ!
ಇನ್ನು ಜನ ಸಾಮಾನ್ಯರ ವಿಚಾರಕ್ಕೆ ಬರೋಣ. ಸಿದ್ಧಾಂತ, ಧರ್ಮ, ಅಭಿವೃದ್ಧಿ, ರಾಜ್ಯದ ಆರ್ಥಿಕ ಸ್ಥಿರತೆ ಅನ್ನುವುದೆಲ್ಲವನ್ನು ಬದಿಗೆ ಸರಿಸಿ ಸ್ವಾರ್ಥಪರವಾದ ಜಾತಿ, ಮಿಸಲಾತಿ, ಹಣ ಹಾಗೂ ಬಿಟ್ಟಿ ಭಾಗ್ಯಗಳನ್ನು ಜನ ಆಯ್ಕೆ ಮಾಡಿದರು; ಅದ್ಭುತ! ಜಾತ್ಯಾತೀಯತೆ, ಸರ್ವಜನಾಂಗದ ಶಾಂತಿಯ ತೋಟ ಅಂತ ಏನೇ ಹೇಳಿದರೂ ಕಾಂಗ್ರೆಸ್ ನವರ ಪರಮ ಪವಿತ್ರ ಅಜೆಂಡಾ 'ಮುಸಲ್ಮಾನರ ಓಲೈಕೆ'! ಹಿಂದೂಗಳು ಅವರಿಗೆ ಮತ ಹಾಕಲಿ, ಬಿಡಲಿ ಅವರು ಓಲೈಕೆ ರಾಜಕಾರಣ ಮಾಡಿಯೇ ಮಾಡುತ್ತಾರೆ. ಇದನ್ನು ಅರ್ಥೈಸಿಕೊಳ್ಳದ ಹಿಂದೂಗಳು ಭಾಜಪಾದ ನಾಯರಿಗೆ ಪಾಠ ಕಲಿಸುತ್ತೇವೆ ಎಂದು ಮುಂದಾದರು. ಭಾಜಪಾದ ನಾಯಕರು ಹಿಂದೂಗಳನ್ನು 'ಟೇಕನ್ ಫಾರ್ ಗ್ರಾಂಟೆಡ್' ಅಂದುಕೊಂಡರು. ಇಬ್ಬರ ನಡುವೆ ಕಾಂಗ್ರೆಸ್ ಗೆಲುವು ಸಾಧಿಸಿತು. ಕೊಲೆ ಆಪಾದನೆ ಮೇಲೆ ಧಾರವಾಡಕ್ಕೆ ಹೋಗಬಾರದೆಂದು ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ವಿನಯ್ ಕುಲಕರ್ಣಿಯನ್ನು, ಹಿಂದೂ ಪದದ ಬಗ್ಗೆ ಕೆಟ್ಟದಾಗಿ ಮಾತಾಡಿದ ಸತೀಶ್ ಜಾರಕೀಹೊಳಿಯನ್ನು ಗೆಲ್ಲಿಸಿದ, ಕರೋನಾ ಸಮಯದಲ್ಲಿ ಕೆಲಸ ಮಾಡಿದ ರೇಣುಕಾಚಾರ್ಯ ಅವರನ್ನು ಸೋಲಿಸಿದ ಜನತೆಗೆ ಧನ್ಯವಾದ ಹೇಳದೆ ಬೇರೆ ವಿಧಿಯಿಲ್ಲ. ನಮ್ಮ ಸಮುದಾಯಕ್ಕೆ ಸೇರಿದ ಒಬ್ಬರನ್ನು ಮಂತ್ರಿಯೋ ಮುಖ್ಯಮಂತ್ರಿಯೋ ಮಾಡಿದರೆ ನಾವು ಉದ್ದಾರವಾಗುತ್ತೇವೆ ಅನ್ನುವ ಜನರ ಬುದ್ಧಿವಂತಿಕೆಗೆ ಶರಣು.
ಅಮಿತ್ ಷಾ ರನ್ನು ಚಾಣಕ್ಯ ಅನ್ನುತ್ತಿದ್ದರು. ಆದರೆ ಡಿಕೆಶಿ ಹಾಗೂ ಸ್ಟ್ರಾಟಜಿಸ್ಟ್ ಸುನಿಲ್ ಕನುಗೋಲು ಅವರುಗಳ ಮುಂದೆ ಅಮಿತ್ ಷಾ ರ ಆಟ ಕರ್ನಾಟಕದಲ್ಲಿ ನಡೆಯಲಿಲ್ಲ. ಈತ ಸಧ್ಯ ಕಾಂಗ್ರೆಸ್ ಪಾಲಿನ ಕಣ್ಮಣಿ. ವಿಚಾರ ಸುಳ್ಳಾದರೂ ಜನಾಭಿಪ್ರಾಯ ಮೂಡಿಸುವ ನಿಪುಣ ಈತ. ಕಳೆದ ಒಂದೆರಡು ತಿಂಗಳಿಂದ ಪುಲ್ವಾಮಾ ಘಟನೆಯನ್ನು ಕೇಂದ್ರ ಸರ್ಕಾರವೇ ಮಾಡಿಸಿದ್ದು ಎಂಬ ಅಭಿಪ್ರಾಯ ಮೂಡಿಸುವ ಪ್ರಯತ್ನ ಪ್ರಾರಂಭವಾಗಿದೆ. ಇದನ್ನು ಎಚ್ಚರಿಕೆಯಿಂದ ನಿಭಾಯಿಸದಿದ್ದರೆ ಅಪಾಯ ಖಂಡಿತ!
ಕರ್ನಾಟಕದ ಈ ಚುನಾವಣೆ ಭಾಜಪಾದ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಸ್ಥಳೀಯ ಸಮಸ್ಯೆ ಹಾಗೂ ನಾಯಕತ್ವದ ಮಹತ್ವದ ಕುರಿತು ಒಂದು ಪಾಠ. ವಿರೋಧ ಪಕ್ಷಗಳಿಗೆ ಒಂದು ಲೈಫ್ ಲೈನ್. ಒಟ್ಟಾರೆ ಜನರ ತೀರ್ಪನ್ನು ಗಮನಿಸದರೆ ಮಾ ಹಿರಣ್ಣಯ್ಯನವರ ನಾಟಕದ ಒಂದು ಸಂಭಾಷಣೆ ನೆನಪಾಗುತ್ತಿದೆ - 'ದುಡ್ಡು ದುಗ್ಗಾಣಿ ಅಂದರೆ ನಾ ಮುದುಕ, ನನ್ನ ಮಗ ಹುಡುಗ ಅಂತಾರೆ. ಅದೇ ಪುಗ್ಸಟ್ಟೆ ಅಂದರೆ ನಂಗೂ ಇರಲಿ ನನ್ನ ಮಗಂಗೂ ಇರಲಿ ಅಂತಾರೆ'. ಈ ಸಂಭಾಷಣೆ ಬರೆದು 50 ವರ್ಷದ ಮೇಲಾಗಿದೆ ಆದರೆ ಸಮಾಜ ಈಗಲೂ ಅಂತಹುದೇ ಪರಿಸ್ಥಿತಿಯಲ್ಲಿದೆ ಎಂಬುದು ವಿಷಾಧನೀಯ.
March 25, 2023
ಪ್ರಜಾಪ್ರಭುತ್ವದಲ್ಲಿ ಮೌಲ್ಯವೇ ಮಾಪನ
ಕರ್ನಾಟಕದಲ್ಲಿ ಚುಣಾವಣೆಯ ಕಾವು ಜೋರಾಗಿದೆ. ಭಾಜಪಾ, ಕಾಂಗ್ರೇಸ್, ದಳ ರಥಯಾತ್ರೆ ನಡೆಸುತ್ತಿವೆ. ಮೂರು ಪಕ್ಷಗಳು ತಮ್ಮ ಪ್ರಣಾಳಿಕೆ, ಘೋಷಣೆಗಳನ್ನು ಮಾಡುತ್ತಿವೆ. ದೆಹಲಿ ಹಾಗೂ ಪಂಜಾಬ್ ಅಲ್ಲಿ ಹೆಚ್ಚು ಸದ್ದು ಮಾಡಿದ ಏಏಪಿ ಇಲ್ಲಿ ಸುಳಿವೇ ಇಲ್ಲ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಜಾಕೀಯದ ಹೆಸರು ಓಡಾಡುತ್ತಿದೆ. 2024 ರಲ್ಲಿ ಕೇಂದ್ರ ಚುಣಾವಣೆ ನಡೆಯಬೇಕಿದೆ. ಮೋದಿಯವರನ್ನು ಅಧಿಕಾರದಿಂದ ಇಳಿಸಲು ಪ್ರಾದೇಶಿಕ ಪಕ್ಷಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೊರೋಸ್ ಅಂತಹವರಿಂದ ಷಢ್ಯಂತ್ರ ನಡೆಯುತ್ತಿದೆ. ಇದೆಲ್ಲ ಗದ್ದಲಗಳ ನಡುವೆ ಜನರ ಆಯ್ಕಯೇ ಅಂತಿಮ. ನಮ್ಮ ರಾಜ್ಯವನ್ನು, ದೇಶವನ್ನು ಯಾರು ಮುನ್ನಡೆಸಬೇಕು ಎಂಬುದರ ತೀರ್ಮಾನ ಶ್ರೀಸಾಮಾನ್ಯರದ್ದು. ಅದನ್ನೇ ಪ್ರಜಾಪ್ರಭುತ್ವ ಅನ್ನುವುದು. ಎಲ್ಲರಿಗೂ ಒಂದೇ ಮೌಲ್ಯದ ಮತ ಅಂತ ಇರುವ ಪ್ರಜಾಪ್ರಭುತ್ವದಲ್ಲಿ ಜನರು ಸರಿಯಾದದ್ದನ್ನು, ದೇಶದ ಆರೋಗ್ಯಕ್ಕೆ ಪೂರಕವಾದದ್ದನ್ನು ಆಯ್ಕೆ ಮಾಡಿದರೆ ಒಳಿತು ಆದರೆ ತಪ್ಪಾದರೆ ಎಂಬುದೇ ಪ್ರಶ್ನೆ.
ಕಾಂಗ್ರೇಸ್ಸಿನವರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಗ್ಯಾರಂಟಿ ಇದೆಯೋ ಇಲ್ಲವೋ ಆದರೆ ಮನಸೋ ಇಚ್ಛೆ ಬಿಟ್ಟಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ತಿಂಗಳಿಗೆ 200 ಯೂನಿಟ್ ವಿದ್ಯುತ್, ಪ್ರತಿ ಯಜಮಾನಿಗೆ ತಿಂಗಳಿಗೆ 2000 ರೂ, ಅನ್ನಭಾಗ್ಯದ ಹೆಸರಲ್ಲಿ ಪ್ರತಿಯೊಬ್ಬರಿಗೂ ಉಚಿತ ಅಕ್ಕಿ, ಯುವನಿಧಿ ಹೆಸರಿನಲ್ಲಿ 3000 ರೂ! ಈ ಘೋಷಣೆಗಳು ಹೇಗಿದೆ ಎಂದರೆ; ಡಿಗ್ರಿ ಓದಿದ ತರುಣ ಕೆಲಸ ಮಾಡದೆ ಮನೆಯಲ್ಲಿ ಕೂತರೆ ಅವನಿಗೆ ಹಾಗೂ ಮನೆಯ ಯಜಮಾನಿಗೆ ಸೇರಿ 5000 ರೂ ಬರುತ್ತದೆ. ಆ ಹಣದಲ್ಲಿ ಸಾರಾಯಿ ಕೊಂಡು, ಕುಡಿದು ಬಡವರಾದರೆ 10 ಕೆಜಿ ಅಕ್ಕಿ ಸಿಗುತ್ತದೆ. ಅದನ್ನು ಮಾರಿ ಅಥವಾ ತಿಂದು ಜೀವನವನ್ನು ಸಾರ್ಥಕ ಮಾಡುಕೊಳ್ಳಬಹುದು. ಜನತಾದಳದವರು ಪಂಚಾಯಿತಿಗೊಂದು ಹೈಟೆಕ್ ಆಸ್ಪತ್ರೆ ಹಾಗೂ ಶಾಲೆ, ಸಾಲ ಮನ್ನ, ರೈತರಿಗೆ ಎಕರೆಗೆ 10000 ರೂ ಎಂಬಂತಹ ಘೋಷಣೆಗಳನ್ನು ಮಾಡಿದ್ದಾರೆ. ಇದಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರ ಹಾಗೂ ಹೇಗೆ ಕಾರ್ಯರೂಪಕ್ಕೆ ತರುತ್ತೀರ ಎಂಬ ಪ್ರಶ್ನೆಗೆ ಅವರಿಂದ ಸಮರ್ಪಕ ಉತ್ತರ ಇಲ್ಲ. ದುರಾದೃಷ್ಟವಶಾತ್ ಸಮ್ಮಿಶ್ರ ಸರ್ಕಾರ ಬಂದರೇ 'ಪೂರ್ಣ ಬಹುಮತ ಇದ್ದಿದ್ದರೆ ನಮ್ಮ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಬಹುದಿತ್ತು' ಎಂಬ ಉತ್ತರ ಸಿದ್ದವಾಗಿರುತ್ತದೆ. ಪೂರ್ಣ ಬಹುಮತ ಬರುವ ಖಾತ್ರಿ ಇಲ್ಲದ ಮೇಲೆ ಈ ರೀತಿಯ ಪ್ರಣಾಳಿಕೆ ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ರಾಜಕೀಯ ಪಕ್ಷಗಳು ಯೋಚಿಸಬೇಕು. ಇಂತಹ ಪಕ್ಷಗಳಿಗೆ ಮತ ಹಾಕುವ ಮುನ್ನ ಮತದಾರರೂ ಸಹ ಯೋಚಿಸಬೇಕು.
![]() |
| Congress Guarantee |
ಈ ಬಿಟ್ಟಿ ಯೋಜನೆಗಳು ರಾಜ್ಯದ, ದೇಶದ ಭವಿಷ್ಯಕ್ಕೆ ಮಾರಕ ಎಂಬುದು ಸೂಕ್ಷವಾಗಿ ಗಮನಿಸಿದರೆ ಅರ್ಥವಾಗುವಂತಹುದು. ಇಂತಹ ಯೋಚನೆಗಳನ್ನು ಜಾರಿಗೆ ತಂದ ವೆನೇಜುಲಾ ದೇಶ ಆರ್ಥಿಕವಾಗಿ ದಿವಾಳಿಯಾಗಿರುವುದು ನಮ್ಮ ಕಣ್ಣೆದುರಿಗಿದೆ. ಜಾತಿ, ಧರ್ಮಾಧಾರಿತ, ಸ್ವಾರ್ಥಯುತವಾದ ಆರ್ಥಿಕ ನೀತಿ ಜಾರಿಗೆ ತಂದರೆ ಏನಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಪಕ್ಕದ ಪಾಕೀಸ್ತಾನ ಹಾಗೂ ಶ್ರೀಲಂಕಾ! ಜಾತ್ಯಾಧಾರಿತ ಮೀಸಲಾತಿಗೆ ಒತ್ತುಕೊಟ್ಟರೆ ಆ ಜನಾಂಗವನ್ನು ಶಾಶ್ವತವಾಗಿ ಹಿಂದುಳಿಸಿದಂತೆ. ಬದಲಾಗಿ ಹಿಂದುಳಿದವರನ್ನು ಸದೃಢರನ್ನಾಗಿ ಮಾಡುವುದು ಹೇಗೆ ಎಂಬುದು ರಾಜಕೀಯವಾಗಿ, ಸಾಮಾಜಿಕವಾಗಿ ಯೋಚಿಸಬೇಕಾದ ಸಂಗತಿ.
ಭಾರತ್ ಜೋಡೋ ಯಾತ್ರೆ ನಂತರ ಲಂಡನ್ ಪ್ರವಾಸಕ್ಕೆ ತೆರಳಿದ ರಾಹುಲ್ ನರೇಂದ್ರ ಮೋದಿ ಹಾಗೂ ಭಾಜಾಪ ನೇತೃತ್ವದ ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತದ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರು. 2019ರಲ್ಲಿ ಚುಣಾವಣೆ ಪ್ರಚಾರ ಭಾಷಣದಲ್ಲಿ ಮೋದಿ ಎಂದು ಹೆಸರಿರುವವರೆಲ್ಲ ಕಳ್ಳರು ಎಂಬ ಮಾತಿಗಾಗಿ ರಾಹುಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿತ್ತು. 24ನೇ ತಾರೀಖು ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಅವರ ಸಂಸತ್ ಸದಸ್ಯತ್ವವನ್ನು ಅಸಿಂಧುಗೊಳಿಸಿ ಅವರನ್ನು ಅನರ್ಹಗೊಳಿಸುವಂತ ತೀರ್ಪು ಸೂರತ್ ನ್ಯಾಯಾಲಯ ಕೊಟ್ಟಿದೆ. ರಾಹುಲ್ ಆಗಲಿ ಅಥವಾ ಪಕ್ಷದ ವತಿಯಿಂದಾಗಲಿ ಈವರೆಗೆ ತೀರ್ಪಿಗೆ ತಡೆತರುವ ಸೂಚನೆ ಕಾಣಿಸುತ್ತಿಲ್ಲ. ಕಾಂಗ್ರೇಸ್ ಇದನ್ನು ಕರ್ನಾಟಕ ಚುಣಾವಣೆಗೆ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಯೋಚನೆ ಮಾಡುತ್ತಿರಬಹುದು. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಇವರ ಧ್ಯೇಯವಾಗಿರುವುದರಿಂದ ಭಾರತದಲ್ಲಿ 'ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಸುಳ್ಳಿಗೆ ಹೆಚ್ಚು ಪ್ರಚಾರ ಕೊಡಬಹುದು. ಸಾಧ್ಯವಾದಲ್ಲಿ ಜನರ ಸಹಾನುಭೂತಿ ಗಿಟ್ಟಿಸಿ ಪ್ರಿಯಾಂಕಳನ್ನು ಅದಿನಾಯಕಿ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡಬಹುದು. 1975 ರಲ್ಲಿ ರಾಹುಲನ ಅಜ್ಜಿ ಇಂದಿರಾ ವಿರುದ್ಧ ಅಲ್ಲಹಾಬಾದ್ ಕೋರ್ಟು ತೀರ್ಪಿತ್ತಾಗ ದೇಶವನ್ನು ತುರ್ತು ಪರಿಸ್ಥಿತಿ ಎಂಬ ನರಕಕ್ಕೆ ತಳ್ಳಿದರು. ಸಂವಿದಾನದ ವಿಧಿಗಳಿಗೆ ತಿದ್ದುಪಡಿ ತರಲಾಯಿತು, ನಿಯಮಗಳನ್ನು ಗಾಳಿಗೆ ತೂರಿ, ಮೂಲ ಪ್ರಸ್ತಾವನೆಯನ್ನು ಬದಲು ಮಾಡಿ ಸೋಸಿಯಲಿಸ್ಟ್ (ಸಮಾಜವಾದ) ಹಾಗೂ ಸೆಕ್ಯುಲರ್ (ಜಾತ್ಯಾತೀತ) ಎಂಬ ಪದಗಳನ್ನು ಸೇರಿಸಲಾಯಿತು. ಇಗಲೂ ಕಾಂಗ್ರೇಸ್ ಪಕ್ಷವೇ ಅಧಿಕಾರದಲ್ಲಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ! ಇಂತಹವರ ಜೊತೆ ನಿಲ್ಲುವ ಮುನ್ನ, ಅವರ ಪಕ್ಷಕ್ಕೆ ಮತ ಹಾಕುವ ಮುನ್ನ ಯೋಚಿಸಬೇಕು ಮತ್ತೂ ಎಚ್ಚರವಹಿಸಬೇಕು.
![]() |
| Disqualification notice |
ಸಾರ್ವಜನಿಕ ಜೀವನದಲ್ಲಿ ನಾವು ಬಳಸುವ ಪದಗಳ ಮೌಲ್ಯವನ್ನರಿಯಬೇಕು. ಜನಸಾಮಾನ್ಯರು ತಮ್ಮ ಮತವನ್ನು ಹಾಕುವ ಮುನ್ನ ಅದರ ಮೌಲ್ಯವನ್ನರಿಯಬೇಕು. ಎಲ್ಲರ ಮತಕ್ಕೂ ಒಂದೇ ಮೌಲ್ಯ ಎಂಬುದು ಸಂವಿಧಾನ ನಮಗೆ ಕೊಟ್ಟಿರುವ ವರ. ಇದನ್ನು ದೇಶದ ಒಳಿತಿಗಾಗಿ ಸದುಪಯೋಗ ಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಇರುವ ಹತ್ತು ಜನರಲ್ಲಿ ಕತ್ತೆಯೊಂದನ್ನು ಕುದುರೆ ಎಂದು ಎಂಟು ಜನ ಹೇಳಿ; ಇಬ್ಬರು ಸತ್ಯವನ್ನು ಕೂಗಿದರೂ ಈಗಿನ ಪ್ರಜಾಪ್ರಭುತ್ವ ಬಹುಜನರ ಅಭಿಪ್ರಾಯವನ್ನು ತಪ್ಪಿದ್ದರೂ ಒಪ್ಪುತ್ತದೆ. ಮತವನ್ನು ನೋಟಿಗಾಗಿ, ಕುಕ್ಕರ್ ಗಾಗಿ, ಜಾತಿಗಾಗಿ ಮಾರಿಕೊಂಡು ಅದರ ಮೌಲ್ಯ ಹಾಗೂ ಸುತ್ತಲಿನ ವಿದ್ಯಮಾನವನ್ನು ಅರಿಯದೆ ಅಯ್ಕೆ ಮಾಡುವುದು ಮಾರಕ. ಸಮಾಜ ತಪ್ಪು ದಾರಿ ಹಿಡಿಯಬಾರದು ಎಂಬುದಷ್ಟೇ ನನ್ನ ಆಶಯ.
***********************************************************
References
March 6, 2023
ಭಾರತದ ಏಳಿಗೆ ಅವರಿಗೆ ಸಹನೀಯವಲ್ಲ!
ಕಳೆದ ತಿಂಗಳ 16ನೇ ತಾರೀಖು ಅಮೇರಿಕಾದ ಜಾರ್ಜ್ ಸೊರೋಸ್ ಮ್ಯೂನಿಕ್ ಸೆಕ್ಯೂರಿಟಿ ಕಾನ್ಫರೆನ್ಸ್ ಅಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ಮನಬಂದಂತೆ ಹರಟಿದ್ದಾನೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಇಲ್ಲಿನ ಸರ್ಕಾರವನ್ನು ಬದಲಿಸಬಲ್ಲೆ ಎಂಬಂತಹ ಕೊಬ್ಬಿನ ಮಾತುಗಳನ್ನಾಡಿದ್ದಾನೆ. ಅಮೇರಿಕಾದಲ್ಲಿ ಡೋನಾಲ್ಡ್ ಟ್ರಂಪ್ ಅನ್ನು ಇಳಿಸಿದ ಆತ್ಮವಿಶ್ವಾಸ ಹಾಗೂ ಭಾರತದಲ್ಲಿ ತನ್ನ ಬೇಳೆಕಾಳು ಬೇಯುತ್ತಿಲ್ಲ ಎಂಬ ಹತಾಶೆಯಿಂದ ಹೀಗೆಲ್ಲಾ ಬಡಬಡಿಸಿದ್ದಾನೆ. ಇದಕ್ಕು ಮುನ್ನ ನಡೆದ ಕೆಲವು ಘಟನೆಗಳನ್ನು ಸ್ವಲ್ಪ ಗಮನಿಸಿ ನೋಡಿ. ಗೌತಮ್ ಅದಾನಿ ಹಾಗೂ ಮೋದಿಯನ್ನು ತಳುಕು ಹಾಕುಲು ಹಿಂಡೆನ್ಬರ್ಗ್ ವರದಿ ಬಂತು, ಅದಕ್ಕು ಮುನ್ನ ಭಾರತದ ಸುಪ್ರೀಂ ಕೋರ್ಟ್ ಅಲ್ಲಿ ಇತ್ಯರ್ಥವಾಗಿರುವಂತಹ ಗುಜರಾತ್ ಹಿಂಸಾಚಾರದ ಕುರಿತು ಸಾಕ್ಷ್ಯಚಿತ್ರವೊಂದನ್ನು ಲಂಡನ್ನಿನ ಬಿಬಿಸಿ ವರದಿ ಮಾಡಿತ್ತು. ಇದಕ್ಕೂ ಮುನ್ನ ಕಾಂಗ್ರೇಸ್ 145 ದಿನಗಳ ಭಾರತ್ ಜೋಡೋ ಯಾತ್ರೆ ನಡಿಸಿತ್ತು!
![]() |
| Anti Indian George Soros |
ಪಶ್ಚಿಮ ಜಗತ್ತಿಗೆ ತನ್ನ ವ್ಯಾಪಾರದ ಮಾರ್ಗದ ದೂರವನ್ನು ಕಡಿತಗೊಳಿಸಲು ಚೀನಾ 'ಸೀಪೆಕ್ - ಚೀನಾ ಪಾಕಿಸ್ತಾನ್ ಎಕೊನಾಮಿಕ್ ಕಾರಿಡಾರ್' ಯೋಜನೆ ತೆಗೆದುಕೊಂಡು ಬಂತು. $46 ಶತಕೋಟಿ ಮೌಲ್ಯದ ಈ ಯೋಜನೆ ಪ್ರಾರಂಭವಾದದ್ದು 2013ರಲ್ಲಿ. 2022 ಹೊತ್ತಿಗೆ ಅದರ ಖರ್ಚು $65 ಶತಕೋಟಿ ಆಗಿದೆ. ಕಳೆದ ವರ್ಷದ ವರದಿಯ ಪ್ರಕಾರ 21ರಲ್ಲಿ 03 ಪ್ರಾಜೆಕ್ಟ್ಗಳು ಮಾತ್ರ ಈ ಯೋಜನೆಯಡಿ ಮುಗಿದಿದೆ. ಈ ಯೋಜನೆ ಪೂರ್ಣಗೊಳ್ಳದಿರಲು ಕಾರಣ ಪಾಕಿಸ್ತಾನದ ಅಸ್ಥಿರತೆ. ಪಾಕಿಸ್ತಾನದ ಈ ಪರಿಸ್ಥಿತಿಗೆ ಒಂದು ವಿಧದಲ್ಲಿ ಭಾರತ ಕಾರಣ ಎಂದರೆ ತಪ್ಪಾಗಲಾರದು.
ಪಠಾಣ್ ಖೋಟ್ ಹಾಗೂ ಪುಲ್ವಾಮಾ ದಾಳಿಗಳ ನಂತರ ಭಾರತ ಅವಕಾಶವಿದ್ದ ಎಲ್ಲಾ ಜಾಗತಿಕ ವೇದಿಕೆಗಳಲ್ಲೂ ಪಾಕಿಸ್ತಾನವನ್ನು 'ಭಯೋತ್ಪಾದಕರ ಸ್ವರ್ಗ' ಎಂದು ಬಿಂಬಿಸುತ್ತಾ ಬಂದಿದೆ. ಸುಷ್ಮಾ ಸ್ವರಾಜ್ ಆ ಪರಂಪರೆಯನ್ನು ಪ್ರಾರಂಭಿಸಿದರೆ ಪ್ರಸ್ತುತ ವಿದೇಶಾಂಗ ಸಚಿವ ಜಯಶಂಕರ್ ಅದನ್ನು ಯಶಸ್ವಿಯಾಗಿ ಮುಂದುವರೆಸಿದ್ದಾರೆ. ಅವರು ಇನ್ನೂ ಒಂದು ಹೆಜ್ಜೆ ಮುಂದುವರೆದು ಜಗತ್ತು ವಿಸ್ತರಣವಾದದ ವಿರುದ್ಧ ಒಂದಾಗಬೇಕಿದೆ ಎಂದು ಹೇಳಲು ಪ್ರಾರಂಭಿಸಿದ್ದಾರೆ. ಇದು ಚೀನಾಕ್ಕೆ ತೋಡುತ್ತಿರುವ ಖೆಡ್ಡಾ! ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಅವರ ದೇವರೇ ಕಾಪಾಡಬೇಕು ಇಲ್ಲವೇ ಆ ದೇಶ ಮತ್ತೊಮ್ಮೆ ಚೀನಾದ ಸುಳಿದಲ್ಲಿ ಸಿಲುಕಬೇಕು. ಅಮೇರಿಕಾ ಅಫ್ಘಾನಿಸ್ತಾನವನ್ನು ಬಿಟ್ಟು ಹೋದ ಮೇಲೆ ಪಾಕಿಸ್ತಾನ ತನ್ಮೂಲಕ ಚೀನಾ ಆ ದೇಶದ ಮೇಲೆ ಹತೋಟಿ ಸಾಧಿಸಬಹುದು ಎಂದುಕೊಂಡಿತ್ತು. ಆದರೆ, ಭಾರತದ ವಿದೇಶಾಂಗ ನೀತಿ ಅದಕ್ಕೆ ಅವಕಾಶ ನೀಡಲಿಲ್ಲ. ತಾಲಿಬಾನ್ ಸರ್ಕಾರ ಭಾರತದ ಪರವಾಯಿತು. ತೆಹರೀಕ್ ತಾಲಿಬಾನ್ ಪಾಕಿಸ್ತಾನದ ಒಳಗಿದ್ದುಕೊಂಡೇ ಅದರ ರಕ್ತ ಹೀರುತ್ತಿದೆ. ಕಳೆದ ಎರಡು ವಾರಗಳಿಂದ ಭಾರತಕ್ಕೆ ಬೇಕಾಗಿರುವ ಅನೇಕ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಅನುಮಾನಾಸ್ಪದವಾಗಿ ಕೊಲೆಯಾಗುತ್ತಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನಿನ ಬಷೀರ್ ಅಹಮದ್ ಕೊಲೆಯಾದವರಲ್ಲಿ ಪ್ರಮುಖ. ಕಾಶ್ಮೀರದಲ್ಲಿನ ಅವನ ಆಸ್ತಿಯನ್ನು ಭಾರತದ ಎನ್.ಐ.ಏ ವಶಪಡಿಸಿಕೊಂಡಿದೆ. ಭಾರತದ ಬೇಹುರಾರಿಕೆ ಮತ್ತು ಗೂಢಚಾರರು ಇಸ್ರೇಲಿನ ಮೊಸಾದ್ ರೀತಿ ಈ ಕಾರ್ಯಾಚರಣೆಗಳ ಹಿಂದಿದ್ದು, ಮುಂದೊಂದು ದಿನ ಇದರ ಕುರಿತು ಪುಸ್ತಕ ಅಥವಾ ಚಲನಚಿತ್ರ ಬಂದರೇ ಆಚ್ಚರಿಪಡಬೇಕಿಲ್ಲ.
ಜಾಗತಿಕ ಮಟ್ಟದಲ್ಲಿ ತನ್ನ ವರ್ಚಸ್ಸನ್ನು ಭಾರತ ಹೀಗೆ ವೃದ್ಧಿಸಿಕೊಳ್ಳುತ್ತಿದ್ದರೆ ಆಂತರಿಕ ಸ್ವಾರ್ಥಿಗಳು ವಿದೇಶಿ ಶಕ್ತಿಗಳೊಡನೆ ಕೈ ಜೋಡಿಸುತ್ತಿದ್ದಾರೆ. ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಗಳು ಭಾರತದಲ್ಲಿರುವ ಸೊರೋಸಿನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾಳೆ, ಸೊರೋಸಿನ ಜೊತೆ ಕೆಲಸ ಮಾಡುತ್ತಿರುವ ಹರ್ಷ್ ಮಂದಾರ್ ಸೋನಿಯಾಳ ಆಪ್ತ! ಅವನ ಸಂಸ್ಥೆಯ ಜಾಗತಿಕ ಉಪಾಧ್ಯಕ್ಷ ಕಾಂಗ್ರೇಸಿನ ಯಾತ್ರೆಯಲ್ಲಿ ರಾಹುಲ್ ಜೊತೆಯಾಗುತ್ತಾನೆ. ಲಂಡನ್ನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ರಾಹುಲ್ ಭಾರತ ಹಾಗೂ ನಮ್ಮ ದೇಶದ ಸರ್ಕಾರದ ವಿರುದ್ಧ ಮಾತಾಡುತ್ತಾನೆ. ಮುತ್ತಾತ ನೆಹರೂ 'ಹಿಂದೀ ಚೀನಿ ಭಾಯಿ ಭಾಯಿ' ಅಂದಂತೆ 'ಜಯಶಂಕರ್ ಅವರಿಗೆ ಚೀನಾದ ಬೆದರಿಕೆ ಅರ್ಥವಾಗುವುದಿಲ್ಲ' ಎಂಬಂತಹ ಅಪ್ರಬುದ್ಧ ಹೇಳಿಕೆಯನ್ನು ಅಲ್ಲಿನ ಪತ್ರಕರ್ತರ ಮುಂದೆ ನೀಡುತ್ತಾನೆ. ಅಮ್ರಿತ್ ಪಾಲ್ ಅನ್ನುವ ಖಲಿಸ್ತಾನಿ ಪೋಲಿಸರ ವಿರುದ್ಧ ದೊಂಬಿ ಎಬ್ಬಿಸಿ ಪಂಜಾಬಿನಲ್ಲಿ ಅಶಾಂತಿಗೆ ಕಾರಣವಾಗುತ್ತಾನೆ. ಉಚಿತ ಘೋಷಣೆಗಳನ್ನು ಮಾಡುವಲ್ಲಿ ನಿಸ್ಸಿಮವಾಗಿರುವ ಆಮ್ ಆದ್ಮಿ ಸರ್ಕಾರ ಪಂಜಾಬಿನಲ್ಲಿ ಇರುವುದೇ ಅನುಮಾನವಾಗಿದೆ. ಪಂಜಾಬ್ ಭಾರತದ ಗಡಿನಾಡು ಎಂಬುದು ಇಲ್ಲಿ ಸೂಕ್ಷ್ಮವಾಗಿ ನೆನಪಿಡಬೇಕಾದ ಅಂಶ.
ಆರ್ಟಿಕಲ್ 370 ಅನ್ನು ಯಾವುದೇ ಗಲಭೆ ಅಥವಾ ಗಲಾಟೆಗೆ ಅವಕಾಶವಿಲ್ಲದೆ ರದ್ದುಗೊಳಿಸಿದ ನರೇಂದ್ರ ಮೋದಿ ಸರ್ಕಾರ ಈ ಖಲಿಸ್ತಾನಿ ಪ್ರತ್ಯೇಕತಾವಾದವನ್ನು ಹೇಗೆ ಮಟ್ಟ ಹಾಕುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದವರೆಲ್ಲಾ ಒಟ್ಟಾಗಿ 2019ರಲ್ಲಿ ಭಾರತದ ವಿರುದ್ಧ ಹಾಗೂ ಮೋದಿ ವಿರುದ್ಧ ನಿಂತ್ತಿದ್ದರು. 2024ರಲ್ಲಿ ಮೋದಿ ಹಾಗೂ ಭಾರತಕ್ಕೆ ಆಂತರಿಕವಾಗಲ್ಲದೇ ವಿದೇಶಿ ಶಕ್ತಿಗಳು 'ಕೈ' ಜೋಡಿಸುತ್ತವೆ. ಹಾಗಾಗಿ, ನಾವೆಲ್ಲರೂ ಮತ್ತೂಮ್ಮೆ ಒಟ್ಟಾಗಿ, ಮತ್ತಷ್ಟು ಗಟ್ಟಿಯಾಗಿ ನಿಲ್ಲುವ ಕಾಲ ಸನ್ನಿಹಿತವಾಗಿದೆ.
***********************************************************
References
- China–Pakistan Economic Corridor
- Terrorist Shot Dead In Pak, His Property In Jammu And Kashmir Attached
- Indian economy doing fairly well says IMF chief economist
February 26, 2023
ನಿರ್ಗಮನ
ಮನಸ್ಸಿಗೆ ಒಪ್ಪದ ಬದುಕು ಕರ್ತವ್ಯವಾಗುತ್ತದೆ. ದೇಹ ಕರ್ತವ್ಯಕ್ಕೆ ಒಗ್ಗಿಕೊಳ್ಳುತ್ತಾದರೂ ಮನಸ್ಸು ಬಿಡುಗಡೆಗೆ ಹಾತೊರೆಯುತ್ತಿರುತ್ತದೆ. ಕರ್ತವ್ಯ ಹಾಗೂ ಬಿಡುಗಡೆಯ ಭಾವಗಳ ಸಮ್ಮಿಶ್ರಣದ ಸಂಕ್ಷಿಪ್ತ ಚಿತ್ರಣವಿದು. ಪಾತ್ರಗಳ ಅಂತರಂಗವನ್ನು ಮೀಟಿದ್ದರೆ ಸಣ್ಣದೊಂದು ಕಾದಂಬರಿಯೇ ಮಾಡಬಹುದಿತ್ತು. ಅದು ನನ್ನ ಶಕ್ತಿಗೆ ಮೀರಿದ ಸಾಹಸ ಎಂದು ಸಣ್ಣ ಕಥೆ ಎಂದೇ ಬರೆದಿದ್ದೇನೆ. ಮೂರನೆ ವ್ಯಕ್ತಿಯ ದೃಷ್ಟಿಯಲ್ಲಿ ಸನ್ನಿವೇಶಗಳನ್ನು ನಿರೂಪಿಸುವ ಪ್ರಯತ್ನವೇ 'ನಿರ್ಗಮನ'.
' "...ಬದುಕನ್ನು ಕರ್ತವ್ಯ ಅಂತಲೇ ಮಾಡು. ಇನ್ನೇನು ಕೇಳಲ್ಲ!..." ಈ ಮಾತನ್ನು ಅಪ್ಪ, ಅಮ್ಮ ನನ್ನ ಬದುಕಲ್ಲಿ ಎರಡು ಸಲ ಹೇಳಿದ್ದರು. ಮದುವೆಗೆ ಮುನ್ನ ಒಂದು ಸಲ ಹಾಗೂ ಭರತ್ ಹುಟ್ಟುವ ಮುನ್ನ ಎರಡನೇ ಸಲ ಹೇಳಿದ್ದರು. ಸುಮಾರು 35 ವರ್ಷಗಳಾಗಿರಬೇಕು ಈ ಮಾತಿಗೆ. ಈಗ ಹತ್ತು-ಹನ್ನೆರಡು ವರ್ಷಗಳ ಹಿಂದೆ 85 ವರ್ಷಗಳ ತುಂಬು ಜೀವನ ನಡೆಸಿ ಅಪ್ಪ, 81 ವರ್ಷದ ಅಮ್ಮ ಹಾರ್ಟ್ ಅಟಾಕ್ ಆಗಿ ತೀರಿಕೊಂಡರು. ಅವರು ಆಗ ಹೇಳಿದ ಮಾತಿಗೆ ಬದ್ಧವಾಗಿ ಇಷ್ಟು ವರ್ಷಗಳು ನಡೆದುಕೊಂಡೆ' ಎಂದು ದೃಢವಾದ ದನಿಯಲ್ಲಿ ರಮೇಶ ತನ್ನ ಸ್ನೇಹಿತ ಅನಂತನಿಗೆ ಹೇಳಿದ. ಬಹಳಷ್ಟು ವರ್ಷಗಳ ನಂತರ ತನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ಸ್ವಲ್ಪವಾದರೂ ಹೇಳಿದನಲ್ಲ ಎಂಬ ಸಮಾಧಾನ ಒಂದೆಡೆಯಾದರೆ ಎಲ್ಲರನ್ನೂ ಬಿಟ್ಟು ಹೋಗುತ್ತಿದ್ದಾನೆ ತನ್ನ ಸ್ನೇಹಿತ ಎಂಬ ಭಾವ ಮತ್ತೊಂದೆಡೆ. ಈ ಭಾವ, ಖುಷಿಯ ಸಂಗತಿ ಅಂತೂ ಅಲ್ಲ ಹಾಗೇ ಬೇಸರವೂ ಅಲ್ಲ. ತಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದಾನೆ ನಿಜ ಆದರೆ, ಅದು ಅವನಿಗೆ ನೆಮ್ಮದಿ ತರುವಂತಹುದು ಎಂದು ಅನಂತ ಅರ್ಥ ಮಾಡಿಕೊಂಡಿದ್ದ. ಹೌದು, ರಮೇಶ ಹೆಂಡತಿ, ಮಗ, ಸೊಸೆ, ಮೊಮ್ಮಗ, ನಿವೃತ್ತಿ ಜೀವನ, ಸ್ನೇಹಿತರು ಎಲ್ಲವನ್ನು ಬಿಟ್ಟು ತನ್ನವರಾರಿಗೂ ಮತ್ತೆಂದು ಸಿಗದಂತೆ ತನ್ನ ನೆಮ್ಮದಿಯನ್ನು ಅರಸಿ ಹೊರಟು ನಿಂತಿದ್ದ. ಇಲ್ಲಿ ಅವನ ನೆಮ್ಮದಿ ಕೆಡುವಂತಹುದು ಏನಾಗಿದೆ ಎಂದು ಮಾತ್ರ ಯಾರಿಗೂ ತಿಳಿಯದ ವಿಷಯವಾಗಿತ್ತು. ಸ್ವತಃ ರಮೇಶನಿಗೆ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂಬುದು ಅವರ ಮನೆಯವರ ಅಭಿಪ್ರಾಯವಾದರೂ ವಾಸ್ತವವಾಗಿ ಹಾಗಿರಲಿಲ್ಲ. ರಮೇಶನಿಗೆ ತನ್ನ ಸುತ್ತಲೂ ಇದ್ದ ಸಂಬಂಧಗಳ ಬೇಡಿಗಳನ್ನು ಕಳಚಿಕೊಂಡು ಒಬ್ಬಂಟಿಯಾಗಿ ದೂರ ಹೋಗಿ, ತಾನಾಯಿತು ತನ್ನ ಧ್ಯಾನ, ಓದು ಹಾಗೂ ಸಾಧ್ಯವಾದಷ್ಟು ಪರ್ಯಾಟನೆ ಮಾಡಬೇಕು ಎಂಬದು ಅವನ ಸ್ಪಷ್ಟ ನಿಲುವಾಗಿತ್ತು. ಆದರೆ, ಈ ವಿಚಾರವನ್ನು ಯಾರೊಂದಿಗೂ ಹೇಳಿರಲಿಲ್ಲ ಅಷ್ಟೇ. ಈ ಏಕಾಂತ ಭಾವ ಯಾಕೆ ಎಂಬುದನ್ನು ಕೇಳಿದಾಗ ರಮೇಶ ಕಾರಣ ಹೇಳಲಿಲ್ಲ. ತಂದೆ ತಾಯಿ ತನಗೆ ಹೇಳಿದ್ದ ಮಾತು - 'ಆಯ್ತು ಬದುಕನ್ನು ಕರ್ತವ್ಯ ಅಂತಲೇ ಮಾಡು. ಇನ್ನೇನು ಕೇಳಲ್ಲ...! ' ಎಂದು ಅಸಮಾಧಾನದಿಂದ ಹೇಳಿ ತನ್ನ ಪಾಲಿನ ಟೀ ಕುಡಿಯುತ್ತಾ ಕೂತ ರಮೇಶ.
ಏಕಾಂತವನ್ನು ಬಯಸುವ ರಮೇಶನಗೆ ಮೌನ ಸಹನೀಯ ಆದರೆ ಅನಂತನಿಗೆ ಅದು ಸಲ್ಲ. ಮೌನ ಮುರಿಯಲೆಂದೇ ಪ್ರಶ್ನೆಯನ್ನು ಮುಂದಿಟ್ಟ 'ಯಾವಾಗ ಹೊರಡಬೇಕು ಅಂತ ಇದ್ಯಾ?'
'ಇನ್ನು ಒಂದು ವಾರದ ಒಳಗೆ ಹೊರಡೋಣ ಅಂತ. ಮನೆಯಲ್ಲೂ ಸಹ ಈಗಾಗಲೇ ತಿಳಿಸಿದ್ದೇನೆ.'
'ಮನೆಯಲ್ಲಿ ಒಪ್ಪಿದ್ದಾರ? '
'ಇಲ್ಲ, ಒಪ್ಪಿಲ್ಲ'
'ಮತ್ತೆ...? '
'ಇಷ್ಟು ವರ್ಷ ನನ್ನ ಮನಸ್ಸು ಒಪ್ಪದಿದ್ದರೂ ಕರ್ತವ್ಯ ಎಂದುಕೊಂಡು, ಅಪ್ಪ ಅಮ್ಮ ಹೇಳಿದಂತೆ ಬದುಕು ನಡೆಸಿದ್ದೇನೆ. ಅವರೇ ಹೇಳಿದಂತೆ ಕರ್ತವ್ಯಗಳನ್ನು ಮುಗಿಸಿದ್ದೇನೆ. ಅಪ್ಪ ಅಮ್ಮ ಹೋದರು, ಮಗನ ಮದುವೆ ಆಗಿ ಈಗ ಮೊಮ್ಮಗ ಸಹ ಇದ್ದಾನೆ. ಮನೆಯ ಜವಾಬ್ದಾರಿಯನ್ನು ಮಗನಿಗೆ ಒಪ್ಪಿಸಿಯಾಗಿದೆ. ಈಗಲಾದರೂ ನನ್ನ ಬದುಕನ್ನು ನನ್ನ ಮನಸ್ಸು ಒಪ್ಪುವಂತೆ ಬದುಕಲು ತೀರ್ಮಾನಿಸಿದ್ದೇನೆ. '
'ಅದು ಸರಿ ಆದರೆ... ನಿನ್ನ ಹೆಂಡತಿ ಸುಷ್ಮಾ? '
'ಇಷ್ಟು ವರ್ಷ ಕರ್ತವ್ಯದಂತೆ ಸಂಸಾರ ಮಾಡಿದೆ, ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಇನ್ನು ಮುಂದೆ ಅವಳ ಜವಾಬ್ದಾರಿ ಅವಳ ಮಗನದು. ನನ್ನ ದಾರಿ ನನಗೆ. '
ತಾನು ಗಳಿಸಿದ ಆಸ್ತಿಯನ್ನು ಹೆಂಡತಿಯ ಹೆಸರಿಗೆ ಬರೆದು ಆಕೆಯ ನಂತರ ಮಗನಿಗೆ ಹೋಗುವಂತೆ ವಿಲ್ ಬರೆದಿಟ್ಟಿದ್ದ ರಮೇಶ. ಆಸ್ತಿಯ ವಿಚಾರ ಮನಸ್ಸಿಗೆ ಬಂತಾದರೂ ಸ್ನೇಹಿತನಿಗೆ ಹೇಳಲಿಲ್ಲ. ಉತ್ತರ ಸ್ಪಷ್ಟ ಹಾಗೂ ದೃಢವಾಗಿತ್ತು. ಮುಂದೆ ಏನು ಹೇಳಲು ತೋಚದೆ ರಮೇಶನನ್ನು ಬೇಸರದಿಂದ ನೋಡುತ್ತಾನೆ ಅನಂತ. ಟೀ ಮುಗಿದ ನಂತರ 'ಸಂಜೆ 6:00 ಆಯ್ತು, ಮೋಡ ಬೇರೆ ಇದೆ, ಹೊರಡೋದಾ?' ಎಂದು ರಮೇಶ ಕೇಳುತ್ತಾನೆ. ಒಲ್ಲದ ಮನಸ್ಸಿನಿಂದ 'ಹ್ಮ್' ಎನ್ನುತ್ತಾ ಇಬ್ಬರು ಹೊರಡುತ್ತಾರೆ. ಸುಮಾರು 30 ವರ್ಷಗಳ ಸ್ನೇಹಿತನನ್ನು ಈ ರೀತಿ ಬೀಳ್ಕೊಡಲು ಅನಂತನಿಗೆ ಮನಸ್ಸಿರಲಿಲ್ಲ. ಇಷ್ಟು ವರ್ಷಗಳ ಕಾಲ ಸ್ನೇಹಿತನಾಗಿದ್ದರೂ ರಮೇಶ ಕೆಲವು ದಿನಗಳಿಂದ ನಿಗೂಢ ವ್ಯಕ್ತಿಯಾಗಿದ್ದ. ಹೋಟೆಲಿನಿಂದ ಮನೆಕಡೆಗೆ ಸ್ನೇಹಿತರಿಬ್ಬರು ಮೌನವಾಗಿಯೇ ಹೆಜ್ಜೆ ಹಾಕುತ್ತಾರೆ. ತಮ್ಮ ಮನೆಗಳಿಗೆ ತೆರಳುವ ಕವಲುದಾರಿ ಎದುರಾದಾಗ 'ಇಷ್ಟು ದಿವಸ ಇಬ್ಬರ ಮನೆಯ ದಾರಿಯೂ ಬೇರೆಯಾಗಿತ್ತು ಈಗ ಬದುಕಿನ ದಾರಿಯೂ ಬೇರೆ' ಎಂಬ ಭಾವ ಅನಂತನನ್ನು ಆವರಿಸಿಸುತ್ತದೆ. ಮುಂದಿನ ನಡೆ ಸ್ಪಷ್ಟವಾಗಿತ್ತು ಆದರೆ, ಕಾರಣ ನಿಗೂಢ. ಯಾವುದೇ ಪರಿಸ್ಥಿತಿಯಲ್ಲಿ ಸಲುಗೆಯಿಂದ ಮಾತಾಡುವ ಹಕ್ಕು ಸ್ನೇಹಿತರಿಗೆ ಮಾತ್ರ. ಅದರಂತೆ 'ರಮೇಶ, ಕಡೆಯದಾಗಿ ಕೇಳುತಿದ್ದೇನೆ, ಯಾಕೀ ನಿರ್ಧಾರ? ಇಲ್ಲಿ ನೆಮ್ಮದಿ ಇಲ್ಲ ಅನ್ನಲು ಕಾರಣ ಏನೋ? '
ರಮೇಶ ಐದು ಕ್ಷಣ ಸುಮ್ಮನಿದ್ದು ಒಂದು ನಿಟ್ಟುಸಿರು ಬಿಟ್ಟು, 'ಸರಿ ಬಾ... ಪಾರ್ಕಿಗೆ ಹೋಗಿ ಮಾತಾಡುವ' ಎಂದು ಮನೆಯವರಿಗೆ ತಡವಾಗಿ ಬರುತ್ತೇವೆಂದು ಫೋನ್ ಮಾಡಿ ತಿಳಿಸಿ ಇಬ್ಬರೂ ಬೆಳಗ್ಗೆ ವಾಕಿಂಗ್ ಎಂದು ಹೋಗುತ್ತಿದ್ದ ಪಾರ್ಕಿನ ಕಡೆ ಹೆಜ್ಜೆ ಹಾಕುತ್ತಾರೆ.
***************************************
ಅಂತರ್ಮುಖಿ ವ್ಯಕ್ತಿತ್ವದವರು ಹೆಚ್ಚು ಮಾತಾಡುವುದಿಲ್ಲ ಅನ್ನುತ್ತಾರೆ. ಆದರೆ, ರಮೇಶ ಹಾಗಿರಲಿಲ್ಲ. ಅವನು ಅಂತರ್ಮುಖಿ ಆಗಿದ್ದರೂ ಎಲ್ಲರೊಟ್ಟಿಗೆ ಬೆರೆಯುತ್ತಿದ್ದ, ಅಗತ್ಯಕ್ಕೆ ತಕ್ಕಂತೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡುತ್ತಿದ್ದ. ಆದರೆ, ಅವನ ಮನಸ್ಸಿನ ಮಾತಾಗಲಿ ಆಂತರ್ಯದ ಯೋಚನಾ ಲಹರಿಯಾಗಲಿ ಯಾರೊಂದಿಗೂ ಹಂಚಿಕೊಳ್ಳುತ್ತಿರಲಿಲ್ಲ. ಅದೊಂದು ದಿನ ಮನೆಯಲ್ಲಿ ರಮೇಶನ ಮದುವೆ ಕುರಿತು ಮಾತು ಶುರುವಾಯಿತು. ಅಪ್ಪ ಅಮ್ಮನ ಮಾತುಗಳನ್ನು ಶಾಂತವಾಗೇ ಆಲಿಸುತ್ತಿದ್ದ. ಕಡೆಗೆ ರಮೇಶನ ಅಭಿಪ್ರಾಯ ಕೇಳಿದಾಗ 'ನನಗೆ ಮದುವೆ ಇಷ್ಟವಿಲ್ಲ. ಈ ರೀತಿ ಹುಡುಗಿ ಹುಡುಕುವ ವ್ಯರ್ಥ ಪ್ರಯತ್ನ ಮಾಡಬೇಡಿ' ಎಂದಷ್ಟೇ ಹೇಳಿ ತಂದೆ ತಾಯಂದಿರ ಪ್ರತಿಕ್ರಿಯೆಗೂ ಕಾಯದೆ ತನ್ನ ಕೋಣೆಗೆ ಹೋಗುತ್ತಾನೆ. ಎಂದೂ ಸಹ ಹೀಗೆ ನಡೆದುಕೊಳ್ಳದ ರಮೇಶನ ಈ ನಡವಳಿಕೆ ಕಂಡು ಅವನ ತಂದೆ ತಾಯಂದರಿಗೆ ಆಶ್ಚರ್ಯ ಹಾಗೂ ಕೋಪವೂ ಬರುತ್ತದೆ. ತಂದೆ ಸಮಾಧಾನ ತಂದುಕೊಂಡು 'ಆಲ್ ಒಫ್ ದಿ ಸಡನ್ ಮದುವೆ ವಿಚಾರ ಮಾತಾಡಿದರೆ ಅವನಿಗೆ ಸರಿ ತೋರದಿರಬಹುದು. ಈಗ ಮಲಗುವ ಹೊತ್ತು ಬೇರೆ, ನಾಳೆ ಸಂಜೆ ಆರಾಮಾಗೆ ಕೂತು ಮಾತಾಡುವ' ಎಂದು ಹೇಳಿ ಮಲಗುತ್ತಾರೆ.
ಮಾರನೆ ದಿವಸ ಹಾಗು ಮತ್ತೂ ಕೆಲವು ಬಾರಿ ಮದುವೆ ವಿಚಾರವಾಗಿ ಮಾತಾಡಿದಾಗ ರಮೇಶನ ಪ್ರತಿಕ್ರಿಯೆ ನಕಾರಾತ್ಮಕವಾಗೆ ಇತ್ತು. ಯವಾಗಲೂ ಅಲ್ಪ ಹಾಗೂ ಮೃದು ಭಾಷಿಯಾಗಿದ್ದ ರಮೇಶ ಮದುವೆ ವಿಚಾರ ಎಂದೊಡೆ ಅಪ್ಪ ಅಮ್ಮನೊಂದಿಗಲ್ಲದೆ ಎಲ್ಲರೊಂದಿಗೆ ಒರಟಾಗುತ್ತಿದ್ದ, ಆದಷ್ಟು ಬೇಗ ಮಾತು ಬದಲಾಯಿಸುತ್ತಿದ್ದ ಇಲ್ಲವೇ ಮಾತು ನಡೆಯುತ್ತಿದ್ದ ಜಾಗದಿಂದ ಎದ್ದು ಹೊರಡುತ್ತಿದ್ದ. ಈ ವಿಚಾರವಾಗಿಯೇ ಮನೆಯಲ್ಲಿ ಅನೇಕ ಬಾರಿ ಮನಸ್ತಾಪ ಉಂಟಾಗುತ್ತಿತ್ತು. ರಮೇಶನ ಸ್ವಭಾವ ತಿಳಿದು ಅಪ್ಪ ಹೆಚ್ಚು ಮತಾಡುತ್ತಿರಲಿಲ್ಲ, ಆದರೆ, ಅಮ್ಮ ಭಾವೋದ್ವೇಗಕ್ಕೆ ಒಳಗಾಗಿ ಹೆಚ್ಚು ಮಾತಾಡುತ್ತಿದ್ದಳು. ಪ್ರತಿ ಬಾರಿಯೂ ಮಾತಿನಿಂದ ಶುರುವಾಗಿ ಬೈಗುಳ ಹಾಗೂ ಅವಳ ಕಣ್ಣೀರಿನಿಂದ ಕೊನೆಯಾಗುತ್ತಿತ್ತು. ಈ ಒಂದು ವಿಚಾರದಲ್ಲಿ ಮಾತ್ರ ರಮೇಶ ಅಪ್ಪ ಅಮ್ಮ ಹಾಗೂ ಸಂಬಂಧಿಕರೊಂದಿಗೆ ಅವಿಧೇಯನಾಗಿದ್ದ. ಅಮ್ಮ ಪದೆ ಪದೆ ಮದುವೆಯ ಕುರಿತು ಮಾತಾಡಲು ಪ್ರಾರಂಭಿಸಿದ ನಂತರ ರಮೇಶ ಬಹುತೇಕ ಮೌನಕ್ಕೆ ಶರಣಾದ.
ಅದೊಂದು ದಿವಸ ರಾತ್ರಿ ಊಟ ಮಾಡಬೇಕಾದರೆ ಮದುವೆ ವಿಚಾರವಾಗಿ ಅಮ್ಮ ಕೋಪಿಸಿಕೊಂಡು ಮದುವೆ ಬೇಡ ಅನ್ನಲು ಕಾರಣ ಕೇಳುತ್ತಾಳೆ. ಶಾಂತವಾಗಿದ್ದ ರಮೇಶನ ಮುಖ ಈ ಪ್ರಶ್ನೆ ಕೇಳಿ ಅಸಮಾಧಾನದಿಂದ ಬಿಳಿಚುಕೊಂಡಿತು. 'ನಾನು ಊಟ ಮಾಡೋದು ಸಹ ಇಷ್ಟವಿಲ್ಲ ಅಂದರೆ ಹೇಳು' ಎಂದು ಹೇಳಿ ಊಟವನ್ನು ಸಹ ಅರ್ಧಕ್ಕೆ ನಿಲ್ಲಿಸಿ ಕೈತೊಳೆದು ಮಲಗಲು ತೆರಳುತ್ತಾನೆ. ಈ ಮಟ್ಟದ ಒರಟುತನವನ್ನು ರಮೇಶ ಎಂದೂ ತೋರಿರಲಿಲ್ಲ. ಇದನ್ನು ನೋಡಿ ಅಮ್ಮನಿಗೆ ಮತ್ತಷ್ಟು ಕೋಪ ಬಂದು ಬೈಯ್ಯಲು ಪ್ರಾರಂಭಿಸುತ್ತಾಳೆ. ಅಪ್ಪನಿಗೆ ಬೇಸರ, ಆಶ್ಚರ್ಯವಾಗಿ 'ಅವನಿಗೆ ಇಷ್ಟವಿಲ್ಲ ಎಂದರೆ ಬಲವಂತ ಮಾಡಬೇಡ' ಎಂದು ಹೆಂಡತಿಯನ್ನು ಸಮಾಧಾನ ಮಾಡುತ್ತಾರೆ. ಅಂದಿನಿಂದ ಮನೆಯಲ್ಲಿ ರಮೇಶನ ಮದುವೆ ಬಗೆಗಿನ ಮಾತು ಕಮ್ಮಿಯಾದರೂ ಅವನ ಒರಟುತನ, ಅಮ್ಮನ ಕಾಳಜಿ, ಕೋಪವಾಗಲಿ ಕಡಿಮೆಯಾಗಲಿಲ್ಲ.
'ಅಪ್ಪನ ಸ್ನೇಹಿತ ಮಗನ ಮದುವೆ ನನ್ನ ಬದುಕನ್ನು ಬದಲಾಯಿಸಿತು!'. ಹೌದು, ಕೇಳಲು ವಿಚಿತ್ರವಾದರೂ ರಮೇಶನ ಬದುಕಿನ ಸತ್ಯ ಅದೇ ಆಗಿತ್ತು. ಅಪ್ಪನ ಸ್ನೇಹಿತನ ಮಗನ ಮದುವೆಗೆ ಮನೆಯವರೆಲ್ಲಾ ಹೋಗಿದ್ದರು. ಮದುವೆಯ ಸಂಭ್ರಮದಲ್ಲಿ ಎಲ್ಲರೂ ಮುಳುಗಿದ್ದರೂ ಅಮ್ಮನ ಮುಖ ಸಪ್ಪೆಯಾಗಿತ್ತು. ಅವಳು ನೋಡಬಯಸಿದ್ದು ಮದುಮಗನ ಸ್ಥಾನದಲ್ಲಿ ತನ್ನ ಮಗನನ್ನು. ಇದ್ದ ಕೆಲವು ಪರಿಚಯಸ್ಥರು 'ರಮೇಶನ ಮದುವೆ ಯಾವಾಗ?' ಎಂಬ ಪ್ರಶ್ನೆ ಕೇಳಿದ ಮೇಲೆ ಅಮ್ಮನ ಮನಸ್ಸು ಕಳೆದುಹೋಯಿತು. ಅಪ್ಪನ ಮನಸ್ಸು ಸಹ ದುಃಖದಿಂದ ಆವರಿಸಿತ್ತಾದರೂ ಅವರು ತೋರಿಸಿಕೊಳ್ಳುತ್ತಿರಲಿಲ್ಲ. ಮನೆಗೆ ಬರುವಷ್ಟರಲ್ಲಿ ರಾತ್ರಿ ಒಂಬತ್ತು. ಮನೆ, ಮನಸ್ಸು ಎರಡೂ ಮೌನವಾಗಿತ್ತು. ಪ್ರಯತ್ನಪೂರ್ವಕವಾಗಿ ತಡೆದಿದ್ದ ಅಮ್ಮನ ದುಃಖ ಹಾಗೂ ಕೋಪ ಆಕ್ರೋಶವಾಗಿ ಹೊರಗೆ ಬಂತು. ತನ್ನ ಕೋಣೆಗೆ ಹೋಗುತ್ತಿದ್ದ ರಮೇಶನನ್ನು ನಿಲ್ಲಲು ಹೇಳಿ, ತನ್ನ ಅಷ್ಟೂ ದಿನದ ಕೋಪ, ದುಃಖವನ್ನು ಹೊರಹಾಕುತ್ತಾಳೆ. ಅಪ್ಪ ತಡೆಯಲು ಬರುತ್ತಾರಾದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಅಮ್ಮನ ಕೋಪ ರಮೇಶ ನಿರೀಕ್ಷಿಸಿದ್ದ ಆದರೆ, ಆಕೆಯ ದುಃಖ ಆತನ ನಿರೀಕ್ಷೆಗೂ ಮೀರಿದ್ದಾಗಿತ್ತು. ಮಾತು ಮುಂದುವರೆಸುತ್ತಾ ಗಂಟಲು ಒಣಗಿ ಅಮ್ಮ ಬಿಕ್ಕಳಿಸಲು ಪ್ರಾರಂಭಿಸುತ್ತಾಳೆ. ನೀರು ಕೊಡಲು ಮುಂದಾದ ಗಂಡನನ್ನು ಬಿಕ್ಕಳಿಸುತ್ತಲೇ ದೂರ ನಿಲ್ಲುವಂತೆ ಕೈಸನ್ನೆ ಮಾಡಿ ಮಗನೆಡೆಗೆ 'ಮದುವೆಗೆ ಒಪ್ಪು' ಎಂದು ಬೇಡುವಂತೆ ದೃಷ್ಟಿ ಹಾಯಿಸುತ್ತಾಳೆ. ಎಂದೂ ತನ್ನ ತಾಯಿಯನ್ನು ಅಂತಹ ಸ್ಥಿತಿಯಲ್ಲಿ ನೋಡ ಬಯಸದ ರಮೇಶನನ್ನು ಆ ನೋಟ ಸಂಪೂರ್ಣ ಕರಗಿಸುತ್ತದೆ. ಅಮ್ಮನ ಬಳಿ ತೆರಳಿ, ನೀರು ಕುಡಿಸಿ ಅವಳನ್ನು ಸಂತೈಸುತ್ತಾನೆ. ಅಮ್ಮನ ಬೆನ್ನು ಹಾಗೂ ನೆತ್ತಿ ಸವರುತ್ತಾ ಸೋಫಾ ಮೇಲೆ ಕೂರಿಸಿ ಅವಳ ಮಾತು ಕೇಳುತ್ತೇನೆ ಎನ್ನುವಂತೆ ಕಣ್ಣಲ್ಲೇ ಭರವಸೆ ನೀಡುತ್ತಾನೆ.
ಮುಖದ ಮೇಲೆ ವ್ಯಕ್ತವಾದ ಒಪ್ಪಿಗೆಯ ಆ ಭಾವ ಅಮ್ಮನಿಗೆ ಶಕ್ತಿ ತುಂಬುತ್ತದೆ. ಮಾತಾಡಲು ಮುಂದಾದ ಅಮ್ಮನನ್ನು ಅಪ್ಪ ಮಗ ಇಬ್ಬರೂ ತಡೆದು 'ಏನೇ ಮಾತಾಡುವುದಾದರೂ ಬೆಳಗ್ಗೆ ಮಾತಾಡೋಣ' ಎಂದು ಹೇಳುತ್ತಾರೆ. ಒಪ್ಪದ ಅಮ್ಮ 'ಇಲ್ಲ ನೀನು ಮದುವೆ ಆಗಲೇಬೇಕು ಹಾಗೆಂದು ಮಾತು ಕೊಡು' ಎಂದು ಮಗನನ್ನು ಅಧಿಕಾರಾಯುತವಾಗಿ ಕೇಳುತ್ತಾಳೆ. ಅಮ್ಮನಿಗೆ ಇಲ್ಲ ಎನ್ನುವುದಕ್ಕಾಗಲಿ, ಅವಳ ಮಾತನ್ನು ಒಪ್ಪುವುದಕ್ಕಾಗಲಿ ರಮೇಶನಿಗೆ ಆಗದೇ ಏನು ಪ್ರತಿಕ್ರಯಿಸದೇ ಸುಮ್ಮನಾಗುತ್ತಾನೆ. ಅಮ್ಮನ ತಲೆ ಸವರುತ್ತಿದ್ದ ಕೈ ತಾನಾಗೆ ಹಿಂಬರುತ್ತದೆ. ಮಗನ ಮೌನದಿಂದ ಉದ್ರಿಕ್ತಗೊಂಡ ತಾಯಿ 'ನಿನ್ನನ್ನು ಸಾಕಿ, ಸಲಹಿ ದೊಡ್ಡವನನ್ನಾಗಿ ಮಾಡಿದ್ದೇವೆ. ಪ್ರೀತಿ, ಮಮತೆ ವಾತ್ಸಲ್ಯವನ್ನು ಧಾರೆ ಎರೆದಿದ್ದೇವೆ. ಪ್ರೀತಿಗೋಸ್ಕರ ಅಲ್ಲದಿದ್ದರೂ ಬದುಕನ್ನು ಕರ್ತವ್ಯ ಅಂತಲೇ ಮಾಡು. ಇನ್ನೇನು ಕೇಳಲ್ಲ, ಮದುವೆ ಮಾಡಿಕೋ.' ಎಂದು ಒಂದೇ ಉಸಿರಿನಲ್ಲಿ ಹೇಳುತ್ತಾಳೆ. ಅರ್ಧ ನಿಮಿಷ ಮೌನವಾಗಿದ್ದು ಒಮ್ಮೆಲೆ ನಿಟ್ಟುಸಿರು ಬಿಟ್ಟು ಅಪ್ಪನನ್ನು ನೋಡಿ, ಅಮ್ಮನ ಕಡೆಗೆ ತಿರುಗಿ 'ಸರಿ ಮದುವೆ ಆಗುತ್ತೇನೆ. ನೀನು ಹೇಳಿದ ಹಾಗೆ ಆಗಲಿ' ಎನ್ನುತ್ತಾನೆ. ಅಮ್ಮ ಅಪ್ಪನ ಸಂತೋಷಕ್ಕೆ ಮಿತಿ ಇರಲ್ಲಿಲ್ಲ. ರಮೇಶನ ಒಪ್ಪಿಗೆ ಒಂದೇ ಕ್ಷಣದಲ್ಲಿ ಅವರ ಮುಖದ ಮೇಲೆ ನೆಮ್ಮದಿಯ ಭಾವ ತಂದಿತ್ತು. ಸಂತೋಷಕ್ಕೆ ಅಮ್ಮನ ಕಣ್ಣುಗಳು ಒದ್ದೆ ಆದವು, ಮುಖದಲ್ಲಿ ಯುದ್ಧವನ್ನು ಗೆದ್ದ ಸಂಭ್ರಮವಿತ್ತು. ಅಪ್ಪ ಮಗನ ತಲೆ ಸವರಿದರೆ, ಅಮ್ಮ ಮಗನ ಕೆನ್ನೆ ಸವರುತ್ತಾ ಭುಜದ ಮೇಲೆ ತಲೆ ಇಟ್ಟಳು. 'ಇದಾದ ಆರೇಳು ತಿಂಗಳಲ್ಲಿ ನನ್ನ ಮದುವೆ ಆಗಿ ಸುಷ್ಮಾ ನನ್ನ ಬದುಕಿಗೆ ಬಂದಳು.' ಎಂದು 35 ವರ್ಷಗಳ ಹಿಂದಿನ ಘಟನೆಗಳನ್ನು ಹೇಳುವಾಗ ರಮೇಶನ ಮುಖದಲ್ಲಿದ್ದದ್ದು ನಿರ್ಲಿಪ್ತ ಶೂನ್ಯ ಭಾವ ಮಾತ್ರ!
***************************************
ಮದುವೆಗೆ ಒಪ್ಪಿ ವೈವಾಹಿಕ ಜೀವನ ಶುರುವಾಗಿತ್ತು, ರಮೇಶನ ಪಾಲಿಕೆ ಬದುಕು ಕರ್ತವ್ಯವಾಗಿತ್ತು. ಅವನಲ್ಲಿ ಭಾವನೆಗಳು ಸಹಜತೆ ಕಳೆದುಕೊಂಡಿದ್ದವು. ದೇಹ ಮತ್ತು ಮನಸ್ಸು ಕಲೆತಿರಲಿಲ್ಲ. ದೇಹದ ಬಯಕೆ ಎಂಬ ಹಸಿವು ಹೆಂಡತಿಯ ಕಾರಣದಿಂದ ತೀರುತ್ತಿತ್ತು. ಆದರೆ, ಮನಸ್ಸು ಪಂಜರದಲ್ಲಿ ಸಿಕ್ಕ ಹಕ್ಕಿಯಾಗಿತ್ತು. ಸಂಗಾತಿಯ ಭಾವನೆಗಳಿಗೆ ಸ್ಪಂದನೆಯ ಪ್ರಯತ್ನವಿತ್ತಾದರೂ ಅದು ಪ್ರತಿಸ್ಪಂದನೆ ಆಗಿರಲ್ಲಿಲ್ಲ. ಸುಷ್ಮಾ ಸೂಕ್ಷ ಮನಸ್ಸಿನ ಹುಡುಗಿ. ಈ ಶತಮಾನದ ಸಮಾಜ ಎಷ್ಟೇ ಆಧುನಿಕವಾದರೂ ಸಂಸಾರದ ಗುಟ್ಟನ್ನು ಕಾಪಾಡಿಕೊಂಡು ತಾಳ್ಮೆಯಿಂದ ಬದುಕನ್ನು ನಡೆಸುವ ಹೆಣ್ತನ ಅವಳಲ್ಲಿತ್ತು. ಗಂಡ ಕೆಟ್ಟವನಲ್ಲ, ಸುಳ್ಳು, ಕಪಟ ಗೊತ್ತಿಲ್ಲ ಜೊತೆಗೆ, ಆತ ಸಂಸಾರಿಯೂ ಆಗಿರಲಿಲ್ಲ. ತನ್ನಿಂದಾಗಿ ಇನ್ನೊಬ್ಬರ ಬದುಕು ಹಾಳಾಗಬಾರದು ಎಂದು ರಮೇಶ ಮಾಡುತ್ತಿದ್ದ ಪ್ರಯತ್ನವನ್ನು ಸುಷ್ಮಾ ಅರ್ಥೈಸಿಕೊಂಡಿದ್ದಳು. ಕೆಲವು ಬಾರಿ ರಮೇಶನ ಮನಸ್ಥಿತಿ ಹಾಗೂ ಅದರ ಹಿಂದಿನ ಕಾರಣ ತಿಳಿಯಲು ಪ್ರಯತ್ನಿಸಿದಳಾದರೂ ಅದು ಸಾಧ್ಯವಾಗಲಿಲ್ಲ. ಹೊರ ಜಗತ್ತಿಗೆ ಇವರ ದಾಂಪತ್ಯ ಅನ್ಯೋನ್ಯ ಅನ್ನಿಸಿದರೂ ವಾಸ್ತವದಲ್ಲಿ ಇರಲಿಲ್ಲ.
ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳಾಗಲಿಲ್ಲ ಎಂಬುದು ರಮೇಶನ ಬದುಕಿನಲ್ಲಿ ಮುಂದಿನ ಗಂಭೀರ ವಿಷಯವಾಗಿತ್ತು. ಮೊಮ್ಮಕ್ಕಳ ಬಯಕೆ ತಂದೆ ತಾಯಿಯರಿಬ್ಬರಿಗೂ ಇತ್ತಾದರೂ ಮಗನ ಸ್ವಭಾವವನ್ನು ಅರ್ಥ ಮಾಡಿಕೊಂಡಿದ್ದ ಅಪ್ಪ ಈ ಕುರಿತು ಮಗ ಅಥವಾ ಸೊಸೆ ಬಳಿ ಮಾತಾಡಿರರಿಲ್ಲ. ಈ ವಿಚಾರದಲ್ಲಿ ಹೆಂಗಸರೇ ಅದೃಷ್ಟವಂತರು. ಮನಸ್ಸಿಗೆ ಬಂದ ವಿಚಾರವನ್ನು ಹೇಳಿ ಬಿಡುತ್ತಾರೆ. ಮಗನ ಬಳಿ ಅಲ್ಲದಿದ್ದರೂ ಸೊಸೆಯ ಬಳಿ ಮೊಮ್ಮಕ್ಕಳ ವಿಚಾರವನ್ನು ಅಮ್ಮ ಪ್ರಸ್ತಾಪ ಮಾಡಿದ್ದಳು. ರಾತ್ರಿ ಕೆಲಸ ಮುಗಿಸಿ ಮಲಗುವ ಮುನ್ನ ಸುಷ್ಮಾ ಮಕ್ಕಳ ವಿಚಾರವನ್ನು ಸಹಜವಾದ ನಾಚಿಕೆಯಿಂದಲೇ ಪ್ರಸ್ತಾಪಿಸುತ್ತಾಳೆ. ರಮೇಶ 'ಇನ್ನೊಂದಷ್ಟು ದಿನಗಳಾಗಲಿ' ಎಂದಷ್ಟೇ ಪ್ರತಿಕ್ರಯಿಸುತ್ತಾನೆ. ಹೆಣ್ಣು ಮಕ್ಕಳಿಗೆ ತಾಯಾಗಬೇಕೆಂಬ ಬಯಕೆ ಪ್ರಕೃತಿ ಸಹಜವಾದದ್ದು. ಅದೇ ಭಾವದಲ್ಲಿ ಮತ್ತೆರಡು ಬಾರಿ ಸುಷ್ಮಾ ತನ್ನ ಬಯಕೆಯನ್ನು ಗಂಡನೊಂದಿಗೆ ವ್ಯಕ್ತಪಡಿಸುತ್ತಾಳೆ. ಹೆಂಡತಿಯ ಬಯಕೆಗೆ ನಕಾರಾತ್ಮಕವಾಗಿ ಪ್ರತಿಕ್ರಯಿಸುವ ಇಚ್ಛೆ ಇಲ್ಲದೇ ಈ ವಿಚಾರದಲ್ಲಿ ರಮೇಶ ಮೌನಿಯಾಗಿತ್ತಾನೆ. ತಾಯ್ತವೆಂಬುದು ಹೆಣ್ಣಿಗೆ ಉಕ್ಕಿಬರುವ ಸಹಜ ಬಯಕೆ. ವಾಸ್ತವದ ಬದುಕು ಬುದ್ಧಿಗೆ ಅರಿವಿದ್ದರೂ ಮನಸ್ಸು ಬಯಕೆಗಳನ್ನು ತೀರಿಸಿಕೊಳ್ಳಲು ಹಂಬಲಿಸುತ್ತಿರುತ್ತದೆ. ದಿನೇ ದಿನೇ ಸುಷ್ಮಾಳಿಗೂ ತಾಯಾಗಬೇಕೆಂಬ ಬಯಕೆ ಬಲಿಯುತ್ತಿತ್ತು. ಆದರೆ, ರಮೇಶನ ಮನಸ್ಸು ಇದಕ್ಕೆ ಪೂರಕವಾಗಿರಲಿಲ್ಲ. ಸೊಸೆಯನ್ನು ಪ್ರೀತಿಯಿಂದ ಕಾಣುತ್ತಿದ್ದ ಅತ್ತೆ, ಮಾವ ಹಾಗೂ ತನ್ನ ತಾಯಿಯೊಂದಿಗೆ ಸುಷ್ಮಾ ದಾಂಪತ್ಯದ ವಾಸ್ತವ ಹಾಗೂ ಮಕ್ಕಳ ಬಯಕೆಯನ್ನು ಸೂಕ್ಷ್ಮವಾಗಿ ತಿಳಿಸುತ್ತಾಳೆ. ಸೊಸೆಯ ಮನಸ್ಸನ್ನು ಅರ್ಥೈಸಿಕೊಂಡ ಮಾವ ತಾನು ಮಾತಾಡುವುದಾಗಿ ತಿಳಿಸಿ, ತನ್ನ ಹೆಂಡತಿ ಮತ್ತು ಬೀಗತಿಯರಿಗೆ ಈ ವಿಚಾರವನ್ನು ತನಗೆ ಬಿಡಿ ಎಂದು ಮನವರಿಕೆ ಮಾಡುತ್ತಾನೆ.
'ನಿನಗೆ ಇಷ್ಟ ಇತ್ತೋ ಇಲ್ಲವೋ ಮದುವೆ ಅಂತೂ ಆಯ್ತು. ಈಗ ಹಿಂತಿರುಗುವ ಮಾತಿಲ್ಲ. ಮದುವೆ ಆದ ಮೇಲೆ ಮಕ್ಕಳು ಮರಿ ಆಗಬೇಕು. ಇದು ಭಾವನಾತ್ಮಕ ವಿಚಾರವೂ ಹೌದು, ನಿನ್ನ ಕರ್ತವ್ಯವೂ ಹೌದು. ಸಾಂಗತ್ಯ ಬೇಡ, ಮಕ್ಕಳು ಬೇಡ ಅನ್ನೋದು ನಿನಗೆ ಸರಿ. ಆದರೆ, ಸಮಾಜ ಹಾಗಲ್ಲ ಅದಕ್ಕೆ ಅದರೆದೇ ಆದ ಒಂದು ರೀತಿ ನೀತಿ ಇದೆ. ಅದರಂತೆ ನಾವು ನಡೆಯಬೇಕು. ನಿನ್ನ ಚಿಕ್ಕವಯಸ್ಸಿನಲ್ಲಿ ನಾವು ಹೆಚ್ಚು ಸಮಯ ಕೊಡಲಾಗಲಿಲ್ಲ. ಈಗ ಮೊಮ್ಮಕ್ಕಳ ಜೊತೆ ಆಡಿ-ನಲಿಯುವ ಆಸೆ ನನಗೂ ಅಮ್ಮನಿಗೂ ಇದೆ. ಯೋಚಿಸಿ ನೋಡು, ಅಮ್ಮ ನಿನ್ನ ಮದುವೆ ಆಗುವ ಮುನ್ನ ಹೇಳಿದ ಮಾತನ್ನೇ ಈಗ ನಾನೂ ಹೇಳುತ್ತೇನೆ. ಬದುಕನ್ನು ಕರ್ತವ್ಯ ಅಂತಲೇ ಮಾಡು' ಎಂದು ಅಪ್ಪ ಮತ್ತೊಮ್ಮೆ ಕರ್ತವ್ಯದ ಕಾರಣ ಮುಂದಿಡುತ್ತಾರೆ. ಅವರ ಮಾತಿಗೆ ಒಪ್ಪಿ ರಮೇಶ ಸುಷ್ಮಾರ ಸಂಸಾರ ಮುಂದುವರೆದು, ವರ್ಷದ ಹೊತ್ತಿಗೆ ಮಗ ಭರತ್ ಹುಟ್ಟಿದ್ದ.
ಮುಂದಿನ ಬದುಕು ಭರತನ ಲಾಲನೆ ಪಾಲನೆಯಲ್ಲಿ ಮುಂದುವರೆಯಿತು. ಮಕ್ಕಳಾದ ಮೇಲೆ ಹೆಂಗಸರ ಆದ್ಯತೆ ಬೇರೆಯೇ ಆಗುತ್ತದೆ. ಅವಳ ಪ್ರೀತಿ, ಗಮನ ಎಲ್ಲವೂ ಮಕ್ಕಳೆಡೆಗೆ ಹರಿಯುತ್ತದೆ. ರಮೇಶನಂತಹ ನಿರ್ಲಿಪ್ತ ಗಂಡನಿದ್ದಾಗ ಸುಷ್ಮಾಳ ಆದ್ಯತೆ ಸಂಪೂರ್ಣ ಮಗುವಿನೆಡೆಗೆ ಹೋಗುವುದು ಸಹಜವೇ. ಆಕೆಯ ಮನಸ್ಸಿನಲ್ಲಿರುವ ಪ್ರೀತಿ, ವಾತ್ಸಲ್ಯ ಯಾರಿಗಾದರೂ ಕೊಡಲೇ ಬೇಕಲ್ಲ! ಆ ದೃಷ್ಟಿಯಲ್ಲಿ ಭರತ್ ಸುಷ್ಮಾಳಿಗೆ ದೇವರ ಪ್ರಸಾದವೇ ಆಗಿದ್ದ. ಭರತನಿಗೆ ಮೂರ್ನಾಲ್ಕು ವರ್ಷ ಆಗುವವರೆಗೆ ರಮೇಶ ಅವನಿಗೆ ಸ್ವಲ್ಪ ಹಚ್ಚುಕೊಂಡಿದ್ದ. ತಾಯಿಯ ಪ್ರೀತಿ ಅವನಿಗೆ ಹೆಚ್ಚಿತ್ತು ಹಾಗಾಗಿ, ಅವನು ಸುಷ್ಮಾಳಿಗೆ ಹೆಚ್ಚು ಹಚ್ಚುಕೊಂಡ. ಭರತ್ ಹಾಗೂ ರಮೇಶ ರಕ್ತವನ್ನು ಹಂಚಿಕೊಂಡಿದ್ದರೆ ಹೊರತು ಅವರ ಮನಸ್ಸುಗಳು ಒಂದಾಗಿರಲಿಲ್ಲ. ರಮೇಶನ ಬದುಕೆಂಬ ಕರ್ತವ್ಯ ಮುಂದುವರೆದಿತ್ತು.
***************************************
'ಸರಿ... ಬದುಕನ್ನು ಕರ್ತವ್ಯ ಎಂದು ಮಾಡಿದೆ. ಆದರೆ, ನನಗೆ ಇನ್ನೂ ಅರ್ಥವಾಗದ ವಿಷಯ ಒಂದಿದೆ. ನೀನು ಮದುವೆ ಬೇಡ ಎನ್ನಲು ಕಾರಣವೇನು?' ರಮೇಶನ ಮಾತುಗಳನ್ನು ಕೇಳಿದ ನಂತರ ಅನಂತ ತನ್ನ ಪ್ರಶ್ನೆ ಮುಂದಿಡುತ್ತಾನೆ. ಈ ಪ್ರಶ್ನೆಗೆ ಉತ್ತರ ನೀಡಲೋ ಬೇಡವೋ ಎಂಬಂತಹ ಭಾವ ರಮೇಶನ ಮುಖದ ಮೇಲೆ ಗೋಚರವಾಗುತ್ತದೆ, ಜೊತೆಗೆ ಮೌನ.
'ಹೋಗಲಿ ಬಿಡು, ಈ ಪ್ರಶ್ನೆಗೆ ನಿನ್ನಲ್ಲಿ ಉತ್ತರ ಇಲ್ಲ ಎನ್ನುವುದಾದರೆ ನನ್ನ ಬಲವಂತವೇನಿಲ್ಲ.'
'ಈ ಪ್ರಶ್ನೆಗೆ ಉತ್ತರ ಖಂಡಿತ ಇದೆ. ಆದರೆ, ಅದು ನನ್ನಲ್ಲೇ ಇರಲಿ. ಯಾರಿಗೂ ಉತ್ತರ ಹೇಳಬೇಕಾದ ಅನಿವಾರ್ಯತೆಯಾಗಲಿ, ಅವಶ್ಯಕತೆಯಾಗಲಿ ಇಲ್ಲ. ಹೇಳಿದರೂ ಅದರಿಂದ ಯಾವುದೇ ಪ್ರಯೋಜನ ಈಗ ಇಲ್ಲ.'
ಉತ್ತರ ಒರಟಾದರೂ ರಮೇಶನ ಮಾತಿನಲ್ಲಿ ಸತ್ಯವಿತ್ತು. ಮತ್ತೊಮ್ಮೆ ಬಲವಂತವಾಗಿ ಕೇಳುವುದರಲ್ಲಿ ಅರ್ಥವಿಲ್ಲ ಎಂದು ಅನಂತ ಗಂಟೆ 8:00 ಆದದ್ದನ್ನು ಗಮನಿಸಿದ. 'ಸ್ನೇಹಿತನಾಗಿ ಹೇಳುತ್ತಿದ್ದೇನೆ. ಈಗಲೂ ನಿನ್ನ ನಿರ್ಧಾರ ಬದಲಿಸು. ಇಲ್ಲೇ ನಮ್ಮೆಲ್ಲರ ಜೊತೆ ಇದ್ದುಬಿಡೋ ' ಎಂದು ಮತ್ತೊಂದು ಪ್ರಯತ್ನ ಅನಂತ ಮಾಡುತ್ತಾನೆ. ನಿರೀಕ್ಷೆಯಂತೆ ಮೌನವೇ ಉತ್ತರವಾಗುತ್ತದೆ.
'ಮುಂದಿನ ವಾರ ಹೊರಡುತ್ತೀನಿ ಅಂತ ಇದಿ. ಹೊರಡುವ ಮುನ್ನ ಎಲ್ಲರಿಗೂ ಮನೆಗೆ ಬರಲು ಹೇಳೋಣ. ಸ್ನೇಹಿತರು, ಸಂಬಂಧಿಕರನ್ನು ನೋಡಿಕೊಂಡೇ ಹೊರಡು.'. ಇದಕ್ಕೂ ರಮೇಶ ಒಪ್ಪುವುದಿಲ್ಲ ಎಂಬ ನಿರೀಕ್ಷೆ ಅನಂತನದ್ದು. ಆಶ್ಚರ್ಯವೆಂಬಂತೆ 'ಸರಿ ಹಾಗೆ ಆಗಲಿ. ಈಗ ಸಮಯವಾಯಿತು ಹೊರಡೋಣ' ಎಂದು ಕಲ್ಲು ಬೆಂಚಿನ ಮೇಲೆ ಕೂತಿದ್ದ ಇಬ್ಬರು ಎದ್ದು ಹೊರಡುತ್ತಾರೆ. ತಮ್ಮ ಮನೆಗೆ ಹೋಗುವ ತಿರುವು ಬಂದಾಗ ರಮೇಶ ಏನೋ ಜ್ಞಾಪಿಸಿಕೊಂಡಂತೆ ಸ್ನೇಹಿತನನ್ನು ತಡೆದು 'ಒಂದು ಮಾತು' ಅನ್ನುತ್ತಾನೆ. ಏನು ಹೇಳಬಹುದೆಂಬ ಕುತೂಹಲದಿಂದ ತಿರುವಿನಲ್ಲೇ ನಿಂತು ಹೇಳು ಅನ್ನುವಂತೆ ಅನಂತ ನೋಡುತ್ತಾನೆ.
'ಜೀವನದಲ್ಲಿ ಕೆಲವು ತಿರುವುಗಳು ನಾವು ಬದುಕುವ ರೀತಿಯನ್ನೇ ಬದಲಾಯಿಸುತ್ತದೆ. ನನ್ನ ಬದುಕಿನಲ್ಲಾದದ್ದೂ ಅದೇ. ನನ್ನ ಅಮ್ಮ, ಹೆಂಡತಿ ಸುಷ್ಮಾ ಇವರನ್ನೆಲ್ಲಾ ನೋಡಿದಾಗ ನನಗೆ ಅನ್ನಿಸಿದ್ದು ಇಷ್ಟು. ಗಂಡಸರ ಕಾಮನೆಗಳು ನಮಗಿಂತಲೂ ಹೆಂಗಸರಿಗೆ ಚೆನ್ನಾಗೆ ಅರ್ಥ ಆಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಇರುವ ಕಾಮನೆಗಳು ಇದ್ದು, ಅದು ಹೆಂಗಸರ ಇಚ್ಛೆಗೆ ಪೂರಕವಾಗಿದ್ದರೆ ಮಾತ್ರ ನಮ್ಮ ಜೀವನ ಚೆನ್ನಾಗಿರುತ್ತದೆ. ಆದರೆ, ಗಂಡಸರು ಬಯಸುವ ಬಿಡುಗಡೆಯ ಸ್ವಾತಂತ್ರ್ಯ ಬಹುತೇಕ ಹೆಂಗಸರಿಗೆ ಅರ್ಥವೇ ಆಗುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡಿರುವ ಹೆಂಗಸರಿಗೆ ಮದುವೆಯೂ ಆಗಿರುವುದಿಲ್ಲ, ಮಕ್ಕಳು ಇರುವುದಿಲ್ಲ! ನಾನು ಇಷ್ಟು ವರ್ಷಗಳು ಕರ್ತವ್ಯ ಮಾಡಿದ್ದೇನೆ, ನಾಳೆಯಿಂದ ನಾನು ಬದುಕುತ್ತೇನೆ!' ಎಂದು ಹೇಳಿ ರಮೇಶ ಅನಂತನ ಭುಜವನ್ನು ತಟ್ಟಿ ಮನೆಕಡೆಗೆ ಹೆಜ್ಜೆ ಹಾಕುತ್ತಾನೆ. ಒಗಟಾದ ಈ ಮಾತಿನ ಹಿಂದಿರುವ ಅರ್ಥ ಯೋಚಿಸುತ್ತಾ ಅನಂತ ತನ್ನ ಮನೆಗೆ ಹಿಂದಿರುಗುತ್ತಾನೆ.
ಬೆಳಗ್ಗೆ 6:10 ಕ್ಕೆ ಅನಂತನ ಫೋನ್ ಸದ್ದು ಮಾಡುತ್ತದೆ. ನೋಡಿದರೆ ರಮೇಶನ ಕರೆ. ಫೋನ್ ಎತ್ತಿ 'ಹೇಳು ರಮೇಶ ' ಎನ್ನುತ್ತಾನೆ.
'ಅಂಕಲ್ ನಾನು ಭರತ್, ಅಪ್ಪ ಮನೆಯಲ್ಲಿ ಕಾಣಿಸುತ್ತಿಲ್ಲ, ಫೋನ್ ಇಲ್ಲೇ ಇದೆ. ನಿಮ್ಮ ಮನೆಗೆ ಏನಾದರೂ ಬಂದಿದ್ದಾರಾ ಅಂತ ಕರೆ ಮಾಡಿದೆ.'
'ಇಲ್ಲ, ಇಲ್ಲಿಗೆ ಬಂದಿಲ್ಲ. ಬಂದೆ ಇರು ಮನೆಗೆ ನೋಡುವ.' ಎಂದು ಹೇಳಿ ರಮೇಶನ ಮನೆಗೆ ಹೊರಡುತ್ತಾನೆ. ರಮೇಶನ ಚಪ್ಪಲಿ ಹಾಗೂ ಅವನ ಕೋಣೆಯಲ್ಲಿ ಒಂದೆರಡು ಪುಸ್ತಕಗಳು ಕಾಣದಿದ್ದನ್ನು ಕಂಡ ಅನಂತ 'ಇಲ್ಲ ಭರತ್, ಅವನು ಹೊರಟಿದ್ದಾನೆ.' ಎಂದು ಹೇಳಿ ಮೌನಿಯಾಗುತ್ತಾನೆ. ರಮೇಶ ನೆನ್ನೆ ಹೇಳಿದ ಕಡೆಯ ಮಾತು ನೆನಪಾಗುತ್ತದೆ 'ಇಷ್ಟು ವರ್ಷಗಳು ಕರ್ತವ್ಯ ಮಾಡಿದ್ದೇನೆ ನಾಳೆಯಿಂದ ನಾನು ಬದುಕುತ್ತೇನೆ!'.
***************************************
February 1, 2023
ಬಿಬಿಸಿ ಎಂಬ ಬ್ರಿಟೀಷ್ ಬಾಲಬಡುಕ ಸಂಸ್ಥೆ
ಇದು ಸುಮಾರು 20-25 ವರ್ಷಗಳ ಹಿಂದಿನ ಮಾತು. ಆಗ ತಾನೆ ನಮ್ಮ ಮನೆಗಳಲ್ಲಿ ಕೇಬಲ್ ಟೀವಿ ಹಾಗೂ ಇತರ ವಾಹಿನಿಗಳ ಭರಾಟೆ ಶುರುವಾಗಿತ್ತು. 'ನಿನ್ನ ಇಂಗ್ಲೀಷ್ ಭಾಷೆ ಸುಧಾರಿಸಬೇಕು ಎಂದರೆ ಆಂಗ್ಲ ಪತ್ರಿಕೆ ಓದು, ಬಿಬಿಸಿ ವರ್ಲ್ದ್ ನೋಡು' ಎಂಬ ಹಿರಿಯರ ಮಾತು ಸಾಮಾನ್ಯವಾಗಿತ್ತು. ಒಸಾಮಾ ಬಿನ್ ಲಾಡೆನ್ ವಿಶ್ವ ವಾಣಿಜ್ಯ ಕಟ್ಟಡಗಳನ್ನು ಉರುಳಿಸಿದ ಎಂಬ ಸುದ್ದಿಯನ್ನು ಸಹ ನಾವು ನೋಡಿದ್ದೇ ಬಿಬಿಸಿ ವಾಹಿನಿಯಲ್ಲಿ. ನಮ್ಮ ಪುಣ್ಯ, ಆ ವಾಹಿನಿಯನ್ನು ಅದಾದ ಮೇಲೆ ಎಂದೂ ಸಹ ಗಂಭೀರವಾಗಿ ನೋಡಲಿಲ್ಲ. ಹೌದು, ಹೀಗೆ ಪುಣ್ಯ ಎಂದು ಹೇಳಲು ಕಾರಣವಿದೆ. ಈ ಬಿಬಿಸಿ ಅನ್ನುವ ಸಂಸ್ಥೆ ಭಾರತ ವಿರೋಧಿ ನಿರೂಪಣೆ ಮಾಡುವಲ್ಲಿ ಎತ್ತಿದ ಕೈ. ನಮ್ಮ ಆಂಗ್ಲ ಭಾಷೆ ಸುಧಾರಣೆ ಆಗದಿದ್ದರೂ ಪರವಾಗಿಲ್ಲ ಆದರೆ, ನಮ್ಮ ಮನಸ್ಸಿನಲ್ಲಿ ಭಾರತ ವಿರೋಧಿ ಭಾವವನ್ನು ಒಳಬಿಟ್ಟುಕೊಳ್ಳಲಿಲ್ಲ ಎನ್ನುವುದು ನಮ್ಮ ಪುಣ್ಯವೇ ಸರಿ!
![]() |
| BBC - British Blabbering Corporation |
ಎರಡು ವಾರಗಳ ಹಿಂದೆ ಭಾರತದ ಪ್ರಧಾನಿ ಮೋದಿಯವರ ಮೇಲೆ ಆಪಾದನೆ ಮಾಡುವಂತಹ 2002ರಲ್ಲಿ ಗುಜರಾತ್ ನಲ್ಲಿ ನಡೆದ ಹಿಂಸಾಚಾರದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದೆ. ಮೊದಲನೆ ಭಾಗ ಇದಾದರೇ ಸಾಕ್ಷ್ಯಚಿತ್ರದ ಎರಡನೇ ಭಾಗ ಆರ್ಟಿಕಲ್ 370 ಹಾಗೂ ಇತ್ತೀಚಿನ ಇತರ ಘಟನೆಗಳು. ಮತ್ತೊಮ್ಮೆ ಉದ್ದೇಶ ಪೂರ್ವಕವಾಗಿಯೇ ಕಾಶ್ಮೀರಿ ಮುಸಲ್ಮಾನರಿಗೆ ಅನ್ಯಾಯವಾಗಿದೆ ಅನ್ನುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಭಾರತದ ಉಚ್ಛ ನ್ಯಾಯಾಲಯ ಗುಜರಾತ್ ಹಿಂಸಾಚಾರ ಪ್ರಕರಣದಲ್ಲಿ ಮೋದಿಯವರ ಪಾತ್ರವಿಲ್ಲ ಎಂದು ಸ್ಪಷ್ಟ ತೀರ್ಪಿತ್ತಿದೆ ಹಾಗೂ ಜೂನ್ 2022ರಲ್ಲಿ, ಈ ಪ್ರಕರಣದಲ್ಲಿ ಮೋದಿಯವರಿಗೆ ವಿಶೇಷ ತನಿಖಾ ತಂಡ (SIT) ನೀಡಿದ ಕ್ಲೀನ್ ಚಿಟ್ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಸಹ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಒಟ್ಟಾರೆ, ಬಿಬಿಸಿಯ ಈ ಸಾಕ್ಷ್ಯಚಿತ್ರದ ಉದ್ದೇಶ ಭಾರತ ವಿರೋಧಿ ಎಂಬುದು ಈಗಂತೂ ಸ್ಪಷ್ಟವಾಗಿದೆ. 2021 ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಕೇಂದ್ರ ಸರ್ಕಾರ ಈ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಶಾಶ್ವತವಾಗಿ ನಿರ್ಬಂಧಿಸಿದೆ. ತನ್ಮೂಲಕ ಬಿಬಿಸಿಯ ಈ ಕೃತ್ಯ ಕೀಳುಮಟ್ಟದ್ದು ಎಂಬ ಸಂದೇಶವನ್ನು ಭಾರತ ರವಾನಿಸಿದೆ. ಎರಡು ದಿನಗಳ ಹಿಂದೆ ರಷ್ಯಾದ ವಿದೇಶಾಂಗ ವಕ್ತಾರರು ಸಹ ಬಿಬಿಸಿಯ ಸಾಕ್ಷ್ಯಚಿತ್ರವನ್ನು ಖಂಡಿಸಿದ್ದಾರೆ. ಇದು ಬಿಬಿಸಿ ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ಆದ ಅವಮಾನವೂ ಹೌದು.
ಬಿಬಿಸಿ ಇಂತಹ ಕೀಳುಮಟ್ಟದ ಕಾರ್ಯ ಮಾಡುತ್ತಿರುವುದು ಇದೇನು ಮೊದಲಲ್ಲ. ಭಾರತ ದೇಶ ಮಹಿಳೆಯರಿಗೆ ಅಸುರಕ್ಷಿತ ಎಂದು ಬಿಂಬಿಸುವಂತಹ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು 2015ರಲ್ಲಿ ಬಿಡುಗಡೆ ಮಾಡಿತ್ತು. 1965ರ ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭದಲ್ಲಿ ಭಾರತ ವಿರೋಧಿ ಲೇಖನಗಳನ್ನು ಪ್ರಕಟಿಸಿತ್ತು. ಆಗ ಸಹ ಭಾರತ ಬಿಬಿಸಿ ಅನ್ನು ನಿಷೇಧಿಸಿತ್ತು. ಖಾಲಿಸ್ತಾನಿ ಉಗ್ರರಿಗೂ ವೇದಿಕೆ ಕಲ್ಪಿಸಿಕೊಟ್ಟಿದ್ದು ಇದೇ ಬಿಬಿಸಿ ಎಂದು ಹೇಳಲಾಗುತ್ತದೆ. 2016ರಲ್ಲಿ ಭಯೋತ್ಪಾದಕ ಬುರ್ಹಾನ್ ವಾನಿಯನ್ನು 'ಮೇಷ್ಟರ ಮಗ', 'ಯುವ ಹೋರಾಟಗಾರ', ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕರನ್ನು 'ಬಂದೂಕುಧಾರಿಗಳು' ಎಂದು ಚಿತ್ರಿಸಿದ್ದು ಸಹ ಇದೇ ಬಿಬಿಸಿ. 2020ರಲ್ಲಿ ದೆಹಲಿ ಗಲಭೆ, ರೈತರ ಪ್ರತಿಭಟನೆ ಹಾಗೂ ಸಿಏಏ ಪ್ರತಿಭಟನೆ ಸಂದರ್ಭಗಳಲ್ಲಿ ಭಾರತ ವಿರೋಧಿ ಅಂಶಗಳನ್ನು ಬೆಂಬಲಿಸುತ್ತಾ ವರದಿಗಳನ್ನು ಪ್ರಕಟಿಸಿತ್ತು. ಇಷ್ಟೇ ಅಲ್ಲದೇ 2012ರಲ್ಲಿ ಹಿಂದೂಗಳ ಹೋಳಿ ಹಬ್ಬವನ್ನು 'ಕೊಳಕು' ಎಂದು ಸಹ ಬಿಬಿಸಿ ಉಲ್ಲೇಖಿಸಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ 2015, 2021ರಲ್ಲಿ ಕಾಶ್ಮೀರವನ್ನು ಬೇರ್ಪಡಿಸಿ ಭಾರತದ ನಕ್ಷೆಯನ್ನು ತನ್ನ ಕಾರ್ಯಕ್ರಮದಲ್ಲಿ ಬಿತ್ತರಿಸಿ ಅದಕ್ಕಾಗಿ ಸಂಸ್ಥೆಯ ವಕ್ತಾರರು ಕ್ಷಮೆಯಾಚಿಸಿದ್ದರು.
ಬಿಬಿಸಿ ಎಂಬ ಬಾಲಬಡುಕ ಸಂಸ್ಥೆ ಏಕಪಕ್ಷೀಯ ವರದಿಗೆ ಹೆಸರಾಗಿದೆ. ಗುಜರಾತ್ ಹಿಂಸಾಚಾರದ ಬಗ್ಗೆ ವರದಿ ಮಾಡುವ ಈ ಸಂಸ್ಥೆ ಇದಕ್ಕೆ ಕಾರಣವಾದ ಸಾಬರ್ಮತಿ ರೈಲು ದುರಂತದ ಬಗ್ಗೆ ಚಕಾರ ಎತ್ತುವುದಿಲ್ಲ. ಆರ್ಟಿಕಲ್-370 ನಿಷೇಧದಿಂದ ಮುಸಲ್ಮಾನರಿಗೆ ಅನ್ಯಾಯವಾಗಿದೆ ಎಂದು ಗೀಚುವ ಇವರುಗಳು ಕಾಶ್ಮೀರಿ ಪಂಡಿತರ ಮೇಲಾದ ನರಮೇಧದ ಬಗ್ಗೆ ಬರೆಯುವುದಿಲ್ಲ. ಭಾರತದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಬಗ್ಗೆ ಊಳಿಡುವ ಇದೇ ಸಂಸ್ಠೆ ಇಂಗ್ಲೆಂಡಿನಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ನಿಂದನೆ ಮತ್ತು ಲೈಂಗಿಕ ಶೋಷಣೆ ಬಗ್ಗೆ ಮಾತಾಡುವುದೇ ಇಲ್ಲ. ಮುಸಲ್ಮಾನರ ಬಗ್ಗೆ ಎಲ್ಲಿಲ್ಲದ ಕಾಳಜಿ ವಹಿಸುವ ಬಿಬಿಸಿ ಚೀನಾದಲ್ಲಿ ಉಯ್ಘರ್ ಮುಸಲ್ಮಾನರ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ಮಾತೇ ಇಲ್ಲ. ಇದೆಲ್ಲಾ ಹಳೆಯದಾಯ್ತು. ಕಳೆದ ವಾರ ಜೆರುಸಲೇಮ್ ನಲ್ಲಿ ಇಸ್ರೇಲಿಗರ ಮೇಲಾದ ಭಯೋತ್ಪಾದಕ ಕೃತ್ಯದ ಬಗ್ಗೆ 'ದಿ ಟೈಮ್ಸ್ ಆಫ್ ಇಸ್ರೇಲ್' ವರದಿಯನ್ನೇ ಬಟ್ಟಿ ಇಳಿಸಿ, ವರದಿಯನ್ನಷ್ಟೇ ಮಾಡಿದೆ! ಭಾರತ, ಅಮೇರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ನಿಷೇಧಿಸಿರುವ ಚೀನಾದ ಹುವಾಯ್ ಸಂಸ್ಥೆಯೊಂದಿಗೆ ಹಣಕಾಸು ಒಪ್ಪಂದವಿದ್ದು ತನ್ನ ಸಾಗರೋತ್ತರ ಪತ್ರಿಕೋದ್ಯಮಕ್ಕೆ ಬಿಸಿಸಿ ಅದನ್ನು ಬಳಸಿಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಹುವಾಯ್ ಕುರಿತಾದ ಜಾಹೀರಾತುಗಳು ಬಿಬಿಸಿ ವೆಬ್ಸೈಟ್ ಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಹಾಗೂ ಹುವಾಯ್ ನಿಂದ ಎಷ್ಟು ಹಣ ತೆಗೆದುಕೊಂಡಿದೆ ಎಂಬುದಕ್ಕೆ ಉತ್ತರ ನೀಡಲು ಬಿಬಿಸಿ ನಿರಾಕರಿಸಿದೆ. ಎಂದಿನಂತೆ ಚೀನಾ ಈ ವಿಚಾರವನ್ನು ಅಲ್ಲಗೆಳೆದಿದೆ. ಭಾರತ ವಿರೋಧಿ ಸಾಕ್ಷ್ಯಚಿತ್ರ ಮಾಡುವಲ್ಲಿ ಚೀನಾದ ಕೈವಾಡವಿದೆ ಎಂಬುದನ್ನು ನಾವು ಅಲ್ಲಗೆಳೆಯಲು ಸಾಧ್ಯವಿಲ್ಲ.
ತನಗೆ ಯಾರೂ ಬೆಲೆಕೊಡದಿದ್ದರೂ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದು, ಅಂತಾರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಅವಹೇಳನ ಮಾಡುವಂತೆ ಮಾತಾಡುವುದು ಪಾಕಿಸ್ತಾನಕ್ಕೆ ಅಭ್ಯಾಸವಾಗಿದೆ. ಅದೇ ರೀತಿ ಸಾಕ್ಷ್ಯಚಿತ್ರವನ್ನು ಮುಂದಿಟ್ಟುಕೊಂಡು ಮೋದಿಯವರ ವರ್ಚಸ್ಸಿಗೆ ಧಕ್ಕೆ ತರಲು ಮುಂದಾದ ಪಾಕಿಸ್ತಾನ ಮೂಲದ ಬ್ರಿಟೀಷ್ ಸಂಸದನಿಗೆ ಪ್ರಧಾನಿ ರಿಷಿ ಸುನಾಕ್ 'ಪ್ರಧಾನಿ ಮೋದಿಯವರ ಚಾರಿತ್ಯ ಹರಣವನ್ನು ನಾವು ಒಪ್ಪುವುದಿಲ್ಲ' ಎಂದು ಖಡಾಖಂಡಿತವಾಗಿ ಹೇಳಿ ಈ ವಿಚಾರವಾಗಿ ಇಡೀ ಸಂಸತ್ತಿನ ಸದ್ದಡಗಿಸಿದರು. ಭಾರತದಲ್ಲಿ ಬ್ರಿಟೀಷರ ಗುಲಾಮರಂತೆ ಸಾಕ್ಷ್ಯಚಿತ್ರದ ಬಗ್ಗೆ ಮಾತಾಡುತ್ತಿರುವುದು ಕಾಂಗ್ರೇಸ್, ಜೆ.ಎನ್.ಯೂ ಹಾಗೂ ಜಾಮಿಯಾ ಇಸ್ಲಾಂ ಯೂನಿವರ್ಸಿಟಿ ಮಾತ್ರ!
ಐ.ಎಮ್.ಎಫ್ ಪ್ರಕಾರ ಪ್ರಪಂಚದ ಐದನೇ ಬಲಿಷ್ಠ ಆರ್ಥಿಕ ಶಕ್ತಿಯಾಗಿರುವುದು ಭಾರತ, ಜಿ20 ನೇತೃತ್ವ ವಹಿಸಿಕೊಂಡಿರುವುದು ಭಾರತ, ಪ್ರಪಂಚದ ಆಗು ಹೋಗುಗಳನ್ನು ನಿರ್ಧರಿಸುವಲ್ಲಿ ಇಂದು ಭಾರತ ಪ್ರಮುಖ ಪಾತ್ರವಹಿಸುತ್ತಿದೆ. ಇಂತಹ ಸಮಯದಲ್ಲೂ ಹತ್ತೊಂಬತ್ತನೆ ಶತಮಾನದ ಚಿಂತನೆಯಿಂದ ಹೊರಬಾರದ ಬಿಬಿಸಿಯ ಯೋಗ್ಯತೆ ಅಷ್ಟೇ ಎಂದು ಮೂಲೆಗುಂಪು ಮಾಡುವುದೇ ಲೇಸು. ತನ್ನ ವಿರುದ್ಧ ಯಾರೂ ಏನೇ ಹೇಳಿದರೂ ಕೇಳದ ಬಿಬಿಸಿ ತನ್ನ ಏಕಪಕ್ಷೀಯವಾದ, ತಲೆಹರಟೆ ವರದಿಗಳನ್ನು ಮಾಡುವುದು ನಿಲ್ಲಿಸುವುದಿಲ್ಲ. ಬಿಬಿಸಿ ಒಂದು ರೀತಿ ನಾಯಿ ಬಾಲವಿದ್ದಂತೆ. ಅದು ಯಾವತ್ತಿದ್ದರೂ ಡೊಂಕು!
***********************************************************
References



















